ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಹೆದರಿ ಕಂಗಾಲಾಗಿದ್ದ ಶೂರ್ಪನಖಿಯ ದುರವಸ್ಥೆಯನ್ನು ನೋಡಿ ರಾವಣನು- ನಿನಗೆ ಈ ದುರವಸ್ಥೆಯನ್ನು ತಂದವರಾರು? ಹೇಳು. ಅವರು ಯಾರೇ ಆಗಲಿ ಅವರನ್ನು ಕ್ಷಣಮಾತ್ರದಲ್ಲಿ ಬೂದಿಮಾಡುತ್ತೇನೆ- ಎಂದು ಅಬ್ಬರಿಸಿದನು. ಆಗ ಶೂರ್ಪನಖಿಯು ಅಣ್ಣ ರಾವಣನ ಕಾಮುಕತೆ, ಸ್ತ್ರೀಲೋಲುಪತೆ, ಪಾನಪ್ರಿಯತೆ, ಗೂಢಚಾರಿಕೆಯ ಬಗೆಗೆ ಇರುವ ಉದಾಸೀನತೆ ಮುಂತಾದ ದೌರ್ಬಲ್ಯಗಳನ್ನು ಬೊಟ್ಟುಮಾಡುತ್ತಾ ತಾನು ರಾಮನನ್ನು ಕಾಮಿಸಿ ಹೋಗಿ ಎಡವಟ್ಟು ಮಾಡಿದ್ದನ್ನು ಬಿಟ್ಟು ಉಳಿದ ಎಲ್ಲ ನಾಶ- ನಷ್ಟಗಳನ್ನು ಹೇಳಿದಳು. ಅದರೊಂದಿಗೆ ನಿನಗಾಗಿ ಸುಂದರಿ ಸೀತೆಯನ್ನು ತರಲು ಹೋಗಿದ್ದಾಗ ಹೀಗಾಯಿತು ಎಂಬ ಸುಳ್ಳಿನ ಒಗ್ಗರಣೆಯನ್ನೂ ಹಾಕಿದಳು. ರಾಮನ ಸಾಮರ್ಥ್ಯವನ್ನು ಹೇಳುತ್ತಾ- ರಾಮನನ್ನು ಎದುರಿಸಿ, ನೀನು ಅವನನ್ನು ಗೆದ್ದು ಸೀತೆಯನ್ನು ತರಲಾರೆ. ಮಾಯಾಜಾಲದಿಂದ ರಾಮನನ್ನು ವಂಚಿಸಿ ಆಕೆಯನ್ನು ಪಡೆಯಬೇಕಷ್ಟೆ- ಎಂಬ ಸಲಹೆಯನ್ನೂ ರಾವಣನಿಗೆ ಕೊಟ್ಟಳು. ಕಾಮುಕನಿಗೆ ಕಾಮುಕಿಯ ಸಲಹೆ. ಹದಿನಾಲ್ಕು ಸಾವಿರ ಮಂದಿಯ ಸಾವಿಗೆ ಕಾರಣಳಾದವಳಿಂದ ಸರ್ವನಾಶಕ್ಕೆ ಕಾರಣವಾಗಲಿರುವ ಸಲಹೆ! ಅದಕ್ಕೊಪ್ಪಿದ ರಾವಣನು ಚಿಂತನೆಗೆ ತೊಡಗಿದ. ಅತಿಶೂರರಾದ ಖರನೊಂದಿಗೆ ಹದಿನಾಲ್ಕು ಸಾವಿರ ರಕ್ಕಸರನ್ನು ಏಕಾಕಿಯಾಗಿ ರಾಮನು ಸಂಹಾರ ಮಾಡಿದನೆಂದಾದರೆ ಅವನು ಕೇವಲ ಮನುಷ್ಯನಲ್ಲ! ಬ್ರಹ್ಮನ ಪ್ರಾರ್ಥನೆಯ ಮೇರೆಗೆ ಪರಮಾತ್ಮನು ನನ್ನ ಸಲುವಾಗಿಯೇ ಹುಟ್ಟಿದವನೆಂದಾದರೆ ಒಂದೋ ಅವನನ್ನೆದುರಿಸಿ ವೈಕುಂಠವನ್ನು ಸೇರುವೆ, ಇಲ್ಲವಾದರೆ ಅವನನ್ನು ಇಲ್ಲವಾಗಿಸಿ ಸೀತೆಯೊಂದಿಗೆ ಬಂದು ರಾಕ್ಷಸರಾಜ್ಯವನ್ನಾಳುವೆ. ರಾವಣನು ಮತ್ತೂ ಹೆಚ್ಚಿನ ಚಿಂತನೆಯನ್ನು ಮಾಡಿ- ಇವನು ನನ್ನ ಸಲುವಾಗಿ ಹುಟ್ಟಿದ ಶ್ರೀಹರಿ. ಭಗವಂತನು ಪ್ರೇಮಭಕ್ತಿಗೆ ಬೇಗ ಒಲಿಯುವುದಿಲ್ಲ. ಆದ್ದರಿಂದ ಅವನ ಶೀಘ್ರ ಒಲಿಯುವಿಕೆಗಾಗಿ ದ್ವೇಷದಿಂದಲೇ ಅವನ ಬಳಿಸಾರುವೆನೆಂದು- ಸೀತಾಪಹರಣದ ಯೋಜನೆಗೆ ಕೈಹಾಕಿ ಮಾರೀಚನ ನೆರವನ್ನು ಪಡೆಯಲು ಅವನ ಬಳಿಗೆ ಹೋದನು.
ಬಾಲರಾಮನಿಂದ ಪೆಟ್ಟು ತಿಂದಿದ್ದ ಮಾರೀಚನಿಗೆ ಬುದ್ಧಿ ಬಂದಿತ್ತು. ಅವನು ಹಿಂಸಾಚರಣೆಯನ್ನು ತೊರೆದು ತಪಸ್ಸಿಗೆ ತೊಡಗಿದ್ದನು. ರಾವಣನು ಅವನಲ್ಲಿಗೆ ಬಂದನು. ಅವನ ಉಪಚಾರವನ್ನು ಸ್ವೀಕರಿಸಿದ ಬಳಿಕ ಸೀತಾಪಹರಣದ ವಿಷಯವನ್ನು ಪ್ರಸ್ತಾಪಿಸಿ- ಮಾವ, ನೀನು ಮಾಯಾಮೃಗವಾಗಿ ಅವರೆದುರು ಸುಳಿದು ರಾಮನನ್ನು ಸೀತೆಯಿಂದ ಬಹುದೂರ ಕೊಂಡೊಯ್ಯಬೇಕು. ಆಗ ನಾನು ಸೀತಾಪಹರಣವನ್ನು ಮಾಡುವೆ- ಎಂದು ಮಾರೀಚನಲ್ಲಿ ಹೇಳಿದನು. ಮಾರೀಚನು ಬಾಲರಾಮನ ಶಕ್ತಿ- ಸಾಮರ್ಥ್ಯಗಳ ಬಗೆಗೆ ತನಗಾದ ಅನುಭವವನ್ನು ಹೇಳಿ ಸೀತಾಪಹರಣದ ದುಸ್ಸಾಹಸ ಬೇಡವೆಂದು ರಾವಣನಿಗೆ ಹೇಳಿದ. ಮಾವ ಮಾರೀಚನ ಹಿತೋಪದೇಶ ಅಳಿಯ ರಾವಣನಿಗೆ ಕಹಿಯಾಯಿತು. ಅಳಿಯ ಹೋಗಿ ರಾಜನಾದ! ಈ ಕಾರ್ಯದಲ್ಲಿ ನೀನು ನನಗೆ ಸಹಕರಿಸದಿದ್ದರೆ ಈಗಲೇ ನಿನ್ನನ್ನು ಕೊಲ್ಲುವೆ- ಎಂದು ಬೆದರಿಸಿದ. ಮಾರೀಚನು ಸಾವಿಗೆ ಹೆದರಲಿಲ್ಲ. ಯಾಕೆಂದರೆ ರಾವಣನಿಗೆ ಸಹಕರಿಸಿದರೆ ರಾಮನಿಂದ ಸಾವು, ಸಹಕರಿಸದಿದ್ದರೆ ರಾವಣನಿಂದ ಸಾವು! ಅಂತೂ ತನ್ನ ಸಾವು ನಿಶ್ಚಿತ. ರಾವಣನಿಂದ ಸತ್ತು ನರಕಕ್ಕೆ ಹೋಗುವ ಬದಲು ರಾಮನಿಂದ ಸತ್ತು ವೈಕುಂಠವನ್ನು ಸೇರುವುದೇ ಒಳ್ಳೆಯದೆಂದು ಬಗೆದು ರಾವಣನ ಮಾತಿಗೆ ಒಪ್ಪಿದ.
ಇತ್ತ ರಾಮನಿಗೆ ರಾವಣನ ಮಾಯಾಜಾಲದ ಸುಳಿವು ಸಿಕ್ಕಿತು. ಮಾಯೆಗೆ ಪ್ರತಿಯಾಗಿ ತಾನೂ ಒಂದು ಮಾಯೆಯನ್ನು ಸೃಷ್ಟಿಸಿದ. ಸೀತೆಯಲ್ಲಿ- ಎಲೈ ಜಾನಕಿ, ಇಷ್ಟರಲ್ಲಿ ರಾವಣನು ನಿನ್ನನ್ನು ಅಪಹರಿಸಲು ಸಂನ್ಯಾಸಿ ವೇಷದಲ್ಲಿ ಬರಲಿದ್ದಾನೆ.ನೀನು ನಿನ್ನಂತೆಯೇ ಇರುವ ನೆರಳಿನ ರೂಪವಾದ ಛಾಯಾಸೀತೆಯನ್ನು ಕುಟೀರದಲ್ಲಿರಿಸಿ, ನೀನು ಅಗ್ನಿದೇವನಲ್ಲಿ ಒಂದು ವರ್ಷಕಾಲ ಅಡಗಿಕೊಂಡಿರು. ಸೀತೆ! ರಾವಣನ ವಧೆಯಾದ ಮೇಲೆ ಹಿಂದಿನಂತೆಯೇ ಮತ್ತೆ ನೀನು ನನ್ನನ್ನು ಸೇರುವೆ.- ಎಂದನು. ಸೀತೆಯು ರಾಮನ ಆಣತಿಯನ್ನು ಪಾಲಿಸಿದಳು. ಮಾಯಾವಿಯು ಬರುವ ವೇಳೆ ಮಾಯವಾದ ನಿಜಸೀತೆ! ಕಂಡುಬಂದ ಮಾಯದ ಸೀತೆ!! ರಾವಣನು ಚಾಪೆಯಡಿ ನುಸುಳಿದರೆ, ರಾಮನು ರಂಗೋಲಿಯ ಅಡಿ!!
ಸುಂದರವಾದ, ಆಕರ್ಷಕ ರೂಪದ ಮಾಯಾಮೃಗವಾಗಿ ಪಂಚವಟಿಯ ರಾಮಾಶ್ರಮ- ಪರ್ಣಕುಟೀರದ ಸುತ್ತಮುತ್ತ ಸೀತೆಯ ಗಮನ ಸೆಳೆಯುವ ರೀತಿಯಲ್ಲಿ ಮಾರೀಚನು ಸುಳಿದಾಡಿದ, ನೆಗೆದಾಡಿದ! ಸೀತೆಯ ಗಮನ ಅಪೂರ್ವವಾದ, ಮುದ್ದಾದ ಜಿಂಕೆಯತ್ತ ಹರಿಯಿತು! ಮನಸೋತಿತು. ಹೇಗಾದರೂ ಅದನ್ನು ಪಡೆಯಲೇ ಬೇಕೆಂಬ ಆಸೆ ಹುಟ್ಟಿ ಬೆಳೆಯಿತು. ರಾಮ ರಾಮಾ ಎಂದು ಗಂಡನನ್ನು ಕರೆದಳು. ಚಿನ್ನದ ಜಿಂಕೆಯನ್ನು ತೋರಿಸಿದಳು. ಅದು ಬೇಕೆಂದಳು. ಬೇಕೇಬೇಕೆಂದಳು. ಒಂದೋ ಸಜೀವವಾಗಿ, ತಪ್ಪಿದರೆ ನಿರ್ಜೀವವಾಗಿ.
ರಾಮನು ಬಿಲ್ಲು-ಬಾಣಗಳೊಂದಿಗೆ ಜಿಂಕೆಯನ್ನು ಹಿಡಿಯಲು ಹೊರಟ. ತಮ್ಮ ಲಕ್ಷ್ಮಣನಲ್ಲಿ- ನಾನು ಹೋಗಿ ಬರುವ ತನಕ ಬಹಳ ಎಚ್ಚರಿಕೆಯಿಂದ ಸೀತೆಯನ್ನು ಕಾಯುತ್ತಿರು. ಮಾಯಾವಿ ರಾಕ್ಷಸರ ಕುರಿತು ವಿಶೇಷ ಎಚ್ಚರಿಕೆಯಲ್ಲಿರು- ಎಂದು ಹೇಳಿದ. ಆಗ ಲಕ್ಷ್ಮಣನು- ಅಣ್ಣ, ಇವನು ನಿಸ್ಸಂಶಯವಾಗಿಯೂ ಜಿಂಕೆವೇಷದ ಮಾಯಾವಿ ಮಾರೀಚ. ಇಂತಹ ಮೃಗ ಇರುವುದಾದರೂ ಹೇಗೆ ಸಾಧ್ಯ? - ಎಂದು ಹೇಳಿದ. ಆಗ ರಾಮನು- ಒಂದು ವೇಳೆ ಇವನು ಮಾರೀಚನಾಗಿದ್ದರೆ ವಧಿಸುತ್ತೇನೆ. ಇಲ್ಲವಾದರೆ ಕಟ್ಟಿ ತರುತ್ತೇನೆ. ಅಲ್ಲಿಯವರೆಗೆ ನೀನು ಸೀತೆಯನ್ನು ಎಚ್ಚರದಿಂದ ಕಾಪಾಡುತ್ತಿರು- ಎಂದು ಹೇಳಿ ಜಿಂಕೆಯನ್ನು ಬೆನ್ನಟ್ಟುತ್ತಾ ಹೋದನು.
ಮುಂದುವರಿಯುವುದು....
- ವಿಶ್ವ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ