ಮಹಾರಾಷ್ಟ್ರದ ಜಿಲ್ಲಾ ಕೇಂದ್ರವಾದ ಸೊಲ್ಲಾಪುರದಿಂದ ಸುಮಾರು 62 ಕಿ.ಮೀ ಅಂತರದಲ್ಲಿರುವ ಪುಣ್ಯ ಪಾವನ ಕ್ಷೇತ್ರವೇ ಪಂಢರಪುರ. ಪಂಡರಾಪುರದ ಹೆಸರನ್ನು ಕೇಳದವರು ಇಲ್ಲ. ಭಕ್ತಿಯ ಪರಾಕಾಷ್ಟೆಯ ಪದ್ಧತಿಯೊಂದನ್ನು ಕಾಣಬೇಕಾದರೆ ನೀವು ಪಂಢರಾಪುರಕ್ಕೆ ಹೋಗಬೇಕು. ಅಲ್ಲಿ ವಿಠೋಬನೇ ಎಲ್ಲವೂ. ವಿಠಲ ಎಂಬ ಹೆಸರಿನಿಂದಲೂ ಅವನು ಪ್ರಖ್ಯಾತ. ಇಲ್ಲಿರುವ ವಿಠೋಬನ ದೇವಾಲಯವು ಭಕ್ತಿಮಾರ್ಗವನ್ನು ಅನುಸರಿಸಿರುವ ವಾರ್ಕರಿ ಪಂಥೀಯರಿಗೆ ಮನೆ ಇದ್ದಂತೆ. ಅಲ್ಲಿನ ಒಡೆಯ ವಿಠೋಬನ ನಡುವೆ ಅವರಿಗೆ ಅವಿನಾಭಾವ ಸಂಬಂಧ. ಇದರಲ್ಲಿ ನಾಮದೇವರಂತಹ ಕೆಲವರು ವಿಠೋಬನ ಜೊತೆ ಪಗಡೆ ಆಡುವಷ್ಟು ಹತ್ತಿರವಾಗಿದ್ದವರು. ಅದಕ್ಕೇ ಈಗಲೂ ದೇವಾಲಯದ ಮೊಟ್ಟಮೊದಲ ಮೆಟ್ಟಿಲನ್ನು 'ನಾಮದೇವ್ ಚಿ ಪಾಯರಿ' ಎಂದೇ ಕರೆಯುತ್ತಾರೆ. ಅಂದರೆ ನಾಮದೇವನ ಹೆಜ್ಜೆ ಎಂದು ಅರ್ಥ. ಮೊದಲು ಇದಕ್ಕೆ ನಮಸ್ಕಾರ ಮಾಡಿಯೇ ದೇವಾಲಯಕ್ಕೆ ಹೋಗುವುದು ಪದ್ಧತಿ. ಚಿಕ್ಕವಯಸ್ಸಿನಲ್ಲೇ ಅಮ್ಮ ನೀಡಿದ ಅಡುಗೆಯನ್ನು ವಿಠೋಬನಿಗೆ ಪ್ರತ್ಯಕ್ಷ ಊಟ ಮಾಡಿಸಿ ಹೋಗುತ್ತಿದ್ದ ಮಹಾಮಹಿಮರು ನಾಮದೇವರು.
ಸ್ಥಳಪುರಾಣ
ಒಂದು ಪುರಾಣದ ಪ್ರಕಾರ ಈ ಹರಿ ಭಕ್ತ ಪಂಢರಿ ತನ್ನ ತಂದೆ ತಾಯಿಯ ಸೇವೆಯಲ್ಲಿ ನಿರತನಾಗಿದ್ದಾಗ ಸ್ವತಃ ಹರಿಯೇ ಮನೆಗೆ ಬಂದು ಬಾಗಿಲು ತಟ್ಟಿದನಂತೆ, ಮೊದಲು ತಂದೆತಾಯಿಯರ ಸೇವೆ ನಂತರವೇ ಅತಿಥಿಗಳ ಸೇವೆ ಎಂದು ನಂಬಿದ್ದ ಪಂಢರಿ ಬಾಗಿಲನ್ನೇ ತೆರೆಯಲಿಲ್ಲ. ದೇವರೇ ಬಂದು ಬಾಗಿಲು ತಟ್ಟುತ್ತಿರುವುದು ಗೊತ್ತಾಗಿಯೂ ಕೂಡ ಬಾಗಿಲು ತೆರೆಯುವುದಿಲ್ಲ. ಆದರೆ ಇನ್ನು ಸ್ವಲ್ಪ ಹೊತ್ತು ಮನೆಯ ಮುಂದೆ ಕಾಯಲಿ ಎಂದು ಒಂದು ಇಟ್ಟಿಗೆಯನ್ನು ಕಿಟಕಿಯಿಂದ ಹೊರಗೆ ಚೆಲ್ಲುತ್ತಾನೆ. ಪಂಢರಿಯ ತಂದೆ ತಾಯಿಯ ಭಕ್ತಿಯನ್ನು ಕಂಡು ಪ್ರಸನ್ನನಾದ ಶ್ರೀಹರಿ ಇಟ್ಟಿಗೆಯ ಮೇಲೆ ನಿಲ್ಲುತ್ತಾನೆ. ಕೈಗಳನ್ನು ಸೊಂಟದ ಮೇಲಿಟ್ಟುಕೊಂಡೇ ಭಕ್ತ ಪಂಢರಿಗಾಗಿ ಕಾಯುತ್ತಾನೆ. ಪಂಢರಿಯ ಕೋರಿಕೆಯಂತೆ ಅಲ್ಲಿಯೇ ನೆಲಸುತ್ತಾನೆ.
ಪಂಢರಪುರದ ದೇಗುಲವನ್ನು ಸುಮಾರು 13ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಭೀಮಾನದಿಯ ತಟದಲ್ಲಿದೆ. ಈ ನದಿಗೆ ಚಂದ್ರಭಾಗಾ ನದಿ ಎಂತಲೂ ಕರೆಯುತ್ತಾರೆ. ಪಾಂಡುರಂಗನ ವಿಗ್ರಹ ಕೃಷ್ಣವರ್ಣ ಶಿಲೆಯಲ್ಲಿ ಕಂಗೊಳಿಸುತ್ತಿದೆ. ಸುಮಾರು 3 ಅಡಿ 9 ಅಂಗುಲ ಎತ್ತರವಿದೆ. ಪಾಂಡುರಂಗನ ವಿಗ್ರಹ ನೋಡಲು ಮನೋಹರವಾಗಿದ್ದು ತಲೆಯ ಮೇಲೆ ಕಿರೀಟ, ಕತ್ತಿನಲ್ಲಿ ತುಳಸಿ ಮಾಲೆ, ಒಂದು ಉದ್ದನೆಯ ನಿಲುವಂಗಿಯಿದೆ. ಶ್ರೀಕೃಷ್ಣನ ಅವತಾರವೆಂದೇ ನಂಬಲಾದ ಪಾಂಡುರಂಗನನ್ನು ಪಂಢರೀನಾಥ, ವಿಠ್ಠಲ ಎಂದೂ ಕರೆಯುತ್ತಾರೆ. ಪಾಂಡುರಂಗನ ಎಡಬದಿಯಲ್ಲಿ ಆತನ ಧರ್ಮಪತ್ನಿ ರುಖ್ಮಾಬಾಯಿಯ ವಿಗ್ರಹವನ್ನು ನೋಡಬಹುದು. ಈಕೆಯೂ ಸಹ ಒಂದು ಇಟ್ಟಿಗೆಯ ಮೇಲೆ ನಿಂತಿದ್ದು ಎರಡೂ ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡಿದ್ದಾಳೆ. ರುಕ್ಮಿಣಿದೇವಿಗೆಂದೇ ಪ್ರತ್ಯೇಕ ಗೋಪುರದಿಂದ ಕೂಡಿದ ದೇವಸ್ಥಾನವನ್ನು ನಿರ್ಮಿಸಲಾಗಿದೆ.
1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆತಾಗಲೂ ಈ ದೇವಾಲಯದಲ್ಲಿ ಮಡಿವಂತಿಕೆ ತುಂಬಿ ತುಳುಕುತ್ತಿತ್ತು. ಕೆಳವರ್ಗದವರನ್ನು ಒಳಗೆ ಬಿಡುತ್ತಿರಲಿಲ್ಲ. ದೇವರನ್ನು ಮುಟ್ಟುವುದಂತೂ ಕನಸಿನಲ್ಲೂ ಕಷ್ಟವೆನಿಸಿತ್ತು. ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರೂ, ಗಾಂಧಿವಾದಿಗಳೂ ಆಗಿದ್ದ ಸಾನೆಗುರೂಜಿ ಅವರು ಇದನ್ನು ತೊಡೆದು ಹಾಕಲು ಸತ್ಯಾಗ್ರಹ ಮಾಡಿದರು. ಅಮರಣಾಂತ ಉಪವಾಸವನ್ನೂ ಕೈಗೊಂಡರು. ಇದೀಗ ವಿಠೋಬನ ದೇವಸ್ಥಾನದಲ್ಲಿ ಪ್ರತಿಯೊಂದು ಜಾತಿಯವರೂ ವಿಠೋಬನ ಪಾದಮುಟ್ಟಿ ನಮಸ್ಕರಿಸಬಹುದಾಗಿದೆ.
ನಾಮದೇವರು ಮತ್ತು ಪಂಢರಿನಾಥ
ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಈ ಕ್ಷೇತ್ರದ ಪಂಢರಿನಾಥನನ್ನು ಸಂತರಾದ ದಾನಿಶ್ವರ, ಏಕನಾಥ, ನಾಮದೇವ, ತುಕರಾಮ, ಪುರಂದರದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ ಮುಂತಾದವರು ಆರಾಧಿಸುತ್ತಾ ಬಂದಿದ್ದಾರೆ. ಪಂಢರಪುರ ದೇವಸ್ಥಾನದ ಮೊದಲ ಮೆಟ್ಟಿಲಿಗೆ 'ನಾಮ್ದೇವ್ ಚಿ ಪಯರಿ' (ನಾಮದೇವನ ಮೆಟ್ಟಿಲು) ಎಂದು ಕರೆಯುತ್ತಾರೆ. ಈ ಮೆಟ್ಟಿಲ ಹಿಂದೊಂದು ಕಥೆಯಿದೆ. ಅದೆಂದರೆ ತಾಯಿಯ ಆಜ್ಞೆಯಂತೆ ನಾಮದೇವನ ಮನೆಯವರೆಲ್ಲರೂ ಸಿಹಿತಿನಿಸನ್ನು ದೇವರಿಗೆ ವೈವೇದ್ಯ ಮಾಡಿದ ನಂತರವಷ್ಟೇ ಸ್ವೀಕರಿಸುತ್ತಾರೆ. ಒಮ್ಮೆ ನಾಮದೇವ ದೇಗುಲಕ್ಕೆ ಹೋಗುತ್ತಾನೆ. ದೇವರ ಮುಂದೆ ನೈವೇದ್ಯವನ್ನು ಇಡುತ್ತಾನೆ. ಆದರೆ ಎಷ್ಟು ಹೊತ್ತು ಕಳೆದರೂ ಪಾಂಡುರಂಗ ಪ್ರತ್ಯಕ್ಷ ಆಗುವುದೇ ಇಲ್ಲ. ಇದರಿಂದ ಖಿನ್ನನಾದ ನಾಮದೇವ ತನ್ನ ತಲೆಯನ್ನು ದೇವಸ್ಥಾನದ ಮೊದಲ ಮೆಟ್ಟಿಲಿಗೆ ಚಚ್ಚಿಕೊಳ್ಳುತ್ತಾನೆ. ಮಗುವಿನ ಮುಗ್ಧತೆಗೆ ಪಾಂಡುರಂಗ ಪ್ರಸನ್ನನಾಗುತ್ತಾನೆ. ಅವನಿತ್ತ ನೈವೇದ್ಯವನ್ನು ಸ್ವೀಕರಿಸುತ್ತಾನೆ. ಹಾಗೆಂದೇ ಈ ಮೆಟ್ಟಿಲಿಗೆ ನಾಮದೇವರ ಹೆಸರು ಬಂದಿದೆ.
ಸಮೀಪದ ದೇಗುಲಗಳು
ಪದ್ಮಾವತಿ, ಅಂಬಾಭವಾನಿ ಹಾಗೂ ನದಿ ಮಧ್ಯದಲ್ಲಿರುವ ಪುಂಡಲೀಕ ಮತ್ತು ವಿಷ್ಣುಪೇಡಾ ದೇವಸ್ಥಾನಗಳಿವೆ. ಪಂಢರಪುರದ ಸಮೀಪವಿರುವ ದೇವಸ್ಥಾನಗಳೆಂದರೆ ತುಳಜಾಪುರದ ತುಳಜಾಭವಾನಿ, ಅಕ್ಕಲಕೋಟದ ಸ್ವಾಮಿ ಸಮರ್ಥ, ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಅತ್ಯಂತ ಪವಿತ್ರ ಕ್ಷೇತ್ರಗಳೆಂದು ಹೆಸರು ಪಡೆದಿದೆ.
ದೇವರೆಡೆಗೆ ಸಾರ್ಥಕ ನಡಿಗೆ
ಜುಲೈ 17 ಆಷಾಢ ಶುದ್ಧ ಏಕಾದಶಿ. ಈ ದಿನ ಪಂಢರಪುರವನ್ನು ತಲುಪುವಂತೆ ಸಾವಿರಾರು ಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆ ತೆರಳುತ್ತಾರೆ.
ಪಂಡರಾಪುರದ ಇನ್ನೊಂದು ಖ್ಯಾತಿಯೆಂದರೆ, ಇಲ್ಲಿನ ಡಿಂಡಿ ಯಾತ್ರೆ. 1810 ರಲ್ಲಿ ಈ ಪದ್ಧತಿ ಆರಂಭವಾಯಿತು ಎಂಬ ಉಲ್ಲೇಖವಿದೆ. ಆಷಾಢ ಶುದ್ಧ ಏಕಾದಶಿ ಮತ್ತು ಕಾರ್ತಿಕ ಶುದ್ಧ ಏಕಾದಶಿಯಂದು ಪಂಡರಾಪುರವನ್ನು ತಲಪುವಂತೆ ವಾರ್ಕರಿ ಪಂಥದವರು ತಮ್ಮ ಊರಿನಿಂದ ಕಾಲ್ನಡಿಗೆಯಲ್ಲಿ ಯಾತ್ರೆ ಹೊರಡುತ್ತಾರೆ. ದಾರಿಯುದ್ದಕ್ಕೂ ಭಜನೆಗಳನ್ನು ಹೇಳುತ್ತಾ ಜನಜಾಗೃತಿಯ ಕಾರ್ಯವನ್ನು ಮಾಡುತ್ತಾ ಪಂಡರಾಪುರವನ್ನು ಸೇರುತ್ತಾರೆ. ಆ ಎರಡು ದಿನಗಳಲ್ಲಿ ವಿಠೋಬನ ಪಾದುಕೆಯನ್ನು ಪಲ್ಲಕ್ಕಿಯಲ್ಲಿಟ್ಟು ಊರಿನೆಲ್ಲೆಡೆ ಮೆರವಣಿಗೆ ಮಾಡಲಾಗುತ್ತದೆ. ಈ ಮೆರವಣಿಗೆಯಲ್ಲಿ ಸಾವಿರಾರು ವಾರ್ಕರಿ ಪಂಥೀಯರು ಮತ್ತು ಇತರ ಭಕ್ತರು ಪಾಲ್ಗೊಂಡು ಹಾಡುತ್ತ, ನರ್ತನ ಮಾಡುತ್ತ ಮೈಮರೆಯುತ್ತಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಸಂಪೂರ್ಣ ಇಹವನ್ನೇ ಮರೆತು ವಿಠಲನಲ್ಲಿ ಲೀನವಾಗಿರುತ್ತಾರೆ. ಹೀಗೆ ಈ ದಿನಗಳಲ್ಲಿ ವಿಠೋಬನ ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ, ಮನಃಶಾಂತಿ, ಸಮೃದ್ಧಿ ಲಭ್ಯವಾಗುವುದಲ್ಲದೆ ಮನಸ್ಸಿನ ಕಲ್ಮಶಗಳು ದೂರವಾಗಿ ಇಹಪರಗಳಲ್ಲಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿರುವ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುವುದು ಸಹ ಈ ದಿನಗಳಲ್ಲಿ ಶ್ರೇಷ್ಠವಾಗಿರುತ್ತದೆ. ಅದಕ್ಕಾಗಿಯೇ ಜನರು ವಿಶೇಷವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಉತ್ತರಭಾಗದಿಂದ ಗುಂಪುಗುಂಪಾಗಿ ಹೋಗುವುದು ವಾಡಿಕೆ.
ನಡಿಗೆ ಕೆಲವರಿಗೆ ವ್ಯಾಯಾಮ. ಮತೆ ಕೆಲವರಿಗೆ ಅನುಭವದ ಪಾಠ ಕಲಿಸುವ ಅಮೂಲ್ಯ ಕ್ಷಣ. ನಮ್ಮ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ನಾಯಕರು ಜಾಗೃತಿ, ಸಂಘಟನೆ, ಸ್ವಾತಂತ್ರ್ಯದ ಅರಿವು ಮೂಡಿಸುವುದಕ್ಕಾಗಿ ನಡಿಗೆಯನ್ನು ಬಳಸಿಕೊಂಡಿದ್ದಾರೆ. ಇದನ್ನೇ ಆದರ್ಶವಾಗಿಟ್ಟುಕೊಂಡು ಒಂದಿಷ್ಟು ಮಂದಿ ರಾಜಕೀಯ ಕಾರಣಕ್ಕಾಗಿ ನಡೆದವರಿದ್ದಾರೆ. ಸಮಾಜ ಸುಧಾರಣೆ, ಪರಿಸರ ಉಳಿಸಿ, ಧರ್ಮ ಜಾಗೃತಿ, ಎಲ್ಲರಿಗೂ ಬದುಕಲು ಸಮಾನ ಅವಕಾಶ ಕಲ್ಪಿಸಿ ಎಂಬ ಉದ್ದೇಶಗಳೂ ಈ ನಡಿಗೆಯೊಂದಿಗೆ ತಳಕುಹಾಕಿಕೊಂಡಿವೆ. ಇಂಥವರ ನಡುವೆ ದೈನಂದಿನ ಬದುಕನ್ನು ಬದಿಗಿಟ್ಟು ಅಂತರಂಗ ಶುದ್ಧಿ, ಆಧ್ಯಾತ್ಮ ಸಾಧನೆ, ಭಕ್ತಿ ಹೆಚ್ಚಿಸಿಕೊಳ್ಳುವ ಬಯಕೆಯಿಂದ ನಡೆಯಬೇಕೆಂದು ಹೊರಟವರು ವಿಭಿನ್ನವಾಗಿ ನಿಲ್ಲುತ್ತಾರೆ. ಇವರದು ಪಾದಯಾತ್ರೆ.
ಭಕ್ತಿಯ ಹೆಜ್ಜೆಗಳು
'ನಡಿಯು ಮನಷಾ ಎಡವತಾನ, ಎಡವಿದವ ನಡಿಯುದ್ ಕಲಿತಾನ'. ಇಂಥದೊಂದು ಮಾತು ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಬೀಳುವ ಮಗುವನ್ನು ನೋಡಿದಾಗ ನೆನಪಾಗುವ ಈ ಮಾತು ಬದುಕಿನ ಹಲವು ಘಟ್ಟಗಳಲ್ಲಿ ಕಣ್ಮುಂದೆ ಬಂದು ನಿಲ್ಲುತ್ತದೆ. ಸ್ಪರ್ಧೆಯಲ್ಲಿ ಸೋತಾಗ, ಪರೀಕ್ಷೆಯಲ್ಲಿ ಅಂದುಕೊಂಡದ್ದಕ್ಕಿಂತ ಕಡಿಮೆ ಅಂಕ ಬಂದಾಗ, ರಜೆಯಲ್ಲಿ ಸೈಕಲ್ ಕಲಿಯುವ ಹುಮ್ಮಸ್ಸಿನಲ್ಲಿ ಬಿದ್ದಾಗ, ಯಾವುದೋ ಕೆಲಸಕ್ಕೆ ಮುಂದಾಗಿ ವಿಫಲರಾದಾಗ 'ನಾ ಎಡವಿದ್ದೆಲ್ಲಿ?' ಎಂಬ ಪ್ರಶ್ನೆ ಕಾಡುತ್ತದೆ. ಅದು ಬೀಳುವ ಅಂಜಿಕೆಯಲ್ಲಿ ನಡೆಯುವುದನ್ನು ಬಿಡಬಾರದು' ಎಂಬ ಆತ್ಮವಿಶ್ವಾಸವನ್ನೂ ತುಂಬುತ್ತದೆ. ಬಿದ್ದವ ಮತ್ತೆ ಎದ್ದು ನಿಲ್ಲುತ್ತಾನೆ. ಎದ್ದವ ಮತ್ತೆ ನಡೆಯುತ್ತಾನೆ. ಬಿದ್ದದ್ದೇ ಬದುಕಿಗೊಂದು ಪಾಠವಾಗುತ್ತದೆ.
ಈ ಅನುಭವದ ಪಾಠ ಕಲಿಸುವ ನಡಿಗೆಗಾಗಿಯೇ ಜೀವನದ ಕೆಲವು ದಿನಗಳು ಮೀಸಲಿಟ್ಟವರಿದ್ದಾರೆ. ಅದರ ಹಿಂದೆ ಹೋರಾಟ, ಸಮಾಜ ಸುಧಾರಣೆ, ಸಂಘಟನೆ ಹೀಗೆ ನಾನಾ ಉದ್ದೇಶಗಳಿವೆ. ಆದರೆ ನಡಿಗೆಯನ್ನು ಆಧ್ಯಾತ್ಮ ಸಾಧನೆಗೂ ಬಳಸಿಕೊಂಡವರು ಉಳಿದವರಿಗಿಂತ ವಿಭಿನ್ನ. ಆಯಾಸದಲ್ಲೂ ಆರಾಮ, ಆತ್ಮಾನಂದ ಕಾಣಲು ಹೊರಟವರಿವರು. ನಾಗಾಲೋಟದ ಬದುಕಿನಲ್ಲಿ ಕಾಣದ ಭಗವಂತ ನಡೆಯುವ ದಣಿವಿನಲ್ಲಿ ಕಾಣಬಹುದೇ ಎಂಬ ಕೂತೂಹಲ ಇವರದ್ದು. ಭಕ್ತಿಯಲ್ಲಿ ಮೈಮರೆತು ಹೆಜ್ಜೆ ಹಾಕುವ ಇವರಿಗೆ ನಡೆದಷು ದಣಿವು, ಮತ್ತೆ ನಡೆಯುವ ಹಸಿವು. ಇದನ್ನು ಅವರು ಪಾದಯಾತ್ರೆ ಎನ್ನುತ್ತಾರೆ. ನೂರಾರು ವರ್ಷಗಳಿಂದ 'ನಡೆದು'ಕೊಂಡು ಬಂದಿರುವ ಈ ಸಂಪ್ರದಾಯ ಕೆಲವರಿಗೆ ಹವ್ಯಾಸ, ಮತ್ತೆ ಕೆಲವರಿಗೆ ಭಕ್ತಿ ಸಮರ್ಪಣೆಗೊಂದು ಅವಕಾಶ.
ಒಂದು ಅಂದಾಜಿನ ಪ್ರಕಾರ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಹಗೂ ನಮ್ಮ ಕರ್ನಾಟಕ ರಾಜ್ಯದಿಂದ ಪ್ರತಿ ವರ್ಷ ಪಾದಯಾತ್ರೆ ಕೈಗೊಳ್ಳುವವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು. ಇವರಲ್ಲಿ ಜಾತಿ ಭೇದ ಇಲ್ಲ, ಗಂಡು ಹೆಣ್ಣೆಂಬ ತಾರತಮ್ಯವೂ ಇಲ್ಲ. ನಾವೆಲ್ಲ ಒಂದೇ, ನಡಿಗೆಯೇ ನಮ್ಮ ಧರ್ಮ ಎಂಬ ಮನೋಭಾವದಲ್ಲಿ ಭಕ್ತಿಯಿಂದ ಸಾಗುವವರು ಪ್ರತಿವರ್ಷ ಹೊರಡುವ ಪ್ರಮುಖ ಕ್ಷೇತ್ರಗಳ ಪಟ್ಟಿಯೇ ಇದೆ.
ಸೌಹಾರ್ದ ಸಾರುವ ಕಾನಡಿ ವಿಠ್ಠಲ
ಪ್ರಸಿದ್ಧ ಯಾತ್ರಾ ಸ್ಥಳ ಪಂಢರಪುರದಲ್ಲಿ ಆಷಾಢ ಹಾಗೂ ಕಾರ್ತಿಕ ಶುದ್ಧ ಏಕಾದಶಿ ಜರುಗುವ ಉತ್ಸವಕ್ಕೆ ನಡೆದು ಬರುವವರೇ ಹೆಚ್ಚು. ಈ ಕ್ಷೇತ್ರ ಮಹಾರಾಷ್ಟ್ರದಲ್ಲಿದ್ದರೂ ವಿಠ್ಠಲನಿಗೆ ಕನ್ನಡದ ಭಕ್ತರೇ ಜಾಸ್ತಿ ಎಂದು ಸಂತರು ಮರಾಠಿ ಕೀರ್ತನೆಗಳಲ್ಲಿ ಇವನನ್ನು 'ಕಾನಡಿ ವಿಠ್ಠಲ' ಎಂದು ಬಣ್ಣಿಸಿದ್ದಾರೆ. ಮಹಾರಾಷ್ಟ್ರದ ಗಡಿಗುಂಟ ಇರುವ ರಾಜ್ಯದ ಜಿಲ್ಲೆಗಳ ಭಕ್ತರು ಏಕಾದಶಿಗಿಂತ ಒಂದು ವಾರ ಮುಂಚೆ ತಮ್ಮ ಊರುಗಳಿಂದ ನಡಿಗೆ ಆರಂಭಿಸುತ್ತಾರೆ. ಇವರು ಸಾಕಿದ ಎತ್ತು, ನಾಯಿಗಳೂ ಇವರೊಂದಿಗೆ ಹೆಜ್ಜೆ ಹಾಕುತ್ತವೆ. ಚಕ್ಕಡಿ ಗಾಡಿಗಳಲ್ಲಿ ಕೂಸು-ಕುನ್ನಿಗಳೂ ಇರುತ್ತವೆ. ಎಲ್ಲರೂ ಮೈಮರೆತು ನಡೆಯುತ್ತಾರೆ ತಾಳ, ಹಾಡು ಭಜನೆಗಳೊಂದಿಗೆ. ಪಂಢರಪುರಕ್ಕೆ ನಡೆದು ಬರುವ ಸಂಪ್ರದಾಯ ಶಿವಾಜಿ ಮಹಾರಾಜರ ಕಾಲದಿಂದಲೂ ಇದೆ.
'ಕಾರ್ತಿಕ ಏಕಾದಶಿ ಪಂಢರಪುರಕ್ಕೆ ನಡೆದು ಬರುವವರ ಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಯಾವ ಭೇದವೂ ಇಲ್ಲದ ಈ ಯಾತ್ರಿಕರಲ್ಲಿ ಭಕ್ತಿ ಪ್ರಧಾನವಾಗಿರುತ್ತದೆ. ಪುಣೆ ಸಮೀಪದ ಆಳಂದದಿಂದ ಅತಿ ಹೆಚ್ಚು ಜನ ಕಾಲ್ನಡಿಗೆಯಿಂದ ಬರುತ್ತಾರೆ. ನೂರಾರು ವರ್ಷಗಳ ಹಿಂದೆ ಈ ಆಳಂದದ ದಿಂಡಿ ಯಾತ್ರೆಗೆ ಚಾಲನೆ ನೀಡಿದ ಹೈಬತ್ ಬಾಬಾ ಮುಸ್ಲಿಂ ಜನಾಂಗದವರು. ಅವರು ವಿಠ್ಠಲನ ಪರಮ ಭಕ್ತರಾಗಿದ್ದರು. ಎಲ್ಲ ಜನಾಂಗದವರೂ ಒಂದಾಗಿ ನಡೆಯಬೇಕು. ಆ ಭಕ್ತಿ ನಮ್ಮಲ್ಲಿ ಭ್ರಾತೃತ್ವ ಬೆಳೆಸಬೇಕು ಎಂಬುದು ಅವರ ಉದ್ದೇಶವಾಗಿತ್ತು' ಎಂದು ಪಂಢರಪುರದ ಅರ್ಚಕರಾದ ಆನಂದ ಉತ್ಪಾತ ಅವರು ವಿವರಣೆ ನೀಡುತ್ತಾರೆ. ಪಂಢರಪುರದ ಯಾತ್ರೆ ಭಾಷಾಸೌಹಾರ್ದತೆಯ ಜೊತೆಗೆ ಕೋಮು ಸೌಹಾರ್ದತೆಯನ್ನೂ ಬೆಸೆಯುವ ಅಪರೂಪದ ಯಾತ್ರೆಯಾಗಿದೆ.
ಇದರಂತೆಯೇ ಶ್ರೀಶೈಲ ಯಾತ್ರೆಯ ಸಂದರ್ಭದಲ್ಲೂ ಸೌಹಾರ್ದದ ರುಚಿ ಸವಿಯಬಹುದು ಎನ್ನುತ್ತಾರೆ. ಪಾದಯಾತ್ರಿಗಳು. 'ಶ್ರೀಶೈಲ ಪಾದಯಾತ್ರೆಗೆ ತೆರಳುವಾಗ ಕರ್ನಾಟಕದ ಗಡಿ ದಾಟಿ ಕರ್ನೂಲ ಪ್ರವೇಶಿಸುತ್ತಿದ್ದಂತೆ ನಮಗಾಗಿ ಒಂದು ವಿಶಿಷ್ಟಸೇವೆ ಕಾದಿರುತ್ತದೆ. ಆಂಧ್ರದವರೇ ಆದ ಕೆಲವು ಜನ ಒಂದು ಸ್ಥಳದಲ್ಲಿ ಟೆಂಟ್ ನಿರ್ಮಿಸಿ ಪಾದಯಾತ್ರಿಕರ ಕಾಲು ಮಸಾಜ್ ಮಾಡುತ್ತಾರೆ. ನಾವೆಲ್ಲ ಬಹುತೇಕ ರೈತರಾಗಿರುವುದರಿಮದ ನಮಗೆ ತೆಲಗು ಬರುವುದಿಲ್ಲ. ಅವರಿಗೆ ಕನ್ನಡ ಬರುವುದಿಲ್ಲ. ಆದರೂ ಅವರು ನಮ್ಮಕಾಲು ತಿಕ್ಕಿ ನಮಸ್ಕಾರಿಸುತ್ತಾರೆ. ಪಂಢರಪುರಕ್ಕೆ ನಡೆದು ಹೋಗುವ ಕನ್ನಡಿಗರ ಸೇವೆಗೆ ಮರಾಠಿಗರೂ ಮುಂದಾಗುತ್ತಾರೆ. ಯಾವುದೋ ಕಾರಣಕ್ಕೆ ರಾಜ್ಯ ರಾಜ್ಯಗಳ ನಡುವೆ ಜಗಳ ನಡೆಯುವ ಇಂದಿನ ದಿನಗಳಲ್ಲಿ ನಮ್ಮ ಪಾದಯಾತ್ರೆ ಸೌಹಾರ್ದ ಭಾವನೆ ಮೂಡಿಸುತ್ತಿದೆ ಎಂಬುದು ಖುಷಿಯ ಸಂಗತಿ' ಎನ್ನುತ್ತಾರೆ. ಇಂತಹ ಅನುಭವಗಳು ಮನುಷ್ಯರನ್ನು ಪರಸ್ಪರ ಬೆಸೆಯುವ ಮೂಲಕ ಒಗ್ಗಟ್ಟಿನಿಂದ ಭಗವತನೆಡೆಗೆ ಮುನ್ನಡೆಯಲು ಸಹಕಾರಿಯಾಗುತ್ತದೆ.
ಯಾತ್ರೆಯಲ್ಲಿ ಸೇವಾ ಭಾವ
ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮ ದೇವಿ, ಆಳಂದ ಜ್ಞಾನೇಶ್ವರ ಮಹಾರಾಜರು, ಕರ್ನಾಟಕದ ಯಲ್ಲಮ್ಮನಗುಡ್ಡ, ಬೆಳಗಾವಿ ಜಿಲ್ಲೆಯ ಮುರಗಡ, ಧರ್ಮಸ್ಥಳ ಮಂಜುನಾಥ ಹೀಗೆ ಹಲವು ಕ್ಷೇತ್ರಗಳಿಗೆ ಭಕ್ತರು ನಡೆದುಕೊಂಡು ಹೋಗುವುದು ಕಂಡುಬರುತ್ತದೆ. ಈ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗದವರು ನಡೆಯುವವರಿಗೆ ಸ್ನಾನ, ಊಟ, ಉಪಹಾರ, ಹಣ್ಣು ಹಂಪಲ, ವಸತಿ, ವೈದೈಕೀಯ ಸೇವೆ ಕಲ್ಪಿಸಲು ಮುಂದಾಗುತ್ತಾರೆ. ಕೆಲವು ವೈದೈರಂತೂ ವಾಹನಗಳಲ್ಲಿ ಔಷಧಗಳನ್ನು ತುಂಬಿಕೊಂಡು ನಡೆಯುವವರ ಸೇವೆಗೆ ನಿಲ್ಲುತ್ತಾರೆ. ನಡೆಯುವವರಿಗೆ ನೋವಿನಲ್ಲಿ ಕಾಣುವ ದೇವರು, ಕೆಲವರಿಗೆ ಪಾದಯಾತ್ರಿಗಳ ನೋವು ನಿವಾರಣೆಯಲ್ಲಿ ಕಾಣುತ್ತಾನೆ. ಅಂದರೆ ಈ ನಡಿಗೆ ಕಾಣದ ದೇವರನ್ನು ಒಬ್ಬೊಬ್ಬರಿಗೆ ಒಂದು ರೂಪದಲ್ಲಿ ತೋರಿಸುವುದಂತೂ ಸತ್ಯ.ೆ. ಅವರು ಸ್ವಲ್ಪ ವಿಶ್ರಾಂತಿ ಪಡೆದು ಗುಣಮುಖರಾಗಿ ಮತ್ತೆ ನಡೆಯಲು ಆರಂಭಿಸಿದಾಗ ನಮ್ಮ ವೃತ್ತಿಯಲ್ಲೊಂದು ಸಾರ್ಥಕತೆ ಬೆಳಕು ಕಂಡಂತಾಗುತ್ತದೆ' ಎಂದು ಯಾತ್ರಾಕಾಲದ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು
ಮೊಬೈಲ್ : 9739369621
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ