ಖಾಲಿ ಗೂಡಿನಲ್ಲೂ ಮತ್ತೆ ಕೇಳಲಿ ಹಕ್ಕಿಯ ಕಲರವ
- ಡಾ. ರೂಪಾ ರಾವ್
ಈ ಬಂಧನ ಸಿನಿಮಾ ನೆನಪಿದೆಯೇ? ವಿಷ್ಣುವರ್ಧನ್ ಮತ್ತು ಜಯಪ್ರದಾ ಅವರು ನಟಿಸಿದ್ದು, ಅವರು ತಮ್ಮ ಮಕ್ಕಳನ್ನು ಪ್ರೀತಿ, ಅಕ್ಕರೆ ಇಂದ ಬೆಳೆಸಿದ ನಂತರ, ತಮ್ಮನ್ನು ತಾವು ಅನಾಥವಾದ ಭಾವ ಹೊಂದುತ್ತಾರೆ ಮತ್ತು ಖಾಲಿ ಮನೆಯೊಂದಿಗೆ ಹರಸಾಹಸ ಪಡುವ ಕ್ಲಾಸಿಕ್ ಕನ್ನಡ ಚಲನಚಿತ್ರ ಕಟುವಾದ ದೃಶ್ಯವನ್ನು ನೆನಪಿಸಿಕೊಳ್ಳಿ? ಚಂದನದ ಗೊಂಬೆ ಚಿತ್ರದಲ್ಲಿ ಮಗಳನ್ನೂ ಅಕ್ಕರೆಯಿಂದ ಬೆಳೆಸಿ ಮಗಳ ಮದುವೆ ಮಾಡಿಕೊಟ್ಟ ನಂತರ ಒಬ್ಬಂಟಿತನ ಅನುಭವಿಸುವ ಬಾಲಣ್ಣನ ಪಾತ್ರ?
ಈ ಚಿತ್ರಣವು ಖಾಲಿ ನೆಸ್ಟ್ ಸಿಂಡ್ರೋಮ್‌ನ ಸ್ಪಷ್ಟವಾಗಿ ಸೆರೆಹಿಡಿಯುತ್ತದೆ, ಇದು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಇಂದಿನ ಬಹುತೇಕ ಭಾರತೀಯ ಪೋಷಕರು ತಮ್ಮ ಮಕ್ಕಳು ಮನೆಯಿಂದ ಹೊರಗೆ ಹೋದಾಗ ಅನುಭವಿಸುವ ಹಂತವಾಗಿದೆ.
ಭಾರತದಲ್ಲಿ, ಕುಟುಂಬದ ಪರಿಕಲ್ಪನೆಯು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಅನೇಕ ತಲೆಮಾರುಗಳು ಒಂದೇ ಸೂರಿನಡಿ ವಾಸಿಸುವ ಅವಿಭಕ್ತ ಕುಟುಂಬಗಳು ಸಾಂಪ್ರದಾಯಿಕವಾಗಿ ರೂಢಿಯಲ್ಲಿವೆ. ಬೇರೆ ಬೇರೆ ವಾಸಿಸುವ ಕುಟುಂಬಗಳಲ್ಲಿ ಸಹ, ಒಗ್ಗಟ್ಟಿನ ಮತ್ತು ಪರಸ್ಪರ ಅವಲಂಬನೆ ಬಲವಾಗಿದೆ. ಪೋಷಕರು ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಬೆಳೆಸಲು ಬಹಳ ಶ್ರಮ ವಹಿಸುತ್ತಾರೆ, ಕೆಲವೊಮ್ಮೆ ತಮ್ಮ ಸ್ವಂತ ಅಗತ್ಯಗಳು ಮತ್ತು ಆಸೆಗಳನ್ನೂ ಸಹಾ ತ್ಯಾಗ ಮಾಡುತ್ತಾರೆ. ಅವರ ಮೇಲೆ ಅತಿಯಾದ ಅಕ್ಕರೆ, ಬಾಂಧವ್ಯ, ಪ್ರೀತಿ ಹಾಗೂ ಎಮೋಷನಲ್ ಬಂಧುಗಳನ್ನು ಹೊಂದಿರುತ್ತಾರೆ. ನಿಜ ಹೇಳಬೇಕೆಂದರೆ ಪೋಷಕರ ಲೋಕವೇ ಮಕ್ಕಳಾಗಿಬಿಟ್ಟಿರುತ್ತದೆ.
ಇಂತಹ ಲೋಕ, ಅವರ ಮಕ್ಕಳು ಕಾಲೇಜು, ಕೆಲಸ ಅಥವಾ ಮದುವೆ ಆದ ಮೇಲೆ ಮನೆಯಿಂದ ಹೊರಗಡೆ ಇರಬೇಕಾಗಿ ಬಂದಾಗ, ಇದ್ದಕ್ಕಿದ್ದ ಹಾಗೆ ಖಾಲಿಯಾಗಿಬಿಡುತ್ತದೆ.
ಈ ಹಠಾತ್ ಬದಲಾವಣೆಯು ಪೋಷಕರಲ್ಲಿ ಕಳೆದುಕೊಳ್ಳುವಿಕೆ ಮತ್ತು ಶೂನ್ಯತೆಯ ಭಾವನೆಯನ್ನು ಉಂಟುಮಾಡುತ್ತದೆ. ಈ ಒಂದು ಸ್ಥಿತಿಯನ್ನು ಎಂಪ್ಟಿ ನೆಸ್ಟ್ ಸಿಂಡ್ರೋಮ್ ಅಥವಾ ಖಾಲಿ ಗೂಡಿನ ಮನಸ್ಥಿತಿ ಅನ್ನಬಹುದು.
ಏನಿದು ಎಂಫ್ಟಿ ನೆಸ್ಟ್ ಸಿಂಡ್ರೋಮ್
ಎಂಪ್ಟಿ ನೆಸ್ಟ್ ಸಿಂಡ್ರೋಮ್ ಕ್ಲಿನಿಕಲ್ ಆಗಿ ನಿರ್ಣಯಿಸಿದ ರೋಗವಲ್ಲ, ಆದರೆ ದುಃಖ, ಒಂಟಿತನ ಮತ್ತು ಅಸ್ತಿತ್ವ ಶೂನ್ಯವಾಗುವಿಕೆಯ ಭಾವನೆಗಳಿಂದ ತುಂಬಿದ ಒಂದು ಪರಿವರ್ತನೆಯ ಅವಧಿ. ಪ್ರಸಿದ್ಧ ಮನಶ್ಶಾಸ್ತ್ರಜ್ಞ ಡಾ. ಡೇವಿಡ್ ಎಲ್. ಮೆಕೆನ್ನಾ ಇದನ್ನು "ದುಃಖದ ಅವಧಿ" ಎಂದು ವಿವರಿಸುತ್ತಾರೆ, ಈ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕಾಳಜಿ ಮತ್ತು ಆರೈಕೇ ತೋರಿಸುವ ಮಾರ್ಗದರ್ಶಿ ಪಾತ್ರವನ್ನು ಕಳೆದುಕೊಳ್ಳುತ್ತಾರೆ. ಈ ಸಮಯದಲ್ಲಿ ತಮ್ಮ ಅಗತ್ಯ ಅಥವಾ ಪರ್ಪಸ್ ಏನು? ನಾವು ಬಂದ ಉದ್ದೇಶ ಮುಗಿದು ಹೋಯಿತಾ ಅಂತೆಲ್ಲಾ ಯೋಚನೆಯೇ ಗಳು ಮುತ್ತಿಡುತ್ತವೆ.
ಈ ಸಮಯದಲ್ಲಿ ಒಂದು ರೀತಿ ಗೊಂದಲ ಅಂದರೆ ಮಕ್ಕಳ ಸ್ವತಂತ್ರರಾಗಿ ಬದುಕುವುದಕ್ಕೆ ಹೆಮ್ಮೆ ಮತ್ತು ಸಂತೋಷ ಪಡಬೇಕಾ ಅಥವಾ ತಮ್ಮ ಭವಿಷ್ಯದ ಬಗ್ಗೆ ಆತಂಕ ಮತ್ತು ಅನಿಶ್ಚಿತತೆಯ ಬಗ್ಗೆ ಯೋಚನೆ ಮಾಡಬೇಕಾ ಎಂಬೆಲ್ಲ ಭಾವನೆಗಳು .
ಇದರಿಂದ ಮಾನಸಿಕ ಆರೋಗ್ಯದ ಪರಿಣಾಮ ಏನಾಗಬಹುದು?
ಕೆಲವು ಸಾಮಾನ್ಯ ಪ್ರತಿಕ್ರಿಯೆಗಳು ಸೇರಿವೆ:
1. ಬದುಕಿನ ಉದ್ದೇಶದ ಶೂನ್ಯತೆ: ಪೇರೆಂಟಿಂಗ್ ಪೂರ್ಣ ಸಮಯದ ಕೆಲಸವಾಗಿದ್ದಾಗ ಸಂಪೂರ್ಣವಾಗಿ ಸಮಯ ಆವರಿಸಿಕೊಂಡಂತಿರುತ್ತದೆ. ಆ ಮಕ್ಕಳು ತಮ್ಮನನ್ನು ಬಿಟ್ಟು ದೂರ ಹೋದಾಗ, ಬದುಕಿನ ಉದ್ದೇಶವೇನು ಮತ್ತು ಮುಂದೇ ಏನು ಮಾಡಬೇಕು ಎಂಬುದರ ಬಗ್ಗೆ ಶೂನ್ಯರಾಗಿ ಹೋಗಿರುತ್ತಾರೆ.
2. ಐಡೆಂಟಿಟಿ ಕ್ರೈಸಿಸ್: ಬಹುತೇಕ ಪೋಷಕರು ತಮ್ಮ ಪೇರೇಂಟಿಂಗ್ ಪಾತ್ರಕ್ಕೆ ಸಿಕ್ಕಾಪಟ್ಟೆ ಅಂಟಿಕೊಂಡಿರುತ್ತಾರೆ. ಅವರ ಸೆಲ್ಫ್ ಎಸ್ಟೀಮ್ ಮತ್ತು ಐಡೆಂಟಿಟಿ ಹೆಚ್ಚಾಗಿ ಅವರ ಮಕ್ಕಳ ಜೀವನದೊಂದಿಗೆ ಹೆಣೆದುಕೊಂಡಿರುತ್ತದೆ. ಈಗ ತಾವ್ಯಾರು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
3. ವೈವಾಹಿಕ ಒತ್ತಡ: ಮಕ್ಕಳ ನಿರ್ಗಮನವು ಕೆಲವೊಮ್ಮೆ ವೈವಾಹಿಕ ಸಮಸ್ಯೆಗಳನ್ನು ಮುಂಚೂಣಿಗೆ ತರಬಹುದು. ಪೋಷಕರ ಕರ್ತವ್ಯದಲ್ಲಿ ಮರೆತಿದ್ದೆ ಹಲವಾರು ಜಗಳ ಮತ್ತು ವೈಮನಸ್ಸುಗಳು ಈಗ ಮತ್ತೆ ನೆನಪಾಗಬಹುದು.
4. ಖಿನ್ನತೆ ಮತ್ತು ಆತಂಕ: ದುಃಖ ಮತ್ತು ಆತಂಕದ ಭಾವನೆಗಳು ಅತಿಯಾಗಿ ಕಾಡುವ ಸಂಗತಿಗಳು.
ನಿರ್ವಹಿಸುವ ಬಗೆ ಹೇಗೆ?
1. ವೈಯಕ್ತಿಕ ಆಸಕ್ತಿಗಳನ್ನು ಮರಳಿ ಹುಡುಕಿ ಅಭ್ಯಾಸ ಮಾಡಿ: ನೀರು ಸೈನಿ ಎಂಬ ರೀಲ್ ಸ್ಟಾರ್, ಆಕೆ ಹೀಗೆ ಮಗಳಿಗಾಗಿ ದುಡಿದು ಅವಳ ಮದುವೆಯ ನಂತರ ಇದೇ ರೀತಿಯ ಖಾಲಿ ಖಾಲಿತನ ಅನುಭವಿಸತೊಡಗಿದರು, ನಂತರ ತಮ್ಮ ಬಾಲ್ಯದ ಆಸಕ್ತಿಯಾದ ಡ್ಯಾನ್ಸ್ ಮತ್ತಿತರ ಹವ್ಯಾಸಗಳನ್ನು ಬೆಳೆಸಿಕೊಂಡು ತಮ್ಮ ಜೀವನದ ಉದ್ದೇಶವನ್ನು ಮತ್ತೆ ರಚಿಸಿಕೊಂಡರು. ಹೀಗೆ ಮಕ್ಕಳು ದೂರವಾದ ಮೇಲೆ ತಮ್ಮ ಹಳೆಯ ಆಸಕ್ತಿಗಳೊಂದಿಗೆ ಮತ್ತೆ ಅಂಟಿಕೊಳ್ಳಲು ಇದು ಒಳ್ಳೆಯ ಸಮಯ. ಅದು ತೋಟಗಾರಿಕೆ, ಚಿತ್ರಕಲೆ ಅಥವಾ ಪ್ರಯಾಣವಾಗಿರಲಿ, ವೈಯಕ್ತಿಕ ಅನ್ವೇಷಣೆಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದಾಗಿರಲಿ.
2. ವೈವಾಹಿಕ ಬಂಧಗಳನ್ನು ಬಲಗೊಳಿಸಿ: ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಲು ಈ ಸಮಯವನ್ನು ಬಳಸಿ. ಹೊಸ ಹೊಸ ಟ್ರಿಪ್ಪಿಗೆ ಹೋಗಿ, ಹೊಸ ಹೊಸ ಚಟುವಟಿಕೆಗಳನ್ನು ಒಟ್ಟಿಗೆ ಮಾಡಿ.
3. ಮಕ್ಕಳೊಡನೆ ಸಂಪರ್ಕದಲ್ಲಿರಿ: ಕರೆಗಳು, ಸಂದೇಶಗಳು ಅಥವಾ ಭೇಟಿಗಳ ಮೂಲಕ ಮಕ್ಕಳೊಂದಿಗೆ ನಿಯಮಿತ ಸಂವಹನವು ಒಂಟಿತನದ ಭಾವನೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಅವರ ಸಮಯವನ್ನು ಗೌರವಿಸುವುದೂ ಬಹಳ ಮುಖ್ಯ.
4. ಸೋಶಿಯಲ್ ನೆಟ್ವರ್ಕ್ ಮಾಡಿಕೊಳ್ಳಿ: ಸ್ನೇಹಿತರೊಂದಿಗೆ ಮಾತನಾಡುವುದು, ಸಹಕಾರದ ಗುಂಪುಗಳನ್ನು ಸೇರುವುದು ಅಥವಾ ಮನಶ್ಶಾಸ್ತ್ರಜ್ಞರಿಂದ ವೃತ್ತಿಪರ ಸಹಾಯವನ್ನು ಪಡೆಯುವುದು ಈ ಟ್ರಾನ್ಸಿಶನ್ ಸಮಯದಲ್ಲಿ ಹೆಚ್ಚು ಅಗತ್ಯವಿರುವ ಸಹಾಯ ಮಾಡಬಹುದು.
ನನ್ನ ಒಬ್ಬ ಕ್ಲೈಂಟ್, ತನ್ನ ಏಕೈಕ ಮಗ ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ಹೋದ ನಂತರ ಕಳೆದುಹೋದಂತಾಗಿದ್ದರು ಮತ್ತು ಖಿನ್ನತೆಗೆ ಒಳಗಾಗಿದ್ದರು, ನನ್ನ ಬಳಿಗೆ ಬಂದಿದ್ದಾಗ ನನಗೆ ನೆನಪಿದೆ. ಅವರು ತನ್ನ ಸಂಪೂರ್ಣ ಜೀವನವನ್ನು ಮಗನ ಪಾಲನೆಗಾಗಿ ಮುಡಿಪಾಗಿಟ್ಟಿದ್ದರು ಮತ್ತು ಅವನ ಅನುಪಸ್ಥಿತಿ ತುಂಬಲಾಗದ ಖಾಲಿ ಖಾಲಿ ಮನಸಾಗಿ ಹೋಗಿತ್ತು ಅವರದ್ದು. ಕೆಲವೊಂದು ಸೆಷನ್‌ಗಳ ಮೂಲಕ, ನಾವು ಅವಳ ಭಾವೋದ್ವೇಗ ಖಾಲಿತನಗಳ ಮೂಲವನ್ನು ಹುಡುಕಿ ಅದಕ್ಕೆ ತಕ್ಕಂತಹ ಆಸಕ್ತಿಗಳನ್ನು ಅನ್ವೇಷಿಸಿದೆವು, ನಂತರ ಅವರು ತಮ್ಮ ಅಡುಗೆ ಬಗೆಗಿನ ಪ್ರೀತಿಯನ್ನು ನೆನಪಿಸಿಕೊಂಡರು. ಅದನ್ನೇ ಒಂದು ಅವರು ಸಣ್ಣ ಗೃಹಾಧಾರಿತ ವ್ಯಾಪಾರವಾಗಿ ಪರಿವರ್ತಿಸಿಕೊಂಡರು. ಇದು ಅವರ ಸಮಯವನ್ನು ತುಂಬಿದಷ್ಟಲ್ಲದೇ ಅವರಿಗೆ ತನ್ನದೇ ಉದ್ದೇಶ ಮತ್ತು ಸಂತೋಷದ ಹೊಸ ಅರ್ಥವನ್ನು ನೀಡಿತು.
ನಾನು ನೋಡಿದಂತೆ ಪರಿಚಾತರೊಬ್ಬರು ತಮ್ಮ ಆಸಕ್ತಿಯಾದ ಕೃಷಿಯಲ್ಲಿ ತೊಡಗಿಕೊಂಡರೆ ಇನ್ನೊಬ್ಬರು ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡರು. ಅವರೆಲ್ಲರಿಗೂ ಈಗ ತಮ್ಮ ಲೋಕ, ತಮ್ಮ ಜೀವನದ ಉದ್ದೇಶಗಳು ಮರು ಸೃಷ್ಟಿಯಾಗುತ್ತಿದೆ.
ಜೀವನದಲ್ಲಿ ಆದ ಬದಲಾವಣೆಯನ್ನು ಒಪ್ಪಿಕೊಳ್ಳುವುದು ಸುಲಭ ಸಾಧ್ಯವಲ್ಲ ಆದರೂ ಇದು ಸ್ವಯಂಬೆಳವಣಿಗೆ ಮತ್ತು ಸ್ವಾವಲೋಕನಕ್ಕೆ ಅವಕಾಶವನ್ನು ಒದಗಿಸುತ್ತದೆ. ಈ ಭಾವನೆಗಳನ್ನು ಒಪ್ಪಿಕೊಂಡು ಬದಲಾವಣೆಯನ್ನು ಸ್ವೀಕರಿಸಿ, ಬೆಂಬಲವನ್ನು ಪಡೆದುಕೊಳ್ಳುವುದು ಮತ್ತು ಇದು ನಿಮ್ಮ ಜೀವನದ ಪ್ರಯಾಣದ ಮತ್ತೊಂದು ಅಧ್ಯಾಯ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ: ಬ್ರೈನ್ ಫಾಗ್: ಮಬ್ಬಾದ ಮನಸಿನಿಂದ ಸ್ಪಷ್ಟತೆಯ ಎಡೆಗೆ
ಆ ಸಮಯದಲ್ಲಿ ಎಂಪ್ಟಿ ನೆಸ್ಟ್ ಸಿಂಡ್ರೋಮ್ ಕಾಡಬಾರದೆಂದರೆ ಅದಕ್ಕೆ ಒಂದು ಏಳೆಂಟು ವರ್ಷಗಳ ಮುಂಚೆಯೇ ಮನಸು, ಬದುಕು ಹಾಗೂ ದೇಹವನ್ನು ಸಿದ್ದಗೊಳಿಸಿ ಕೈಗೊಂಡಿರಬೇಕು. ಅಂತಹ ಸಿದ್ದತೆ ಹೇಗಿರಬೇಕು?
● ಭಾವನಾತ್ಮಕ ಸಿದ್ಧತೆ- ಭಾವನೆಗಳನ್ನು ಒಪ್ಪಿಕೊಳ್ಳಿ, ಆ ಸಮಯದಲ್ಲಿ ಮಿಶ್ರ ಭಾವನೆಗಳು-ದುಃಖ, ಆತಂಕ, ಪರಿಹಾರ-ಸಾಮಾನ್ಯ ಎಂದು ಅರ್ಥಮಾಡಿಕೊಳ್ಳಿ.
● ಕುಟುಂಬದೊಂದಿಗೆ ಮುಂಚೆಯೇ ಚರ್ಚಿಸಿ ಮುಂಬರುವ ಬದಲಾವಣೆಗಳ ಬಗ್ಗೆ ನಿಮ್ಮ ಭಾವನೆಗಳು ಮತ್ತು ನಿರೀಕ್ಷೆಗಳ ಬಗ್ಗೆ ನಿಮ್ಮ ಸಂಗಾತಿ ಮತ್ತು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ. ಮುಕ್ತ ಸಂವಹನವು ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿಸಲು ಮತ್ತು ಪರಿವರ್ತನೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
● ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿ, ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ ಮತ್ತು ನೀವಿಬ್ಬರೂ ಆನಂದಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಸಂಬಂಧವನ್ನು ಬೇರಿನಿಂದ ಬಲಪಡಿಸಿ ಮತ್ತು ಪೋಷಿಸಿ.
● ಒಟ್ಟಿಗೆ ಯೋಜನೆ ಮಾಡಿ: ಒಟ್ಟಿಗೆ ಚರ್ಚಿಸಿ ಮತ್ತು ಭವಿಷ್ಯಕ್ಕಾಗಿ ಯೋಜಿಸಿ.
● ಹೊಸ ಹವ್ಯಾಸಗಳು ಮತ್ತು ಚಟುವಟಿಕೆಗಳ ವೈಯಕ್ತಿಕ ಆಸಕ್ತಿಗಳನ್ನು ಬೆಳೆಸಿಕೊಳ್ಳಿ.
● ನೀವು ಆನಂದಿಸುವ ಅಥವಾ ಯಾವಾಗಲೂ ಪ್ರಯತ್ನಿಸಲು ಬಯಸುವ ಹವ್ಯಾಸಗಳು ಅಥವಾ ಚಟುವಟಿಕೆಗಳನ್ನು ಗುರುತಿಸಿ. ಇದು ಕಲೆ ಮತ್ತು ಕರಕುಶಲ, ಕ್ರೀಡೆ, ಓದುವಿಕೆ ಅಥವಾ ಪ್ರಯಾಣ ಏನಾದರೂ ಆಗಿರಬಹುದು.
● ನಿಮಗೆ ಉಪಯೋಗವಾಗುವ ಹೊಸ ವಿಷಯಗಳನ್ನು ಕಲಿಯುತ್ತಲೇ ಇರಿ.
● ನಿಮ್ಮ ಸಾಮಾಜಿಕ ನೆಟ್ವರ್ಕ್ ಅನ್ನು ಬೆಳೆಸಿಕೊಳ್ಳಿ.ಸಾರ್ವಜನಿಕ ಸಮಾರಂಭ ಪುಸ್ತಕ ಬಿಡುಗಡೆ ಮುಂತಾದೆಡೆ ಹೋಗಿ.
● ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಿಮ್ಮ ಸಹಾಯಹಸ್ತ ನೀಡುವ ಮೂಲಕ ತೊಡಗಿಕೊಳ್ಳಿ
● ಆರ್ಥಿಕ ಯೋಜನೆ ಬಹಳ ಮುಖ್ಯ. ಅದನ್ನುಸರಿಯಾಗಿ ಹೂಡಿ ಜೀವನ ಸಂಧ್ಯಾಕಾಲದಲ್ಲಿ ಸರಿಯಾಗಿ ಸಮಯಕ್ಕೆ ಬರುವಂತೆ ನೋಡಿಕೊಳ್ಳಿ.
● ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ. ಪ್ರತಿ ದಿನ ವ್ಯಾಯಾಮ ಮಾಡುವುದು, ಸಮತೋಲಿತ ಆಹಾರ, ಪಥ್ಯ ಇವುಗಳು ಮೂಲಕ ದೇಹ ರೋಗಕ್ಕೆ ತುತ್ತಾಗದ ಹಾಗೆ ನೋಡಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ, ಕೇಂದ್ರೀಕೃತ ಧ್ಯಾನ ಅಥವಾ ಉಸಿರಾಟದ ತಂತ್ರಗಳನ್ನು ಬಳಸಿ ಮನಸು ನೆಗೆಟೀವ್ ಭಾವನೆಗಳನ್ನು ಹೊಂದದಂತೆ ನೋಡಿಕೊಳ್ಳುವುದು. ಸದಾ ಮನಸು ಪ್ರಫುಲ್ಲವಾಗಿರುವಂತೆ ನೋಡಿಕೊಳ್ಳಿ.
● ನಿಧಾನವಾಗಿ ಮಕ್ಕಳ ಲೋಕದಿಂದ ಡಿಟಾಚ್ ಆಗುತ್ತಾ ಬನ್ನಿ ನಿಮ್ಮದೇ ಲೋಕವನ್ನು ಸೃಷ್ಟಿಸಿಕೊಳ್ಳಿ.
ಹೌದು ರೆಕ್ಕೆ ಬಂದ ಮೇಲೆ ಮರಿ ತುಂಬು ಪ್ರಮಾಣದ ಹಕ್ಕಿಯಾಗಿ ತನ್ನ ಪ್ರಪಂಚದಲ್ಲಿ ಹಾಯಾಗಿ ವಿಸ್ತರಿಸುತ್ತದೆ. ಆ ಸಮಯದಲ್ಲಿ ಗೂಡು ಬಿಕೋ ಎನ್ನುವುದು ನಿಜ, ಆದರೆ ಗೂಡು ಖಾಲಿಯಾಗಿರಬಹುದು, ಆದರೆ ಭಾನುವಾರ ಮನಸು ಖಾಲಿಯಾಗಲು ಸಾಧ್ಯವಿಲ್ಲ ಈ ಬದಲಾವಣೆ ಒಂದು ಹೊಸ ಆರಂಭಕ್ಕೆ ಮತ್ತು ಅಂತ್ಯವಿಲ್ಲದ ಸಾಧ್ಯತೆಗಳಿಗೆ ಬದುಕು ಕೊಟ್ಟ ಒಂದು ಹೊಸ ಅವಕಾಶ ಎಂಬುದನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಬೇಕು. ಮರಿ ಹಕ್ಕಿ ಗೂಡು ತೊರೆದರೇನಂತೆ ಅಪ್ಪ/ ಅಮ್ಮ ಹಕ್ಕಿಯ ಹಾಡು ನಿರಂತರವಾಗಿರಲಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ