ಮಂಗಳೂರು: “ಯೋಗ ಮತ್ತು ಯೋಗ್ಯತೆ ಎರಡೂ ಕೂಡಿ ಬಂದಾಗ ಮಾತ್ರ ವಿಕಾಸ ಸಾಧ್ಯ ಆದರೆ ಎರಡೂ ಫಲಿಸಬೇಕೆಂದರೆ ಅತ್ಯಗತ್ಯ ನಮ್ಮ ಪ್ರಯತ್ನ. ದಕ್ಷಿಣ ಕನ್ನಡ ಎಂಬ ಸಾಧ್ಯತೆಗಳ ಸಾಗರದಲ್ಲಿ ಅಭಿವೃದ್ಧಿಯ ಒಂದು ನವಯುಗ ಪ್ರಾರಂಭಿಸಲು ನಾವೆಲ್ಲ ಸೇರಿ ಈ ನವಪಥದಲ್ಲಿ ನವ ಪ್ರಯತ್ನಗಳನ್ನು ಮಾಡಬೇಕು. ಇಡೀ ವಿಶ್ವವೇ ನಮ್ಮ ದಕ್ಷಿಣ ಕನ್ನಡದತ್ತ ನೋಡುವಂತೆ ಮಾಡಬೇಕು ಎಂಬ ಆಶಯದಿಂದ ಈಗಾಗಲೇ ಸಾಹಸ ಕ್ರೀಡೆಗಳ ಮೂಲಕ ಅಂತರ ರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಕಲ್ಪಿಸಿದ ಸಸಿಹಿತ್ಲು ಕಡಲ ತೀರದಲ್ಲಿ ಇಂದು “ಯೋಗ ವಿದ್ ಯೋಧ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ” ಎಂದು ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಅವರು ಇಂದು ಸಸಿಹಿತ್ಲು ಬೀಚಿನಲ್ಲಿ ನಡೆದ “ಯೋಗ ವಿದ್ ಯೋಧ” ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಹೇಳಿದರು. ಜಿಲ್ಲೆಯ ಪ್ರಮುಖ ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರು ಮತ್ತು ಇತರ ಗಣ್ಯರು ಸೇರಿ, ಸಮುದ್ರ ತಟದ ಪ್ರಶಾಂತ ವಾತಾವರಣದಲ್ಲಿ ಯೋಗಾಭ್ಯಾಸ ಮಾಡಿದರು.
“ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಸಂಸ್ಥೆಗೆ ಶಿಫಾರಸು ಮಾಡಿ ಕಳೆದ ಹತ್ತು ವರ್ಷಗಳಿಂದ ಲೋಕದೆಲ್ಲೆಡೆ ಯೋಗ ಒಂದು ಜಾಗತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಹಬ್ಬದಲ್ಲಿ ಇಂದು ನಾವೆಲ್ಲ ಸೇರಿರುವುದು ಅತ್ಯಂತ ಉತ್ಸಾಹದ ವಿಷಯ” ಎಂದು ಸಂಸದರು ವಿಶ್ಲೇಷಿಸಿದರು.
“ಮುಂಬರುವ ದಿನಗಳಲ್ಲಿ ಸಸಿಹಿತ್ಲು ಬೀಚು ಸಾಹಸ ಕ್ರೀಡೆಗಳ ಒಂದು ದೊಡ್ಡ ತಾಣವಾಗಲಿ. ಇದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಲು ನಾವು ಬದ್ಧರಾಗಿದೇವೆ” ಎಂದು ಸಂಸದರು ಹೇಳಿದರು.
ಸಂಸದರಾಗಿ ಆಯ್ಕೆಯಾದ ಬಳಿಕ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸಂಘಟಿಸಿದ ಮೊದಲ ಕಾರ್ಯಕ್ರಮ “ಯೋಗ ವಿದ್ ಯೋಧ” ಯಶಸ್ವಿಯಾಗಿ ನಡೆಯಿತು.
ಯೋಗ ಶಿಕ್ಷಕಿ ಶ್ರದ್ಧಾ ಸಂದೇಶ್ ರೈ ಯೋಗಾಭ್ಯಾಸವನ್ನು ನಡೆಸಿಕೊಟ್ಟರು ಹಾಗೂ ಕಾರ್ಯಕ್ರಮವನ್ನು ಈಶ್ವರ್ ಪ್ರಸಾದ್ ಶೆಟ್ಟಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

