ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ರಾಮರಥವು ತಮಸಾನದಿಯ ತೀರಕ್ಕೆ ಬಂತು. ರಥದಿಂದಿಳಿದು ತಿಳಿನೀರನ್ನು ಕುಡಿದು ಮೂವರೂ ವಿಶ್ರಮಿಸಿದರು. ಪ್ರಜೆಗಳು ಓಡೋಡಿ ಬಂದುದರಿಂದ ಬಳಲಿದ್ದರು. ದಣಿದ-ಬಳಲಿದ ಅವರು ಬಲುಬೇಗನೆ ನಿದ್ದೆಗೆ ಜಾರಿದರು. ತನಗಾಗಿ ಅವರು ಕಷ್ಟಪಡುವುದನ್ನು ನೋಡಲು ಇಚ್ಛಿಸದ ರಾಮನು ಸುಮಂತ್ರನಲ್ಲಿ ರಥವನ್ನೇರಿ ಹೊರಡಲು ಹೇಳಿದ. ಅವರು ವೇಗವಾಗಿ ಮುಂದಕ್ಕೆ ಸಾಗಿದರು. ಅಯೋಧ್ಯೆಗೆ ಹೋಗುವಂತೆ ಮಾಡಿ ಕಾಡಿನತ್ತ ಹೋದರು. ಬೆಳಗಾದಾಗ ಪ್ರಜೆಗಳು ಎಚ್ಚೆತ್ತರು. ರಾಮನಿಲ್ಲ, ರಥವೂ ಇಲ್ಲ. ಹತಾಶರಾಗಿ ಅಯೋಧ್ಯೆಗೆ ಮರಳಿ ರಾಮಧ್ಯಾನದಲ್ಲಿ ನಿರತರಾದರು.
ಇತ್ತ ರಾಮರಥವು ಶೃಂಗವೇರಪುರವೆಂಬ ಪಟ್ಟಣದ ಸಮೀಪಕ್ಕೆ ಬಂತು. ಗಂಗೆಯ ದಡದಲ್ಲಿ ಆ ಪಟ್ಟಣವಿತ್ತು. ಪರಮಪಾವನಿಯಾದ ಗಂಗೆಗೆ ನಮಸ್ಕರಿಸಿದರು. ಅಂದಿನ ಇರುಳನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿದರು. ಅಲ್ಲಿಯ ರಾಜ ಗುಹ. ಅವನು ನಿಷಾದಾಧಿಪತಿ. ರಾಮಾಗಮನವನ್ನು ತಿಳಿದು ತನ್ನ ಪರಿವಾರದೊಂದಿಗೆ ರಾಮನನ್ನು ಸ್ವಾಗತಿಸಲು ಬಂದನು. ರಾಮನಿಗೆ ಉದ್ದಂಡ ನಮಸ್ಕಾರ ಮಾಡಲು ಹೋದಾಗ ರಾಮನು ಅವನನ್ನು ಬಾಚಿ ತಬ್ಬಿಹಿಡಿದು ಗೆಳೆತನವನ್ನು ನೆನಪಿಸಿದನು. ತಾನು ಬೇಡನಾದರೂ ತನ್ನನ್ನು ಸಮಾನನಾಗಿ ನೋಡಿದ ರಾಮನಿಗೆ- ನಾನಿಂದು ಧನ್ಯನಾದೆ- ಎಂದು ಹೇಳಿದ. ನನ್ನ ರಾಜ್ಯವೆಲ್ಲವೂ ನಿನ್ನದು. ನೀನಿಲ್ಲಿಯೇ ಇದ್ದು ನಮ್ಮನ್ನು ಆಳುತ್ತಾ ಸುಖವಾಗಿರು- ಎಂದು ಗುಹನು ರಾಮನಿಗೆ ಹೇಳಿದ. ರಾಮನು ಅದಕ್ಕೊಪ್ಪದೆ- ನಾನು ಹದಿನಾಲ್ಕು ವರ್ಷಗಳ ಕಾಲ ಊರನ್ನಾಗಲೀ ಮನೆಯನ್ನಾಗಲೀ ಪ್ರವೇಶಿಸುವುದಿಲ್ಲ. ಕಂದ ಮೂಲ ಫಲಗಳೇ ಮುಂತಾದ ಯಾವುದೇ ವಸ್ತುಗಳನ್ನು ಬೇರೆಯವರು ಕೊಟ್ಟರೆ ತಿನ್ನುವುದಿಲ್ಲ. ನಿನ್ನ ರಾಜ್ಯವು ಸದಾ ನನ್ನದೇ ಆಗಿರುತ್ತದೆ. ನೀನು ನನ್ನ ಪ್ರಿಯ ಸ್ನೇಹಿತನು ಎಂದನು. ಅವನಿಂದಲೇ ಆಲದ ಮರದ ಹಾಲನ್ನು ತರಿಸಿ ಜಟಾಕಿರೀಟಗಳನ್ನು ಕಟ್ಟಿಕೊಂಡನು. ಲಕ್ಷ್ಮಣನು ಹಾಸಿಕೊಟ್ಟ ಚಿಗುರೆಲೆ- ಹುಲ್ಲು ಹಾಸಿಗೆಯ ಮೇಲೆ ಸೀತೆಯ ಸಹಿತ ಸುಖನಿದ್ರೆಗೆ ಜಾರಿದನು.
ರಾಮನ ದುರವಸ್ಥೆಯನ್ನು ಕಂಡು ಗುಹನು ಮಮ್ಮಲ ಮರುಗಿದನು. ಲಕ್ಷ್ಮಣನಲ್ಲಿ ಬಹುದುಃಖಿತನಾಗಿ ಹೇಳಿದ. ಆಗ ಲಕ್ಷ್ಮಣನು ತನಗೆ ಅಣ್ಣನು ಹೇಳಿದ ಸಾಂತ್ವನದ ಮಾತುಗಳನ್ನೇ ಗುಹನಿಗೆ ಹೇಳಿ ವಿಧಿಯ ಇಚ್ಛೆಯ ಎದುರು ನಾವು ಏನೂ ಅಲ್ಲ ಎಂದನು. ಸುಖ-ದುಃಖಗಳ ಬಗೆಗೆ ಹೇಳುತ್ತಾ-
ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ।
ದ್ವಯಮೇತದ್ಧಿ ಜಂತೂನಾಮಲಂಘ್ಯಂ ದಿನರಾತ್ರಿವತ್ ॥
ಮನುಷ್ಯನು ಯಾವಾಗಲೂ ಸುಖ-ದುಃಖಗಳಿಂದ ಸುತ್ತುವರೆಯಲ್ಪಟ್ಟಿರುವನು. ಈ ಶರೀರವು ಸುಖ-ದುಃಖಗಳಿಗಾಗಿಯೇ ಇದೆ.ಇದು ಪಾಪ-ಪುಣ್ಯಗಳ ನಿಮಿತ್ತವಾಗಿಯೇ ಹುಟ್ಟಿದೆ. ಪ್ರಾಣಿಗಳಿಗೆ ಸುಖ-ದುಃಖಗಳು ಹಗಲಿರುಳುಗಳಂತೆ ಒಂದಾದ ಮೇಲೊಂದು ಬರುತ್ತಿರುತ್ತವೆ. ಇದನ್ನು ಜೀವಿಗಳು ಉಲ್ಲಂಘಿಸಲಾರವು- ಎಂದು ವಿಧಿಯ ಇಚ್ಛೆಯ ಮಹತ್ತ್ವವನ್ನು ಗುಹನಿಗೆ ಹೇಳಿದ. ಇರುಳು ಕಳೆದು ಬೆಳಗಾಯಿತು. ಗುಹನು ಸಿದ್ಧಪಡಿಸಿದ ನಾವೆಯಲ್ಲಿ ಗಂಗೆಯನ್ನು ದಾಟುವಾಗ ಸೀತೆಯು ಗಂಗೆಯಲ್ಲಿ- ಗಂಗಾದೇವಿಯೇ! ನಿನಗೆ ನಮಸ್ಕಾರ. ವನವಾಸದಿಂದ ರಾಮ-ಲಕ್ಷ್ಮಣರೊಂದಿಗೆ ಸುಖವಾಗಿದ್ದು ಮರಳಿ ಬರುವಾಗ ನಿನ್ನನ್ನು ಪೂಜಿಸುತ್ತೇನೆ- ಎಂದು ಪ್ರಾರ್ಥಿಸಿದಳು. ಗುಹನನ್ನು ಆತ್ಮೀಯವಾಗಿ ಬೀಳ್ಕೊಟ್ಟ ರಾಮನು ಸೀತೆ ಲಕ್ಷ್ಮಣರೊಂದಿಗೆ ಭರದ್ವಾಜರ ಆಶ್ರಮಕ್ಕೆ ತೆರಳಿದನು.
ರಾಮಾಗಮನದಿಂದ ಭರದ್ವಾಜರಿಗೆ ಮಹಾವಿಷ್ಣುವಿನ ಆಗಮನದಿಂದ ಆಗುವಷ್ಟು ಸಂತೋಷವಾಯಿತು. ಅರ್ಘ್ಯ-ಪಾದ್ಯಗಳನ್ನಿತ್ತು ಅವರನ್ನು ಸತ್ಕರಿಸಿದರು. ರಾಮನು ಸೀತೆ ಲಕ್ಷ್ಮಣರೊಂದಿಗೆ ಭರದ್ವಾಜರಿಗೆ ನಮಸ್ಕರಿಸಿದನು. ಭರದ್ವಾಜರು ತ್ರಿಕಾಲಜ್ಞಾನಿಗಳು. ಮಹಾವಿಷ್ಣುವಿನ ತಪಸ್ಸಿನಿಂದಲೇ ಆ ಶಕ್ತಿಯನ್ನು ಪಡೆದೆನೆಂಬ ಧನ್ಯತಾ ಭಾವದೊಂದಿಗೆ ರಾಮನನ್ನು ಉಪಚರಿಸಿದರು. ರಾಮಾವತಾರದ ಪೂರ್ವಾಪರವನ್ನು ರಾಮನಿಗೆ ತಿಳಿಸಿದರು. ರಾಮನು ನಸುನಗುತ್ತಾ ಅವನ್ನು ಕೇಳಿ ಅಂದಿರುಳು ಅವರ ಆಶ್ರಮದಲ್ಲಿಯೇ ಸೀತೆ ಲಕ್ಷ್ಮಣರೊಂದಿಗೆ ಕಳೆದನು. ಮರುದಿನ ಬೆಳಗ್ಗೆ ನಿತ್ಯಾಹ್ನಿಕಗಳನ್ನು ಪೂರೈಸಿ ಭರದ್ವಾಜರ ಅನುಮತಿ ಪಡೆದು ಮೂವರೂ ವಾಲ್ಮೀಕಿ ಮುನಿಗಳ ಆಶ್ರಮವಿರುವ ಚಿತ್ರಕೂಟಕ್ಕೆ ತೆರಳಿದರು.
ಋಷಿಮುನಿಗಳಿಂದ, ಅನೇಕ ಜಾತಿಯ ಪ್ರಾಣಿ-ಪಕ್ಷಿಗಳಿಂದ, ಸರ್ವಋತು ಹೂ-ಹಣ್ಣುಗಳಿರುವ ಗಿಡ-ಮರಗಳಿಂದ ತುಂಬಿ ಕಂಗೊಳಿಸುತ್ತಿರುವ ವಾಲ್ಮೀಕಿ ಆಶ್ರಮಕ್ಕೆ ರಾಮ-ಸೀತೆ- ಲಕ್ಷ್ಮಣರು ಪಾದಾರ್ಪಣೆ ಮಾಡಿದರು. ಮುನಿಗೆ ತಲೆಬಾಗಿ ವಂದಿಸಿದರು. ವನವಾಸಿ ಶ್ರೀರಾಮನನ್ನು ಕಂಡು ಮೇಲೆದ್ದ ವಾಲ್ಮೀಕಿ ಅವನನ್ನು ಆನಂದಾಶ್ರುಗಳನ್ನು ಸುರಿಸುತ್ತಾ ಆಲಂಗಿಸಿದರು, ಬಳಿಕ ಆಶ್ರಮೋಚಿತ ಸತ್ಕಾರವನ್ನು ಮೂವರಿಗೂ ನೀಡಿದರು. ರಾಮನು ಕೈಜೋಡಿಸಿ- ನಾನು ತಂದೆಯ ಆಣತಿಯಂತೆ ದಂಡಕಾರಣ್ಯಕ್ಕೆ ಬಂದಿದ್ದೇನೆ. ಇದು ತಾವು ತಿಳಿದ ಸಂಗತಿಯೇ ಆಗಿದೆ. ನಾವು ಇಲ್ಲಿ ಸ್ವಲ್ಪ ಕಾಲ ತಂಗಲು ಉಚಿತವಾದ ತಾವನ್ನು (ಸ್ಥಳ) ತಾವು ತೋರಿಸಿ ಕೊಡಿ- ಎಂದು ಪ್ರಾರ್ಥಿಸಿದನು. ಆಗ ವಾಲ್ಮೀಕಿ ಮುನಿಗಳು- ರಾಮಾ ಎಲ್ಲಾ ಲೋಕಗಳಿಗೆ, ಜೀವಿಗಳಿಗೆ ನೀನೇ ಆಶ್ರಯಸ್ಥಾನವಾಗಿರುವಾಗ ನಿನಗೆ ನಾನು ಯಾವ ಸ್ಥಳವನ್ನು ತೋರಿಸಲಿ? ಅಹಿಂಸಾತ್ಮಕ ಸಹೃದಯಿಗಳ ಹೃದಯ,
ಧರ್ಮಾಧರ್ಮಗಳನ್ನು ಕೈಬಿಟ್ಟಿರುವವರ ಹೃದಯ, ನಿನ್ನ ನಾಮಮಂತ್ರವನ್ನು ಜಪಿಸುವವನ ಹೃದಯ, ರಾಗ-ದ್ವೇಷಾತೀತರ ಹೃದಯ, ಸಮಸ್ತ ಕರ್ಮಗಳನ್ನೂ ರಾಮಾರ್ಪಣೆ ಮಾಡುವವರ ಹೃದಯ...ಗಳೇ ನಿನ್ನ ವಾಸಸ್ಥಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಮುನಿಗಳು ತನ್ನ ವೃತ್ತಾಂತವನ್ನೂ ಹೇಳಿದರು. (ಇದು ಅಧ್ಯಾತ್ಮರಾಮಾಯಣದಲ್ಲಿ ಮಾತ್ರ ಕಂಡುಬರುತ್ತದೆ.) "ಹಿಂದೆ ವಾಲ್ಮೀಕಿಯಾಗುವ ಮೊದಲು ನಾನು ಬ್ರಾಹ್ಮಣನಾಗಿ ಜನಿಸಿದರೂ ಕಿರಾತರ ಗುಂಪಿನಲ್ಲಿದ್ದೆ. ಅವರ ಆಚಾರ-ವಿಚಾರಗಳಲ್ಲಿ ಮುಳುಗಿ ಹೋಗಿದ್ದೆ. ಕಿರಾತಸ್ತ್ರೀಯನ್ನು ಮದುವೆಯಾಗಿ ಅನೇಕ ಮಕ್ಕಳನ್ನು ಪಡೆದೆ. ಅವರ ಹೊಟ್ಟೆಪಾಡಿಗಾಗಿ ಕಳ್ಳ-ದರೋಡೆಕೋರನಾದೆ. ಒಮ್ಮೆ ಸಪ್ತರ್ಷಿಗಳು ಕಾಡದಾರಿಯಲ್ಲಿ ಹೋಗುತ್ತಿದ್ದಾಗ ಅವರನ್ನು ಹಿಂಬಾಲಿಸಿ ದೋಚಲು ಯತ್ನಿಸಿದೆ. ಆಗ ಅವರು- ಹೇ, ದ್ವಿಜಾಧಮ, ನಮ್ಮನ್ನೇಕೆ ತಡೆಗಟ್ಟಿದೆ?- ಎಂದು ಕೇಳಿದರು. 'ನಾನು ನನ್ನ ಕುಟುಂಬದ ಹೊಟ್ಟೆಹೊರೆಯಲು ಹೀಗೆ ಮಾಡುತ್ತಿದ್ದೇನೆ' ಎಂದೆ. ಆಗ ಅವರು 'ನೀನು ನಿನ್ನ ಮನೆಗೆ ಹೋಗಿ ಪ್ರತಿಯೊಬ್ಬರಲ್ಲೂ ಪ್ರತ್ಯೇಕವಾಗಿ- ನಾನು ಪಾಪಕರ್ಮಗಳನ್ನು ಮಾಡಿ ನಿಮ್ಮ ಹೊಟ್ಟೆ ತುಂಬಿಸುತ್ತಿದ್ದೇನೆ. ಇದರಲ್ಲಿ ನೀವೂ ಪಾಲುದಾರರಾಗುತ್ತೀರೋ ಎಂದು ಕೇಳಿ ಬಾ- ಎಂದು ನಿರ್ಭೀತಿಯಿಂದ ನನ್ನಲ್ಲಿ ಹೇಳಿದರು.
ನಾನು ಕುಟುಂಬದವರಲ್ಲಿ ಅವರು ಹೇಳಿದ್ದನ್ನು ಕೇಳಿದೆ. ಅವರೆಲ್ಲರೂ- ನಿಮ್ಮ ಪಾಪಕ್ಕೆಲ್ಲ ನೀವೇ ಹೊಣೆಗಾರರು, ನಾವಲ್ಲ ಎಂದರು. ಆ ಕ್ಷಣದಲ್ಲಿ ನನಗೆ ವೈರಾಗ್ಯ ಹುಟ್ಟಿ ಮರಳಿ ಋಷಿಗಳ ಬಳಿಗೆ ಬಂದೆ. ಅವರಲ್ಲಿ- ನರಕಕ್ಕೆ ಬೀಳುವ ನನ್ನನ್ನು ಕಾಪಾಡಿ ಉದ್ಧರಿಸಿ- ಎಂದು ಬೇಡಿದೆ. ಅವರು ಪರಸ್ಪರ ಮಾತನಾಡಿ ಶರಣಾಗತನಾದ ಈ ಪಾಪಿಬ್ರಾಹ್ಮಣನನ್ನು ಉದ್ಧರಿಸಿ ಮೋಕ್ಷಮಾರ್ಗವನ್ನು ಕಾಣಿಸಬೇಕೆಂದು ಬಗೆದು ನನಗೆ 'ರಾಮ' ಪದವನ್ನು ತಿರುಗಿಸಿ 'ಮರಾ' ಎಂದು ಜಪಿಸುತ್ತಿರಲು ಹೇಳಿ ಹೋದರು. ಆ ಕ್ಷಣದಿಂದಲೇ ನಿನ್ನ ಎರಡು ಅಕ್ಷರಗಳ ಮಂತ್ರಜಪವನ್ನು ಮಾಡತೊಡಗಿದೆ. ಅವೆಷ್ಟೋ ವರ್ಷಗಳು ಕಳೆದವು. ನನ್ನ ಸುತ್ತ ಹುತ್ತವು ಬೆಳೆಯಿತು. ಮತ್ತೆ ಸಪ್ತರ್ಷಿಗಳು ಆ ದಾರಿಯಲ್ಲಿ ಬಂದರು. ನನ್ನನ್ನು 'ಹೊರಗೆ ಬಾ' ಎಂದು ಕರೆದರು. ನಾನು ಹುತ್ತದಿಂದ ಹೊರಬಂದು ಅವರಿಗೆ ನಮಸ್ಕರಿಸಿದೆ. ಹೊಸಜನ್ಮ ಪಡೆದ ಅನುಭವವಾಯಿತು. ಅವರು- ಮುನಿಶ್ರೇಷ್ಠನೇ! ಹುತ್ತದಿಂದ ಹೊರಬರುವುದರ ಮೂಲಕ ನಿನಗೆ ಎರಡನೆಯ ಜನ್ಮ ಬಂದಿರುವುದರಿಂದ ನೀನು "ವಾಲ್ಮೀಕಿ" ಎಂದು ಪ್ರಸಿದ್ಧನಾಗು ಎಂದು ಹೊರಟುಹೋದರು. ಹೇ ರಾಮ! ಇದು ನಿನ್ನ ನಾಮಸ್ಮರಣೆಯ ಫಲ. ನಿನಗೆ ವಾಸಯೋಗ್ಯ ಸ್ಥಳವನ್ನು ತೋರಿಸುತ್ತೇನೆ ಎಂದು ವಾಲ್ಮೀಕಿ ಹೇಳಿದರು.
ರಾಮನನ್ನು ಕರೆದುಕೊಂಡು ಹೋಗಿ, ವಾಸಯೋಗ್ಯ ಸ್ಥಳವನ್ನು ತೋರಿಸಿ, ತಾನೂ ತನ್ನ ಶಿಷ್ಯರೂ ಸೇರಿ ಎರಡು ಪರ್ಣಕುಟಿಗಳನ್ನು ನಿರ್ಮಿಸಿಕೊಟ್ಟರು. ರಾಮನ ಚಿತ್ರಕೂಟವಾಸವು ಆರಂಭವಾಯಿತು.
(ಸಶೇಷ...)
- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







