ಪುತ್ತೂರು: ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಶ್ರಯದಲ್ಲಿ ಹಾಗೂ ವೈದ್ಯರತ್ನಮ್ ಔಷಧಶಾಲಾ ಪ್ರೈವೆಟ್ ಲಿಮಿಟೆಡ್ ಇದರ ಸಹಯೋಗದಲ್ಲಿ ಇಂದು (ಜು.11) ಉಚಿತ ಆಯುರ್ವೇದೀಯ ಅರೋಗ್ಯ ತಪಾಸಣಾ ಶಿಬಿರ ನಡೆಯಿತು.
ಆಸ್ಪತ್ರೆಯ ಆಡಳಿತ ನಿರ್ದೇಶಕರು ಹಾಗೂ ಖ್ಯಾತ ಆಯುರ್ವೇದ ತಜ್ಞವೈದ್ಯ, ಆಯುರ್ವೇದ ಧನ್ವಂತರಿ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು KPME ನೋಂದಾಯಿತ ಆಯುರ್ವೇದ ಆಸ್ಪತ್ರೆಯಾಗಿದ್ದು ಒಳರೋಗಿ ವಿಭಾಗ ಹಾಗೂ ಪಂಚಕರ್ಮ ಚಿಕಿತ್ಸಾ ಸೌಲಭ್ಯ ಹೊಂದಿದೆ" ಎಂದು ತಿಳಿಸಿದರು.
ಶಿಬಿರದಲ್ಲಿ ಸಕ್ಕರೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆಗಳನ್ನು ನಡೆಸಿದ್ದಲ್ಲದೆ ಆಯುರ್ವೇದ ಔಷಧಿಗಳನ್ನು ಕೂಡಾ ಉಚಿತವಾಗಿ ನೀಡಲಾಯಿತು. ಶಿಬಿರದದಲ್ಲಿ ಭಾಗವಹಿಸಿದವರಿಗೆ ಮನೆಮದ್ದಿನ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. "ಅವರಿಗೆ ಮುಂದಿನ ಸಲ ಬರುವಾಗ ಔಷಧಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಡಾ ರಾಘವೇಂದ್ರ ಪ್ರಸಾದ್ ಹೇಳಿದರು.
ವೈದ್ಯರು ಹಾಗೂ ಕಲ್ಲಮ ರಾಘವೇಂದ್ರ ಮಠದ ಆಡಳಿತ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ಕಲ್ಲಮ ಅವರು ದೀಪ ಪ್ರಜ್ವಲನ ಮತ್ತು ಉದ್ಘಾಟನೆ ನೆರವೇರಿಸಿದರು. "ಆಯುರ್ವೇದ ಚಿಕಿತ್ಸೆಯ ಉಪಯುಕ್ತತೆಯ ಬಗ್ಗೆ ಆಸ್ಟ್ರೇಲಿಯಾದಂತಹ ದೇಶಗಳೂ ಕೂಡ ಆಸಕ್ತಿ ತಳೆದು ಪ್ರೋತ್ಸಾಹಿಸುತ್ತಿದೆ. ಡಾ ಬಂಗಾರಡ್ಕ ಅವರು ಅನುಭವಿ ಆಯುರ್ವೇದ ಚಿಕಿತ್ಸಕ. ಅವರ ಕೈಗುಣವನ್ನು ಜನರು ಶ್ಲಾಘಿಸಿದ್ದನ್ನು ತಿಳಿದಿದ್ದೇನೆ "ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷ ಆಹ್ವಾನಿತರಾಗಿ ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ, ಚಂದ್ರಶೇಖರ್ ಸರ್ವೇದೋಳಗುತ್ತು (ಅಧ್ಯಕ್ಷರು, ಮುಂಡೂರು ಗ್ರಾಮಪಂಚಾಯತ್), ಸುಧಾಕರ ಕುಲಾಲ್ (ಅಧ್ಯಕ್ಷರು, ನರಿಮೊಗರು ಯುವಕ ಮಂಡಲ), ನವೀನ್ (ಅಧ್ಯಕ್ಷರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ನರಿಮೊಗರು), ಭಾಸ್ಕರ ಆಚಾರ್ ಹಿಂದಾರು (ಸಂಚಾಲಕರು, ಸಾಂದೀಪನಿ ವಿದ್ಯಾಸಂಸ್ಥೆಗಳು, ನರಿಮೊಗರು), ಶ್ರೀಮತಿ ಗುರುಪ್ರಿಯಾ ನಾಯಕ್ (ಅಧ್ಯಕ್ಷರು, ನರಿಮೊಗರು ಯುವತಿ ಮಂಡಲ) ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು.
"ಆರೋಗ್ಯಕ್ಕಾಗಿ ಆಯುರ್ವೇದ" ಎಂಬ ಘೋಷವಾಕ್ಯದಡಿಯಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಮಧುಮೇಹ (ಸಕ್ಕರೆ ಕಾಯಿಲೆ), ರಕ್ತದೊತ್ತಡ (ಹೈಪರ್ಟೆನ್ಶನ್), ವಾತದಿಂದ ಬರುವ ಸಂಧಿವಾತ, ಗಂಟುನೋವು, ಸೊಂಟನೋವುಗಳಿಗೆ ನಾಡೀ ಪರೀಕ್ಷೆಯ ಮೂಲಕ ಆಯುರ್ವೇದ ರೀತಿಯಲ್ಲಿ ಪರಿಹಾರ ಸೂಚಿಸಲಾಯಿತು.
ಸುರೇಶ ಪ್ರಭು ಶೆಟ್ಟಿ ಮಜಲು, ನವೀನ್ ರೈ ಶಿಬರ, ಕೃಷ್ಣಮೂರ್ತಿ ಸಿಂದೂರ ಮನೆ, ರಾಜಾರಾಮ ನೆಲ್ಲಿತ್ತಾಯ, ನಾರಾಯಣ ಬನ್ನಿಂತಾಯ, ಜಯರಾಮ ಪ್ರಭು, ಚಿದಾನಂದ ವೀರಮಂಗಲ, ಪರಮೇಶ್ವರ ಕೂಡುರಸ್ತೆ, ಕುತ್ತಿಗದ್ದೆ ಜನಾರ್ಧನ ಜೋಯಿಸ ಉಪಸ್ಥಿತರಿದ್ದರು.
ಕಾಂಚನಮಾಲಾ, ಸಿಂದೂರ ಮನೆ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕಿ ಡಾ.ಶ್ರುತಿ ಎಂ.ಎಸ್ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆ ಸಿಬ್ಬಂದಿಗಳಾದ ತುಳಸಿ, ರಂಜಿನಿ, ಸ್ವಾತಿ ಹಾಗೂ ವೈದ್ಯರತ್ನಮ್ ಔಷಧ ಶಾಲಾ ಪ್ರತಿನಿಧಿ ರಾಜಶೇಖರ್ ಸಹಕರಿಸಿದರು. ಎಪ್ಪತ್ತಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ