ನಮಗೆಲ್ಲಾ ಅನಾರೋಗ್ಯ ಉಂಟಾದಾಗ ನಮಗೆ ನೆನಪಾಗುವವರು ವೈದ್ಯರು ರಾತ್ರಿ ಹಗಲ್ಲೆನ್ನದೆ ರೋಗಿಗಳ ಆರೋಗ್ಯ ವನ್ನು ಕಾಪಾಡುವ ಮಹತ್ತರ ಕಾಯ೯ ವೈದ್ಯರು ಮಾಡುತ್ತಿದ್ದಾರೆ.ಹೀಗಾಗಿ ವೈದ್ಯೋ ನಾರಾಯಣ ಹರಿಃ ಎಂಬ ಮಾತು ಬಂದಿದೆ.ತಮ್ಮ ಕುಟುಂಬಕ್ಕೆ ಸಮಯ ನೀಡಲು ಸಾದ್ಯವಾಗದಿದ್ದರೂ ರೋಗಿಗಳ ಆರೋಗ್ಯ ರಕ್ಷಣಿಯಲ್ಲಿ ನಿರಂತರ ಕಾಯ೯ ಮಾಡುತ್ತಿರುವುದು ಅಭಿನಂದನೀಯ.
ಈ ಜುಲೈ 1 ವೈದ್ಯರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮೀಸಲಾದರೆ ಅದೇ ಈ ದಿನದ ಸಾರ್ಥಕತೆಯಾಗಲಿದೆ.
ಭಾರತದಲ್ಲಿ ಜುಲೈ.1 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅದಕ್ಕೊಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಅವರ ನೆನಪಲ್ಲಿ ಜುಲೈ.1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದವರು. ಅವರ ಗಣನೀಯ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿತ್ತು. ಕುತೂಹಲಕರ ವಿಚಾರವೆಂದರೆ ಅವರು ಜನಿಸಿದ್ದು 1882, ಜು.1. ತೀರಿಕೊಂಡಿದ್ದು, 1962 ಜುಲೈ.1. ಅವರು ಜನಿಸಿದ ದಿನ ಮತ್ತು ತೀರಿಕೊಂಡ ದಿನ ಒಂದೇ ಆಗಿದೆ.
ಒಬ್ಬ ಮಾದರಿ ವೈದ್ಯರಾಗಿ ತಮ್ಮ ಬದುಕು ಸವೆಸಿದ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕು ಎಂದು ನಿರ್ಧರಿಸಿದ ಭಾರತ ಸರ್ಕಾರ 1991ರಲ್ಲಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು.
ರಾಯ್ ಅವರು ಅಪ್ರತಿಮ ವೈದ್ಯರಾಗಿದ್ದರು. ತಮ್ಮ ದೂರದೃಷ್ಟಿ ನಿಲುವುಗಳಿಂದ ವೈದ್ಯಲೋಕಕ್ಕೆ ಅಪರೂಪವಾದ ಕೊಡುಗೆ ಕೊಟ್ಟವರು. ಮೇಲು ಕೀಳು ನೋಡದೆ, ಭೇದಭಾವ ಮಾಡದೆ ಎಲ್ಲರನ್ನೂ ಒಂದೇ ರೀತಿ ನೋಡಿದ ಜನಮೆಚ್ಚಿದ ವೈದ್ಯರಾಗಿದ್ದ ರಾಯ್, ಹೊಸತನದ ಆಲೋಚನೆಗಳನ್ನು ಹೊಂದಿದ್ದರು.
1905ರಲ್ಲಿ ಅವರು ಕೋಲ್ಕತಾ ವಿವಿಯಲ್ಲಿ ಓದುತ್ತಿರುವಾಗ ಬಂಗಾಳ ವಿಭಜನೆಯಾಯಿತು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ರಾಯ್ ಅವರು ಕೆಲ ಕಾಲ ಮಹಾತ್ಮ ಗಾಂಧೀಜಿಯ ವೈದ್ಯರೂ ಆಗಿದ್ದರು ಎನ್ನುವುದು ವಿಶೇಷ. ಅವರು ವೈದ್ಯರಾಗಿದ್ದೂ ಅಲ್ಲದೆ ಆಡಳಿತದಲ್ಲೂ ಮುಂದೆ ನಿಂತು ಕೆಲಸ ಮಾಡಿದ್ದು, ಅಚ್ಚರಿ ತರುವಂತಹದ್ದು.
ಅನೇಕ ದೊಡ್ಡ ಆಸ್ಪತ್ರೆಗಳು ಅವರ ಕಾಲದಲ್ಲಿ ಸ್ಥಾಪನೆಯಾಗಿದೆ. ಸುಮಾರು 14 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಅವರು ಆ ಸಮಯದಲ್ಲೂ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರು. ಆ ಕಾರಣಕ್ಕೆ ಜನರ ಒಲವು ಗಳಿಸಿದ್ದರು.
ಒತ್ತಡದ ಸೇವೆ:
ರೋಗಿಗಳ ಅನುಗುಣವಾಗಿ ವೈದ್ಯರಿಲ್ಲ. ಇದರಿಂದಾಗಿ ಅನೇಕ ಬಾರಿ ಊಟ–ತಿಂಡಿ ಇಲ್ಲದೆಯೇ ಕೆಲಸ ಮಾಡಬೇಕಾಗತ್ತದೆ. ಚಿಕಿತ್ಸೆ ಸ್ವಲ್ಪ ತಡವಾದರೂ ರೋಗಿಯ ಕಡೆಯವರು ಹಲ್ಲೆಗೆ ಮುಂದಾಗುತ್ತಾರೆ. ಗ್ರಾಮೀಣ ಪ್ರದೇಶದ ವೈದ್ಯರು ಹೆಚ್ಚಾಗಿ ಇಂಥ ಹಲ್ಲೆ ಅನುಭವಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ವೈದ್ಯರ ರಕ್ಷಣೆ ಗೆ ಕಾನೂನು ಬಲ, ಕೋವಿಡ್ ಸಮಯದಲ್ಲಿ ಕಾನೂನು
ಕೋವಿಡ್ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆಯ ಪ್ರಕರಣಗಳು ಹೆಚ್ಚಾದಾಗ, ಐಎಂಎ ಒತ್ತಾಯದ ಮೇರೆಗೆ ಕೇಂದ್ರವು ಅವರ ರಕ್ಷಣೆಗೆ ವಿಶೇಷ ಕಾನೂನು ರೂಪಿಸಿತು. 2020ರ ಎಪ್ರಿಲ್‌ನಲ್ಲಿ ಆ ಕುರಿತ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು.
ಸುಮಾರು 123 ವರ್ಷಗಳಷ್ಟು ಹಳೆಯದಾದ (1897ರ) ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ಮಾಡಿ, ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಲ್ಲಿ ಅವಕಾಶ ನೀಡಲಾಯಿತು.
ಹೊಸ ಕಾನೂನಿನ ಪ್ರಕಾರ ಈಗ ವೈದ್ಯರ ಮೇಲಿನ ಹಲ್ಲೆಯು ಜಾಮೀನುರಹಿತ ಅಪರಾಧ ಎನಿಸಿದೆ. ದೂರು ದಾಖಲಾಗಿ 30 ದಿನದೊಳಗೆ ತನಿಖೆ ನಡೆಸಬೇಕಾಗುತ್ತದೆ. ಅಪರಾಧಿಗೆ ಕನಿಷ್ಠ 3 ತಿಂಗಳು ಮತ್ತು ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ ರೂ. 50,000ದಿಂದ ಗರಿಷ್ಠ ರೂ. 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ. ವೈದ್ಯರಿಗೆ ಗಂಭೀರ ಸ್ವರೂಪದ ಗಾಯಗಳಾದರೆ ಅಪರಾಧಿಗೆ ಗರಿಷ್ಠ 7 ವರ್ಷ ಜೈಲು ಮತ್ತು ₹ 5ಲಕ್ಷದ ವರೆಗೆ ದಂಡ ವಿಧಿಸಲೂ ಅವಕಾಶ ಇದೆ. ಆಸ್ತಿಗೆ ಹಾನಿ ಉಂಟುಮಾಡಿದರೆ, ಅದರ ಮಾರುಕಟ್ಟೆ ಮೌಲ್ಯದ ಎರಡರಷ್ಟು ದಂಡ ವಿಧಿಸಲೂ ಅವಕಾಶ ಕಲ್ಪಿಸಲಾಗಿದೆ. ಈ ಕಾಯ್ದೆಗೆ 2020ರ ಸೆಪ್ಟೆಂಬರ್‌ನಲ್ಲಿ ರಾಜ್ಯಸಭೆಯೂ ಅನುಮೋದನೆ ನೀಡಿದೆ.
ಈ ಕಾನೂನು ಇದ್ದರೂ ನಮ್ಮ ಸಮಾಜ ವೈದ್ಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ರೋಗಿಯು ಅನಾರೋಗ್ಯದಿಂದ ಆರೋಗ್ಯ ಹೊಂದಿದರೆ ವೈದ್ಯರಿಗೆ ಧನ್ಯವಾದ ಹೇಳದಿದ್ದರೂ, ಆ ರೋಗಿ ನಿಧನ ಹೊಂದಿದರೆ ವೈದ್ಯರ ನಿರ್ಲಕ್ಷ್ಯದಿಂದ ಸಾವು ಎಂಬ ಹಣಿಪಟ್ಟಿ ಕಟ್ಟಿ ವೈದ್ಯರು ತಮ್ಮ ರಕ್ಷಣಿಗೆ ಪೋಲಿಸರ ಮೊರೆ ಹೋಗಬೇಕಾದ ಕಾಲ ಬಂದಿದೆ. ಇದು ಸರಿಯಲ್ಲ. ವೈದ್ಯರು ಕೂಡ ಮನುಷ್ಯರೇ ಅವರಿಗೂ ಭಾವನೆಗಳು, ಕುಟುಂಬ, ವೈಯತ್ತಿಕ ಬದುಕು ಇದೆ ಎಂಬುದನ್ನು ಅರ್ಥ ಮಾಡಬೇಕಾಗಿದೆ.
ಒಟ್ಟಾಗಿ ನಮ್ಮ ಸಮಾಜದ ಆರೋಗ್ಯದ ರಕ್ಷಕರಾಗಿರುವ ಎಲ್ಲಾ ವೈದ್ಯರಿಗೂ ಮನದಾಳದ ಕೃತಜ್ಞತೆಗಳು.
- ರಾಘವೇಂದ್ರ ಪ್ರಭು, ಕರ್ವಾಲು
ಸಂ.ಕಾರ್ಯದರ್ಶಿ, ಕಸಾಪ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ