- ಡಾ. ರೂಪಾ ರಾವ್
ನನ್ನ ಕಛೇರಿಯಲ್ಲಿ ಆ ಕ್ಲೈಂಟ್ ಎದುರು ಕುಳಿತಿದ್ದೆ, ನನಗೆ ನೆನಪಿದೆ. ಅವಳು ಉತ್ಸಾಹದಿಂದ ಪುಟಿಯುವ ಯುವತಿ, ಇಡೀ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ಇದ್ದವಳು, ಆದರೆ ಆ ದಿನ ಅವಳ ಕಣ್ಣುಗಳು ಗೊಂದಲದ ಮೋಡಗಳ ಗೂಡಾಗಿತ್ತು. "ನನ್ನ ಮುಂದೆ ಒಂದು ದೊಡ್ಡ ಮಂಜಿನ ದಾರಿ ಇದೆ ಅಂತ ಅನಿಸುತ್ತಿದೆ, ಏನೂ ಕಾಣಿಸುತ್ತಿಲ್ಲ, ಎಲ್ಲಿಗೆ ಹೋಗಬೇಕು ಅಂತ ಗೊತ್ತಾಗುತ್ತಿಲ್ಲ. ಒಂದು ಕಡೆಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ನನ್ನ ಆಲೋಚನೆಗಳು ತುಂಬಾ ಚೆಲ್ಲಾಪಿಲ್ಲಿ ಆಗಿದೆ. ನಾನು ಇಲ್ಲಿಯೇ ಇದ್ದೇನೆ ಆದರೆ ಮನಸು ನಿಜವಾಗಿಯೂ ಇಲ್ಲಿಲ್ಲ ಯಾವಾಗಲೂ ಜೋನ್ ಔಟ್ ಆಗಿರುತ್ತೇನೆ. ಇದಕ್ಕೆ ಕಾರಣ ಏನು.?"
ಅವಳು ಬ್ರೈನ್ ಫಾಗ್ ನಿಂದ ಬಳಲುತ್ತಿದ್ದಳು.
ಏನಿದು ಬ್ರೈನ್ ಫಾಗ್?
ಬ್ರೈನ್ ಫಾಗ್ ಎಂಬುದು ನಮ್ಮಲ್ಲಿ ಅನೇಕರಿಗೆ ಆಳವಾಗಿ ಕಾಡುವ ಸಮಸ್ಯೆ ಕೆಲವೊಮ್ಮೆ ಇದ್ದಕ್ಕಿದ್ದಂತೆ. ನಮ್ಮ ಮಾನಸಿಕ ಸ್ಪಷ್ಟತೆ ಮಂದವಾಗುವುದು, ನಮ್ಮ ಆಲೋಚನೆಗಳು ನಿಧಾನವಾಗುವುದು ಮತ್ತು ಮಾಹಿತಿಯನ್ನು ಪ್ರೊಸೆಸ್ ಮಾಡುವ, ವಿಶ್ಲೇಷಿಸುವ ನಮ್ಮ ಸಾಮರ್ಥ್ಯವು ದುರ್ಬಲಗೊಳ್ಳುವ ಸ್ಥಿತಿ.
ಯಾವುದೇ ಸಮಸ್ಯೆ ಅತೀ ಸಣ್ಣದೇ ಸರೀ ಬಂದರೂ ಅಲ್ಲಿಂದ ತಪ್ಪಿಸಿಕೊಳ್ಳುವ ಬಗ್ಗೆ ಮನಸು ಯೋಚಿಸುತ್ತಿರುತ್ತದೆಯೇ ಹೊರತು, ಅದನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಅಲ್ಲ. ನಾವೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಈ ಬ್ರೈನ್ ಫಾಗ್ ಗೆ ಒಳಗಾಗಿರುತ್ತೇವೆ. ನಮ್ಮ ಸಾಮಾನ್ಯ ತೀಕ್ಷ್ಣತೆಯನ್ನು ಅಸ್ಪಷ್ಟಗೊಳಿಸುವಂತೆ ತೋರುವ ಮಾನಸಿಕ ಮಂಜಿನ ಗಾಜಿನ ಮೂಲಕ ನೋಡುತ್ತಿರುತ್ತೇವೆ.
ಆದರೆ ಈ ಮೆದುಳಿನ ಫಾಗ್ ನಿಖರವಾಗಿ ಏನು, ಮತ್ತು ಅದು ಏಕೆ ಸಂಭವಿಸುತ್ತದೆ?
ನನ್ನ ವೃತ್ತಿ ಪರ ಅನುಭವಗಳು ಮತ್ತು ಗ್ರಾಹಕರೊಂದಿಗಿನ ಅಸಂಖ್ಯಾತ ಸಂಭಾಷಣೆಗಳಿಂದ ಅರ್ಥ ಆಗಿರುವುದೆಂದರೆ, ಬ್ರೈನ್ ಫಾಗ್ ಸಾಮಾನ್ಯವಾಗಿ ಬೇರೆ ಬೇರೆ ರೋಗಲಕ್ಷಣಗಳ ಗುಂಪಾಗಿ ಪ್ರಕಟವಾಗುತ್ತದೆ: ಅದು ಮರೆವು, ಗಮನದ ಕೊರತೆ, ಗೊಂದಲ ಮತ್ತು ಮಾನಸಿಕ ಆಯಾಸ. ಇದು ವೈದ್ಯಕೀಯವಾಗಿ ಗುರುತಿಸಲ್ಪಟ್ಟ ಹೆಸರಲ್ಲ, ಆದರೆ ಒಂದು ಇಂತಿದೆ ರೋಗ ಅಥವಾ ಕಾರಣಗಳಿಂದ ಬರುವ ಲಕ್ಷಣಗಳ ಗುಂಪಿಗಿರುವ ಹೆಸರು.
ನಾನು ಗಮನಿಸಿದ ಒಂದು ಸಾಮಾನ್ಯ ಕಾರಣವೆಂದರೆ ಮಾನಸಿಕ ಒತ್ತಡ. ನಾವು ದೀರ್ಘಕಾಲದ ಒತ್ತಡದಲ್ಲಿರುವಾಗ, ನಮ್ಮ ದೇಹದ ಪ್ರತಿಕ್ರಿಯೆಯು ನಿರಂತರವಾದ ಎಚ್ಚರಿಕೆಯ ಸ್ಥಿತಿಗೆ ಕಾರಣವಾಗಬಹುದು, ಇದು ಅಂತಿಮವಾಗಿ ನಮ್ಮ ಮಾನಸಿಕ ಸಂಪನ್ಮೂಲಗಳನ್ನು ಖಾಲಿ ಮಾಡುತ್ತದೆ. ಇದರಿಂದ ಚಿಂತನೆ ಮತ್ತು ಆಲೋಚನೆಗಳೆಡೆ ಪರಿಣಾಮಕಾರಿಯಾಗಿ ಕೇಂದ್ರೀಕರಿಸಲು ಮತ್ತು ವಿಶ್ಲೇಷಿಸಲು ಕಷ್ಟವಾಗಬಹುದು. ನನ್ನ ಒಬ್ಬ ಕ್ಲೈಂಟ್ ಗೆ ಕೆಲಸದಲ್ಲಿ ಪ್ರಮೋಶನ್ ಸಿಗುವಾಗ ಅದರಿಂದ ಬರುವ ಹೆಚ್ಚುವರಿ ಜವಾಬ್ದಾರಿಯನ್ನು ನೆನೆದು ಮಾನಸಿಕ ಒತ್ತಡ ಹೆಚ್ಚಾಗಿ ಅದರಿಂದ ಬ್ರೈನ್ ಫಾಗ್ ಆಗಿದ್ದರೆ ಇನ್ನೊಬ್ಬ ಹುಡುಗಿಗೆ ಕುಟುಂಬ ಮತ್ತು ನೌಕರಿ ಎರಡನ್ನೂ ನಿರ್ವಹಿಸಲಾಗದ ಒತ್ತಡದಿಂದ ಬ್ರೈನ್ ಫಾಗ್ ಆಗಿತ್ತು.
ಹೀಗೆ, ಕೆಲಸ, ಕುಟುಂಬ ಮತ್ತು ವೈಯಕ್ತಿಕ ಜವಾಬ್ದಾರಿಗಳ ನಿರಂತರ ಪೂರೈಕೆ ಮಾಡಬೇಕಾದಾಗ ಬ್ರೈನ್ ಫಾಗ್ ಮನಸಿನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿ ಅದರ ಧೂಳನ್ನು ಕಣ್ಣಿಗೆ ಕಟ್ಟುತ್ತದೆ.
ಬ್ರೈನ್ ಫಾಗ್ ಗೆ ನಿದ್ರಾಹೀನತೆಯೂ ಮತ್ತೊಂದು ಪ್ರಮುಖ ಕಾರಣವಾಗಿರಬಹುದು. ನಮ್ಮ ಮಿದುಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ವಿಶ್ರಾಂತಿಯ ಅಗತ್ಯವಿರುತ್ತದೆ ಮತ್ತು ಸಾಕಷ್ಟು ನಿದ್ರೆಯಿಲ್ಲದೆ, ಅರಿವಿನ ಪ್ರಕ್ರಿಯೆಗಳು ನಿಧಾನಗೊಳ್ಳುತ್ತವೆ. ನಾನು ಬಹಳಷ್ಟು ಕ್ಲೈಂಟಿಗೆ ಹೇಳುವದೇನೆಂದರೆ ನಿದ್ರೆ ಒಂದು ಲಕ್ಸುರಿ ಅಲ್ಲ, ಅದು ಮಾನಸಿಕ ಸ್ಪಷ್ಟತೆ ಹಾಗು ದೈಹಿಕವಾಗಿ ಆರೋಗ್ಯದಿಂದ ಇರಲು ಬೇಕಾದ ಅತೀ ಅಗತ್ಯಗಳಲ್ಲಿ ಒಂದು.
ನಮ್ಮ ಈ ವೇಗದ ಜಗತ್ತಿನಲ್ಲಿ, ನಮ್ಮ ಇತರ ಕೆಲಸಗಳಿಗಾಗಿ ಆಗಾಗ ನಿದ್ರೆಯನ್ನು ಬಲಿಕೊಡುತ್ತಿರುತ್ತೇವೆ. ನಾವು ನಿದ್ದೆ ನಂತರ ಮಾಡಬಹುದು ಎಂದು ಭಾವಿಸುತ್ತೇವೆ, ಆದರೆ ಸರಿಯಾದ ಸಮಯದಲ್ಲಿ ಮಾಡದ ನಿದ್ದೆ ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತದೆ. ಸಾಮಾನ್ಯವಾಗಿ 7 ರಿಂದ 8 ಘಂಟೆಯ ನಿದ್ದೆ ಫ್ರಭಾವಶಾಲಿ.
ಇದೇ ರೀತಿಯಲ್ಲಿ ಆಹಾರಶೈಲಿ ಸಹ ಮಾನಸಿಕ ಆರೋಗ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಬ್ಯಾಲನ್ಸ್ಡ್ ಜೀವನಕ್ಕೆ ಬ್ಯಾಲನ್ಸ್ಡ್ ಆಹಾರ ಬೇಕು.
ಒಬ್ಬರು ಸಮತೋಲಿತ ಆಹಾರ ಸೇವಿಸದೇ ಕಾರಣ ಬ್ರೈನ್ ಫಾಗ್‌ಗೆ ಒಳಗಾಗಿದ್ದರು, ಅವರ ಆಹಾರ ಕ್ರಮವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರು ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಸಾಕಷ್ಟು ಪೋಷಕಾಂಶಗಳನ್ನು ಸೇವಿಸುತ್ತಿಲ್ಲ ಎಂದು ಕಂಡುಹಿಡಿಯಲಾಯಿತು.
ಮೆದುಳು ತನ್ನ ಆಲೋಚನಾ ಶಕ್ತಿಯನ್ನು ಸರಿಯಾಗಿ ನಿರ್ವಹಿಸಲು ಒಮೆಗಾ-3 ಫ್ಯಾಟ್ಟಿ ಆಸಿಡ್, ಬಿ ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟ್ ಗಳು ಬಹಳಷ್ಟು ಬೇಕು. ಮತ್ತು ಇವುಗಳ ಕೊರತೆಯು ಬ್ರೈನ್ ಫಾಗ್ ಗೆ ಕಾರಣವಾಗಬಹುದು. ನಮ್ಮ ನಿಯಮಿತ ಆಹಾರ ಯಾವಾಗಲೂ ನಾಲಕ್ಕು ಭಾಗಗಳಲ್ಲಿ ಬೇಕು 1 ಅರ್ಧದಷ್ಟು ತರಕಾರಿ, ಕಾಲುಭಾಗ ಪ್ರೋಟೀನ್ ಹಾಗೂ ಗುಡ್ ಫ್ಯಾಟ್ ಇನ್ನು ಕಾಲು ಭಾಗ ಅನ್ನ, ರಾಗಿ, ಬೇಳೆ ಮತ್ತು ಇತರ ಕಾರ್ಬೋಹೈಡ್ರೇಟ್ ಇರಬೇಕು. ಆದರೆ ಈ ಫಾಸ್ಟ್ ಫುಡ್ ಯುಗದಲ್ಲಿ ಜಂಕ್ ಫುಡ್‌ಗಳೇ ಮಹತ್ವದ ಪಾತ್ರ ವಹಿಸುತ್ತಿರುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುಂಠಿತಗೊಳ್ಳುತ್ತಾ ಬರುತ್ತಿದೆ.
ಹಾರ್ಮೋನಿನ ಅಸಮತೋಲನವೂ ಸಹ ಬ್ರೈನ್ ಫಾಗ್‌ಗೆ ಕಾರಣವಾಗಬಹುದು. ಮೆನೋಪಾಸ್ ಅಥವಾ ಋತುಬಂಧದ ಸಮಯದಲ್ಲಿ ಅಥವಾ ಹೆರಿಗೆಯ ನಂತರ ಗಮನಾರ್ಹವಾದ ಬ್ರೈನ್ ಫಾಗ್ ಗೆ ಒಳಗಾಗಿದ್ದ ಅನೇಕ ಮಹಿಳೆಯರೊಂದಿಗೆ ಕೌನ್ಸೆಲಿಂಗ್ ಮಾಡಿದ ಅನುಭವದಿಂದ ಹೇಳುವುದಾದರೆ ಹಾರ್ಮೋನುಗಳ ಬದಲಾವಣೆಗಳು ನ್ಯೂರಲ್ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು, ಹಾಗೇ ಮನಸ್ಥಿತಿ ಮತ್ತು ಆಲೋಚನಾ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಈ ಬದಲಾವಣೆ ಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ನಿರ್ವಹಿಸುವ ಮಾರ್ಗಗಳನ್ನು ಕಂಡುಹಿಡಿಯುವುದು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಪ್ರಮುಖವಾಗಿದೆ.
ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಪರಿಸ್ಥಿತಿಗಳು ಸಾಮಾನ್ಯವಾಗಿ ಬ್ರೈನ್ ಫಾಗ್ ಜೊತೆ ಕೈಜೋಡಿಸುತ್ತವೆ. ಮನಸ್ಸು ಆತಂಕದ ಆಲೋಚನೆಗಳು ಅಥವಾ ಖಿನ್ನತೆಯ ಸ್ಥಿತಿಗಳಲ್ಲಿ ಎಷ್ಟು ತೊಡಗಿಸಿಕೊಂಡಿರುತ್ತದೆ ಎಂದರೆ ಅದು ದೈನಂದಿನ ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ಹೆಣಗಾಡುತ್ತದೆ. ಈ ಫಾಗ್ ಅನ್ನು ನಿವಾರಿಸಬೇಕಾದರೆ ಅದರ ಅಳದಲ್ಲಿ ಆಧಾರವಾಗಿರುವ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸುವುದು ಪ್ರಮುಖವಾಗಿದೆ.
ಇದಲ್ಲದೇ ಕೆಲವು ಓವರ್ ದ ಕೌಂಟರ್ ಮೆಡಿಟೇಶನ್ ಅಂದರೆ ಪೇನ್ ಕಿಲ್ಲರ್ ಗಳ ಸತತ ಬಳಕೆ ಕೂಡ ಬ್ರೈನ್ ಫಾಗ್ ಅನ್ನು ತರಬಹುದು. ಕೆಲವು ಗಂಭೀರ ಕಾಯಿಲೆಗಳೂ ಕೂಡ ಬ್ರೈನ್ ಫಾಗಿಗೆ ಕಾರಣವಾಗಬಹುದು.
ಸಾಮಾನ್ಯವಾಗಿ ನನ್ನ ಸೆಷನ್ಗಳಲ್ಲಿ, ಬ್ರೈನ್ ಫಾಗ್ ಗೆ ಕಾರಣವನ್ನು ಕಂಡುಹಿಡಿದು ಅದಕ್ಕೆ ತಕ್ಕ ಹಾಗೆ ಎದುರಿಸಲು ವಿವಿಧ ತಂತ್ರಗಳನ್ನು ಉಪಯೋಗಿಸುತ್ತೇನೆ. ಮೈಂಡ್‌ಫುಲ್‌ನೆಸ್ ಮತ್ತು ಧ್ಯಾನವು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಒತ್ತಡದ ಪ್ರಭಾವವನ್ನು ಕಡಿಮೆ ಮಾಡಲು ಪ್ರಮುಖ ವಿಧಾನಗಳಾಗಿವೆ. ಸರಳವಾದ ಉಸಿರಾಟದ ವ್ಯಾಯಾಮಗಳು ಮಾನಸಿಕ ಗೊಂದಲವನ್ನು ನಿವಾರಿಸುವಲ್ಲಿ ಸಹಾಯ ಮಾಡಬಹುದು. ನಿಯಮಿತ ದೈಹಿಕ ವ್ಯಾಯಾಮ ಮತ್ತೊಂದು ಪರಿಣಾಮಕಾರಿ ಪರಿಹಾರವಾಗಿದೆ; ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಎಂಡೋರ್ಫಿನ್ (ನೋವು, ಮತ್ತು ಮಾನಸಿಕ ಒತ್ತಡಗಳನ್ನು ಶಮನಗೊಳಿಸುವ ಹಾರ್ಮೋನ್) ಬಿಡುಗಡೆ ಮಾಡುತ್ತದೆ. ಇವುಗಳಿಂದ ಮನಸ್ಥಿತಿ ಮತ್ತು ಆಲೋಚನಾ ಕಾರ್ಯವನ್ನು ಹೆಚ್ಚಿಸುತ್ತದೆ.
ನಿದ್ರಾಹೀನತೆಯಿಂದ ಹೋರಾಡುತ್ತಿರುವವರಿಗೆ, ನಿದ್ರೆಯನ್ನು ಸುಧಾರಿಸಲು ದಿನಚರಿಗಳನ್ನು ಕೊಡಬಹುದು: ನಿದ್ರೆಯ ವೇಳಾಪಟ್ಟಿಗಳು, ಮಲಗುವ ಮುನ್ನ ಮೊಬೈಲ್ ಸಮಯವನ್ನು ಕಡಿಮೆಗೊಳಿಸುವುದು ಮತ್ತು ಮನಸನ್ನು ಕಾಮ್ ಮಾಡುವ ಬೆಡ್ ಟೈಮ್ ದಿನಚರಿಯನ್ನು ರಚಿಸುವುದು.
ಪೌಷ್ಠಿಕಾಂಶವು ಸಹ ಮುಖ್ಯ, ಮಿದುಳು-ಉತ್ತೇಜಿಸುವ ಪೋಷಕಾಂಶಗಳ ಸಮತೋಲಿತ ಸೇವನೆಯನ್ನು ತಿಳಿದುಕೊಳ್ಳಬೇಕು.
ಕೆಲವೊಮ್ಮೆ, ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಂಡು ಹೋಗಿ ನಮ್ಮ ಆದ್ಯತೆಗಳನ್ನು ಮರು ಪರಿಶೀಲಿಸುವುದೂ ಸಹಾ ಬಹಳ ಮುಖ್ಯ. ನಾವು ಕಾರ್ಯನಿರತತೆಯನ್ನು (ಬ್ಯುಸಿ ಲೈಫ್ )ವೈಭವೀಕರಿಸುವ ಜಗತ್ತಿನಲ್ಲಿದ್ದೇವೆ, ಆದರೆ ನಮ್ಮ ಮೆದುಳಿಗೆ ರೀಚಾರ್ಜ್ ಮಾಡಲು ಸಂಪೂರ್ಣ ವಿರಾಮದ ಅಗತ್ಯವಿದೆ. ಈ ವಿರಾಮಗಳನ್ನು ನಿಗದಿಪಡಿಸುವುದು, ನಮ್ಮ ಕೆಲಸ, ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಪರಸ್ಪರ ಹೊಂದಿಸಿಕೊಂಡು ಬದುಕುವುದು ಮತ್ತು ವಿಶ್ರಾಂತಿಯನ್ನು ಪಡೆಯುವುದು ಅತ್ಯಗತ್ಯವಾಗಿ ಬೇಕಾದ ಅಭ್ಯಾಸಗಳು.
ನಿಜ ಬ್ರೈನ್ ಫಾಗ್ ನಿರಾಶಾದಾಯಕ ಮತ್ತು ದುರ್ಬಲ ಅನುಭವವಾಗಬಹುದು, ಆದರೆ ಹೀಗೆ ಅನುಭವಿಸುತ್ತಿರುವವರಲ್ಲಿ ನಾವು ಒಬ್ಬರೇ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಬ್ರೈನ್ ಫಾಗ್ ಗೆ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಅವುಗಳನ್ನು ಪರಿಹರಿಸಲು ತಂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ, ನಾವು ಈ ಮಸುಕನ್ನು ನಿವಾರಿಸಿ ನಮ್ಮ ಮಾನಸಿಕ ಸ್ಪಷ್ಟತೆಯನ್ನು ಮರಳಿ ಪಡೆಯಬಹುದು. ನಾನು ಆಗಾಗ್ಗೆ ನನ್ನ ಕ್ಲೈಂಟ್‌ಗಳಿಗೆ ನೆನಪಿಸುವಂತೆ, ನಮ್ಮ ಮೆದುಳಿಗೆ ಸರಿಯಾದ ಕಾಳಜಿ ಮತ್ತು ಗಮನ ಕೊಟ್ಟರೆ, ನಾವು ಅದಕ್ಕೆ ಕವಿದಿರುವ ಈ ಮಂಜನ್ನು ಸುಗಮಗೊಳಿಸಬಹುದು ಮತ್ತು ನಮ್ಮ ನಿಜವಾದ ಸಾಮರ್ಥ್ಯವನ್ನು ಬೆಳಗಲು ಬಿಡಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ