ಬೆಂಗಳೂರು- ಹನುಮಂತನಗರ: ಕುಮಾರಸ್ವಾಮಿ ದೇವಾಲಯದಲ್ಲಿ ಇಂದು ಆಡಿ ಕೃತ್ತಿಕೆ ಉತ್ಸವ

Upayuktha
0

ಬೆಂಗಳೂರು ದಕ್ಷಿಣ ಭಾಗದ ಹನುಮಂತನಗರದ ಶ್ರೀ ಕುಮಾರಸ್ವಾಮಿ ದೇವಾಲಯವು ಭಕ್ತಕೋಟಿಯನ್ನು ಆಕರ್ಷಿಸುತ್ತಾ ಪುಣ್ಯಸ್ಥಳವಾಗಿದೆ. ಈ ದೇವಾಲಯದ ಚರಿತ್ರೆ 16ನೇ ಶತಮಾನದಷ್ಟು ಹಿಂದಿನದು. ಆಗ ಇಲ್ಲಿ ಶ್ರೀ ಮೃತ್ಯುಂಜೇಶ್ವರ ಸ್ವಾಮಿಯ ಲಿಂಗವು ಪ್ರತಿಷ್ಠಾಪನೆಯಾದುದಾಗಿ ತಿಳಿದು ಬರುತ್ತದೆ. ಬೆಂಗಳೂರು ನಗರದ ನಿರ್ಮಾರ್ತೃ ಮಾಗಡಿ ಕೆಂಪೇಗೌಡರು ಬೆಳೆಯುತ್ತಿರುವ ನಗರದ ಎಲ್ಲೆಯನ್ನು ಗುರುತಿಸಲು ಈ ಲಿಂಗವನ್ನು ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ. 


1901ನೇ ಇಸವಿಯಲ್ಲಿ ಟಿ. ನರಹರಿರಾಯರು ದೇವಾಲಯದ ಮುಂಭಾಗವನ್ನು ಕಟ್ಟಿಸಿದರು. ಆದರೆ ಆಗ ದೇವಾಲಯದ ಸುತ್ತ ಭಾರಿ ಬಂಡೆಗಳಿಂದ ಮತ್ತು ಪೊದೆಗಳಿಂದ ಕೂಡಿದ ಭಯಂಕರ ಕಾಡಿನಂತಿತ್ತು. ಈಶ್ವರನ ಭಕ್ತರಾದ ಮಹಾ  ಮಹೋಪಾಧ್ಯಾಯ ಶಿವಶಂಕರ ಶಾಸ್ತ್ರಿಗಳು ಎಂಬುವರು ಮದರಾಸಿನಿಂದ ಬಂದು ದೇವರ ಸೇವಯಲ್ಲಿ ಇಲ್ಲಿಯೇ ತಂಗಿದರು. 1923ನೇ ಇಸವಿಯಲ್ಲಿ ಬೆಟ್ಟದ ಬುಡದಲ್ಲಿ ಸಿಂಹವಾಹನನಾದ ಪಂಚಮುಖೀ ಗಣಪತಿಯನ್ನು ಪ್ರತಿಷ್ಠಾಪಿಸಿದರು. 1924ರಲ್ಲಿ ಮೈಸೂರು ಮಹಾರಾಜನಾಗಿದ್ದ ಕೃಷ್ಣರಾಜ ಒಡೆಯರ್‌ರವರು 126 ಎಕರೆ ಜಮೀನನ್ನು ಈ ದೇವಾಲಯಕ್ಕೆ ಇನಾಮಾಗಿ ನೀಡಿದರು.


ಈ ನಡುವೆ ಬೆಟ್ಟದ ಬಂಡೆಯ ಮೇಲಿರುವ ಆದಿಶೇಷನ ದೇವಾಲಯ ಪ್ರಸಿದ್ಧಿ ಪಡೆದಿದೆ. ಸುಬ್ರಮಣ್ಯ ಶಾಸ್ತ್ರಿರವರು 1956ನೇ ಇಸವಿಯಲ್ಲಿ ಶ್ರೀ ಕುಮಾರಸ್ವಾಮಿಯ ನವಲೋಹ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದರು. ದಕ್ಷಿಣದಲ್ಲಿಯೇ ಇದು ಬಹು ಸುಂದರವಾದ ಕಾರ್ತಿಕೇಯ ವಿಗ್ರಹ. 


ಆಷಾಢಮಾಸದ ಕೃತ್ತಿಕಾ ನಕ್ಷತ್ರದಂದು ಇಲ್ಲಿ ನಡೆಯುವ ಆಡಿಕೃತ್ತಿಕೆ ಮಹೋತ್ಸವವು ಅತ್ಯಂತ ವೈಶಿಷ್ಟ್ಯಪೂರ್ಣ ಉತ್ಸವ, ಈ ಮಹೋತ್ಸವ ಕಾಲದಲ್ಲಿ ಕಾವಡಿ ತಂದು ಭಕ್ತಿ ಶ್ರದ್ಧೆಯಿಂದ ಶ್ರೀ ಕುಮಾರಸ್ವಾಮಿಯನ್ನು ಅಸಂಖ್ಯ ಭಕ್ತರು ಪೂಜಿಸುತ್ತಾರೆ. 


ಕಾವಡಿ ಉದ್ದೇಶ: ಕಾವಡಿ ಎಂದರೆ ಹೆಗಲ ಮೇಲೆ ಹೊತ್ತು ತರುವ ಬಿದಿರಿನ ದೊಣ್ಣೆ, ಸಾಮಾನ್ಯವಾಗಿ ನಮಗೆ ಕಂಗೊಳಿಸುವ ಸುಬ್ರಮಣ್ಯ ಕ್ಷೇತ್ರಗಳು ಬೆಟ್ಟಗುಡ್ಡಗಳ ಪರಿಸರದಿಂದ ಕೂಡಿದ್ದು ಬೆಟ್ಟಗಳ ಮೇಲೆ ಕುಮಾರಸ್ವಾಮಿ ದೇವಾಲಯವಿರುತ್ತದೆ. 

 ಪ್ರಾಚೀನ ಕಾಲದಲ್ಲಿ ಭಕ್ತಾದಿಗಳು ತೀರ್ಥಯಾತ್ರೆಗೆ ಹೋಗುವಾಗ ತಮಗೆ ಪಾಥೇಯ ಸಾಮಗ್ರಿಗಳನ್ನು ಒಂದು ಬಿದಿರಿನ ಬುಟ್ಟಿಯಲ್ಲೂ ಮತ್ತೊಂದರಲ್ಲಿ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡು ಅವುಗಳನ್ನು ಒಂದು ಬಿದಿರಿನ ದೊಣ್ಣೆಯ ಎರಡೂ ಬದಿಗಳಿಗೂ ಒಂದೊಂದನ್ನು ಕಟ್ಟಿ ಹೆಗಲ ಮೇಲೆ ಹೊತ್ತು ಪ್ರಯಾಣ ಮಾಡುತ್ತಿದ್ದರು. 


ಒಂದು ತಲೆಮಾರಿನ ವರ್ತನೆ ಮುಂದಿನ ತಲೆಮಾರಿಗೆ ಸಂಪ್ರದಾಯವಾಗುವುದು ಸಾಮಾನ್ಯ ಲಕ್ಷಣ. ಹಾಗೆಯೇ ಒಂದು ಕಾಲಕ್ಕೆ ಸೌಕರ್ಯಾತ್ಮಕವಾದ ಕಾವಡಿ ನಂತರ ಒಂದು ಧಾರ್ಮಿಕ ಆಚರಣೆಯಾಗಿ ಮೂಡಿಬಂತು.


ಕಾವಡಿ ಹೊರುವ ಸಂಪ್ರದಾಯ ಮೊದಲು ಪ್ರಾರಂಭವಾದದ್ದು ತಮಿಳುನಾಡಿನ ರಾಜನೊಬ್ಬನಿಂದ ಎಂಬುದು ತಿರುತ್ತಣ್ಣಿ ಕ್ಷೇತ್ರ ಮಹಿಮೆಯಿಂದ ತಿಳಿದು ಬರುತ್ತದೆ. 

ಆತ ತಾನು ಕಾರ್ಯ ಸಿದ್ದಿಸಿದರೆ ಸಾಮಾನ್ಯ ಜನರಂತೆ, ತಾನೂ ಕಾವಡಿ ಹೊತ್ತು ದೇಹ ದಂಡಿಸಿ, ಕಾಲ್ನಡಿಗೆಯಲ್ಲಿಯೇ ಬಂದು ಸ್ವಾಮಿಯ ದರ್ಶನ ಪಡೆಯುವುದಾಗಿ ಹರಕೆ ಹೊತ್ತನು. ಆತನ ಕಾರ್ಯಕೈಗೂಡಿದ್ದರಿಂದ ಆತ ಅಂದಿನಿಂದ ಅಜೀವ ಪರ್ಯಂತವಾಗಿ ಪ್ರತಿ ವರ್ಷವೂ ತಪ್ಪದೇ ಆಡಿಕೃತ್ತಿಕೆಯೆಂದು ಕಾವಡಿ ಸಲ್ಲಿಸುತ್ತಾ ಬಂದನು. ಆನೆ ನಡೆದದ್ದೇ ಮಾರ್ಗವೆಂಬಂತೆ ರಾಜನನ್ನು ಪ್ರಜೆಗಳೂ ಆನುಸರಿಸಿ, ತಾವುಗಳೂ ಕಾವಡಿ ಹೊರಲು ಪ್ರಾರಂಬಿಸಿದರು. ಇದನ್ನು ಆಚರಿಸುವ ಭಕ್ತರು ವಿಶೇಷವಾಗಿ ತಮಿಳರೇ ಹಾಗೂ ಕನ್ನಡಿಗರೂ ಆಚರಿಸುತ್ತಾರೆ.


ಕಾವಡಿ ಹೊರುವ ದಿನ ಬೆಳಿಗ್ಗೆ ಎಲ್ಲರೂ ಮಂಗಳಸ್ನಾನ ಮಾಡಿ, ಮನೆಯಲ್ಲಿ ವಿಶೇಷವಾದ ಅಡುಗೆಗಳನ್ನು ಮಾಡಿ, ಮನೆಯಲ್ಲಿ ದೇವರ ಮುಂದೆ ಬಾಳೆ ಎಲೆಯನ್ನು ಹಾಕಿ ಮಾಡಿರುವ ಪದಾರ್ಥಗಳನ್ನು ಬಡಿಸಿ ದೇವರಿಗೆ ಅರ್ಪಿಸಿ ಕವಡಿ ಹೊತ್ತು ಹೊರಡುತ್ತಾರೆ. ಇದಕ್ಕೆ 'ತಳಿಗೆ ಸೇವೆ' ಎಂದು ಹೆಸರು. ಇವರು ಸ್ವಾಮಿಯ ಸೇವೆ ಮುಗಿಸಿ ಬರುವ ವೇಳೆಗೆ ದೇವರು ಇದನ್ನು ಸ್ವೀಕರಿಸಿರುತ್ತಾನೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. 


ಕಾವಡಿ ಹೊರುವ ವ್ಯಕ್ತಿ ಶುಚಿರ್ಭೂತನಾಗಿ ಹಣೆಯಲ್ಲಿ ಭಸ್ಮ ಗಂಧಾದಿಗಳನ್ನು ಮತ್ತು ಅರಿಶಿನದ ಬಟ್ಟೆಯನ್ನು ಉಡುವುದು ಒಂದು ನಿಯಮ. ಆಗ ಜನಸಾಮಾನ್ಯರಿಗೆ ಅವನು ದೈವಸಮಾನ. ಅವನೊಡನೆ ಇತರರು ಷಣ್ಮುಖನ ಸ್ತೋತ್ರ ಮಾಡುತಾ ಹಿಂದೆ ಸಾಗುತ್ತಾರೆ. 


ಕಾವಡಿ ಹೊರುವುದರ ಜತೆಗೆ ಕೆಲವರು ಸೂಜಿಗೆ ನಿಂಬೆ ಹಣ್ಣು ಚುಚ್ಚಿ, ಅದನ್ನು ತಮ್ಮ ಶರೀರಕ್ಕೆ ಚುಚ್ಚಿಕೊಳ್ಳುತ್ತಾರೆ. ಅಂತೆಯೇ ಭಕ್ತರು ಅಗ್ನಿಕೊಂಡ ಹಾಯುವುದು, ಇತ್ಯಾದಿ ಸಂಪ್ರದಾಯಗಳು ಆಚರಣೆಯಲ್ಲಿವೆ. ತನಗೆ ಈ ಶರೀರದ ವ್ಯಾಮೋಹವಿಲ್ಲವೆಂಬುದನ್ನು ತೋರಿಸಿಕೊಟ್ಟು ಮುಕ್ತಿಯನ್ನು ಆಪೇಕ್ಷಿಸುವ ಜೀವಿ ಇವನು ಎಂದು ಇದರ ಹಿನ್ನೆಲೆ. 

 ಪುಷ್ಪಕಾವಡಿ, ಪಾಲ್‌ಕಾವಡಿ, ಪನ್ನೀರ್ ಕಾವಡಿ, ಮಚ್ಚೆಕಾವಡಿ ಇವೇ ಮೊದಲಾದ 15ಕ್ಕೂ ಹೆಚ್ಚಿನ ವಿವಿಧ ಕಾವಡಿಗಳು ಕಂಡುಬರುತ್ತವೆ. ಇದೊಂದು ನಯನ ಮನೋಹರ ದೃಶ್ಯವಾಗಿದ್ದು ಭಕ್ತರು ಕಾವಡಿಗಳನ್ನು ಹೊತ್ತು ಬೆಂಗಳೂರಿನ ಮೂಲೆ ಮೂಲೆಗಳಿಂದ ಬಂದು ಸೇವೆ ಸಲ್ಲಿಸುತ್ತಾರೆ. 


-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) 

9739369621


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top