ಅಧ್ಯಾತ್ಮ ರಾಮಾಯಣ-5: ಮಾತಿನ ಉರುಳಿಗೆ ಕೊರಳೊಡ್ಡಿದ ದಶರಥ

Upayuktha
2 minute read
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ


ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಹರೇ ರಾಮ  ಶ್ರೀಗುರುಭ್ಯೋ ನಮಃ

"ಧೀರನಾಗಿರಲಿ, ಬಹಳ ದಯಾಳುವಾಗಿರಲಿ, ಸದ್ಗುಣಿ-ಆಚಾರವಂತನಾಗಿರಲಿ, ನೀತಿ-ಶಾಸ್ತ್ರಗಳನ್ನು ಆದೇಶಿಸುವವನೇ ಆಗಿರಲಿ, ವಿದ್ಯೆ-ವಿವೇಕಗಳುಳ್ಳವನೇ ಆಗಿರಲಿ, ಅಂತಹವನೂ ಪಾಪಬುದ್ಧಿಯುಳ್ಳ ದುಷ್ಟರ ಸಂಗಮಾಡಿದರೆ ನಿಧಾನವಾಗಿ ಅವನೂ ಸಂಗದೋಷದಿಂದಾಗಿ ಅವನಂತೆಯೇ ಆಗುವರು! ಕೈಕೆಯಿಯ ಕತೆಯೂ ಹಾಗೆಯೇ ಆಯಿತು. ರಾಜಪುತ್ರಿ-ರಾಜಪತ್ನಿ ಕೈಕೆಯಿಯು ಪುರುಷಾರ್ಥದಿಂದ ಪತನಳಾದಳು.


ಕೈಕೆಯಿಯ ನಿರೀಕ್ಷೆಯಂತೆ ದಶರಥನ ಆಗಮನವಾಯಿತು. ಅವಳು ಅಂತಃಪುರದ ಕೋಪಗೃಹದಲ್ಲಿರುವಳು ಎಂಬುದನ್ನು ಕೇಳಿ ಆತಂಕಗೊಂಡನು. ಕೋಪಗೃಹದಲ್ಲಿದ್ದ ಮುದ್ದಿನ ಮಡದಿಯನ್ನು ನೋಡಿ ಹೆದರಿದನು.ಕಾರಣಗಳನ್ನು ಕೇಳಿದ. ಕೈಕೆಯಿಯ ದುಃಖನಿವಾರಣೆಗೆ- ನಿನಗೆ ಅಹಿತವನ್ನುಂಟು ಮಾಡಿದವರು ಯಾರೇ ಆದರೂ ಶಿಕ್ಷಿಸುವೆ, ಕೊಲ್ಲಬಾರದವರಾದರೂ (ಸ್ತ್ರೀ,ಬ್ರಾಹ್ಮಣ...) ಕೊಲ್ಲುವೆ, ನನ್ನ ಪ್ರಾಣವನ್ನು ಒತ್ತೆಯಿಟ್ಟಾದರೂ ನೀನು ಹೇಳಿದ ಕೆಲಸ ಮಾಡುವೆ. ಹೆಚ್ಚೇಕೆ? ರಾಮನು ನನಗೆ ನನ್ನ ಪ್ರಾಣಕ್ಕಿಂತಲೂ ಹೆಚ್ಚಿನವನು. ಅವನ ಮೇಲೆ ಆಣೆಯಿಟ್ಟು ಹೇಳುವೆ. ನಿನ್ನ ಇಷ್ಟಾರ್ಥವನ್ನು ನಡೆಸಿಕೊಡುವೆ- ಎಂದು ಮಾತು ಕೊಟ್ಟನು. ಮಾತಿನ ಉರುಳಿಗೆ ಕೊರಳೊಡ್ಡಿದನು.


ಕೈಕೆಯಿಯು ದಶರಥನು ತನಗಿತ್ತ ಎರಡು ವರಗಳನ್ನು ನೆನಪಿಸುತ್ತಾ- ಒಂದನೆಯ ವರವಾಗಿ; ನನ್ನ ಪ್ರಿಯಪುತ್ರ ಭರತನಿಗೆ ಈಗ ಸಿದ್ಧತೆ ಮಾಡಿದ ಪದಾರ್ಥಗಳಿಂದ ಪಟ್ಟಾಭಿಷೇಕ ಮಾಡು, ಎರಡನೆಯದಾಗಿ; ರಾಮನು ಈಗಲೇ ದಂಡಕಾರಣ್ಯಕ್ಕೆ ಹೋಗಿ ಮುನಿವೇಷ ಧರಿಸಿ ಅಲ್ಲಿ ಹದಿನಾಲ್ಕು ವರ್ಷಗಳ ಕಾಲ ವನವಾಸ ಮಾಡಲಿ. ನೀನು ಸತ್ಯವ್ರತನೇ ಆಗಿದ್ದಲ್ಲಿ ಇವೆರಡನ್ನು ನಡೆಸಿಕೊಡು. ಇಲ್ಲವೆಂದಾದಲ್ಲಿ ನಿನ್ನೆದುರೇ ನಾನೀಗಲೇ ಸಾಯುತ್ತೇನೆ - ಎಂದಳು. ದಶರಥ ಆಘಾತಗೊಂಡ, ಎಚ್ಚರದಪ್ಪಿ ಕೆಳಕ್ಕೆ ಬಿದ್ದ. ಮರಳಿ ಎಚ್ಚರಗೊಂಡು ಇವೆರಡನ್ನು ಬಿಟ್ಟು ಬೇರೆ ಯಾವುದಾದರೂ ವರವನ್ನು ಕೇಳು ಎಂದ. ಕೈಕೆಯಿಯು ತನ್ನ ಹಠವನ್ನು ಬಿಡಲೊಲ್ಲಳು, ದಶರಥನನ್ನು ಹಿಡಿಯಲೊಲ್ಲಳು. ಚಿಂತಾಕ್ರಾಂತನಾದ ದೊರೆ ಧರೆಗುರುಳಿದ! ಇರುಳು ಕಳೆದು ಬೆಳಗಾಯಿತು.


ವಂದಿ-ಮಾಗಧರು ರಾಜನನ್ನು ಎಬ್ಬಿಸಲು ಬಂದಾಗ ಕೈಕೆಯಿಯು ಅವರನ್ನು ಹೊರಗೆ ಕಳಿಸಿದಳು. ಹೊತ್ತೇರುತ್ತಾ ಬಂದರೂ, ಪಟ್ಟಾಭಿಷೇಕದ ಮುಹೂರ್ತ ಹತ್ತಿರ ಬಂದರೂ ರಾಜನು ಏಳದಾದಾಗ ಮಂತ್ರಿ ಸುಮಂತ್ರನು ಬಂದನು. ವಿಷಯ ತಿಳಿದನು. ರಾಮನೇ  ಇದಕ್ಕೆ ಪರಿಹಾರವೆಂದು ಕೈಕೆಯಿಯು ಹೇಳಿದಾಗ ರಾಮನರಮನೆಯತ್ತ ವೇಗವಾಗಿ ಹೋಗಿ ಆತನನ್ನು ಮಾತ್ರ ಕರೆತಂದನು. ನೆಲದಲ್ಲಿ ದುಗುಡದಿಂದ ಮಲಗಿದ್ದ ತಂದೆಯನ್ನು ನೋಡಿ ರಾಮನು ಆತಂಕಗೊಂಡನು. ಕೈಕೆಯಿಯಲ್ಲಿ ವಿಷಯ ಕೇಳಿದನು. ಅವಳು ನಡೆದುದೆಲ್ಲವನ್ನೂ ಹೇಳಿ, ಅವನನ್ನು ಮಾತಿನ ಉರುಳಿಗೆ ಸಿಲುಕಿಸಿದಳು. ತಂದೆಯ ಹಿತಕ್ಕಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧನೆಂದು ಮಾತು ಕೊಟ್ಟನು. ಕೈಕೆಯಿಯು- ಈ ಸಮಸ್ಯೆಯ ಪರಿಹಾರ ನಿನ್ನಲ್ಲಿದೆ, ನಿನ್ನ ನಿರ್ಧಾರವೇ ಇದಕ್ಕಿರುವ ಪರಿಹಾರ -ಎಂದಳು. ಮರುಕ್ಷಣವೇ ರಾಮನು ಕೈಕೆಯಿಯ ಎರಡು ವರಗಳಲ್ಲಿ ಒಂದಾದ ತಾನು ದಂಡಕಾರಣ್ಯಕ್ಕೆ ಹೋಗಿ ಮುನಿಜನರ ಬದುಕನ್ನು ನಡೆಸಬೇಕಿರುವುದಕ್ಕೆ ಒಪ್ಪಿದನು. ದಶರಥನು ಬೇಡಬೇಡವೆಂದರೂ ಕೇಳದೆ, ತನ್ನ ನಿರ್ಧಾರಕ್ಕೆ ಬದ್ಧನಾದ ರಾಮನು ತಾಯಿಯ ಅನುಮತಿಗೆ, ಸೀತೆಯ ಒಪ್ಪಿಗೆಗೆ ಅವರತ್ತ ನಡೆದನು. ನೆರಳಿನಂತೆ ಅವನೊಡನಿದ್ದ ಲಕ್ಷ್ಮಣನೂ ಅವನ ನಡೆಗೆ ನೆರಳಾದನು.


ಕೌಸಲ್ಯೆಯು ಧ್ಯಾನನಿರತಳಾಗಿದ್ದಳು. ಅವಳೊಡನಿದ್ದ ಸುಮಿತ್ರೆಯು ಅವಳನ್ನು ಎಚ್ಚರಿಸಿ ರಾಮನ ಆಗಮನವನ್ನು ಹೇಳಿದಳು. ರಾಮನನ್ನು ಕರೆದು ಮಡಿಲಲ್ಲಿ ಕುಳ್ಳಿರಿಸಿ ಊಟ ಮಾಡೆಂದಳು. ಆಗ ರಾಮನು ತೀರಾ ಸರಳವಾಗಿ,ಹಗುರವಾಗಿ - ಅಮ್ಮಾ! ನನಗೆ ಈಗ ಊಟಮಾಡಲು ಸಮಯವಿಲ್ಲ. ಇಂದೇ ಬೇಗನೆ ದಂಡಕಾರಣ್ಯಕ್ಕೆ ಹೋಗುವ ಸಮಯ ಬಂದೊದಗಿದೆ. ಸತ್ಯಸಂಧನಾದ ನನ್ನ ತಂದೆಯವರು ಕೈಕೆಯಿಗೆ ಕೊಟ್ಟಿದ್ದ ವರಗಳ ಪ್ರಕಾರ ಭರತನಿಗೆ ರಾಜ್ಯವನ್ನು,ನನಗೆ ಉತ್ತಮವಾದ ವನರಾಜ್ಯವನ್ನು ಅನುಗ್ರಹಿಸಿರುತ್ತಾರೆ. ಅಲ್ಲಿ ನಾನು ಹದಿನಾಲ್ಕು ವರ್ಷಗಳ ಕಾಲ ಋಷಿವೇಷದಲ್ಲಿದ್ದು ಮತ್ತೆ ಬೇಗನೆ ಮರಳಿ ಬರುವೆನು. ನೀನೇನೂ ಚಿಂತಿಸಬೇಡ- ಎಂದನು. ಇದನ್ನು ಕೇಳಿದ ಕೌಸಲ್ಯೆಯು ದುಃಖಾತಿರೇಕದಿಂದ ಮೂರ್ಛೆಹೋದಳು. ಮರಳಿ ಎಚ್ಚರಗೊಂಡು ತನ್ನನ್ನೂ ಕರೆದೊಯ್ಯುವಂತೆ ಒತ್ತಾಯಿಸಿದಳು. ಮಗನಾದ ನೀನಿಲ್ಲದೆ ಬಾಳಲಾರೆ ಎಂದು ಮನಕರಗುವಂತೆ ಅತ್ತಳು. ತಂದೆಯ ಆಣತಿಗಿಂತ ತಾಯಿಯ ಮಾತು ಹಿರಿದು. ನಾನೀಗ ನಿನ್ನನ್ನು ತಡೆಯುತ್ತೇನೆ. ನೀನಿಲ್ಲೇ ಇರು. ರಾಜ್ಯವನ್ನು ಭರತನೇ ಆಳಲಿ ಎಂದು ಗೋಗರೆದಳು. 


ಕೌಸಲ್ಯೆಯ ಮಾತುಗಳು ಲಕ್ಷ್ಮಣನನ್ನೂ ಕೆರಳುವಂತೆ ಮಾಡಿತು. ಅವನು- ನೀನು ಪಟ್ಟಾಭಿಷಿಕ್ತನಾಗುವುದನ್ನು ತಡೆಯುವ ತಂದೆಯೂ ಸೇರಿದಂತೆ ಯಾರೇ ಇರಲಿ ಅವರನ್ನು ಕಟ್ಟಿಹಾಕಿ  ಕೊಂದುಬಿಡುತ್ತೇನೆ- ಎಂದು ಅತಿಯಾದ ಕೋಪದಿಂದ ಹೇಳಿದ. ಆಗ ರಾಮನು ಐಹಿಕ ಸುಖಭೋಗಗಳ-ಸಂಬಂಧಗಳ-ಆಯುಸ್ಸಿನ ಅನಿತ್ಯತೆಗಳನ್ನು ಲಕ್ಷ್ಮಣನಿಗೆ ಹೇಳಿದ. ಕ್ರೋಧದ ದುಃಖಾಂತವನ್ನೂ, ಶಾಂತಿಯ ಸುಖಾಂತ್ಯವನ್ನೂ ಅವನಿಗೆ ಮನಗಾಣಿಸಿದ. ಇವೇ ಮಾತುಗಳನ್ನು ತಾಯಿಗೂ ಮನದಟ್ಟಾಗುವಂತೆ ಹೇಳಿ ತಾಯಿಯ ಒಪ್ಪಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾದನು. ಕೌಸಲ್ಯೆಯು ಅವನನ್ನು ಮಡಿಲಲ್ಲಿರಿಸಿ- ನಿನ್ನನ್ನು ಎಲ್ಲ ದೇವತೆಗಳು, ಗಂಧರ್ವರು, ಬ್ರಹ್ಮ-ವಿಷ್ಣು-ಮಹೇಶ್ವರರು; ನೀನು ನಡೆಯುತ್ತಿರುವಾಗ, ನಿದ್ರಿಸುತ್ತಿರುವಾಗ, ನಿಂತಿರುವಾಗ, ಮಲಗಿರುವಾಗ ಹೀಗೆ ಎಲ್ಲ ಕಾಲಗಳಲ್ಲೂ ಕಾಪಾಡಲಿ- ಎಂದು ಹೇಳುತ್ತಾ ಮತ್ತೆಮತ್ತೆ ಅಪ್ಪಿ ಮುದ್ದಿಡುತ್ತಾ ಹರಸಿ ಬೀಳ್ಕೊಟ್ಟಳು.


ಲಕ್ಷ್ಮಣ ಅಣ್ಣನನ್ನು ಬಿಡಲೊಲ್ಲನು. ಅಣ್ಣನ ಶಾಂತಿವಚನಗಳಿಂದ ಆನಂದಿತನಾದ ಅವನು ಆನಂದಬಾಷ್ಪಗಳಿಂದ ತನ್ನನ್ನೂ ನಿನ್ನೊಂದಿಗೆ ವನವಾಸಕ್ಕೆ ಕರೆದೊಯ್ಯು, ಇಲ್ಲವಾದರೆ ಬದುಕಿರಲಾರೆ ಎಂದಾಗ ರಾಮನು ಅದಕ್ಕೊಪ್ಪಿ ನೀನೂ ಕೂಡಲೇ ವನವಾಸಕ್ಕೆ ಸಿದ್ಧನಾಗು ಎಂದನು.


(ಸಶೇಷ...)

- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top