ನಾವು ವಾಸಿಸುತ್ತಿರುವ ಭೂಮಿಯನ್ನು ಭೂಗೋಳ ಶಾಸ್ತ್ರದಲ್ಲಿ ನೀಲಿ ಗ್ರಹವೆಂದು ಕರೆಯಲಾಗಿದೆ. ಸಾಗರಗಳ ನೀರನ್ನು ನಕಾಶೆಯಲ್ಲಿ ನೀಲಿ ಬಣ್ಣದಲ್ಲಿ ತೋರಿಸಲಾಗುತ್ತದೆ. ಆಕಾಶವೆಲ್ಲವೂ ನೀಲಿ ಬಣ್ಣದಲ್ಲಿಯೇ ಕಾಣುತ್ತದೆ. ಇಪ್ಪತ್ತೊಂದನೇ ಶತಮಾನದ ಸ್ಪರ್ಧಾ ಜಗತ್ತಿನ ನಾಗರೀಕರಾದ ನಾವು ಇಂದು ನಮ್ಮಭೂಮಿಯ ಸಂರಕ್ಷಣೆಯ ಕಾರ್ಯಕ್ರಮಗಳ ಕ್ರಿಯಾಯೋಜನೆ ರೂಪಿಸುವ ಅಗತ್ಯವಿದೆ. ಹಾಗೆಯೇ ಸಾಗರಗಳ ಸಂರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ.
1992ರಲ್ಲಿ ಬ್ರೆಜಿಲ್ ದೇಶದ ಬಹುದೊಡ್ಡ ಸಾಗರ ತೀರದ ನಗರ ರಿಯೋಡಿ ಜನೈರೊ ಎಂಬಲ್ಲಿ ಭೂ ಶೃಂಗ ಸಭೆ ನಡೆಯುತ್ತಿತ್ತು. ವಿಶ್ವ ಸಂಸ್ಥೆ ಹಾಗೂ ಅದರ ಪ್ರಮುಖ ಅಂಗಸಂಸ್ಥೆಗಳು ಭೂ ಶೃಂಗ ಸಭೆಯನ್ನು ಯಶಸ್ವಿಯಾಗಿ ನಡೆಸಿದವು. ಅಲ್ಲಿ ಕ್ಯಾಲೆಂಡರ್ ವರ್ಷದ ದಿನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಪ್ರತೀ ದಿನವನ್ನು ಒಂದಿಲ್ಲೊಂದು ವಿಷಯದ ಆಚರಣೆಗಾಗಿ ಗುರುತಿಸಲಾಯಿತು.
ಅಂತೆಯೇ ಪ್ರತೀ ವರ್ಷ ಜೂನ್ 8 ನೇ ತಾರೀಖನ್ನು ವಿಶ್ವಮಟ್ಟದಲ್ಲಿ ಸಾಗರದ ದಿನ ಎಂಬುದಾಗಿ ಆಚರಿಸಲಾಗುತ್ತದೆ. ಬೃಹತ್ ಗಾತ್ರದ ನೀರನ್ನು ಹೊಂದಿರುವ ಆಳವಾದ ಮತ್ತು ವಿಸ್ತಾರವಾದ ಜಲರಾಶಿಗಳೇ ಸಾಗರಗಳು. ಇವು ಭೂಖಂಡಗಳ ನಡುವೆ ಹಂಚಿಕೆಯಾಗಿವೆ. ಇತಿಹಾಸದ ಆದಿ ಕಾಲದಿಂದಲೂ, ಮನುಷ್ಯ ತನ್ನ ಆಹಾರಕ್ಕಾಗಿ ಸಾಗರಗಳ ಆಶ್ರಯವನ್ನು ಪಡೆದಿದ್ದಾನೆ. ಇತಿಹಾಸದ ಪುಟಗಳನ್ನು ಓದಿದರೆ ಹತ್ತು ಸಾವಿರ ವರ್ಷಗಳ ಹಿಂದೆ ವಾಸವಾಗಿದ್ದ ಪುರಾತನ ಶಿಲಾಯುಗದ ಜನರು ತಮ್ಮ ಆಹಾರಕ್ಕಾಗಿ ಸಾಗರಗಳನ್ನು ಅವಲಂಬಿಸಿದ್ದರೆಂಬುದಕ್ಕೆ ಸಾಕ್ಷಿಗಳಿವೆ. ಇತಿಹಾಸದ ಪೂರ್ವದಿಂದಲೂ ಮಾನವ ಸಾಗರಗಳೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿದ್ದಾನೆ. ಪುರಾಣಗಳನ್ನು ಕೂಡ ಗಮನಕ್ಕೆ ತೆಗೆದುಕೊಂಡರೆ, ಬಹುತೇಕ ಪುರಾಣಗಳಲ್ಲಿ ಸಾಗರಗಳ ಪ್ರಸ್ತಾಪವಿದೆ. "ಬ್ರಹ್ಮಾಂಡ ಪುರಾಣ', 'ಸ್ಕಂದ ಪುರಾಣ' 'ಕೂರ್ಮ ಪುರಾಣ'ಗಳಲ್ಲೂ ಸಾಗರಗಳನ್ನು ಕುರಿತು ವಿವರಿಸಲಾಗಿದೆ. ಬ್ರಹ್ಮಾಂಡ ಪುರಾಣದಲ್ಲಿ ಸಮುದ್ರ ಮಂಥನದ ಉಲ್ಲೇಖವಿದೆ. ಚರಿತ್ರೆಯ ಪುಟಗಳನ್ನು ಗಮನಿಸಿದರೆ, ಮಹಾದಾರ್ಶನಿಕನಾದ ಅರಿಸ್ಟಾಟಲ್ ಸಾಗರಗಳ ವಿದ್ಯಮಾನಗಳ ಬಗ್ಗೆ ಆಸಕ್ತಿವಹಿಸಿದ್ದನು. ಇಂದಿಗೂ ಸಾಗರಗಳು ಹಾಗೂ ವಾಯುಗೋಳಗಳ ನಡುವಣ ಜಲವಿನಿಮಯ' (Atmosphere and Water Exchange) ಎಂಬ ಪ್ರಮುಖ ಸೂತ್ರದ ಮೂಲ ರೂಪರೇಷೆಗಳನ್ನು ಈತನು ದೃಢಪಡಿಸಿದನು. ಸಾಗರಗಳು ಹೇಗೆ ಮತ್ತು ಯಾವಾಗ ರಚಿತವಾದವೆಂಬುದು ಇನ್ನೂ ನಿರ್ದಿಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಒಂದು ಅಂಶ ಮಾತ್ರ ಖಚಿತವಾಗಿದೆ ಭೂಮಿಯ ಸೃಷ್ಟಿಯಾದಾಗ ಸಾಗರಗಳಿರಲಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬರುತ್ತದೆ. ಜಾಗತಿಕ ನಕ್ಷೆಯನ್ನು ಪರಿವೀಕ್ಷಿಸಿದಾಗ ಅನಿಯಮಿತವಾಗಿ ಹರಡಿಕೊಂಡಿರುವ ಭೂಮಿಯನ್ನು ಎಲ್ಲ ಕಡೆ ಗಳಿಂದಲೂ ಸಾಗರಗಳು ಆವರಿಸಿರುವುದು ಸ್ಪಷ್ಟವಾಗುತ್ತದೆ. ಸಾಗರಗಳು ಗೋಳದ ಒಟ್ಟು ಪ್ರದೇಶದ 3/4 ರಷ್ಟು ಭಾಗವನ್ನು ಆವರಿಸಿದರೆ, ಭೂಮಿಯ ಪ್ರದೇಶ ಕೇವಲ 1/4ರಷ್ಟು ಮಾತ್ರ ಇರುವುದು ಕಂಡುಬರುತ್ತದೆ.
ಸಾಗರಗಳು ಮೀನುಗಳ ಆಗರ. ಲಕ್ಷಾಂತರ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಸಾಗರಗಳ ಗರ್ಭದಲ್ಲಿ ಇರುತ್ತವೆ. ಸಾಗರಗಳು ಖನಿಜಗಳ ಆಗರ. ಸಾಗರಗಳು ಪ್ರಪಂಚದ ವಾಯುಗುಣವನ್ನು ನಿಯಂತ್ರಿಸುತ್ತವೆ. ಸಾಗರಗಳಿಂದ ನಾವು ಅನೇಕಾನೇಕ ಉಪಯೋಗಗಳನ್ನು ಪಡೆಯುತ್ತೇವೆ. ಉಪ್ಪಿನ ಮೂಲ ಸಾಗರವೇ ಆಗಿದೆ. ತೈಲ, ಮರಳು ಮೊದಲಾದ ಖನಿಜಗಳು ಸಾಗರಗಳಿಂದ ಲಭ್ಯವಾಗುತ್ತದೆ. ಇಷ್ಟೇ ಅಲ್ಲದೆ ಮನುಷ್ಯನಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉಪಯುಕ್ತವಾಗಿವೆ ಅವುಗಳೆಂದರೆ ದೊಡ್ಡ ನೌಕಾಯಾನಕ್ಕೆ ಉಪಯುಕ್ತವಾಗಿದೆ. ಬಂದರು ಮತ್ತು ಹಡಗು ನಿಲ್ದಾಣಗಳನ್ನು ನಿರ್ಮಿಸಲು ಸಹಕಾರಿಯಾಗುತ್ತವೆ. ಉಬ್ಬರವಿಳಿತಗಳಿಂದ ಬರುವ ನೀರು ಬಂದರುಗಳ ತೀರವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತವೆ. ಮೀನುಗಾರಿಕೆಗೆ ಅನುಕೂಲವಾಗುತ್ತದೆ ಮತ್ತು ಉಬ್ಬರಗಳಿಂದ ವಿದ್ಯಚ್ಛಕ್ತಿಯನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.
ಅಂತರ್ರಾಷ್ಟ್ರೀಯ ಸಾಗರ ದಿನದ ಉದ್ದೇಶವೇನೆಂದರೆ ಸಾಗರಗಳನ್ನು ಮಲಿನಗೊಳಿಸದೆ ರಕ್ಷಿಸಬೇಕು ಎಂಬುದಾಗಿದೆ. ಹಡಗುಗಳಲ್ಲಿ ತೈಲ ಸಾಗಿಸುವಾಗ ಎಷ್ಟೋ ವೇಳೆ ತೈಲವು ಸಾಗರಗಳ ಪಾಲಾಗುತ್ತದೆ ಹೀಗಾಗಿ ಸಾಗರ ಮಲಿನಗೊಳ್ಳುತ್ತದೆ. ಕೈಗಾರಿಕೆಗಳು ವಾಹನಗಳು ಹೊರದೂಡುವ ಇಂಗಾಲದ ಡೈ ಆಕ್ಸೈಡ್ ಸಾಗರಕ್ಕೆ ಭಾಗಶಃ ಸೇರಿ ಕಾರ್ಬನಿಕ್ ಆಮ್ಲ ಉತ್ಪತ್ತಿಗೊಂಡು ಚಿಪ್ಪಿನ ಜೀವಿಗಳಿಗೆ ಹಾನಿಯಾಗುತ್ತದೆ. ಸೀಸ ಮೊದಲಾದ ವಿಷಪೂರಿತ ರಾಸಾಯನಿಕಗಳು ಸಾಗರಗಳ ಒಡಲು ಸೇರುತ್ತವೆ. ಅಸಂಖ್ಯಾತ ಜನ ವಿಹಾರಕ್ಕೆಂದು ಸಾಗರ ತೀರಗಳಿಗೆ ಬಂದು ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಸಾಗರಕ್ಕೆ ಸೇರಿಸುತ್ತಿದ್ದಾರೆ ಇದು ಭವಿಷ್ಯದಲ್ಲಿ ಅಪಾಯವನ್ನು ಸೂಚಿಸುವುದಾಗಿದೆ. ಸುಂದರವಾದ ಸಾಗರ, ಕರಾವಳಿ ತೀರದಿಂದ ಕಂಗೊಳಿಸುತ್ತಿದ್ದ ಸಾಗರ, ಸಮುದ್ರಗಳು ಇಂದು ಪರಿಸರ ನಾಶವಾದಂತೆ, ಕೆಡುತ್ತಾ ಬಂದಿವೆ. ಕರಾವಳಿ ಪ್ರದೇಶಗಳು ಕೂಡ ನಾಶದ ಹಂತದಲ್ಲಿವೆ. ಅಣುಸ್ಫೋಟಗಳಿಂದ ಉತ್ಪನ್ನವಾಗುವ ವಿಕಿರಣದ ವಸ್ತುಗಳು ಮತ್ತು ಕ್ರಿಮಿನಾಶಕಗಳಿಂದ ಉಂಟಾಗುವ ಜೈವಿಕ ನಂಜು ಮೊದಲಾದ ವಸ್ತುಗಳು ಸಾಗರಜಲವನ್ನು ಕಲುಷಿತಗೊಳಿಸಿವೆ. ಜೊತೆಗೆ ಸಾಗರಗಳಲ್ಲಿ ಭೀಕರ ಪ್ರಮಾಣದಲ್ಲಿ ವಿಷವಸ್ತುಗಳು ನೆಲೆಗೊಳ್ಳುತ್ತಿವೆ. ಗ್ಲೋಬಲ್ ವಾರ್ಮಿಂಗ್ ನಿಂದಾಗಿ ಕೆಲವು ದುಷ್ಪರಿಣಾಮಗಳಾಗುತ್ತಿದ್ದು ಹಿಮಕವಚಗಳು ಕರಗಿ ನೀರಾಗಿ ಸಮುದ್ರಕ್ಕೆ ಸೇರುತ್ತವೆ. ಇದರಿಂದಾಗಿ ಸಮುದ್ರ ಮಟ್ಟಗಳು ಏರುತ್ತವೆ. ಇದರಿಂದ ಕರಾವಳಿ ಪ್ರದೇಶಗಳು, ದ್ವೀಪಗಳು, ಅನೇಕ ದೇಶಗಳು ಸಾಗರಗಳ ಪಾಲಾಗುತ್ತವೆ. ರಾಶಿ ರಾಶಿ ಮೀನುಗಳು ಸಾಯುತ್ತವೆ. ಅವು ಸಾಗರಗಳಲ್ಲಿಯೇ ಕೊಳೆತು ಮತ್ತಷ್ಟು ಮಲಿನವಾಗುತ್ತವೆ. ಮೀನುಗಳ ಸಂಖ್ಯೆಯೂ ಮೀನುಗಾರಿಕೆಯಿಂದಾಗಿ ಕ್ಷೀಣಿಸುತ್ತಿವೆ.
ಸಾಗರಗಳು ವಿಭಿನ್ನ, ವಿಶಿಷ್ಠ ಮತ್ತು ವೈವಿಧ್ಯಮಯವಾದ ಜೀವವೈವಿಧ್ಯತಾ ತಾಣಗಳಾಗಿದೆ. ಅವುಗಳ ಸಂರಕ್ಷಣೆಯ ಹೊಣೆ ನಮ್ಮ ಮೇಲಿದೆ. ಆದ್ದರಿಂದ ಸಾಗರಗಳ ಪರಿಸರ ವ್ಯವಸ್ಥೆಯ ಸಂರಕ್ಷಣೆ ದೃಷ್ಟಿಯಿಂದ ಸಾಗರಗಳ ಕುರಿತು ಅಧ್ಯಯನ ನಡೆಸಲಾಯಿತು. ಸಾಗರಗಳ ಹಾಗೂ ವಾಯುಗೋಳಗಳ ನಡುವಣ ಸಂಬಂಧವನ್ನು ಹೆಚ್ಚು ಅರ್ಥಪೂರ್ಣವಾಗಿ ವಿವೇಚನೆ ಮಾಡಲಾಯಿತು. ಅಮೆರಿಕಾ ರಾಷ್ಟ್ರವು 1968 ರಲ್ಲಿ 'ಅಂತಾರಾಷ್ಟ್ರೀಯ ಸಾಗರ ಸಂಶೋಧನಾ ದಶಕ' (--International Decade of Ocean Exploration) ಎಂದು ಘೋಷಿಸಿ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಹತ್ತು ವರ್ಷಗಳಲ್ಲಿ ಅನೇಕ ಸಂಶೋಧನೆಗಳನ್ನು ನಡೆಸಿತು. ಸಂಶೋಧನೆಗಳ ಕಾರ್ಯಕ್ರಮಗಳು ಸಾಗರಗಳ ಬಗೆಗಿನ ಪರಿಜ್ಞಾನವನ್ನು ಮತ್ತೆ ಹೆಚ್ಚಿಸಿದವು. ಆದರೆ ಸಾಗರವನ್ನು ಮತ್ತು ಅವುಗಳ ಒಡಲಿನಲ್ಲಿರುವ ಜೈವಿಕ ಘಟಕಗಳನ್ನು ಉಳಿಸಬೇಕೆಂಬ ದೃಷ್ಟಿಯಿಂದ ವಿಶ್ವಸಂಸ್ಥೆಯು '1998 ' ನೇ ವರ್ಷವನ್ನು 'ಅಂತಾರಾಷ್ಟ್ರೀಯ ಸಾಗರ ವರ್ಷ' ವೆಂದು ಘೋಷಿಸಿ, ಈ ಸಾಗರ ವರ್ಷದ ಹಕ್ಕನ್ನು ಯುನೆಸ್ಕೋ ಸಂಸ್ಥೆಗೆ ನೀಡಿತು. ಯುನೆಸ್ಕೋ ಸಾಗರಕ್ಕೆ ಸಂಬಂಧ ಪಟ್ಟಂತೆ ಪ್ರತ್ಯೇಕ ಲಾಂಛನವನ್ನು ತಯಾರಿಸಿತು. ಅಂತರರಾಷ್ಟ್ರೀಯ ಸಾಗರ ದಿನವನ್ನು ವಿಶ್ವ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಆಚರಿಸುತ್ತವೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಕೆನಡಾ, ಚಿಲಿ, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಭಾರತ, ಇಸ್ರೇಲ್, ಇಟಲಿ, ಜಪಾನ್, ಮೆಕ್ಸಿಕೋ, ಪೋಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್ ಗಳನ್ನೂ ಒಳಗೊಂಡಂತೆ ವಿಶ್ವದ ಬಹುತೇಕ ರಾಷ್ರಗಳಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಅಂತರರಾಷ್ಟ್ರೀಯ ಸಾಗರ ದಿನಾಚರಣೆ 2024 ರ ಅಧಿಕೃತ ಥೀಮ್ ನ್ನು ವಿಶ್ವ ಸಂಸ್ಥೆ ನೀಡಿದೆ. ಅದೇನೆಂದರೆ "ನಮ್ಮ ಸಾಗರ ಮತ್ತು ಹವಾಮಾನಕ್ಕೆ ವೇಗವರ್ಧಕ ಕ್ರಿಯೆ". ಪರಿವರ್ತಕ ಸಹಯೋಗದ ಮೂಲಕ ಚಳುವಳಿಯನ್ನು ಬೆಳೆಸುವ ಮೂಲಕ, ನಾವು ಆರೋಗ್ಯಕರ ನೀಲಿ ಗ್ರಹವನ್ನು ಮಾತ್ರವಲ್ಲದೆ ಹೆಚ್ಚು ನ್ಯಾಯಯುತ, ಸಮಾನ ಮತ್ತು ಸುಸ್ಥಿರ ಸಮಾಜವನ್ನು ರಚಿಸುವ ಗುರಿಯನ್ನು ಹೊಂದಿದ್ದೇವೆ ಎಂಬ ಅಂಶವು ಅಧ್ಯಯನದಿಂದ ತಿಳಿದು ಬರುತ್ತದೆ.
ಸಾಗರಗಳ ಸಂರಕ್ಷಣೆ ಇತ್ತೀಚಿನ ವರ್ಷಗಳಲ್ಲಿ ಅತಿ ಮುಖ್ಯವಾಗಿದೆ. ಸಾಗರಗಳು ಮನುಷ್ಯನಿಗೆ ವಿವಿಧ ರೀತಿಯಲ್ಲಿ ಸಹಕಾರಿಯಾಗಿರುವು ದಲ್ಲದೆ ಅವುಗಳಲ್ಲಿ ಅಸಂಖ್ಯಾತ ಬಗೆಯ ಜೀವಿಗಳು ಜೀವಿಸುತ್ತವೆ. ಸಾಗರಗಳು ಸಹ ಇಂದು ಮಾಲಿನ್ಯಗೊಳ್ಳುತ್ತಿವೆ. ಆದ್ದರಿಂದ ಸಾಗರಗಳನ್ನು ಸಂರಕ್ಷಿಸುವುದು ಅಗತ್ಯವಿದೆ.
ಯಾವುದೇ ರೀತಿಯ ತ್ಯಾಜ್ಯ ವಸ್ತುಗಳನ್ನು ಬಂದರು ಹಾಗೂ ಹಡಗು ತಾಣಗಳಲ್ಲಿ ಎಸೆಯುವುದನ್ನು ನಿಯಂತ್ರಿಸುವುದು. ಸಾಗರಗಳ ಮೂಲಕ ಹಡಗುಗಳಲ್ಲಿ ಕಚ್ಚಾ ತೈಲವನ್ನು ಸಾಗಿಸುವ ಬದಲು ಕೊಳವೆ ಮಾರ್ಗಗಳ ಮೂಲಕ ಸಾಗಿಸುವುದು. ತೀರವಲಯದಲ್ಲಿರುವ ತೈಲ-ರಾಸಾಯನಿಕ ಕೈಗಾರಿಕೆಗಳು ಮಾಲಿನ್ಯ ಉಂಟುಮಾಡದಂತೆ ತೀವ್ರ ಕ್ರಮಕೈಗೊಳ್ಳುವುದು. ಅಣು ಇಂಧನ ತಾಜ್ಯವಸ್ತುಗಳನ್ನು ಸಾಗರಗಳಿಗೆ ಹಾಕುವುದನ್ನು ನಿಯಂತ್ರಿಸುವುದು. ಕರಾವಳಿಯ ಮರಳು ದಂಡೆಗಳನ್ನು (ಬೀಚ್) ವಿವಿಧ ರೀತಿಯಲ್ಲಿ ಹಾಳು ಮಾಡುತ್ತಿದ್ದು, ಅವುಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ
ತೀರ ಪ್ರದೇಶಗಳಲ್ಲಿ ಅದಿರುಗಳ ಸಂಗ್ರಹಣೆ, ಗಣಿಗಾರಿಕೆ ಮೊದಲಾದವುಗಳನ್ನು ನಿಯಂತ್ರಿಸುವ ಮೂಲಕ ಸಾಗರಗಳ ಸಂರಕ್ಷಣೆ ಅತ್ಯಗತ್ಯವಾಗಿದೆ.
ಕೆ. ಎನ್. ಚಿದಾನಂದ. ಸಾಹಿತಿ. ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ