ಕುತೂಹಲದ ಕಣ್ಣು: ಕನ್ನಡದ ಕಲಾ ತಪಸ್ವಿ ಕೆ.ಎಸ್ ಅಶ್ವತ್ಥ್

Upayuktha
0

ನ್ನಡ ಚಲನಚಿತ್ರರಂಗದ ಪೋಷಕ ಪಾತ್ರ ಕಲಾಚಕ್ರವರ್ತಿ, ಕಲಾತಪಸ್ವಿ ಕೆ.ಎಸ್ ಅಶ್ವತ್ಥ್  ಅವರ  ಗುರುಪುತ್ರನಾಗಿ, ಇಲ್ಲಿ ಅವರ ಬಗ್ಗೆ ನನ್ನ ಕೆಲವು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹಿಂದಿಯಲ್ಲಿ ಅಶೋಕ್ ಕುಮಾರ್, ಬಲರಾಜ್ ಸಹಾನಿ, ತಮಿಳಿನಲ್ಲಿ ಸುಂದರರಾಜನ್, ತೆಲುಗಿನಲ್ಲಿ ಎಸ್.ವಿ. ರಂಗರಾವ್ ಹಾಗೂ ಗುಮ್ಮಡಿ ಇವರ ಸಮಕಾಲೀನರಾಗಿ, ಅವರೆಲ್ಲರೊಂದಿಗೆ, ಸ್ವರ್ಧಿಸುವಂತೆ ಕೆ.ಎಸ್. ಅಶ್ವತ್ಥ್  ಅವರ ಅಭಿನಯವಿತ್ತು ಎಂದು ನೆನಪು ಮಾಡಿಕೊಂಡಾಗ, ಕನ್ನಡಿಗರಾಗಿ ನಮ್ಮ ಕಣ್ಣಲ್ಲಿ ಆನಂದಾಶ್ರು ಚಿಮ್ಮುತ್ತವೆ. 1955ರಲ್ಲಿ ಸ್ತ್ರೀರತ್ನದಿಂದ 2007ರಲ್ಲಿ ಭೂಪತಿಯವರೆಗೆ, 5 ದಶಕಗಳಲ್ಲಿ 370 ಚಲನಚಿತ್ರಗಳಲ್ಲಿ ಅಭಿನಯಿಸಿದ ಮೈಸೂರಿನ ಈ ಕಲಾತಪಸ್ವಿ, ರೇಡಿಯೋ, ಹವ್ಯಾಸಿ ಹಾಗೂ ವೃತ್ತಿರಂಗಭೂಮಿ, ಚಲನಚಿತ್ರಗಳ ಅವಿಸ್ಮರಣೀಯ ಕಲಾವಿದರು. ಮಂಗಳ ಮೂಹೂರ್ತ, ಮಿಸ್ ಲೀಲಾವತಿ ಸೇರಿದಂತೆ 3 ಚಲನಚಿತ್ರಗಳ ತಮ್ಮ ಪಾತ್ರಗಳೀಗೆ ರಾಷ್ಟ್ರಪ್ರಶಸ್ತಿ ಪಡೆದ ಅನುಪಮ ನಟ. 


ಬಾಲ್ಯ ಹಾಗೂ ಆರಂಭದ ಜೀವನ:

25-5-1925ರಂದು ಹೊಳೆನರಸೀಪುರ ತಾಲೂಕಿನ ಕರಗನಹಳ್ಳಿಯಲ್ಲಿ ಜನಿಸಿದ, ಕರಗನಹಳ್ಳಿ ಸುಬ್ಬರಾಯ ಅಶ್ವತ್ಥನಾರಾಯಣ, ಮೈಸೂರಿನ ದಳವಾಯಿ ಶಾಲೆ, ಮಹಾರಾಜಾ ಕಾಲೇಜಿನಲ್ಲಿ ಓದಿ, ಬಿ.ಕಾಂನಲ್ಲಿ 7ನೇ ಸ್ಥಾನ ಪಡೆದು, 1942ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ಹೊಕ್ಕು, 1944ರಲ್ಲಿ ಆಹಾರ ಇನ್ಸ್ ಪೆಕ್ಟರ್ ಆಗಿ, ಜಿಲ್ಲಾಧಿಕಾರಿ ಕಛೇರಿಯಲ್ಲಿ ಸ್ಟೆನೋ ಆಗಿದ್ದರು.


ಕಲಾಜೀವನದ ಆರಂಭ:

ಎಲ್ಲ ಕಡೆ ಅಶ್ವತ್ಥ್ ಸದಾ ಹೇಳುತ್ತಿದ್ದ ಒಂದು ಮಾತೆಂದರೆ "ನನಗೆ ಕಲೆಯ ಹುಚ್ಚು ಹಿಡಿಸಿದ ಕಲಾಗುರುಗಳು. ಆಕಾಶವಾಣಿಯ ಎನ್.ಎಸ್ ವಾಮನ್" ಎಂದೇ. ತಂದೆಯ ಮೂಲಕ ಅಶ್ವಥ್ ಅವರನ್ನು 1958ರಿಂದ 2010ರವರೆಗೆ ಹತ್ತಿರದಿಂದ ಆಪ್ತವಾಗಿ ಬಲ್ಲೆ. ನನ್ನ ತಂದೆ ಆಕಾಶವಾಣಿ ಹಾಗೂ ರಂಗಭೂಮಿಗಳ ನಾಟಕ ಕಲಾವಿದ ಹಾಗೂ ನಿರ್ದೇಶಕ ಎನ್.ಎಸ್ ವಾಮನ್, ಮೈಸೂರಿನಲ್ಲಿ 1944ರಲ್ಲಿ, ಸ್ಟೂಡೆಂಟ್ಸ್ ಡ್ರಾಮಾಟಿಕ್ ಅಸೋಶಿಯೇಶನ್ ಸ್ಥಾಪಿಸಿ, ವಿದ್ಯಾರ್ಥಿಗಳು, ಹೊಸ ಕಲಾವಿದರಿಗೆ, ರಂಗ ತರಬೇತಿ ಕೊಡುವ ಸಂದರ್ಭ. ಕಾಲೇಜು ರಸ್ತೆಯಲ್ಲಿದ್ದ ವಾಮನ್ ಸ್ನೇಹಿತರೊಂದಿಗೆ ನಾಟಕ ಆಡುವಾಗ, ಮಿತ್ರ ಕೃಷ್ಣಮೂರ್ತಿಯೊಂದಿಗೆ ವಾಮನ್ ಸಂಪರ್ಕ. ವಿಷ್ಣುವರ್ಧನ್ ತಂದೆ ಎಚ್.ಎಲ್. ನಾರಾಯಣರಾವ್ ಬರೆದ ನಾಟಕ ಆದದ್ದೇನು? ದಲ್ಲಿ ಮೊದಲ ಅಭಿನಯ.


ಬಾನುಲಿ ನಾಟಕ:

ವಾಮನ್ ಅವರಿಂದಲೇ, ಬಾನುಲಿ ನಾಟಕದ ಅಭಿನಯದಲ್ಲಿ ಧ್ವನಿಯ ಉತ್ತಮ ಬಳಕೆ ಬಗ್ಗೆ ತರಬೇತಿ ಪಡೆದು, 1954ರ ಹೊತ್ತಿಗೆ ಬಾನುಲಿ ನಾಟಕಗಳಲ್ಲಿ ಅಭಿನಯ ದುರಂಧರರಾದರು. ಮೈಸೂರು ಆಕಾಶವಾಣಿಯಲ್ಲಿ 90ರ ದಶಕದಲ್ಲಿ ಎನ್.ಎಸ್ ವಾಮನ್ ಅವರ ನಿರ್ದೇಶನದಲ್ಲಿ ರಾಜಾನಂದ್ ಬರದು ಅಶೋಕನ ಪಾತ್ರದಲ್ಲಿ ಅಭಿನಯಿಸಿದ ಸಾಮ್ರಾಟ್ ಅಶೋಕ ನಾಟಕದಲ್ಲಿ ಕೆ.ಎಸ್. ಅಶ್ವಥ್ ಬಿಂಬಸಾರನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ನಾಟಕದ ನಿರ್ಮಾಣ ನನ್ನದು ಎಂಬ ಅಭಿಮಾನ ನನಗೆ.


ರಂಗನಾಟಕಗಳು: ಎ.ಎನ್ ಮೂರ್ತಿರಾಯರ ಆಷಾಡಭೂತಿ ನಾಟಕದ ಶಂಕರಪ್ಪ, ನಾ. ಕಸ್ತೂರಿ ಅವರ ಗಗ್ಗಯ್ಯನ ಗಡಿಬಿಡಿಯಲ್ಲಿ ಕಿಟ್ಟು, ಹೀಗೆ ನೂರಾರು ನಾಟಕಗಳು. 1954ರಲ್ಲಿ ವಾಮನ್ ದಿಲ್ಲಿಗೆ ಕನ್ನಡ ವಾರ್ತಾ ವಾಚಕರಾಗಿ ಹೋದಾಗ, ಅಲ್ಲಿ ಅವರು ಸಂಘಟಿಸಿದ ಕನ್ನಡ ಉತ್ಸವದಲ್ಲಿ, ಅವರ ನಿರ್ದೇಶನ ಹಾಗೂ ಅಭಿನಯದ 4 ನಾಟಕಗಳಲ್ಲಿ ಅಶ್ವತ್ಥ್ ಪಾತ್ರ ವಹಿಸಿ, ಸಂಸ ಅವರ ವಿಗಡ ವಿಕ್ರಮರಾಯ ನಾಟಕದಲ್ಲಿ ವಿಕ್ರಮರಾಯನ ಖಳ ಪಾತ್ರ ವಹಿಸಿದ್ದರು.


1958-59. ಪ್ರವಾಹ ಸಂತ್ರಸ್ತರಿಗಾಗಿ, ಕನ್ನಡ ಚಲನಚಿತ್ರ ಕಲಾವಿದರು ರಾಜ್ಯದಾದ್ಯಂತ ನಾಟಕಗಳನ್ನಾಡಿದಾಗ ರಾಜ್‌ಕುಮಾರ್ ಜಿ.ವಿ. ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ಇವರ ಜೊತೆಗೆ ಅಶ್ವತ್ಥ್ ಇದ್ದರು. ಬೇಡರ ಕಣ್ಣಪ್ಪದಲ್ಲಿ ರಾಜ್ -ಕಣ್ಣಪ್ಪ, ಅಶ್ವತ್ಥ್ -ಈಶ್ವರ. ಎಚ್ಚಮನಾಯಕ ನಾಟಕದಲ್ಲಿ ರಾಜ್ ಎಚ್ಚಮನಾಯಕ ಹಾಗೂ ಅಶ್ವತ್ಥ್ ಉಸ್ಮಾನ್ ಪಾತ್ರದಲ್ಲಿದ್ದರು. ಧಾರವಾಡ ಆಕಾಶವಾಣಿಯಲ್ಲಿದ್ದ ನನ್ನ ತಂದೆ ವಾಮನ್‌ರಾವ್ ಈ ನಾಟಕಗಳಿಗೆ ಮಾರ್ಗದರ್ಶನ ನೀಡಿದ್ದರು. ಹುಬ್ಬಳ್ಳಿಗೆ ಎಂ. ಪಂಢರೀಬಾಯಿ ಅವರ ರಂಗ ತಂಡ- ಶ್ರೀ ಕೃಷ್ಣ ಚೈತನ್ಯ ಸಭಾ ನಾಟಕಗಳನ್ನು ಆಡಲು ಬಂದಾಗ ಶಾಂತಿನಿವಾಸ ಹಾಗೂ ಭಕ್ತಮೀರಾ ನಾಟಕಗಳಲ್ಲಿ ಅಶ್ವತ್ಥ್ , ಪಂಢರೀಬಾಯಿ ಅವರೊಂದಿಗೆ ಅಭಿನಯಿಸಿದ್ದರು. ನಮ್ಮ ತಂದೆಯವರ ಹಾಗೂ ಅಶ್ವತ್ಥ್  ಅವರ ಮಾಸ್ಟರ್ ಪೀಸ್ ನಾಟಕ - ಆಷಾಡಭೂತಿ, ಎ.ಎನ್. ಮೂರ್ತಿರಾಯರ ರಚನೆ. ಇದು ನೂರಾರು ಪ್ರದರ್ಶನ ಕಂಡಿದೆ. ನಮ್ಮ ತಂದೆ ವಾಮನ್ ಆಷಾಡಭೂತಿ - ಸುಬ್ಬಾಶಾಸ್ತ್ರಿ. ಅಶ್ವತ್ಥ್ ಶಂಕರಪ್ಪನ ಪಾತ್ರದಲ್ಲಿ. ಇದೇ ನಾಟಕವನ್ನು ಎಂ ವಿ ಕೃಷ್ಣಸ್ವಾಮಿ ಸುಬ್ಬಾಶಾಸ್ತ್ರಿ ಎಂಬ ಚಲನಚಿತ್ರವಾಗಿಸಿದರು. ಇದೇ ನಾಟಕದ 2 ಶೋಗಳನ್ನು, ಧಾರವಾಡ ಹಾಗೂ ಹುಬ್ಬಳ್ಳಿಗಳಲ್ಲಿ 60 ದಶಕದ ಕೊನೆಯಲ್ಲಿ ಆಡಿದೆವು. ಆಗ ಎನ್.ಎಸ್ ವಾಮನ್ ನಾಟಕದ ನಿರ್ದೇಶನ ಮಾಡಿ, ಸುಬ್ಬಾಶಾಸ್ತ್ರಿ ಪಾತ್ರವಹಿಸಿದರೆ, ಅಶ್ವತ್ಥ್  ಮನೆ ಯಜಮಾನ ಶಂಕರಪ್ಪನ ಪಾತ್ರ ವಹಿಸಿದ್ದರು. ನಾನು ಅಶ್ವತ್ಥ್  ಅವರ ಮಗ ರಾಮು ಪಾತ್ರದ ತರುಣನಾಗಿ ಅಭಿನಯಿಸಿದ್ದೆ. ಒಂದೆಡೆ ನನ್ನ ತಂದೆ ಅಂದರೆ ಅವರ ಸುಬ್ಬಶಾಸ್ತ್ರಿ ಪಾತ್ರದ ಜತೆ ಕೆಟ್ಟ ಬೈಗಳನ್ನು ಬೈದು ಹಲ್ಲು ಕಚ್ಚಿ ಅಭಿನಯಿಸಬೇಕು. ಇನ್ನೊಂದೆಡೆ ಅಶ್ವತ್ಥ್  ಅವರಂಥ ಮೇರುನಟ ತಂದೆಯ ಪಾತ್ರದಲ್ಲಿರುವಾಗ ನಾನು ಮಗನಾಗಿ ಅವರೊಡನೆ, ಕಣ್ಣು ಅರಳಿಸಿ ಕೂಗಿ ಜಗಳಾಡಬೇಕು.


ಈ ಸನ್ನಿವೇಶಗಳ ರಿಹರ್ಸಲ್ ಟೈಂನಲ್ಲಿ, ನಾನು ಸ್ವಲ್ಪ ಸಂಕೋಚದಿಂದ ಅಭಿನಯಿಸುತ್ತಿದ್ದೆ. ಆಗ ಅಶ್ವತ್ಥ್  ಎಷ್ಟೋ ಬಾರಿ ನಂಗೆ ಹೇಳ್ತಿದ್ರು, "ರಮೇಶ. ಪಾತ್ರ ಅಂತ ಅಭಿನಯಿಸುವಾಗ, ನೀನು ಆ ಪಾತ್ರ ಅಷ್ಟೇ. ಇವರು ತಂದೆ, ಇವರು ಗುರುಗಳು, ಇವರು ಅಶ್ವಥ್ ಸಿನೆಮಾ ಕಲಾವಿದರು., ಇವರ ಜೊತೆ ಹೇಗೆ ಜಗಳಾಡಲಿ ಅಂತ, ಎಂದೂ ಯೋಚಿಸಬೇಡ. ಹಾಗೆ ಯೋಚಿಸಿದರೆ ನಿನ್ನ ಅಭಿನಯ ಸಹಜ ಹಾಗೂ ಪರಿಣಾಮಕಾರಿ ಆಗೋಲ್ಲ" ಅಂದ್ರು. ನಂತರ ನಾನು ಜೋರು ಜೋರಾಗಿ ಕೂಗಿ, ಜಗಳಾಡಿ, ಆ ಪಾತ್ರ ಮಾಡಿದೆ. 70ರ ದಶಕದಲ್ಲಿ ಕಲಾಗುರು ವಾಮನ್, ಪಟ್ಟಶಿಷ್ಯ ಅಶ್ವತ್ಥ್  ಅವರನ್ನು, ರಂಗನಾಟಕಗಳಿಗೆ ಸೆಳೆದರು. ಕಂಪನಿ ನಾಟಕದ ಪುಟಗಟ್ಟಲೆ ಡೈಲಾಗ್‌ಗಳನ್ನು ಚಿಕ್ಕ ಚಿಕ್ಕ ವಾಕ್ಯ ಮಾಡಿ, ಜನರಿಗೆ ಹೆಚ್ಚು ಮನದಟ್ವಾಗುವಂತೆ ಕಲಾವಿದರ ಪಾತ್ರಾಭಿನಯಕ್ಕೆ ಹೆಚ್ಚು ಅವಕಾಶ ಸಿಗುವಂತೆ ಪರಿವರ್ತಿಸಿದರು. ಆಗ ಅಶ್ವತ್ಥ್  ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ಆಡಿದ ಮೊದಲ ನಾಟಕ ಪೂರ್ಣಿಮಾ. ಹೀಗಾಗಿ ಹಲವಾರು ನಾಟಕ ಕಂಪನಿಗಳಲ್ಲಿ ಪೂರ್ಣಿಮಾ, ಇದೆಂಥ ಸರಕಾರ, ಬಂಜೆ ತೊಟ್ಟಿಲು, ನಾಟಕಗಳ ನೂರಾರು ಪ್ರದರ್ಶನಗಳು. ಬಂಜೆ ತೊಟ್ಟಿಲು ನಾಟಕದಲ್ಲಿ ಬಂಜೆಯ ಗಂಡ ಬಳವಂತರಾಯನ ಪಾತ್ರ ಅಶ್ವತ್ಥ್  ಅವರನ್ನು ವೃತ್ರಿರಂಗಭೂಮಿಯ ಮೇರು ಪಾತ್ರಧಾರಿ ಆಗಿಸಿತು. ಈ ಗುರು ಶಿಷ್ಯರು ನಾಟಕದ ಮಧ್ಯೆ, ಗುರುಶಿಷ್ಯರು ಎಂಬ ಹಾಸ್ಯ ದೃಶ್ಯ ಪ್ರಸ್ತುತ ಪಡಿಸುತ್ತಿದ್ದರು.

ಚಲನಚಿತ್ರ:

1960ರ ದಶಕದ ಆರಂಭದಲ್ಲಿ ಸೆವೆನ್ ವಂಡರ್ಸ್ ಆಫ್ ದಿ ವರ್ಲ್ಡ್ ಇಂಗ್ಲೀಷ್ ಚಿತ್ರದಲ್ಲಿ ಅಭಿನಯಿಸಿದ್ದರು. ಮುಂದೆ ಕೆ. ಸುಬ್ರಹ್ಮಣ್ಯಂ ಅವರ ನಿರ್ದೇಶನದ ಸ್ತ್ರೀ ರತ್ನ, ನಂತರ ಕಚದೇವಯಾನಿ ಚಿತ್ರಗಳಲ್ಲಿ ನಾಯಕಿ ಬಿ.ಸರೋಜಾದೇವಿ ಅವರೊಂದಿಗೆ ನಾಯಕರಾಗಿ ಅಭಿನಯಿಸುವ ಯೋಗ ಬಂದಿತು. ಅಣ್ಣ ತಂಗಿ ಚಿತ್ರದಲ್ಲಿ 2ನೇ ನಾಯಕರಾಗಿ, 1959ರಲ್ಲಿ ಬಿ.ಆರ್ ಪಂತಲು ಅವರ ನಿರ್ದೇಶನದ ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಜಂಗಮ ರಾಜಗುರುಗಳಾಗಿ, 1962ರಲ್ಲಿ ಗಾಳಿ ಗೋಪುರ ಚಿತ್ರದಲ್ಲಿ ಮಗನನ್ನು ಕಳೆದುಕೊಂಡ ವೃದ್ಧ ತಂದೆಯ ಪಾತ್ರದಲ್ಲಿ, ಅಲ್ಲಿಂದ ನೂರಾರು ಕನ್ನಡ ಚಿತ್ರಗಳಲ್ಲಿ ಇವರ ಅಪೂರ್ವ, ಸ್ವಂತಿಕೆಯ, ಬೇರಾರಿಗೂ ಹೋಲಿಸಲಾಗದ ಉತ್ತಮ ಸಂಭಾಷಣಾ ಶೈಲಿ ಹಾಗೂ ಮುಖಾಭಿನಯದಲ್ಲಿ, ಇವರ ಸಮರಾರೂ ಇಲ್ಲ ಎಂಬ ಹೆಸರು ಪಡೆದರು. ಕೃಷ್ಣಮೂರ್ತಿ ಪುರಾಣಿಕರ ಕರುಣೆಯೇ ಕುಟುಂಬದ ಕಣ್ಣು ಕನ್ನಡದ ಕಾದಂಬರಿ ಆಧರಿಸಿದ ಮೊದಲ ಚಿತ್ರ. ಅದರಲ್ಲಿ ಹಾಗೂ ಕುಲವಧುವಿನಲ್ಲಿ, ಅ.ನ.ಕೃ. ಅವರ ಸಂಧ್ಯಾರಾಗದಲ್ಲಿ ಅಶ್ವಥ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಈಶ್ವರನಾಗಿ ಭೂಕೈಲಾಸ, ಶ್ರೀಶೈಲ ಮಹಾತ್ಮೆ ಹಾಗೂ ಪಾಪ ಪುಣ್ಯ ಚಿತ್ರಗಳಲ್ಲಿ ಅಭಿನಯಿಸಿದರೆ, ನಾರದನಾಗಿ ಭಕ್ತಪ್ರಹ್ಲಾದ, ದಶಾವತಾರ, ಸ್ವರ್ಣಗೌರಿ, ಗಂಗೆ ಗೌರಿ, ಶ್ರೀ ರಾಮಾಂಜನೇಯ ಯುದ್ಧ ಚಿತ್ರಗಳಲ್ಲಿ, ವಸಿಷ್ಟನಾಗಿ ಸತ್ಯ ಹರಿಶ್ಚಂದ್ರದಲ್ಲಿ, ಲೀಲಾಜಾಲವಾಗಿ ಆ ಪಾತ್ರಗಳನ್ನು ಹೊಕ್ಕಿದ್ದಾರೆ.


98 ಚಿತ್ರಗಳಲ್ಲಿ ರಾಜ್‌ಕುಮಾರ್ ಜೊತೆಗೆ ಅಭಿನಯಿಸಿದ್ದಾರೆ. ಜೇನುಗೂಡು, ಒಂದೇ ಬಳ್ಳಿಯ ಹೂಗಳು, ಬಾಂಧವ್ಯ, ಮುರಿಯದ ಮನೆ, ಪ್ರತಿಜ್ಞೆ, ಯಾವ ಜನ್ಮದ ಮೈತ್ರಿ, ಪ್ರೇಮಮಯಿ ಮುಂತಾದ ಚಿತ್ರಗಳಲ್ಲಿ ಕುಟುಂಬದ ಹಿರಿಯ ಸೋದರನಾಗಿ, ಮಿಸ್ ಲೀಲಾವತಿ, ಸಂಧ್ಯಾರಾಗ, ನಮ್ಮ ಮಕ್ಕಳು, ತಾಯಿದೇವರು, ನ್ಯಾಯವೇ ದೇವರು, ಜನ್ಮರಹಸ್ಯ, ಬಯಲುದಾರಿ, ವಸಂತಗೀತ, ಸೀತಾ, ಅನಿರೀಕ್ಷಿತ, ಸೊಸೆತಂದ ಸೌಭಾಗ್ಯ, ಬಿಡುಗಡೆ ಚಿತ್ರಗಳಲ್ಲಿ ಮರೆಯಲಾಗದ ತಂದೆಯ ಪಾತ್ರ. ಭಾಗ್ಯವಂತ ಚಿತ್ರದಲ್ಲಿ ದೊಡ್ಡಪ್ಪನ ಪಾತ್ರ. ನಂದಾದೀಪ, ಪತಿಯೇ ದೈವ, ಚಿತ್ರಗಳ ಗಂಡನ ಪಾತ್ರಗಳು ಮರೆಯಲು ಸಾಧ್ಯವೇ? ಕಿರಿಯಳನ್ನು ಮದುವೆಯಾದ ಹಿರಿಯ ಪತಿಯಾಗಿ ಗೃಹಲಕ್ಷ್ಮಿ, ನಂದಾದೀಪಗಳಲ್ಲಿ, ಗೂರಲು ವೈದ್ಯನಾಗಿ ಶುಭಮಂಗಳದಲ್ಲಿ ಮರೆಯಲಾಗದಂತೆ ಪಾತ್ರವಹಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅಮರವಾಗಿಸಿದ ಕಾದಂಬರಿ ಆಧರಿಸಿದ ಚಿತ್ರಗಳಲ್ಲಿ ತ್ರಿವೇಣಿ ಅವರ ಕಾದಂಬರಿ ಆಧರಿಸಿದ ಬೆಳ್ಳಿಮೋಡ, ಹಾಗೂ ಶರಪಂಜರ, ಎಂ. ಕೆ ಇಂದಿರಾ ಅವರ ಗೆಜ್ಜೆಪೂಜೆ, ದೇವಕಿ ಮೂರ್ತಿ ಅವರ ಉಪಾಸನೆ ಚಿತ್ರಗಳ ಪತಿ ಹಾಗೂ ತಂದೆಯ ಪಾತ್ರಗಳಲ್ಲಿ ಅವರಿಗೆ ಅವರೇ ಸಾಟಿ ಎಂದು ನಂಬಬೇಕಾಗುತ್ತದೆ. ಎನ್. ಲಕ್ಷ್ಮೀನಾರಾಯಣ ಚಿತ್ರಿಸಿದ ಉಯ್ಯಾಲೆಯಲ್ಲಿ ಇಜ್ಜೋಡು ದಾಂಪತ್ಯದ ಪ್ರೊಫೆಸರ್ ಆಗಿ ರಾಜಕುಮಾರ್ ಹಾಗೂ ಕಲ್ಪನಾ ಅವರೊಂದಿಗೆ, ಸರ್ವಮಂಗಳ ಚಿತ್ರದಲ್ಲಿ ರಾಜಕುಮಾರ್ ಹಾಗೂ ಕಲ್ಪನಾ ಅವರೊಂದಿಗೆ ಹಳ್ಳಿಯವನ ಪಾತ್ರದಲ್ಲಿ ಸ್ಪರ್ಧಾತ್ಮಕವಾಗಿ ಅಭಿನಯಿಸಿದ್ದಾರೆ.


ಐತಿಹಾಸಿಕ ಚಿತ್ರಗಳಲ್ಲಿ ರಣಧೀರ ಕಂಠೀರವದಲ್ಲಿ ನಿರೀಶನಾಗಿ, ಇಮ್ಮಡಿ ಪುಲಿಕೇಶಿಯಲ್ಲಿ ಹರ್ಷ ಚಕ್ರವರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಪುರಂದರದಾಸರ ಬಗೆಗೆ ಬಂದ ಎರಡು ಚಿತ್ರಗಳಲ್ಲಿ ನವಕೋಟಿ ನಾರಾಯಣದಲ್ಲಿ ರಾಜಕುಮಾರ್, ಶ್ರೀ ಪುರಂದರದಾಸರು ಚಿತ್ರದಲ್ಲಿ ಅಶ್ವತ್ಥ್  ಅವರನ್ನು ಕಾಣಬಹುದು. ಕಸ್ರೂರಿ ನಿವಾಸದ ಸೇವಕನಾಗಿ, ಬಂಗಾರದ ಪಂಜರದ ಕುರುಬನಾಗಿ ಇವರ ಪಾತ್ರಗಳು ಅಜರಾಮರ. ನಾನು ನನ್ನ ತಮ್ಮ ಬಾಲಚಂದ್ರ ಇಬ್ಬರನ್ನೂ ಅಶ್ವತ್ಥ್  ಮೈಸೂರಿನಿಂದ ಚಿತ್ರದುರ್ಗಕ್ಕೆ ನಾಗರಹಾವು ಚಿತ್ರದ ಶೂಟಿಂಗ್‌ಗೆ ಕರೆದೊಯ್ದರು. 2 ದಿನ ಚಿತ್ರದುರ್ಗದ ತುಪ್ಪದ ಹೊಂಡದ ಬಳಿ ಶೂಟಿಂಗ್. ಅಂದು ಅಶ್ವತ್ಥ್ . ವಿಷ್ಣವರ್ಧನ್, ಶುಭಾ ಭಾಗವಹಿಸಿದ್ದ ದೃಶ್ಯಗಳು. ಕ್ಲೈಮ್ಯಾಕ್ಸ್ ದೃಶ್ಯ ನಾಗರಹಾವು ರಾಮಾಚಾರಿ, ತನ್ನ ಪ್ರೇಯಸಿ ಮಾರ್ಗರೇಟ್ ಜೊತೆ ಓಡಿ ಹೋಗಿ, ಮುಚ್ಚಿಟ್ಟುಕೊಳ್ಳುವ ದೃಶ್ಯ ಚಾಮಯ್ಯ ಮೇಷ್ಟ್ರು ಪರಿಪರಿಯಾಗಿ ಹೇಳಿದರೂ ಕೇಳದ ಶಿಷ್ಯ, ಗುರು ಶಿಷ್ಯರ ಕ್ಲೈಮ್ಯಾಕ್ಸ್ ದೃಶ್ಯದ ವಾದದಲ್ಲಿ, ಹಲವಾರು ಬಾರಿ ಪುಟ್ಟಣ್ಣ ದೃಶ್ಯ ತೆಗೆದರೂ, ವಿಷ್ಣು ಪಾತ್ರ ಓ.ಕೆ ಆಗಲಿಲ್ಲ. ಪುಟ್ಟಣ್ಣ ಬಯಸಿದ್ದ ರೌದ್ರ ಭಾವ, ಯುವ ಕೋಪ ಬರಲಿಲ್ಲ. ಪುಟ್ಟಣ್ಣ ರಪ್ಪೆಂದು ಕುಮಾರ್ (ವಿಷ್ಣು) ಕೆನ್ನೆಗೆ ಬಾರಿಸಿದರು. ತಕ್ಷಣ ದೃಶ್ಯ ಚೆನ್ನಾಗಿ ಬಂತು.


ಜೇಡರ ಬಲೆಯಲ್ಲಿ ಬಾಸ್ ಆಗಿದ್ದ ಇವರು 1944ರಿಂದ 6ವರೆ ವರ್ಷ ಚಿತ್ರರಂಗದಿಂದ ದೂರವಿದ್ದು ನಂತರ ಅಭಿನಯಿಸಿದ ರಾಜ್‌ಕುಮಾರ್ ಅವರ ಚಿತ್ರ ಶಬ್ದವೇದಿಯಲ್ಲಿ ಪೋಲೀಸ್ ಅಧಿಕಾರಿ ಹಾಗೂ ಖಳನಾಯಕ ದ್ವಿಪಾತ್ರಗಳಲ್ಲಿ ಕಂಡರು. ಸಂಭಾಷಣೆಯಲ್ಲಿ ಒಳಹೊಕ್ಕರೆ, ಒಂದು ನಿಮಿಷವೂ ಕಾಡುಹರಟೆ ಹೊಡೆಯದೇ, ಸಮಯ ಹಾಳು ಮಾಡದೇ, ತಮ್ಮ ಪಾತ್ರದ ಮಾತು ನಿಲುವು ಚಲನೆಗಳ ಬಗ್ಗೆಯೇ ಸಿದ್ಧಪಡಿಸಿಕೊಂಡು, ಆ ಪಾತ್ರದ ಒಳಹೊಕ್ಕುತ್ತಿದ್ದುದರಿಂದ, ಹೆಚ್ಚು ಟೇಕ್ಸ್ ಬೇಕಾಗಿರಲಿಲ್ಲ. ನಿರ್ಮಾಪಕರು ಉಳಿಯಬೇಕೆಂದು, ಬಹಳ ಕಡಿಮೆ ಹಣ ಪಡೆದು ಕಲಾವಿದರಾಗಿ ಮುಂದುವರೆದರು. ಅಶ್ವಥ್ ಅವರ ನಿಧನದ ಸಂದರ್ಭದಲ್ಲಿ ಸುವರ್ಣ ವಾಹಿನಿಯಲ್ಲಿ ನನ್ನ ಸಂದರ್ಶನ ಪ್ರಸಾರವಾಗಿತ್ತು. 5 ವರ್ಷಗಳ ಕೆಳಗೆ ಕೆ.ಎಸ್ ಅಶ್ವತ್ಥ್  ಅವರ ನೆನಪಿನಲ್ಲಿ ಅವರ ಮಗ ಶಂಕರ್ ಅಶ್ವತ್ಥ್  ಬರೆದು ಸಂಯೋಜಿಸಿ, ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಲಾದ ಅಶ್ವತ್ಥ್  ನೆನಪಿನ ಶೋದಲ್ಲಿ, ತಂದೆಯ ಪಾತ್ರ ಈ ಮಗ ವಹಿಸಿದ್ದ. ಆ ಶೋದ ನಿರೂಪಣೆಯನ್ನು ನಾನು ಹಾಗೂ ಅಪರ್ಣಾ ಮಾಡಿದ್ದೆವು. ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮದ ಅವರತರಣಿಕೆಗಳು ಪ್ರದರ್ಶಿತವಾದವು.


ಜೀವನ ಹಾಗೂ ಸಂಬಂಧ:

60 ದಶಕದಲ್ಲಿ ಒಮ್ಮೆ ಅವರ ಮನೆಯಲ್ಲಿ ಬಾಲಕನಾದ ನನ್ನ ಕೇಳಿದ್ರು "ಪಂಢರೀಬಾಯಿ ಅವರ ನಿರ್ಮಾಣದ ಅನುರಾಧಾ ಚಿತ್ರದಲ್ಲಿ ಬರುವ ಮಕ್ಕಳ ಪಾತ್ರದಲ್ಲಿ ಒಂದು ನೀ ಮಾಡ್ತೀಯಾ" ಅಂತ. ನಾನು "ಊಹೂಂ ನಾ ಓದಬೇಕು" ಅಂದಿದ್ದೆ. ಸರಸ್ವತಿಪುರಂನಲ್ಲಿ ಸರಳ ಜೀವನ ನಡೆಸುತ್ತಾ, ಮೊದಲಿಂದ ಕೊನೆಯವರೆಗೆ ಮೈಸೂರು ಜಟಕಾದಲ್ಲಿ ಓಡಾಡುತ್ತಿದ್ದರು. ನಮ್ಮ ತಂದೆಯವರಿಂದ ಲೆಕ್ಕ ದೀಕ್ಷೆ ಪಡೆದು, ಪ್ರತಿದಿನ ಡೈರಿಯಲ್ಲಿ ಜಮಾ, ಖರ್ಚು ಬರೆದು ತಿಂಗಳ ಬಜೆಟ್ ಹಾಕುತ್ತಿದ್ದರು. ಪ್ರತಿದಿನ ವ್ಯಾಯಾಮ, ನಡಿಗೆ, ಅಚ್ಚುಕಟ್ಟಾದ ತಿಂಡಿ - ಊಟ ಹಿತಮಿತ ಸೇವನೆ, ಸಮಯಪಾಲನೆ, ನಿತ್ಯ ದಿನಚರಿಯ ಕಟ್ಟುನಿಟ್ಟಾದ ಶಿಸ್ತು ಅಳವಡಿಕೆ, ಇವನ್ನೆಲ್ಲಾ ಅಶ್ವಥ್ ಅವರಿಂದಲೇ ಕಲಿಯಬೇಕಿತ್ತು ಅಶ್ವಥ್ ಅವರದು ಶಿಸ್ತುಬದ್ಧ ಜೀವನ. ಮೊದಲಿನಿಂದ ನಮ್ಮ ತಾಯಿ ಗಿರಿಜ ಮಾಡ್ತಿದ್ದ ಮನೆ ಅಡುಗೆ ಅವರಿಗೆ ಅತಿ ಇಷ್ಟ. ನಾನು ನೋಡಿದಂತೆ ಚಿತ್ರದುರ್ಗದಲ್ಲಿ ನಾಗರಹಾವು ಶೂಟಿಂಗ್ ಸಂದರ್ಭ. ಒಬ್ಬ ಶೆಟ್ರು ಊಟಕ್ಕೆ ಕರೆದಿದ್ರು. ಎಲೆಯ ಮೇಲೆ ನೂರಾರು ಪದಾರ್ಥಗಳು. ಯಾರಾದರೂ ಬಲವಂತ ಮಾಡಿದ್ರೆ "ಹೊಟ್ಟೆ ನಮ್ಮದು ಸ್ವಾಮಿ. ಆರೋಗ್ಯ ಕೆಟ್ರೆ ಯಾರು ಬರ್ತಾರೆ" ಅಂತಿದ್ರು. 1998 ಡಿಸೆಂಬರ್ 15ರ ಬೆಳಿಗ್ಗೆ, ಕಲಾಗುರು ವಾಮನ್‌ ರಾಯರಿಗೆ ಧರ್ಮೋದಕ (ನಿಧನರಾದ 10ನೇ ದಿನ ವಿಪ್ರರಲ್ಲಿ ನಡೆಯುವ ಕಾರ್ಯ) ಬಿಡುವಾಗ ಅಶ್ವತ್ಥ್  ತರ್ಪಣ ಬಿಟ್ಟು, ಸ್ಮಶಾನದ ಬಳಿಯ ಕಾರ್ಯಾಲಯದಲ್ಲಿ ಕುಸಿದು, ನೆಲದ ಮೇಲೆ ಹಾಗೇ ಒರಗಿ ಕೈ ಮೇಲೆತ್ತಿ "ಇನ್ನಾಯ್ತು. ನನ್ನ ಗುರುಗಳು ಹೋಗಿಬಿಟ್ರು. ಮತ್ತೆ ಬರೋಲ್ಲ ದೇವ್ರೆ" ಅಂತ ಜೋರಾಗಿ ಬಿಕ್ಕಿ ಬಿಕ್ಕಿ ಮಕ್ಕಳಂತೆ ಅತ್ತದ್ದು ನನಗೆ ಇನ್ನೂ ನೆನಪಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top