ಅಧ್ಯಾತ್ಮ ರಾಮಾಯಣ-9: ಭರತನ ರೋದನ- ಶ್ರೀರಾಮ ಪಾದುಕಾ ಪ್ರದಾನ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ



ಚಿತ್ರ: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ರಾಮನನ್ನು ಕಾಣಬೇಕು, ಅವನನ್ನು ಮರಳಿ ಅಯೋಧ್ಯೆಗೆ ಕರೆತಂದು ಪಟ್ಟಾಭಿಷೇಕವನ್ನು ಮಾಡಿ ತಾನು ಅವನ ಅಡಿಯಾಳಾಗಿದ್ದುಕೊಂಡು ರಾಮಸೇವೆಯನ್ನು ಮಾಡುತ್ತಿರಬೇಕೆಂಬ ಹೆಬ್ಬಯಕೆ ಮತ್ತು ನಿರ್ಧಾರಗಳನ್ನು ಭರತನು ವಸಿಷ್ಠರಲ್ಲಿ ಅರಿಕೆ ಮಾಡಿದನು. "ನಾಳೆಯ ದಿನವೇ ರಾಮನಿರುವಲ್ಲಿಗೆ ಹೋಗುತ್ತೇನೆ. ನೀವೂ ಬರುವಿರಾದರೆ ಬನ್ನಿ"- ಎಂಬ ಕರೆಯನ್ನೂ ವಸಿಷ್ಠರಿಗೆ ನೀಡಿದನು. ವಸಿಷ್ಠರ ಸಲಹೆಯಂತೆ ರಾಮನನ್ನು ಕಾಣಲು ಚತುರಂಗ ಬಲಸಹಿತ ತಾಯಂದಿರು, ಶತ್ರುಘ್ನ, ಮಂತ್ರಿಗಳು ಮುಂತಾದವರು ಹೋಗುವುದೆಂದಾಯಿತು.


ಮರುದಿನ ಮುಂಜಾನೆಯೇ ಈ ಹಿಂದೆ ನಿರ್ಧರಿಸಿದಂತೆ ಎಲ್ಲರೂ ರಾಮನನ್ನು ಕಾಣಲು ಹೊರಟರು. ಶೃಂಗವೇರಪುರವನ್ನು ತಲುಪಿದರು. ಚತುರಂಗಬಲಸಹಿತನಾಗಿ ಭರತನು ಬಂದನೆಂದಾಗ ಅಲ್ಲಿನ ರಾಜ ಗುಹನಿಗೆ ಸಂಶಯ ಬಂತು- ಭರತನು ರಾಮನನ್ನು ಶಾಶ್ವತವಾಗಿ ದಂಡಕಾರಣ್ಯದಲ್ಲೇ ಇರಿಸಲು ಬಂದಿರಬಹುದೇ?- ಎಂದು. ಒಂದೊಮ್ಮೆ ಹಾಗಿದ್ದರೆ ಗಂಗೆಯನ್ನು ದಾಟಲು ಬಿಡದಿದ್ದರಾಯಿತು- ಎಂದು ಯೋಚಿಸಿ, ತನ್ನ ಸೇನೆಯನ್ನು ಗುಪ್ತವಾಗಿ ಸನ್ನದ್ಧಗೊಳಿಸಿ, ತಾನು ಮಾತ್ರ ಕೆಲವರೊಂದಿಗೆ ಹಣ್ಣು-ಹಂಪಲುಗಳೊಂದಿಗೆ ಭರತನನ್ನು ಎದುರುಗೊಳ್ಳಲು ಹೊರಟನು. ಜಟಾಧಾರಿ, ದುಃಖಿತ ಭರತನನ್ನು ಕಂಡಾಗ ತನ್ನ ಊಹೆ ತಪ್ಪೆಂಬುದರ ಅರಿವು ಗುಹನಿಗಾಯಿತು. ತನಗೆ ನೆಲಮುಟ್ಟಿ ನಮಸ್ಕರಿಸಿದ ಗುಹನನ್ನು ಭರತನು ಆತ್ಮೀಯವಾಗಿ ಆಲಂಗಿಸಿದನು. ಔಪಚಾರಿಕ ಸ್ವಾಗತ-ಸತ್ಕಾರಗಳ ಬಳಿಕ ಭರತನು ಅಣ್ಣ ರಾಮನು ಇಲ್ಲಿಗೆ ಬಂದ ದಿನ ಇರುಳು ತಂಗಿದ ಸ್ಥಳವನ್ನು ತೋರಿಸಲು ಹೇಳಿದ. ಅದನ್ನು ನೋಡಿದ ಭರತನು ಅಣ್ಣ-ಅತ್ತಿಗೆಯರ ದುಸ್ಥಿತಿಗೆ ಕಾರಣನಾದ ತನ್ನ ಬಗೆಗೆ ಜಿಗುಪ್ಸೆ ಹೊಂದಿದನು, ಕಣ್ಣೀರು ಸುರಿಸಿದನು. ಅಂದಿರುಳು ಅಲ್ಲಿ ಗುಹನ ಆತಿಥ್ಯವನ್ನು ಸ್ವೀಕರಿಸಿ, ವಿಶ್ರಮಿಸಿ ಮರುದಿನ ಗುಹನ ಸಹಾಯದಿಂದ ನೂರಾರು ನಾವೆಗಳ ಮೂಲಕ ಗಂಗೆಯನ್ನು ದಾಟಿ ಭರದ್ವಾಜರ ಆಶ್ರಮದತ್ತ ಗುಹನೊಂದಿಗೆ ಭರತನು ಪರಿವಾರಸಹಿತ ಹೊರಟನು. 


ಸೇನೆಯನ್ನು ದೂರದಲ್ಲಿ ನಿಲ್ಲಿಸಿ  ಭರದ್ವಾಜರ ಆಶ್ರಮಕ್ಕೆ ಭರತ, ಶತ್ರುಘ್ನ, ವಸಿಷ್ಠರು ತಾಯಂದಿರು ಮತ್ತು ಸುಮಂತ್ರ- ಇಷ್ಟು ಮಂದಿ ಹೋದರು. ಭರದ್ವಾಜರನ್ನು ಕಂಡು ಪ್ರಣಾಮಗಳನ್ನು ಸಲ್ಲಿಸಿದರು. ಭರತನ ಜಟೆಯನ್ನು ಕಂಡು ಹೀಗೇಕೆ? ಎಂದು ಏನೂ ಗೊತ್ತಿಲ್ಲದವರಂತೆ ಪ್ರಶ್ನಿಸಿದಾಗ ಭರತನು ತುಂಬ ದುಃಖದಿಂದ ಎಲ್ಲವನ್ನೂ ಬಲ್ಲ ತಾವು ಹೀಗೇಕೆ ಕೇಳುತ್ತೀರಿ? ದಯವಿಟ್ಟು ರಾಮನನಿರುವ ಸ್ಥಳವನ್ನು ತೋರಿಸಿ ಎಂದು ಪ್ರಾರ್ಥಿಸಿದನು. ಅವನನ್ನು ಅಯೋಧ್ಯೆಗೆ ಮರಳಿ ಕರೆದುಕೊಂಡು ಹೋಗಿ ಪಟ್ಟಾಭಿಷೇಕ ಮಾಡಲು ಬಂದಿದ್ದೇನೆ- ಎಂದನು. ಭರದ್ವಾಜರು ಭರತನನ್ನು ಸಂತೈಸಿ ರಾಮನು ಚಿತ್ರಕೂಟದಲ್ಲಿರುವನೆಂದು ಹೇಳಿದರು. ಅಂದಿರುಳು ಬಂದಂತಹ ಎಲ್ಲರೂ ಇಲ್ಲೇ ಇದ್ದು ತಮ್ಮ ಆತಿಥ್ಯವನ್ನು ಸ್ವೀಕರಿಸಿ ಮರುದಿನ ಚಿತ್ರಕೂಟದತ್ತ ತೆರಳುವಂತೆ ಹೇಳಿದರು. ಅಂದಿರುಳು ಭರದ್ವಾಜರು ಕಾಮಧೇನುವಿನ ಕೃಪೆ- ಸಹಾಯದೊಂದಿಗೆ ಎಲ್ಲರಿಗೂ ಸ್ವರ್ಗಸಮಾನವಾದ ಆತಿಥ್ಯವನ್ನು ನೀಡಿದರು. ಭರದ್ವಾಜರ ಆತಿಥ್ಯದಿಂದ ಸಂತೃಪ್ತಗೊಂಡ ಭರತನು ತನ್ನ ಪರಿವಾರದೊಂದಿಗೆ ಗುಹನ ಮಾರ್ಗದರ್ಶನದಲ್ಲಿ ಚಿತ್ರಕೂಟದತ್ತ ಪಯಣಿಸಿದನು.



ಚಿತ್ರಕೂಟದಲ್ಲಿ ಅನೇಕಾನೇಕ ಋಷಿಮುನಿಗಳ ಆಶ್ರಮಗಳಿದ್ದವು. ರಾಮಾಶ್ರಮ-ಪರ್ಣಕುಟಿಯು ಮಂದಾಕಿನಿಯ ತೀರದಲ್ಲಿ ಪರ್ವತದ ಎತ್ತರದ ಸ್ಥಳದಲ್ಲಿತ್ತು. ಸೇನೆಯನ್ನು ಸಾಕಷ್ಟು ದೂರದಲ್ಲಿ ನಿಲ್ಲಿಸಿ ತಾನು ಹಾಗೂ ಶತ್ರುಘ್ನನು ಮುಂದಾಗಿ ಹೋಗುವುದು, ವಸಿಷ್ಠರು-ತಾಯಂದಿರು ಮತ್ತು ಸುಮಂತ್ರನು ತಮ್ಮನ್ನು ಹಿಂಬಾಲಿಸಿಕೊಂಡು ಬರುವಂತೆ ಭರತನು ಹೇಳಿ ಶತ್ರುಘ್ನನೊಂದಿಗೆ ರಾಮನತ್ತ ವೇಗವಾಗಿ ಹಜ್ಜೆ ಹಾಕಿದ. 


ರಾಮನ ರಮ್ಯವಾದ ಪರ್ಣಕುಟೀರವನ್ನು ಕಾಣುತ್ತಲೇ ಸೋದರರು ಉದ್ವೇಗಕ್ಕೊಳಗಾದರು. ಬಾಯಾರಿದ ಹಸುವು ನೀರಿರುವ ಕಡೆಗೆ ಓಡುವಂತೆ ಇವರು ರಾಮನಿದ್ದಲ್ಲಿಗೆ ಓಡುತ್ತಾ ಬಂದರು. ಭರತನು ರಾಮನನ್ನು ಕಾಣುತ್ತಲೇ ಅವನ ಪದತಳಕ್ಕೆ ಉದ್ದಂಡ ಪ್ರಣಾಮಗಳನ್ನು ಮಾಡಿ ಕಣ್ಣೀರು ಸುರಿಸುತ್ತಾ ನಿಂತನು. ಭರತನ್ನು ಆಲಂಗಿಸಿ, ತನ್ನ ತೊಡೆಯಲ್ಲಿ ಕುಳ್ಳಿರಿಸಿ ಯೋಗಕ್ಷೇಮ- ತಂದೆ ದಶರಥನನ್ನು ವಿಚಾರಿಸುವ ಹೊತ್ತಿಗೆ ವಸಿಷ್ಠರು ರಾಮನ ತಾಯಂದಿರೊಂದಿಗೆ ಅಲ್ಲಿಗೆ ತಲುಪಿದರು. ವಸಿಷ್ಠರಿಗೆ ಪ್ರಣಾಮಗಳನ್ನು ಸಲ್ಲಿಸಿ ಯೋಗಕ್ಷೇಮ ವಿಚಾರಿಸಿದಾಗ ವಸಿಷ್ಠರು ದಶರಥನ ದೇಹಾಂತ್ಯವಾದ ಕಹಿಸುದ್ದಿಯನ್ನು ಹೇಳಿದರು. ತಾಯಿಯನ್ನು ಕಂಡ ರಾಮನು ಬಾಲರಾಮನಾದನು. ಆಕೆಯ ಎದೆಯಲ್ಲಿ ಮುಖವಿಟ್ಟು ಅತ್ತನು. ಇಬ್ಬರೂ ಪರಸ್ಪರ ಸಂತೈಸಿದ ವಿಲಕ್ಷಣ ಸಂದರ್ಭವು ಅಲ್ಲಿ ಕಾಣಬಂತು. ರಾಮ- ಸೀತೆ- ಲಕ್ಷ್ಮಣರು ಅನಾಥರಾದೆವೆಂದು ಅಳತೊಡಗಿದರು. ಅರಣ್ಯಕ್ಕೆ ಅರಣ್ಯವೇ ಮಾರ್ದನಿಸುವಂತೆ ಸೋದರರು, ತಾಯಂದಿರು ಮತ್ತು ಸೀತೆ- ಅತ್ತರು.


ವಸಿಷ್ಠರು ಅವರನ್ನು ಸಮಾಧಾನಗೊಳಿಸಿ ತರ್ಪಣಕ್ರಿಯೆಯನ್ನು ನಡೆಸಲು ಹೇಳಿದರು. ಸೋದರರು- ಸೀತೆ- ತಾಯಂದಿರೊಂದಿಗೆ ರಾಮನು ಮಂದಾಕಿನೀ ನದಿಗೆ ಬಂದನು. ಅಲ್ಲಿ ಮಿಂದು," ನಾವು ಯಾವ ಅನ್ನವನ್ನು ತಿನ್ನುವೆವೋ ಅದನ್ನೇ ಪಿತೃಗಳಿಗೆ ಕೊಡಬೇಕು" ಎನ್ನುವ ಸ್ಮೃತಿಗೆ ತಲೆಬಾಗಿ ರಾಮನು, ಇಂಗಳದ ಕಾಯಿ, ಗೆಡ್ಡೆಗೆಣಸುಗಳಿಂದ ತಯಾರಿಸಿದ, ಜೇನುತುಪ್ಪದಿಂದ ಕೂಡಿದ ಪಿಂಡಪ್ರದಾನ ಮಾಡಿದನು. ಮತ್ತೆ ಎಲ್ಲರೂ ಸ್ನಾನ ಮಾಡಿ ಅಳುತ್ತಾ ಪರ್ಣಕುಟಿಗೆ ಬಂದರು. ಅಂದಿರುಳು ಎಲ್ಲರೂ ಉಪವಾಸದಿಂದಿದ್ದರು. ಮರುದಿನ ಮಂದಾಕಿನಿಯಲ್ಲಿ ಮಿಂದು ಕುಳಿತಿದ್ದ ರಾಮನ ಬಳಿಗೆ ಬಂದ ಭರತನು ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗಿ, ರಾಜ್ಯವನ್ನಾಳುವಂತೆ ದಯನೀಯವಾಗಿ ಪ್ರಾರ್ಥಿಸಿದನು. ರಾಮನು ಭರತನ ಕೋರಿಕೆಯನ್ನು ನಯವಾಗಿ ನಿರಾಕರಿಸುತ್ತಾ ತನಗೆ ತಂದೆಯಿತ್ತ ದಂಡಕಾರಣ್ಯದ ಕಾವಲು ಹಾಗೂ ನಿನಗಿತ್ತ ಅಯೋಧ್ಯೆಯ ರಾಜ್ಯಾಧಿಕಾರವನ್ನು ಪಾಲಿಸಲೇ ಬೇಕೆಂಬುದನ್ನು ಒತ್ತಿ ಹೇಳಿದ. ಕೊಟ್ಟ ಮಾತಿಗೆ ತಪ್ಪಿದರೆ ದಶರಥನಿಗೆ ನಮ್ಮಿಂದಾಗಿ ನರಕವಾಸವು ಲಭಿಸೀತೆಂಬ ಎಚ್ಚರಿಕೆಯನ್ನೂ ನೀಡಿದನು.


ಇದಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದ ಭರತನು- ನೀನು ಬಾರದಿದ್ದರೆ ನಾನು ನಿನ್ನೆದುರೇ ಪ್ರಾಣತ್ಯಾಗ ಮಾಡುತ್ತೇನೆ- ಎಂದು ಬೆದರಿಸಿ ದರ್ಭೆಯನ್ನು ಹರಡಿ ಅದರ ಮೇಲೆ ಮಲಗಲು ಹೊರಟನು. ಆಗ ರಾಮನು ವಸಿಷ್ಠರಿಗೆ ಭರತನ್ನು ಸಂತೈಸಲು ಸಂಜ್ಞೆ ಮಾಡಿದನು. ವಸಿಷ್ಠರು ಭರತನನ್ನು ಏಕಾಂತಕ್ಕೆ ಕರೆದುಕೊಂಡು ಹೋಗಿ ರಾಮಾವತಾರದ ಹಿನ್ನೆಲೆ- ಮುನ್ನೋಟಗಳನ್ನು ಹೇಳಿ ಅಯೋಧ್ಯೆಗೆ ಹಿಂದಿರುಗಿ ಹೋಗಲು ಹೇಳಿದರು. ಸತ್ಯದ ಅರಿವಾದಾಗ ಭರತನು ತನ್ನನ್ನು ತಾನು ನಿಯಂತ್ರಿಸಿಕೊಂಡನು. ರಾಮನಲ್ಲಿಗೆ ಬಂದು ತಾನು ತಂದ ಸುವರ್ಣಪಾದುಕೆಗಳನ್ನಿಟ್ಟು ಅದರ ಮೇಲೆ ರಾಮನ ಪಾದಗಳನ್ನಿರಿಸಲು ವಿನಂತಿಸಿದನು. ರಾಮನ ಪಾದಸ್ಪರ್ಶವಾದ ಬಳಿಕ ಅವನ್ನು ತನ್ನ ತಲೆಯ ಮೇಲಿಟ್ಟುಕೊಂಡು ಅವನಿಗೆ ಪ್ರದಕ್ಷಿಣೆ ಬಂದನು.


ರಾಮನಲ್ಲಿ- ಇನ್ನು ಮುಂದಿನ ಹದಿನಾಲ್ಕು ವರ್ಷಗಳ ಕಾಲ ನಿನ್ನ ಹೆಸರಿನಲ್ಲಿ ಈ ಪಾದುಕೆಗಳು ರಾಜ್ಯಭಾರ ಮಾಡುತ್ತವೆ. ಅಷ್ಟೂ ಕಾಲ ಈ ಪಾದುಕೆಗಳ ಸೇವೆ ಮಾಡುತ್ತಾ  ನೀನು ಕಾಡಿನಲ್ಲಿ ವನವಾಸವ್ರತವನ್ನು ಆಚರಿಸುವಂತೆ ನಾನು ನಾಡಿನಲ್ಲಿದ್ಡುಕೊಂಡು ವನವಾಸ ವ್ರತದಲ್ಲಿರುತ್ತೇನೆ. ಹದಿನಾಲ್ಕು ವರ್ಷಗಳು ಕಳೆದ ಮೊದಲ ದಿನ ನೀನು ಅಯೋಧ್ಯೆಗೆ ಬರಲಿಲ್ಲವೆಂದಾದರೆ ನಾನು ಅಗ್ನಿಪ್ರವೇಶ ಮಾಡುವೆನು- ಎಂದು ಅನಿವಾರ್ಯವಾದ ಸಂಕಟದಿಂದ ನುಡಿದನು. ಹಾಗೆಯೇ ಆಗಲಿ, ನಾನು ಬಂದೇ ಬರುವೆನೆಂದು ಭರತನಿಗೆ ರಾಮನು ಆಶ್ವಾಸನೆಯನ್ನು ಕೊಟ್ಟನು. ರಾಮಾವತಾರದ ಸತ್ಯವನ್ನು ತಿಳಿದ ಕೈಕೇಯಿಯು ರಾಮನನ್ನು ಏಕಾಂತದಲ್ಲಿ ಕಂಡು ತನ್ನನ್ನು ಕ್ಷಮಿಸಿ ಬಿಡುವಂತೆ ಪ್ರಾರ್ಥಿಸಿದಳು. ರಾಮನು ಅವಳಲ್ಲಿ ಸದಾ ನನ್ನನ್ನು ಧ್ಯಾನಿಸುತ್ತಾ ಭಕ್ತಿಯಿಂದ ಇದ್ದಿರು ಎಂದು ಬೀಳ್ಕೊಟ್ಟನು.


ರಾಮ-ಸೀತೆ- ಲಕ್ಷ್ಮಣರನ್ನು ಬೀಳ್ಕೊಟ್ಟ ಎಲ್ಲರೂ ಬಂದ ದಾರಿಯಲ್ಲಿ ಹಿಂದಿರುಗಿ ಅಯೋಧ್ಯೆಯನ್ನು ಸೇರಿದರು. ಅಯೋಧ್ಯೆಯ ಆಡಳಿತಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿದನು. ಭರತನು ಶತ್ರುಘ್ನನೊಂದಿಗೆ ಅಯೋಧ್ಯೆಯಿಂದ ಹೊರಗಿರುವ ನಂದಿಗ್ರಾಮಕ್ಕೆ ತೆರಳಿದನು. ಅಲ್ಲಿ ರತ್ನಸಿಂಹಾಸನದಲ್ಲಿ ಸ್ವರ್ಣಪಾದುಕೆಗಳನ್ನಿರಿಸಿ ಅವುಗಳ ಸೇವೆ ಮಾಡುತ್ತಾ ರಾಮನ ಹೆಸರಿನಲ್ಲಿ ದಕ್ಷವಾದ ಆಡಳಿತವನ್ನು ನಡೆಸತೊಡಗಿದನು. 


ಇತ್ತ, ರಾಮನ ಇರವು ಗೊತ್ತಾದ ಬಳಿಕ ಪ್ರಜೆಗಳು ಚಿತ್ರಕೂಟಕ್ಕೆ  ಹೋಗಿ ಬರುವುದು ಹೆಚ್ಚಾಯಿತು. ಇದನ್ನು ತಪ್ಪಿಸಲು ರಾಮನು ಚಿತ್ರಕೂಟವನ್ನು ತೊರೆದು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಸೀತೆ- ಲಕ್ಷ್ಮಣರೊಂದಿಗೆ ತೆರಳಿದನು. ಅಲ್ಲಿ ಅತ್ರಿ ಮಹರ್ಷಿ ದಂಪತಿಯ ವಿಶೇಷ ಆತಿಥ್ಯವನ್ನು ಸ್ವೀಕರಿಸಿದರು. ವೃದ್ಧೆಯಾದ ಸತಿ ಅನಸೂಯೆಯು ಸೀತೆಯನ್ನು ಸತ್ಕರಿಸಿದಳು. ಸೀತೆಯು ಅನಸೂಯೆಯಲ್ಲಿ ತಾಯಿಯನ್ನು ಕಂಡಳು. ಸೀತೆಯು; ಮಗಳೇ, ಬಾ ಎಂದು ಕರೆದ ಅನಸೂಯೆಗೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ದೇವಲೋಕದ ಒಂದು ಜೊತೆ ಬೆಂಡೋಲೆಗಳನ್ನೂ, ಶುಭ್ರವಾದ ಒಂದು ಜೊತೆ ರೇಷ್ಮೆಯ ಸೀರೆಯನ್ನೂ ಕೊಟ್ಟಳು. ಅನಸೂಯೆಯು ಸೀತೆಗೆ ದಿವ್ಯವಾದ ಅಂಗರಾಗವನ್ನು ಕೊಟ್ಟು,- ಹೇ ಮಂಗಳಾಂಗಿ, ಈ ದಿವ್ಯವಾದ ಅಂಗರಾಗವನ್ನು ಹಚ್ಚುವುದರಿಂದ ನಿನ್ನ ದೇಹಕಾಂತಿಯು ಎಂದಿಗೂ ಮಾಸುವುದಿಲ್ಲ. ಜಾನಕಿ, ಪಾತಿವ್ರತ್ಯವನ್ನು ಪಾಲಿಸು. ರಾಘವನು ನಿನ್ನೊಡಗೂಡಿ ಸುಖವಾಗಿ ಮತ್ತೆ ಅಯೋಧ್ಯೆಗೆ ಹಿಂದಿರುಗಲಿ- ಎಂದು ಹರಸಿದಳು.


ಅಂದಿನ ಇರುಳು ಅವರು ಅತ್ರಿ ಮಹರ್ಷಿಗಳಿತ್ತ ಭೋಜನವನ್ನು ಸ್ವೀಕರಿಸಿದರು. ಅತ್ರಿ ಮಹರ್ಷಿಗಳು ರಾಮನಿಗೆ ಕೈಮುಗಿದು- ಎಲ್ಲವನ್ನು ನೀನು ಸೃಷ್ಟಿ ಮಾಡಿರುವೆ. ಅವುಗಳ ರಕ್ಷಣೆಗಾಗಿ ನೀನು ದೇವತೆಗಳ, ಮೂಕಪ್ರಾಣಿಗಳ ದೇಹವನ್ನೂ ಧರಿಸಿಕೊಂಡಿದ್ದೀಯೆ. ಆದರೆ ಆಯಾ ದೇಹಗುಣಗಳಿಂದ ನೀನು ಎಂದೂ ಲಿಪ್ತನಾಗುವುದಿಲ್ಲ. ಎಲ್ಲರನ್ನು ಮೋಹಗೊಳಿಸುವ ಮಾಯೆಯೂ ನಿನಗೆ ಹೆದರುತ್ತಿರುವಳು- ಎಂದು ಹೇಳಿ ಸುಮ್ಮನಾದರು. 

ಅಯೋಧ್ಯಾಕಾಂಡಕ್ಕೆ ಮಂಗಳ


(ಸಶೇಷ...)

- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top