ದೂರದೃಷ್ಟಿಯ ಇಚ್ಛಾಶಕ್ತಿಯುಳ್ಳ ಜನಪರ ನಾಯಕ-ಎಸ್.ಆರ್. ಪಾಟೀಲರು

Upayuktha
0

ಮಾಜಿ ಸಚಿವರಾದ ಎಸ್ ಆರ್ ಪಾಟೀಲರು ಅಧಿಕಾರದಿಂದ ಆಕಸ್ಮಾತ್‌ ನಿರ್ಗಮಿಸಿದರೂ ಜನಪರ ಕೆಲಸ ಮಾಡುವುದನ್ನು ಬಿಟ್ಟವರಲ್ಲ. ಜುಲೈ 31 ರಂದು ಅವರ 76ನೇ ಹುಟ್ಟು ಹಬ್ಬ. ಈ ಪ್ರಯುಕ್ತ ಮೆಡಿಕಲ್ ಕಾಲೇಜ ಉದ್ಘಾಟನೆ, ಉಚಿತ ಆರೋಗ್ಯ ತಪಾಸಣಾ ಶಿಬಿರದಂತ ವಿಧಾಯಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೆಡಿಕಲ್ ಕಾಲೇಜು ಸ್ಥಾಪನೆ ಸಾಮಾನ್ಯವಾದದ್ದಲ್ಲ, ಅದೊಂದು ಅಸಾಮಾನ್ಯ ಕೆಲಸ. ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ, ತನ್ನಿಮಿತ್ತ ಅವರ ಸಾಧನೆ ಸಿದ್ದಿಯನ್ನು ಕುರಿತು ಲೇಖನ.


ನಿಗರ್ವಿ, ಮುಗ್ಧ ಮನದ ಎಸ್ ಆರ್ ಪಾಟೀಲರ ಸ್ನೇಹಮಯ ಮನಸ್ಸು ಬಹಳ ಜನರಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯಕವಾಗಿದೆ. ಅವರನ್ನು ಮಾನವ ಪ್ರೇಮದಿಂದ ಪ್ರತ್ಯೇಕಿಸುವುದು ಯಾರಿಗೂ ಸಾಧ್ಯವಿಲ್ಲ. ಅವರ ಮಾತು ಮತ್ತು ಮನಸ್ಸಿನಲ್ಲಿ ಜನಸಮೂಹವನ್ನು ಗೆಲ್ಲುವ ಶಕ್ತಿಯಿದೆ. ಅವರಲ್ಲಿ ಸ್ವಂತದ ಆಸಕ್ತಿಗಿಂತ ಜನಪರ ಆಸಕ್ತಿಯೇ ಹೆಚ್ಚು. ಸಮಾಜಮುಖಿ ಕೆಲಸ ಮಾಡುವಲ್ಲಿ ಅವರು ಎತ್ತಿದ ಕೈ. ಹೀಗಾಗಿ ಅವರೊಬ್ಬ ಒಳ್ಳೆಯ ಮನುಷ್ಯರೆನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.


ಎಸ್ ಆರ್ ಪಾಟೀಲರ ನೈತಿಕ ಶಕ್ತಿ, ವಿಶಾಲ ಹೃದಯವಂತಿಕೆ, ಜನ ಸಾಮಾನ್ಯರ ಬಗ್ಗೆ ಅವರಿಗಿರುವ ಕಳಕಳಿ ಇವು ಅವರ  ಬದುಕಿನ ಭಾಗವಾಗಿ ಅವರ ಸಾಮರ್ಥ್ಯವನ್ನು ಗಟ್ಟಿಗೊಳಿಸಿವೆ. ಹೀಗಾಗಿ ಅವರು ಯಾವ ತೊಂದರೆ ತೊಡಕುಗಳಿಗೆ ಅಳುಕದೆ ಮುನ್ನಡೆದಿದ್ದಾರೆ, ಏಕೆಂದರೆ ಅವರ ಆತ್ಮಿಕ ಶಕ್ತಿ ಅಚಲ. ಆ ಅಚಲವಾದ ಶಕ್ತಿಯಿಂದಲೇ ಮೆಡಿಕಲ್ ಕಾಲೇಜದಂತ ದೊಡ್ಡ ಕೆಲಸ ಕೈಗೂಡಿತು. 


ಸುಸಂಸ್ಕೃತ ಮನುಷ್ಯ ಶೃತಿ ತೀಡಿ ಇಟ್ಟ ವೀಣೆಯಂತೆ, ಅದರಿಂದ ಎಂದೂ ಅಪಸ್ವರ ಹೊರಡದು ಎಂದು ಮಾಸ್ತಿಯವರು ಸುಸಂಸ್ಕೃತ ಮನುಷರ ಬಗ್ಗೆ ಹೇಳಿದ ಮಾತಿದು. ಶೃತಿ ತೀಡಿ ಇಟ್ಟ ವೀಣೆಯಲ್ಲಿ ಅಪಸ್ವರ ಹೊರಟರು ಹೊರಡಬಹುದು ಆದರೆ ಎಸ್ ಆರ್ ಪಾಟೀಲರ ಬಾಯಿಂದ ಅಪಸ್ವರದ ಮಾತು ಎಂದೂ ಹೊರಬರದು. ಅವರಲ್ಲಿ ಬಹಳಷ್ಟು ಅದಮ್ಯ ಶಕ್ತಿ ಇದೆ. ಅವರು ಅದನ್ನೆಂದು ತೋರಿಸಿಕೊಂಡವರಲ್ಲ. ಅವರು ಶುಭ್ರವಾದ ಬಟ್ಟೆಯನ್ನೇ ತೊಡುತ್ತಾರೆ. ಅವರ ಜೀವನ ಅವರು ತೊಡುವ ಬಟ್ಟೆಗಿಂತಲೂ ಹೆಚ್ಚು ಪರಿಶುದ್ದವಾಗಿದೆ.


ಜ್ಞಾನದ ಬೆಳಕು ಎಲ್ಲಿಂದಲಾದರು ಬರಲಿ ಅದನ್ನು ಸ್ವೀಕರಿಸಬೇಕು ಎನ್ನುವ ಋಗ್ವೇದದ ಮಾತಿನಂತೆ ಅವರು ಜ್ಞಾನದ ಬೆಳಕಿಗಾಗಿ ಹಂಬಲಿಸಿದರು. ಈ ಪ್ರಯುಕ್ತ ಮಕ್ಕಳು ವಿದ್ಯಾವಂತರಾಗಲು ತಮ್ಮ ಹಳ್ಳಿ ಬಾಡಗಂಡಿಯಲ್ಲೇ ಬಾಪೂಜಿ ಇಂಟರ್‌ನ್ಯಾಶನಲ್ ಸ್ಕೂಲ್ ತೆಗೆದರು. ಅಲ್ಲಿ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿಕೊಂಡು ಉತ್ತಮ ಶಿಕ್ಷಣ ಕೊಡಲು ವ್ಯವಸ್ಥೆ ಮಾಡಿದರು. ಈಗ ಜಿಲ್ಲೆಯಲ್ಲಿ ಎದ್ದು ಕಾಣುವ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಬಾಪೂಜಿ ಇಂಟರ್‌ನ್ಯಾಶನಲ್ ಸ್ಕೂಲ್ ಒಂದು ಎಂದು ಹೆಮ್ಮೆಯಿಂದ ಹೇಳಬಹುದು. ಅವರು ಏನೇ ಮಾಡಲಿ ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಾರೆ, ದೋಷಗಳಿಗೆ ಪರಿಹಾರ ಕಂಡು ಹಿಡಿಯುತ್ತಾರೆ, ಶಿಸ್ತಿನಿಂದ ಕಾರ್ಯತತ್ಪರರಾಗುತ್ತಾರೆ, ಹೀಗಾಗಿ ಅವರು ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಯಶಸ್ವಿಯಾಗಿದ್ದಾರೆ.

     

 ಎಸ್ ಆರ್ ಪಾಟೀಲರು ಹಿಂದಿನ 40 ವರ್ಷಗಳಿಂದಲೂ ರಾಜಕೀಯದಲ್ಲಿ ತತ್ವನಿಷ್ಠೆ ಇರಿಸಿಕೊಂಡು ಬಂದಿದ್ದಾರೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಎಸ್ ಆರ್ ಪಾಟೀಲರು, ನಾಲ್ಕು ಸಲ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬಿ.ಟಿ.ಡಿ.ಎ ಅಧ್ಯಕ್ಷರಾಗಿ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿ, ಐಟಿ.ಬಿಟಿ ಸಚಿವರಾಗಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿದ ಸೇವೆ ಸ್ಮರಣೀಯ. ಅವರು ತಮ್ಮ ಸೃಜನಶೀಲ ಕಾರ್ಯಗಳಿಂದ ಎತ್ತರಕ್ಕೆ ಬೆಳೆದಿದ್ದಾರೆ. ಅವರು ವಹಿಸಿದ ಅಧಿಕಾರಕ್ಕಿಂತ ಅವರ ವ್ಯಕ್ತಿತ್ವ ದೊಡ್ಡದು. ರಾಜಕೀಯದಲ್ಲಿ ದಕ್ಷತೆಯನ್ನು ಉಳಿಸಿಕೊಂಡು ಬಂದಿದ್ದು ಶುದ್ಧ ಹಸ್ತರೆಂದು ಪ್ರಸಿದ್ಧಿ ಪಡೆದಿದ್ದಾರೆ, ಆದರೂ ಅವರ ವಿರೋಧಿ ಶಕ್ತಿ ಅವರನ್ನು ರಾಜಕೀಯದಿಂದ ನಿರ್ಗಮಿಸುವಂತೆ ಮಾಡಿತು.

 

ಅವರು ಟ್ರ್ಯಾಕ್ಟರ್ ರ‍್ಯಾಲಿ ಮಾಡಿದರು. ಜನಸಮೂಹ ಅಲ್ಲಿಗೆ ಹರಿದು ಬಂದು ರ‍್ಯಾಲಿಯು ಅಭೂತಪೂರ್ವ ಯಶಸ್ಸನ್ನು ಕಂಡಿತು. ಅವರ ಹೆಸರು ದೊಡ್ಡದಾಗಿ ಕೇಳಿ ಬಂದಿರುವುದಲ್ಲದೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಲ್ಲಿ ಗಂಭೀರ ರ‍್ಚೆಯಾಯಿತು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಧ್ವನಿಯಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ಸಹ ಕೊಟ್ಟಂತಾಗಿರುವುದು ಈಗ ಕೇವಲ ಇತಿಹಾಸ.


ಎಸ್ ಆರ್ ಪಾಟೀಲರು ಜನಸಾಮಾನ್ಯರ ಬಗ್ಗೆ ಹೆಚ್ಚು ಕಳಕಳಿವುಳ್ಳವರು, ಅದಕ್ಕಾಗಿಯೆ ಅವರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ಸಲುವಾಗಿ ಸ್ವಂತ ಗ್ರಾಮ ಬಾಡಗಂಡಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರು, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕು, ಬಾಪೂಜಿ ಸಹಕಾರಿ ಬ್ಯಾಂಕು, ಬಾಪೂಜಿ ಇಂಟರ್ ನ್ಯಾಶಲ್ ಸ್ಕೂಲ್ ಇವು ಕೆಲವರಿಗೆ ಉದೋಗ, ಶಿಕ್ಷಣ ನೀಡುವುದರೊಂದಿಗೆ ರ‍್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗಿರುವುದಂತು ಸತ್ಯ, ಹೀಗಾಗಿ ಅವರು ಸ್ನೇಹದ ಕಡಲಂತೆ, ತುಂಬಿದ ಕೊಡದಂತೆ, ನಮ್ಮ ನಡುವೆ ಇರುವ ಮೇರು ವ್ಯಕ್ತಿತ್ವದ ಅವರ ಬದುಕು ಇತರರಿಗೆ ಮಾದರಿಯಂತಿದೆ. ಈಗ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 

                                                                                                                


ಯಾರ ಬಗ್ಗೆಯು ದ್ವೇಷವಿಲ್ಲದ ಸುಖ ದುಃಖಗಳ ದ್ವಂದ್ವಗಳನ್ನು ಮೀರಿದ ಸ್ಥಿತಿಯನ್ನು ತಲುಪಿದ ನಿಜ ಮಾನವ ಪ್ರೀತಿಯ ಎಸ್ ಆರ್ ಪಾಟೀಲರು ರಾಜಕೀಯದ ಅಪರೂಪದ ನಾಯಕರಲ್ಲಿ ಒಬ್ಬರೆಂದು  ಹೇಳಬಹುದು. “ಇತರರ ಒಳಿತಿಗಾಗಿ ಯಾರು ಚಿಂತಿಸುತ್ತಾರೊ ಅವರಿಗೆ ಜಗತ್ತಿನಲ್ಲಿ ಏನೆಲ್ಲಾ ಸಾಧ್ಯವಾಗುವುದು” ಎಂಬ ಮಹಾ ಕವಿ ತುಳಸಿದಾಸರ ಮಾತಿನಂತೆ ಇತರರ ಒಳಿತಿಗಾಗಿಯೆ ಎಸ್.ಆರ್. ಪಾಟೀಲರ ಚಿಂತನೆಗಳಿರುವುದರಿಂದ ಅವರು ಎತ್ತರಕ್ಕೆ ಬೆಳೆದರು. 


ಎಸ್ ಆರ್ ಪಾಟೀಲರಿಗೆ ಧರ್ಮ ಬೇಕು, ವಿಜ್ಞಾನ ಬೇಕು, ಕಲೆ ಬೇಕು, ಶಿಕ್ಷಣ ಬೇಕು, ಆರೋಗ್ಯ ಬೇಕು, ಆರ್ಥಿಕ ಅಭಿವೃದ್ಧಿ ಬೇಕು, ಅವರು ಯಾವುದನ್ನು ಮಾಡಿದರೂ ಅವರಂತೆ ಯಾರೂ ಮಾಡಲಾರರು ಎಂಬ ಪರಿಪೂರ್ಣತೆಯನ್ನು ತಮ್ಮ ಕೆಲಸದಲ್ಲಿ ತಂದು ಕೊಡುತ್ತಾರೆ. ಶಿಸ್ತುಬದ್ಧ ಜೀವನ ಅವರದು. ಇಂಥ ಹೃದಯವಂತ ಮನುಷ್ಯ ಜನ ಸಾಮಾನ್ಯರ ಒಳಿತಿಗಾಗಿಯಾದರೂ ರಾಜಕೀಯದಲ್ಲಿ ಇರಲೇಬೇಕಾದಂತ ವ್ಯಕ್ತಿ ಎಂಬುದು ಬಹು ಜನರ ಅಪೇಕ್ಷೆಯಾಗಿದೆ. 


ವಿಕ್ಟೋರಿಯಾ ಗ್ಲೋಬಲ್ ವಿಶ್ವ ವಿದ್ಯಾಲಯ ಯು.ಎಸ್.ಎ.ದಿಂದ ಇವರ ಸಾಮಾಜಿಕ ಸೇವೆಗಾಗಿ “ಗೌರವ ಡಾಕ್ಟರೇಟ್” ಪದವಿ ಪುರಸ್ಕಾರ, ಮೌಲಾನಾ ಆಝಾದ್ ಪ್ರಶಸ್ತಿ, ಕರ‍್ನಾಟಕ ಸರಕಾರದಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವು ಅವರ ಕ್ರೀಯಾಶೀಲತೆಗೆ ಸಾಕ್ಷಿ.


2021-22ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ಅವರ ವ್ಯಕ್ತಿತ್ಚಕ್ಕೆ ಹಾಗೂ ಅವರ ಪ್ರಾಮಾಣಿಕ ರಾಜಕೀಯ ಜೀವನಕ್ಕೆ ನಿರ‍್ಶನ. ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಯಾದವರನ್ನು ಶಾಸಕರಾಗಿ ಉಳಿಸಿಕೊಳ್ಳುವುದು ಅವರ ಪಕ್ಷಕ್ಕೆ ಆಗಿಲ್ಲ ಎನ್ನುವುದೆ ವಿಷಾದಪಡುವ ಸಂಗತಿ. ಅಂಥ ಒಳ್ಳೆಯ ಜನರು ರಾಜಕೀಯದಲ್ಲಿ ಇರಬೇಕೆನ್ನುವುದೆ ಬಹು ಜನರ ಅಪೇಕ್ಷೆ.      


ಬೀಳಗಿ ತಾಲೂಕಿನ ಬಾಡಂಗಡಿಯಲ್ಲಿ ರುದ್ರಗೌಡ ಮತ್ತು ಈರಮ್ಮ ಇವರ ದ್ವಿತೀಯ ಸುಪುತ್ರರಾಗಿ ದಿನಾಂಕ 31-07-1948ರಂದು ಜನಿಸಿದ ಶಿವನಗೌಡ ಪಾಟೀಲರಿಗೆ ಈಗ 76 ವರ್ಷ ವಯಸ್ಸು. 36ರ ಹುರುಪು ಹುಮ್ಮಸ್ಸು ಈಗಲೂ ಅವರಲ್ಲಿದೆ. ನಿರಂತರ ಹೋರಾಟದಿಂದ ಮೇಲೆ ಬಂದಿದ್ದಾರೆ ಎಂಬುದಕ್ಕೆ ಅವರ ಬದುಕೆ ಒಂದು ನಿರ‍್ಶನ. ಅವರು ಎಲ್ಲ ಜನರ ಬಗ್ಗೆ ವಾತ್ಸಲ್ಯ ತುಂಬಿದ ಮಾತೃ ಹೃದಯಿ. ಜಾತಿ, ವರ್ಣ, ವರ್ಗ, ಧರ್ಮಗಳ ಆಚೆ ನಿಂತು ನಾಡು-ನುಡಿ ಕಟ್ಟುವ ಇಂತಹದೊಂದು ಶಕ್ತಿ ನಮ್ಮ ನಡುವೆ ಇರುವುದೇ ಸೋಜಿಗ, ಯಾವುದೇ ಪ್ರತಿಫಲವನ್ನು ಯಾರಿಂದಲೂ ಅಪೇಕ್ಷಿಸದ ವಿಚಾರಶೀಲ ವ್ಯಕ್ತಿ ಎನಿಸಿಕೊಂಡಿದ್ದಾರೆ. 


ಮೆಡಿಕಲ್ ಕಾಲೇಜು ಸ್ಥಾಪನೆ: ಮೆಡಿಕಲ್ ಕಾಲೇಜ ಸ್ಥಾಪನೆ ಎಂದರೆ ಅದು ಸಾಮಾನ್ಯವಾದದ್ದಲ್ಲ ಅದು ಅಸಾಮಾನ್ಯ, ಅದ್ಭುತ. ಒಂದು ಸರಕಾರ ಮಾಡದ ಕೆಲಸವನ್ನು ಎಸ್.ಆರ್.ಪಾಟೀಲರು ಮಾಡಿ ತೋರಿಸಿದ್ದಾರೆ. 15 ವರ್ಷದ ಹಿಂದೆ ಪ್ರಾಥಮಿಕ ಶಾಲೆಯಿಂದ ಪ್ರಾರಂಭವಾದ ಅವರ ಶಿಕ್ಷಣ ಸಂಸ್ಥೆ ಈಗ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಿರುವುದು ಕಲ್ಪನೆಗೆ ಮೀರಿದ್ದು, ಅದು ಸಣ್ಣ ಮಾತಲ್ಲ. ರಾಜ್ಯದಲ್ಲಿ ಮೂರು ಮೆಡಿಕಲ್ ಕಾಲೇಜಗಳಿಗೆ ಅನುಮತಿ ಸಿಕ್ಕಿದೆ ಅದರಲ್ಲಿ ಎಸ್.ಆರ್. ಪಾಟೀಲರದು ಒಂದು ಎಂದು ಹೆಮ್ಮೆಯಿಂದ ಹೇಳಬಹುದು. ಇದಕ್ಕೆಲ್ಲ ಅವರ ದೂರ ದೃಷ್ಠಿ, ಶ್ರಮ, ಆತ್ಮವಿಶ್ವಾಸ, ದೃಢ ಮನಸ್ಸು ಕಾರಣ ಎಂದು ಹೇಳಬಹುದು. 


23 ಎಕರೆ ಜಮೀನಿನಲ್ಲಿ ತಲೆ ಎತ್ತಿದ ಬೃಹತ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು 630 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆಯಲ್ಲದೆ ಮೂಲ ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ. ಲಕ್ಷಾಂತರ ಬಡ ರೋಗಿಗಳಿಗೆ ಉಚಿತ ತಪಾಸಣೆಯ ಭಾಗ್ಯ ಕಲ್ಪಿಸಿದ್ದಾರೆ. 250 ನುರಿತ ವೈದ್ಯರು ೬೦೦ ಜನ ಸಿಬ್ಬಂದಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಈಗಾಗಲೇ 7 ಕೋಟಿ ರೂ.ಗಳ ಔಷಧಿಯನ್ನುಉಚಿತವಾಗಿ ಬಡ ರೋಗಿಗಳಿಗೆ ವಿತರಿಸಲಾಗಿದೆ.


ಬಿ.ಎ.ಎಂ.ಎಸ್ ಆಸ್ಪತ್ರೆಯು ಸಹಿತ 100 ಹಾಸಿಗೆಯ ಸಾಮರ್ಥ್ಯವನ್ನು ಹೊಂದಿದೆ. 24 ಜನ ನುರಿತ ವೈದ್ಯರು, 20 ಜನ ಇತರ ವೈದ್ಯರು ಇಲ್ಲಿ ಕೆಲಸ ಮಾಡುತ್ತಾರೆ. 80 ಜನ ನಾನ್ ಟೀಚಿಂಗ್‌ ಸ್ಟಾಫ್‌ ಇದ್ದಾರೆ. 63 ವಿವಿಧ ರೀತಿಯ ಆಪರೇಶನ್ ಇಲ್ಲಿ ಮಾಡಲಾಗುತ್ತದೆ. ಬಿಎಸ್ಸ್ಸಿ ನರ್ಸಿಂಗ್ ಕೋರ್ಸ್‌ಗಳನ್ನು ಈ ಸಂಸ್ಥೆಯಲ್ಲಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಇವೆಲ್ಲ ಈ ಪುಟ್ಟ ಗ್ರಾಮದಲ್ಲಿ ಸಿಗುವುದೇ ಒಂದು ಭಾಗ್ಯ ಎಂದು ಹೇಳಬಹುದು. ಇಂಥ ಭಾಗ್ಯಗಳನ್ನು ತಮ್ಮ ಭಾಗದ ಗ್ರಾಮೀಣ ಜನರಿಗೆ ಎಸ್.ಆರ್.ಪಾಟೀಲರು ಒದಗಿಸಿ ತಮ್ಮ ಹೃದಯ ವೈಶಾಲ್ಯತೆಯನ್ನು  ತೋರಿಸಿದ್ದಾರೆ.


ಬಹಳಷ್ಟು ಜನ ಕಾರ್ಖಾನೆ, ಆಸ್ಪತ್ರೆ, ಶಾಲೆಗಳನ್ನು ದೊಡ್ಡ ದೊಡ್ಡ ನಗರಗಳಲ್ಲಿ ತೆಗೆಯುತ್ತಾರೆ. ಆದರೆ ಎಸ್.ಆರ್. ಪಾಟೀಲರು ತಮ್ಮ ಗ್ರಾಮದಲ್ಲಿಯೇ ತೆಗೆದು ಯಶಸ್ವಿಯಾದ ಕೆಲವೇ ಕೆಲವು ಜನರಲ್ಲಿ ಇವರೂ ಒಬ್ಬರು. ಜನ್ಮ ನೀಡಿದ ಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂಬುದನ್ನು ಬದುಕಿನಲ್ಲಿ ತೋರಿಸಿಕೊಟ್ಟರು. ತಮ್ಮೂರಿನಲ್ಲಿಯೇ ಬೃಹತ್ ಆಸ್ಪತ್ರೆ, ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮೂರಿನ ಕೀರ್ತಿಯನ್ನು ಬೆಳಗಿಸಿದರು.


ಎಸ್.ಆರ್. ಪಾಟೀಲರು ಯಾವುದೇ ಕೆಲಸ ಮಾಡಲಿ ಯಾವುದೇ ಹೊಣೆ ಹೊತ್ತುಕೊಂಡಿರಲಿ ಪ್ರತಿಯೊಂದರಲ್ಲಿಯೂ ಮೇಲ್ಪಂಕ್ತಿಯ ಮಾದರಿಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಶಕ್ತಿಗೆ ಸಮಾನವಾದ ಶಕ್ತಿ ಇರುವ ವ್ಯಕ್ತಿ ಸಿಗುವುದು ಅಪರೂಪ. ಅವರು ಮೃದುವಾದ ಹೃದಯವನ್ನು ಪಡೆದ ಭಾರೀ ಅಂತಃಕರಣ ಉಳ್ಳವರು. ಆದರೆ ಅವರ ದೇಹದಲ್ಲಿ ದೈತ್ಯ ಶಕ್ತಿ, ಅದ್ಭುತ ಧರ‍್ಯ ತುಂಬಿಕೊಂಡಿದೆ ಅದಕ್ಕಾಗಿಯೇ ಮೆಡಿಕಲ್ ಕಾಲೇಜಿನಂತಹ ಸಾಹಸದ ಕೆಲಸ ಸಾಧ್ಯವಾಗಿದೆ. ಅವರು ಬರೆಯುವಂತ ಜೀವನವನ್ನು ಬದುಕಿದ್ದಾರೆ. ಅವರ ಬದುಕು ಒಂದು ಸುಂದರವಾದ ಕಥೆಯಂತಿದೆ. ಅವರು ಸಾಮಾನ್ಯತೆಯನ್ನು ಹಿಂದೆ ಸರಿಸಿ ಅಸಾಮಾನ್ಯವಾಗಿ ಬೆಳೆದರು. ತಮ್ಮ ವ್ಯಕ್ತಿತ್ವವನ್ನು ದೊಡ್ಡ ಆಲದ ಮರದಂತೆ ಬೆಳೆಸಿಕೊಂಡು ಅದಕ್ಕೆ ಬಹು ವಿಸ್ತಾರವನ್ನು ತಂದುಕೊಂಡಿದ್ದಾರೆ. ದೊಡ್ಡವರಾಗಿ ಬೆಳೆದವರೆಲ್ಲ ದೊಡ್ಡವರಾಗಿ ಉಳಿದಿಲ್ಲ. ಆದರೆ ಎಸ್.ಆರ್. ಪಾಟೀಲರು ದೊಡ್ಡವರಾಗಿ ಬೆಳೆದರು, ದೊಡ್ಡವರಾಗಿ ಉಳಿದರು. ಇಂತಹ ನಿಷ್ಕಳಂಕಿತ ವ್ಯಕ್ತಿ ನೂರುಕಾಲ ಬದುಕಲಿ. ಎಂಬುದೇ ಅವರ ಅಭಿಮಾನಿಗಳ, ಹಿತೈಷಿಗಳ, ಬಂಧು ಮಿತ್ರರ ಹಾರೈಕೆಯಾಗಿದೆ.


- ಜಗದೀಶ ಮ. ಹದ್ಲಿ, ತಿಮ್ಮಾಪೂರ

96117 61979


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top