ಪ್ರಿಯ ಓದುಗರೇ, 73ರ ಹರೆಯದಲ್ಲಿರುವ ನಾನು ನನ್ನ 7ನೇ ವರ್ಷದಿಂದ ರೇಡಿಯೋ-ರಂಗಭೂಮಿ-ಸಿನಿಮಾ-ಸಂಗೀತ-ನೃತ್ಯ. ಈ ಕ್ಷೇತ್ರಗಳ ಬಗ್ಗೆ ಅತಿ ಹತ್ತಿರದಿಂದ ನೋಡಿದ್ದೇನೆ. ಆ ಕಾಲದ ಮಹಾನ್ ಕವಿಗಳು, ಸಾಹಿತಿಗಳು, ನಾಟಕಕಾರರು, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳ ಮಹಾನ್ ವ್ಯಕ್ತಿಗಳನ್ನು ಕಂಡಿದ್ದೇನೆ- ಅವರೊಂದಿಗೆ ಒಡನಾಟ ನನ್ನ ತಂದೆ ಎನ್.ಎಸ್ ವಾಮನ್‌ರವರಿಂದ ನನಗೆ ಈ ಭಾಗ್ಯ ಸಿಕ್ಕಿತು. ಬರುವ ದಿನಗಳಲ್ಲಿ ಈ ಅಂಕಣದಲ್ಲಿ ಅವುಗಳ ಬಗ್ಗೆ ಪ್ರಸ್ತಾಪಿಸಲಿದ್ದೇನೆ. ಇಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ದ.ರಾ. ಬೇಂದ್ರೆ ಹಾಗೂ ವೃತ್ತಿ ರಂಗಭೂಮಿಯ ಮಹಾನ್ ಕಲಾವಿದರಾಗಿದ್ದ ಗರುಡ ಸದಾಶಿವರಾಯರ ಬಗೆಗಿನ ನನ್ನ ನೆನಪುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇನೆ. ನಾ ಕಂಡ ಬೇಂದ್ರೆ- ಧಾರವಾಡದಲ್ಲಿ ನನ್ನ ಬಾಲ್ಯದಿಂದ ನನ್ನ ತಂದೆಗೆ, ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಅಂಬಿಕಾತನಯದತ್ತ ಕಾವ್ಯನಾಮದ ದ.ರಾ. ಬೇಂದ್ರೆಯವರ ಬಗೆಗಿನ ನನ್ನ ನೆನಪುಗಳನ್ನು ಇಲ್ಲಿ ಈಗ ನಿಮ್ಮೊಂದಿಗೆ ಹಂಚಿಕೊಳ್ಳುವೆ. ನನ್ನ ತಂದೆ ಎನ್.ಎಸ್.ವಾಮನ್, ಧಾರವಾಡ ಆಕಾಶವಾಣಿ ನಾಟಕದ ನಿರ್ದೇಶಕರಾಗಿದ್ದ ಕಾಲದಲ್ಲಿ, 1958ರಿಂದ ಧಾರವಾಡದಲ್ಲಿದ್ದಾಗ, ನಾನು 3ನೇ ತರಗತಿ ಓದುತ್ತಿದ್ದ ಕಾಲ. ಧಾರವಾಡದ ಕಿತ್ತೂರು ಚೆನ್ನಮ್ಮ ಉದ್ಯಾನವನದ ಬಳಿ, ಮಹೇಂದ್ರಕರ್ ಚಾಳ್‌ನಲ್ಲಿ ನಮ್ಮ ಬಾಡಿಗೆ ಮನೆ. ಸಾಧನಕೇರಿಯಿಂದ, ತಲೆಗೆ ಟೋಪಿ ಹಾಕಿಕೊಂಡು, ಬೆಳಗ್ಗೆ ವಾಕಿಂಗ್‌ಗಾಗಿ ಬರ್ತಿದ್ದ ಬೇಂದ್ರೆ ಅವರು, ಆಗಾಗ ನಮ್ಮ ಚಾಳ್‌ನಲ್ಲಿದ್ದ, ಸಂಗೀತಕಾರ ಟಿ.ಆರ್. ಭಾಗವತ್ ಮನೆಗೆ ಬಂದಾಗ, ನಮ್ಮ ಮನೆಗೂ ಬರ್ತಿದ್ದರು. ಅವರು ಧಾರವಾಡ ಆಕಾಶವಾಣಿಯ ಸಲಹಾ ಸಮಿತಿ ಸದಸ್ಯರಾಗಿ, ನಮ್ಮ ತಂದೆಯವರೊಂದಿಗೆ, ಆತ್ಮೀಯ ಬಂಧುವಿಗಿಂತ ಹೆಚ್ಚಿನ ಪ್ರೀತಿಯ ಸಂಬಂಧ ಹೊಂದಿದ್ದರು. ಅವರ ಮನೆಗೆ ನಾನು ಅನೇಕ ಬಾರಿ ಹೋಗಿದ್ದ ನೆನಪು ಹಸಿರಾಗಿದೆ. ಆಕಾಶವಾಣಿಗಾಗಿ ಅವರು ಬರೆದ ನಾಟಕ, ಸಂಗೀತರೂಪಕ, ಕಾವ್ಯನಿವೇದನೆ, ಸಂದರ್ಶನ ಮುಂತಾದ ಕಾರ್ಯಕ್ರಮಗಳ ಸಂಬಂಧದಲ್ಲಿ, ಅಥವಾ ಸಮಯ ಸಿಕ್ಕಿದಾಗ, ಅವರೊಡನೆ ಮಾತುಕತೆಗಾಗಿ, ನನ್ನ ತಂದೆ ಅವರ ಮನೆಗೆ ಹೋಗುತ್ತಿದ್ದಾಗ ನಾನೂ ಅವರ ಜೊತೆಗೆ ಹೋಗುತ್ತಿದ್ದೆ. ಅಂದಿನ ಕೆಲವು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆ?.
ಬೇಂದ್ರೆ ಅವರ ಮನೆಗೆ ಯಾರೇ ಹೋದರೂ, ಅವರು ಬಂದವರ ಕೈಗಳಿಗೆ ಸಕ್ಕರೆ ಕೊಡುತ್ತಿದ್ದರು. ಅವರು ಒಮ್ಮೆ ನನಗೆ ಪ್ರಾಸಬದ್ಧವಾಗಿ, ಅರ್ಥಪೂರ್ಣವಾಗಿ ಶಿಕ್ಷಣದ ಬಗ್ಗೆ ಹೇಳಿದ ಮಾತು ಇವು. "ಬಾಲಕರು (ಅಂದರೆ ಮಕ್ಕಳು, ವಿದ್ಯಾರ್ಥಿಗಳು), ಪಾಲಕರು, ಚಾಲಕರು (ಅಂದರೆ ಶಾಲೆ, ಕಾಲೇಜು, ವಿದ್ಯಾಸಂಸ್ಥೆ, ಶಿಕ್ಷಕರು, ತರಬೇತಿದಾರರು) ಹಾಗೂ ಮಾಲೀಕರು (ಸರಕಾರ-ಸಮಾಜ) ಎಲ್ಲ ಕೈಗೂಡಿಸಿದರೆ, ಅವರಲ್ಲಿ ಮಧುರ ಹೊಂದಾಣಿಕೆ ಇದ್ದರೆ ಮಾತ್ರ, ಸಮಾಜ ಶಿಕ್ಷಣದ ಮೂಲಕ ಮುಂದೆ ಹೋಗುತ್ತೆ" ಅಂತ.
ಜೀವನದಲ್ಲಿ ಅತ್ಯಂತ ದುಃಖಕರ ಸನ್ನಿವೇಶಗಳನ್ನು ಎದುರಿಸಿದ್ದ ಬೇಂದ್ರೆ ಅವರು, ಜೀವನದ ಒಂದು ಹಂತದಲ್ಲಿ ಆಧ್ಯಾತ್ಮಿಕತೆ ಹಾಗೂ ಶೂನ್ಯದ ಸುತ್ತ ತಿರುಗುತ್ತಿದ್ದರು. ನನ್ನ ತಂದೆ ಎನ್.ಎಸ್. ವಾಮನ್ ಅವರಿಗೆ ಅವರು ಒಮ್ಮೆ ಹೇಳಿದ ಸಮಾಧಾನ ಅವಿಸ್ಮರಣೀಯ. ನನ್ನ ತಂದೆಯವರಿಗಾಗಿಯೇ ಸೃಷ್ಟಿಸಲಾಗಿದ್ದ, ನಾಟಕದ ಪ್ರೊಡ್ಯೂಸರ್ ಹುದ್ದೆ ಅವರಿಗೆ, 2ನೇ ಬಾರಿ ತಪ್ಪಿದಾಗ, ಅವರು ಹತಾಶೆ, ನಿರಾಶೆ, ಆತ್ಮಹತ್ಯೆಯ ಯೋಚನೆಯೊಂದಿಗೆ ಬೇಂದ್ರೆ ಅವರನ್ನು ಕಂಡು ತಮ್ಮ ದುಃಖ ಪ್ರಕಟಿಸಿದರು. ಆಗ ಬೇಂದ್ರೆ ಹೇಳಿದ ಮುತ್ತಿನಂತಹ ಮಾತು ಇವು. "ಹುಚ್ಚಪ್ಪಾ! ನನಗೆ ವೃತ್ತಿಯಲ್ಲಿ ಸ್ಥಾನ ಸಿಗಲಿಲ್ಲ ಅಂತ ನೊಂದಕೋ ಬೇಡ. ಎಷ್ಟೋ ಜನಕ್ಕೆ ಸಿಗಲಾರದ ಕೌಟುಂಬಿಕ ನೆಮ್ಮದಿ ನಿಮಗೆ ಸಿಕ್ಕಿದೆ. ನಿಮ್ಮಲ್ಲೇ ಸರ್ವಸ್ವ ಕಾಣುವ, ನಿಮ್ಮನ್ನು ಅಪಾರವಾಗಿ ಪ್ರೀತಿಸುವ ಹೆಂಡತಿ, ಗೌರವಿಸುವ ಅತ್ಯುತ್ತಮ ಮಕ್ಕಳು ಇರುವ, ನೀವೇ ಧನ್ಯರು!. ಸಿಕ್ಕಿದುದರಲ್ಲೇ ತೃಪ್ತಿ, ಸಂತಸ ಪಡೆಯಿರಿ. ಸ್ಥಾನ, ಅಧಿಕಾರ ಸಿಕ್ಕಿರುವ ಎಷ್ಟು ಜನರಿಗೆ, ಈ ಭಾಗ್ಯ ದೊರೆತೀತು?". ನನ್ನ ಜೀವನದ ಅತ್ಯಂತ ಮಹತ್ವದ ದಿನಗಳಲ್ಲಿ ಒಂದೆಂದರೆ, ಬೇಂದ್ರೆ ಅವರ ನಿರ್ದೇಶನದಲ್ಲಿ, ರೇಡಿಯೋ ನಾಟಕದಲ್ಲಿ ನಾನು ನಾಯಕನಾಗಿ ಅಭಿನಯಿಸಿದ್ದು, ನನ್ನ ಸೌಭಾಗ್ಯ. ಉತ್ತರ ಕರ್ನಾಟಕದ ಅತ್ಯಂತ ಆರಂಭದ ರಂಗನಾಟಕಗಳನ್ನು ಬರೆದ ಶಾಂತಕವಿಗಳ (ಸಕ್ಕರಿ ಬಾಳಾಚಾರ್ಯ) ನಾಟಕ ವತ್ಸಲಾ ಹರಣ. ಅಭಿಮನ್ಯು. ಹಾಗೂ ವತ್ಸಲಾರ ವಿವಾಹದ ಬಗೆಗಿನ ಪೌರಾಣಿಕ ನಾಟಕವಿದು.
ನನ್ನ 16ನೇ ವಯಸ್ಸಿನಲ್ಲಿ ನನ್ನ ಹಾಡುವ ಮಧುರ ಕಂಠ ಗಡುಸಾದಾಗ, ಮಾಡಿದ ಮೊದಲ ಎರಡು ನಾಟಕಗಳಲ್ಲಿ ಒಂದು ಇದು. ಈ ನಾಟಕದಲ್ಲಿ ನಾನು ಅಭಿಮನ್ಯು. ಬೇಂದ್ರೆ ಅವರೊಡನೆ ನಮ್ಮ ಕುಟುಂಬಕ್ಕೆ ಆತ್ಮೀಯತೆ ಇತ್ತು. ಅವರು ಮಹಾಕವಿಗಳೆಂದು ಗೊತ್ತಿತ್ತೇ ಹೊರತು, ಮುಂದೆ ಜ್ಞಾನಪೀಠ ಪ್ರಶಸ್ತಿ ಪಡೆಯುವ ರಾಷ್ಟ್ರ ಮಟ್ಟದ ಕವಿ ಎಂದು ಆಗ ನನಗೆ ತಿಳಿದಿರಲಿಲ್ಲ. ನಾಟಕದ ರಿಹರ್ಸಲ್ ಆರಂಭಿಸುವ ಮೊದಲು ನಿರ್ದೇಶಕ ಬೇಂದ್ರೆ ನಾಟಕದ ಬಗ್ಗೆ ವಿವರಿಸುತ್ತಾ, ಶಾಂತಕವಿಗಳ ಬಗ್ಗೆ ತಿಳಿಸಿ, ನಾಟಕ ಓದಿ ಹೇಳಿದರು. ಅವರ ಕವಿಕಂಠದಲ್ಲಿ ನಾಟಕದ ಓದುವಿಕೆ ಕೇಳಿದ ಪುಣ್ಯ ನನ್ನದಾಗಿತ್ತು. ಅವರು ರಿಹರ್ಸಲ್‌ನಲ್ಲಿ ಕೆಲವೇ ಸೂಚನೆಗಳನ್ನು ಮೃದುವಾಗಿ ನೀಡಿದರು. ನಾನು ಅಭಿಮನ್ಯು. ನಾವು ಅಕ್ಕಿ ಕೊಳ್ಳುತ್ತಿದ್ದ ಅಂಗಡಿಯ, ನವಲಗುಂದ ನಮ್ಮ ತಂದೆ ಶಿಷ್ಯ ಹಾಗೂ ಕಲಾವಿದ. ಆತ ಘಟೊತ್ಗಜನ ಪಾತ್ರದಲ್ಲಿ ಅಭಿನಯಿಸಿದ್ದರು. ಪ್ರಸಾರದ ದಿನ ಶಾಂತಕವಿಗಳ ಆಯ್ದ 2 ನಾಟಕಗಳ ಸಂಪಾದಿತ ಭಾಗಗಳ ಪ್ರಸಾರ ಸಂಯೋಜನೆಯಾಗಿತ್ತು. ನಾಟಕ ಪ್ರಸಾರದ ಆರಂಭದಲ್ಲಿ ಬೇಂದ್ರೆ, ಶಾಂತಕವಿಗಳು, ಅವರ ನಾಟಕ ರಚನೆ ಬಗ್ಗೆ ಕೆಲವು ಮಾತುಗಳನ್ನಾಡಿದ್ದರು.
ಹಾಗೆಯೇ ನನ್ನ ಜೀವನದಲ್ಲಿ ಮರೆಯಲಾಗದ ಇನ್ನೊಂದು ಸನ್ನಿವೇಶ ಗರೂಡ ಸದಾಶಿವರಾಯರ ಪಾದುಕಾ ಪಟ್ಟಾಭಿಷೇಕ ನಾಟಕದ ಬಗ್ಗೆ ನನ್ನ ಒಂದು ನೆನಪು ಇಲ್ಲಿದೆ. ನನ್ನ 16-17ನೇ ವಯಸ್ಸಿನಲ್ಲಿ ಅಂದರೆ ಸುಮಾರು 52 ವರ್ಷಗಳ ಕೆಳಗೆ ವೃತ್ತಿ ರಂಗಭೂಮಿಯ ಕಂಪನಿ ಶೈಲಿಯ ರಂಗನಾಟಕದ ನಾಟಕವೊಂದರಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಅದು ಗರುಡ ಸದಾಶಿವರಾಯರು ಬರೆದ ಪಾದುಕಾ ಪಟ್ಟಾಭಿಷೇಕ ನಾಟಕ. ಅದನ್ನು ಆಗ ಆಡುತ್ತಿದ್ದವರು ಬಸವರಾಜ ಮನ್ಸೂರ್ (ಮಲ್ಲಿಕಾರ್ಜುನ ಮನ್ಸೂರ್ ಅವರ ತಮ್ಮ) ಹಾಗೂ ತಂಡದವರು. ಈ ನಾಟಕದಲ್ಲಿ ಅವರು ದಶರಥನ ಪಾತ್ರ ವಹಿಸಿದ್ದರು. ರಂಗಭೂಮಿಯ ಖ್ಯಾತ ನಟಿ ಇಂದಿರಾಭಾಯಿ ಬೆಂಗಳೂರು, ಕೈಕೇಯಿ. ವಿಶೇಷ ಆಮಂತ್ರಣದ ಮೇಲೆ ನಾನು ಭರತನ ಪಾತ್ರ ಮಾಡಿದೆ. ರಂಗದ ಮೇಲೆ ಕೆಲವು ಪ್ರದರ್ಶನಗಳಾದರೆ, ಧಾರವಾಡ ಆಕಾಶವಾಣಿಯ ಬಾನುಲಿ ಕೇಂದ್ರದಿಂದ ಇದು ಬಾನುಲಿ ನಾಟಕವಾಗಿ ಪ್ರಸಾರವಾಯಿತು.
ಆ ಕಾಲದಲ್ಲಿ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರತೀ ಸೋಮವಾರ ಬಾನುಲಿ ನಾಟಕಗಳ ಬಗ್ಗೆ ಹೆಚ್.ಕೆ. ರಾಮಚಂದ್ರಮೂರ್ತಿ ವಿಮರ್ಶೆ ಬರೆಯುತ್ತಿದ್ದರು. ಆ ಸಂದರ್ಭದಲ್ಲಿ ಅವರು ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿಯ ನನ್ನ ಭರತನ ಪಾತ್ರವನ್ನು ಅಪಾರ ಮೆಚ್ಚಿಕೊಂಡು 4 ಸಾಲುಗಳನ್ನು ಬರೆದಿದ್ದರು. ಇಡೀ ನಾಟಕದಲ್ಲಿ ಭರತನ ಪಾತ್ರದ ಧ್ವನಿ, ಭಾವನೆಗಳಿಂದ ತುಂಬಿ ವಿವಿಧ ರಸಗಳ ಅಭಿವ್ಯಕ್ತಿಯಲ್ಲಿ ಓತ-ಪ್ರೋತವಾಗಿ ಸಂಚರಿಸಿತು. ಕೋಪ ಹಾಗೂ ದುಃಖ ಎರಡರಲ್ಲೂ ಇವರ ಧ್ವನಿಯ ಏರಿಳಿತ ಹಾಗೂ ಅಭಿನಯ ಅತ್ಯುತ್ತಮವಾಗಿತ್ತು ಎಂದು ಅವರು ಬರೆದಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ