ಯಶೋವನವು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ಸಸ್ಯೋದ್ಯಾನವಾಗಿದೆ. ಪಶ್ಚಿಮ ಘಟ್ಟದಲ್ಲಿ ಲಭ್ಯವಿರುವ ಅಮೂಲ್ಯ ಸಸ್ಯ ಸಂಕುಲಗಳ ಸಂರಕ್ಷಣೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪರಿಸರದ ಕುರಿತು ಅರಿವು ಮೂಡಿಸಬೇಕು ಎಂಬುದು ಕಾರ್ಯದರ್ಶಿ ಗಳಾಗಿದ್ದ ಡಾ. ಬಿ. ಯಶೋವರ್ಮ ಅವರ ಕನಸು. 1999ರಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಆಶಯ ಮತ್ತು ಡಾ. ಬಿ ಯಶೋವರ್ಮ ಅವರ ಮುತುವರ್ಜಿಯಿಂದ ಆರಂಭವಾದ ಅಪರೂಪದ ಸಸ್ಯ ಸೌರಭಗಳನ್ನು ರಕ್ಷಿಸುವ ಸಸ್ಯೋದ್ಯಾನವೇ ಈ ಯಶೋವನ.
ಸಸ್ಯ ಸಂಕಲಗಳನ್ನು ರಕ್ಷಿಸುವ ಮತ್ತು ಅವುಗಳ ತಳಿಗಳನ್ನು ದಾಖಲಿಸುವ ಸಲುವಾಗಿ ಉಜಿರೆಯ ಸಿದ್ಧವನ ಸಮೀಪ 8 ಎಕರೆಯ ಜಾಗದಲ್ಲಿ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಆರ್ಬೋರೇಟರಂ ಹೆಸರಿನಲ್ಲಿ ಈ ಸಂರಕ್ಷಣಾ ವನವನ್ನು ಸ್ಥಾಪಿಸಿತು. ನಂತರದ ದಿನಗಳಲ್ಲಿ ಡಾ ಬಿ ಯಶೋವರ್ಮ ಅವರ ನಿರಂತರ ಆರೈಕೆಯಲ್ಲಿ ಅಪರೂಪವಾದ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವವಾದ ಸಸ್ಯೋದ್ಯಾನವಾಗಿ ರೂಪುಗೊಂಡಿತ್ತು. ಹಾಗೆಯೇ ಯಶೋವನದ ದ್ವಾರವು ಇಂಡೋನೇಷ್ಯಾ ವಾಸ್ತುಶಿಲ್ಪ ಆಧಾರಿತ ಸ್ವರ್ಗದ ದ್ವಾರ ಮಾದರಿಯ ಗೋಪುರ ನಿರ್ಮಿಸಲಾಗಿದೆ. ಆಮೂಲಕ ಸ್ವರ್ಗ ಸದೃಶ ಪ್ರಕೃತಿಯ ಲೋಕಕ್ಕೆ ಎಲ್ಲರಿಗೂ ಸ್ವಾಗತ ಕೋರುವಂತೆ ಮಾಡಲಾಗಿದೆ. ಹಾಗೂ ಇಲ್ಲಿ ವಿಶೇಷವಾಗಿ ಬೆಳಿಗ್ಗೆ 6:30 ರಿಂದ 8:30 ರವರೆಗೆ ಮತ್ತು ಸಂಜೆ 4ರಿಂದ 6 ರವರೆಗೆ ಸಾರ್ವಜನಿಕರು ಸಸ್ಯೋದ್ಯಾನವನ್ನು ವಿಕ್ಷಣೆ ಮಾಡಬಹುದು.
ಈ ಸಸ್ಯೋದ್ಯಾನದಲ್ಲಿ ನಿರಂತರವಾದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು ಹಲವಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಭಾಗವಾಗಿ ಇಲ್ಲಿನ ಸಸ್ಯ ಸೌಲಭ್ಯಗಳನ್ನು ಅಧ್ಯಯನ ಮಾಡುವ ಸಲುವಾಗಿ ಭೇಟಿ ನೀಡುತ್ತಿದ್ದಾರೆ. ಗ್ರೀನ್ ಹೌಸ್ ವಿವಿಧ ವರ್ಗೀಕರಣದಲ್ಲಿ ಬೆಳೆಸಿರುವ ಮರ ಗಿಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ನಿರಂತರವಾಗಿ ಹಲವಾರು ತರಬೇತಿ ಕಾರ್ಯಕ್ರಮ ಇಲ್ಲಿ ಆಯೋಜಿಸಲಾಗುತ್ತದೆ. ಈ ಸಸ್ಯೋದ್ಯಾನದಲ್ಲಿ ಕಾಲಕಾಲಕ್ಕೆ ನಾಶವಾದ ಸಸ್ಯಗಳನ್ನು ಮತ್ತೆ ನೆಡುವುದು ಮತ್ತು ಸಂಬಂಧಿಸಿದ ಗುಂಪಿಗೆ ಸೇರಿದ ಸಸ್ಯಗಳ ಸೇರ್ಪಡೆ ಕಾರ್ಯಾ ನಿರತವಾಗಿ ನಡೆಯುತ್ತಿರುತ್ತದೆ. ಸಸ್ಯಗಳ ಪೋಷಣೆಗೆ ಸಾವಯವ ಗೊಬ್ಬರ ಹಾಗೂ ಮರು ಬಳಕೆ ಮಾಡಿದ ನೀರನ್ನು ಉಪಯೋಗಿಸಲಾಗುತ್ತಿದೆ.
ಪ್ರಸ್ತುತ ಯಶೋವನದಲ್ಲಿರುವ ಸಾವಿರಕ್ಕೂ ಅಧಿಕ ಮರಗಳಿಂದ ಪರಿಸರಕ್ಕೆ ಬಹುದೊಡ್ಡ ಕೊಡುಗೆ ಸಿಕ್ಕಿದೆ. ಅಷ್ಟೇ ಅಲ್ಲದೆ ವಿವಿಧ ಹಣ್ಣುಗಳು ಗೆಡ್ಡೆ ಗೆಣಸುಗಳು ಸೇರಿದಂತೆ ವನ್ಯಜೀವಿಗಳಿಗೆ ಬೇಕಾದ ಆಹಾರ ಈ ಯಶೋವನದಲ್ಲಿ ದೊರಕುತ್ತಿದೆ. ಅತ್ಯಧಿಕ ಆಮ್ಲಜನಕ ಉತ್ಪತ್ತಿಗೆ ಕೊಡುಗೆ ನೀಡುತ್ತಾ ತನ್ನ ಉಸಿರ ಸಿರಿಯ ಮೂಲಕ ಉಜಿರೆ ಗ್ರಾಮದ ಸೌಂದರ್ಯ ಹೆಚ್ಚಲು ಕಾರಣವಾಗಿದೆ. ಪರಿಸರ ಸಂರಕ್ಷಣೆಗೆ ನೀಡಿದ ಈ ಕಿರು ಕಾಣಿಕೆಯ ಮುಖಾಂತರವೇ ಜೈವಿಕ ವೈವಿಧ್ಯ ಸಂರಕ್ಷಣಾ ಕೇಂದ್ರವೆಂದು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ.
- ನಮಿತ
ಪ್ರಥಮ ಎಂ ಸಿ ಜೆ
ಎಸ್ ಡಿ ಎಂ ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ