ಹೊಟ್ಟೆಗೆಷ್ಟು ಮಹತ್ವ ಇದೆಯೆಂದು ನಮಗೆಲ್ಲರಿಗೂ ಗೊತ್ತು. ಹಾಗೆಯೇ ಆಹಾರವನ್ನು ವ್ಯರ್ಥ ಮಾಡಬಾರದೆಂಬುದು ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿತ್ತು. ಡೊಳ್ಳೊಟ್ಟೆಗಳಿಗೂ ಗೊತ್ತು! ಅದರೆ ಅವರಿಗೆ ಬಾಯಿ ಚಪಲ ಕೈ ಕೊಡುತ್ತದೆ. ದಾಸರು ಹಾಡಿದ್ದೇನು? ಹೊಟ್ಟೆಯಿಂದಲೆ ಸ್ವರ್ಗ, ಹೊಟ್ಟೆಯಿಂದಲೇ ನರಕ ಎಂಬುದೇನು ತಮಾಶೆಯಲ್ಲ! ಎಚ್ಚರಿಕೆ ಮಾತು.
ಕೆಲವರು ಹೇಳುವುದುಂಟು ಸ್ವಲ್ಪ ಡೊಳ್ಳೊಟ್ಟೆಯಾಗಿದ್ದರೆ ಮಾತ್ರ ಜನರನ್ನು "ದೊಡ್ಡ ಜನ" ಎಂದು ಗುರುತಿಸುವುದೂ ಉಂಟಲ್ಲ! ಆದರೆ, ಈಗಲಂತೂ ಹದವಾದ ಹೊಟ್ಟೆಯಿರುವುದು ಜಾಣರ ಲಕ್ಷಣ ಎಂದೂ ವೈಜ್ಞಾನಿಕತೆ ಹೇಳುತ್ತಲಿದೆ. ಶ್ರೀಮಂತರೂ ಹದವಾದ ಹೊಟ್ಟೆಯಿಟ್ಟು ಕೊಂಡು ಮೆರೆಯುವುದು ಹೆಚ್ಚಾಗುತ್ತಲಿದೆಯಂತೆ. ಬೊಕ್ಕತಲೆಯವರು ಬುದ್ಧಿವಂತರು ಎಂಬ ಮಹಿಮೆಯೂ ಈಗ ಸೇರಿಕೊಂಡಿದೆಯಂತೆ.
ಒಂದಾನೊಂದು ಕಾಲದಲ್ಲಿ ನಾನು ಓದಿದ ಸಮೀಕ್ಷೆಯೊಂದರಲ್ಲಿ 18 ರಿಂದ 35 ರ ನಡುವಿನ ಯುವತಿಯರು ಚಪ್ಪಟೆ ಹೊಟ್ಟೆಯವರಿಗಿಂತಲೂ ಹದವಾದ ಮಿತ ತೂಕದ ಹೊಟ್ಟೆಯಿರುವವರನ್ನೇ ಗಂಡಂದಿರಾಗಲು ಬಯಸುತ್ತಾರಂತೆ. ಬೆನ್ನು ಹೊಟ್ಟೆ ಒಂದಾಗುವಂತೆ ಎಕ್ಸರ್ಸೈಸ್ ಮಾಡಿದವರನ್ನು "ಇವನಿಗೆ ಊಟಕ್ಕೇ ಗತಿಯಿಲ್ಲ- ನಮ್ಮನ್ನೇನು ಸಾಕಿಯಾನು" ಎಂದು ವಿವಾಹಕ್ಕೆ ಅಣಿವಾದ ಯುವತಿಯರು ಕಿಸಿಕಿಸಿ ಮಾಡುತ್ತಾರಂತೆ.
ಉದಾರೀಕೃತ ಆರ್ಥಿಕತೆಯಲ್ಲಿ ಜಗತ್ತೇ ಒಂದು ಸ್ಪರ್ಧೆಯಂಗಳವಾಗಿದೆ. ಜೀವಬಿಡದೆ ಜಾಣರಾಗಿ ಕೆಲಸ ಮಾಡಿದರೇ ಏಣಿ ಏರಲು ಸಾಧ್ಯವೆಂಬ ವಾತಾವರಣ ವಿಸ್ತರಿಸಿಕೊಳ್ಳುತ್ತಿದೆ. ಸಹಜವಾಗಿಯೇ ಶಕ್ತಿ- ಚೈತನ್ಯ ಬೂಸ್ಟ್ ಮಾಡಿಕೊಳ್ಳಲು ಪ್ರಯೋಗ ಸಂಶೋಧನೆಗೆ ಮಹತ್ವ ಉಂಟಾಗಿದೆ. ಹೊಟ್ಟೆ ವಿಚಾರದಲ್ಲಂತೂ ದಿನಕ್ಕೆ ನೂರೆಂಟು ಹೊಟ್ಟೆ ಮಡಿಕೆಗಳನ್ನು ಮಾಡುವವರು ಹುಶಾರ್ ಎಂಬ ಮರ್ಯಾದೆ ಇದೆ. ದೇಹದ ಹಂದರ ಅದರಿಂದ ಭದ್ರವಾಗುತ್ತದಂತೆ. ಮಧ್ಯಾಹ್ನ ಬಳಿಕ 20 ನಿಮಿಷದ ಲಘುನಿದ್ದೆ, ಪಥ್ಯದ ಊಟದ ಬಳಿಕೆ ಸ್ವಲ್ಪ ಪ್ರೊಟೀನ್ ಇತ್ಯಾದಿ ಸೇವಿಸಿದರೆ ಒಳ್ಳೆಯದೆಂದು ಕಿವಿ ಕಚ್ಟಿ ಹೇಳುವವರೂ ಇದ್ದಾರೆ.
ಒಟ್ಟಿನಲ್ಲಿ ದೈಹಿಕ, ಮಾನಸಿಕ ಅರೋಗ್ಯ ಪಡೆಯಲು ಬೇಕೇ ಬೇಕು- ಒಳ್ಳೆ ಆಹಾರ ಮತ್ತು ಕಾಲಿನಿಂದ ತಲೆಯವರೆಗೆ ಎಕ್ಸರ್ಸೈಸ್. ಅದಕ್ಕೆ ವಯಸ್ಸಿನ ವಿನಾಯತಿ ಏನಿಲ್ಲವೆಂದು ಅಜ್ಜ-ಅಜ್ಜಿಯಂದಿರೂ ಈಗ ವಾಕಿಂಗ್ ಮಾಡುತ್ತಾ ಜೊತೆ ಕಂಪೆನಿಗೆ ಕರೆಯುತ್ತಿರುತ್ತಾರೆ. ನನಗೆ ಖುಶಿ ಕೊಡುವುದು ಬೆನ್ನ ಮೇಲೆ ಮಲಗಿ, ಅಂಗೈಗಳನ್ನು ತಲೆಯ ಕೆಳಗಿ ಜೋಡಿಸಿಟ್ಟು, ಯಾವುದೇ ಆಧಾರವಿಲ್ಲದೆ ಮುಂದೆದ್ದು ಬಗ್ಗಿ ನೇರವಾಗಿಟ್ಟು ಕೊಂಡಿರುವ ಮೊಣಕಾಲಿಗೆ ಹಣೆ ತಗಲಿಸುವ ಜಾಣ ಏಕ್ಸರ್ಸೈಸ್. ಅದನ್ನು ನೂರು ಸಲ ಮಾಡಿದರೆ ಸಾಕಂತೆ.
ಅದನ್ನು ಮಾಡಿ ಸ್ಮಾರ್ಟ್ ಅಗಿರುವವರು ಅಲ್ಲಲ್ಲಿ ಸಿಗುತ್ತಿರುತ್ತಾರೆ. ನೇರವಾಗಿ ಅವರನ್ನು ನೋಡಿದರೆ- ಅವರಿಂದ ಒಂದು ಜಂಭದ ಲುಕ್ ಕೂಡಾ ಬರುತ್ತದೆಂದು ಕೆಲವು ಜಾಣ ಹೆಣ್ಮಕ್ಕಳು ಹೇಳುವುದನ್ನು ಕೇಳಿದ್ದು ನೆನಪಿದೆ. ಅಂತಹವರು ಎದೆಯುಬ್ಬಿಸಿ ನಡೆದಾಡುವುದನ್ನು ನೋಡಲೂ ಮಜಾ ಬರ್ತದಂತೆ. ಅಂದರೆ ದಂಡ ಪಿಂಡ ಆಗಿರುವುದಕ್ಕಿಂತ ಹೊಟ್ಟೆ ದಂಡಿಸುವುದ ಶ್ರೇಯಸ್ಕರ ಎಂಬುದೇ ಮೆಸೇಜು ಅದರಲ್ಲಿದೆ.
ಲವ್ನಲ್ಲಿ ಬಿದ್ದರೆ ಏನೇನಾಗುತ್ತದೆಂದು ವೈದ್ಯರು ಯಾವತ್ತೇ ಪ್ರೇಮ ರಾಸಾಯನಿಕಗಳನ್ನು ಗುರುತಿಸಿದ್ದಾರೆ. ಮಿದುಳು-ದೇಹಗಳಿಗರೆಡಕ್ಕೂ ಅದರಿಂದ ಖುಶಿ ಸಿಗುತ್ತದಂತೆ. ದೇಹಾಕರ್ಷಣೆ ಉತ್ಸಾಹದ ಚಿಲುಮೆಯಾಗಿ ಬಿಡುತ್ತದಂತೆ. ಆದರೆ, ಪ್ರೇಮಪಾಶ ಬೀಸುತ್ತಿರುವಾಗ ಕೊರಳಿಗೆ ತಾಳಿ ಬಂಧನವಾದ ಮೇಲೆ ಅದೇ ಪ್ರಭಾವೋ ಎಂಬ ಬಗ್ಗೆ ಸಂಶೋಧನೆಗಳು ನನಗೆಲ್ಲಾ ಸಿಕ್ಕಿಲ್ಲ!
ಸ್ವಾನುಭವಕ್ಕಿಂತಲೂ ಸರ್ವಾಂಗಗಳನ್ನು ಕ್ರಿಯಾಶೀಲವಾಗಿಸುವ ಸಂಶೋಧನೆಯನ್ನಾಧರಿಸಿ ವಿಜ್ಷಾನಿಗಳೂ ಎಂದೋ ಮೋಕೆಯ ಗುಂಡಿಗೆ ಬಿದ್ದರೆ, ಎದೆಗುಂಡಿಗೆ ಹಾರುವುದಷ್ಟೇ ಅಲ್ಲ- ದೇಹ ಮನಸ್ಸುಗಳಿಗೆರಡಕ್ಕೂ ಕ್ಷೇಮವುಂಟೆಂದು ವೈಜ್ಷಾನಿಕ ಆಧಾರದೊಂದಿಗೆ ಎದೆ ತಟ್ಟಿ ಹೇಳುವುದುಂಟು. ಪ್ರೀತಿಯಿಂದ ದೇಹದ ರೋಗ ನಿರೋಧಕ ಗುಣ ವೃದ್ಧಿಸುತ್ತದೆ, ಸೋಂಕು ನಿವಾರಿಸುತ್ತದೆ ಮತ್ತು ತೀವ್ರತಮ ಖಾಯಿಲೆಗಳಿಂದಲೂ ರಕ್ಷಿಸುತ್ತದೆ ಎಂದೆಲ್ಲ ವಿಜ್ಞಾನ ಮನದಟ್ಟು ಮಾಡುತ್ತಲಿದೆ. ಪೆಪ್ಟಿಡ್ಸ್ ಆ ಪ್ರೇಮಾಧಾರದ ಸಾಧಕ ಹೃದಯವನ್ನೇ ಕ್ರಿಯಾಶೀಲವಾಗಿಸಿ ದೇಹ ಕಿರಣಗಳನ್ನೆಲ್ಲಾ ಚೈತನ್ಯಗೊಳಿಸುತ್ತದೆಂದು ವಿಜ್ಷಾನ ದಾಖಲಿಸಿಯೇ ಬಿಟ್ಟಿದೆ.
ಇನ್ನು ಲವರ್ಸಗೆ ಬೇಕಾಗಿರುವುದು ಚಂದ್ರಲೋಕಕ್ಕೆ ಹಾರಿಹೋಗುವ ಕನಸು ನನಸಾಗಬೇಕಾಗಿರುವುದು- ಭಾರತ ಸರಕಾರದ ಚಂದ್ರಯಾಣದಲ್ಲಿ ಇವನ್ನೆಲ್ಲಾ ಸಂಶೋಧಿಸಿ ಪ್ರೇಮಾವಕಾಶ ಮಾಡಲೆಂಬ ಯುವ-ಯುವತಿಯರ ಕನಸಿಗೆ ನನ್ನದೂ-ನನ್ನ ಅಜ್ಜಿಯದೂ ಬೆಂಬಲವಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ