ನಮ್ಮ ಭೂಮಿ ನಮ್ಮ ಭವಿಷ್ಯ

Upayuktha
0

[ ಜೂನ್ 5 : ವಿಶ್ವ ಪರಿಸರ ದಿನಾಚರಣೆ ನಿಮಿತ್ತ ]



ಭೂಮಿ ಬಿಸಿಯಾಗುತ್ತಿದೆ. ಜಾಗತಿಕ ತಾಪಮಾನದ ಏರಿಕೆಯ ಪರಿಣಾಮವಾಗಿ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ನಿರಂತರವಾಗಿ ಹೆಚ್ಚಳವಾಗುತ್ತಿರುವ ಜನಸಂಖ್ಯೆ ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ತನ್ನ ಬೇಡಿಕೆಗಳ ಈಡೇರಿಕೆಗಾಗಿ ಬಳಸಿಕೊಂಡು ಬರಿದು ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ . ಇದರಿಂದಾಗಿ ಭೂಮಿಗೆ ಭವಿಷ್ಯವೇ ತಪ್ಪಿ ಹೋಗಬಹುದು. ಭೂಮಿಯೇ ಇಲ್ಲವೆಂದ ಮೇಲೆ ಇನ್ನು ನಾವೆಲ್ಲಿ? ಎಂಬ ಅಭಿಪ್ರಾಯ ಮತ್ತು ಎಚ್ಚರಿಕೆಯನ್ನು ಬಹಳಷ್ಟು ಅಧ್ಯಯನಗಳು , ಪರಿಸರ ತಜ್ಞರು ಹೇಳಿದ್ದಾರೆ. ಅಂದಮೇಲೆ ನಾವೆಲ್ಲರೂ ಈ ಕುರಿತು ಗಂಭೀರವಾಗಿ ಯೋಚಿಸುವ ಸಂದರ್ಭ ಬಂದಿದೆ.  


ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. 

ವಿಶ್ವ ಪರಿಸರ ದಿನಾಚರಣೆಯ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳಲು ವಿಶ್ವದಾದ್ಯಂತ ಜನರನ್ನು ಪ್ರೋತ್ಸಾಹಿಸಲಾಗು ತ್ತದೆ. ಪ್ರತಿ ವರ್ಷವೂ ವಿಶ್ವ ಸಂಸ್ಥೆಯು ವಿಭಿನ್ನ ಥೀಮ್ ಅಥವಾ ವಿಷಯವನ್ನಿಟ್ಟುಕೊಂಡು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. 


2024 ಈ ವರ್ಷ, ವಿಶ್ವ ಪರಿಸರ ದಿನದ ಥೀಮ್ ಏನೆಂದರೆ - ಭೂಮಿ ಮರುಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ." ಬರದ ಪರಿಣಾಮದಿಂದಾಗಿ ಮರುಭೂಮೀಕರಣ ಹೆಚ್ಚುತ್ತಿದೆ. ಇದರ ವಿರುದ್ಧ ವಿಶ್ವದ ಎಲ್ಲಾ ಜನ ಹೋರಾಡಬೇಕಿದೆ. ಅದೂ ಗಿಡಗಳನ್ನು ನೆಟ್ಟು , ನೀರೆರೆಯು , ಬೆಳೆಸುವ ಮೂಲಕ  ಕ್ಷೀಣಿಸಿತ್ತಿರುವ ಭೂಮಿಯನ್ನು ಉಳಿಸಿಕೊಳ್ಳಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯು ಹಲವು ರೂಪಗಳನ್ನು ಪಡೆಯಬಹುದು: ಮರಗಳನ್ನು ಬೆಳೆಸುವುದು, ನಗರಗಳನ್ನು ಹಸಿರೀಕರಣ ಮಾಡುವುದು, ಉದ್ಯಾನಗಳನ್ನು ಪುನರ್ನಿರ್ಮಾಣ ಮಾಡುವುದು, ಆಹಾರವನ್ನು ಬದಲಾಯಿಸುವುದು ಅಥವಾ ನದಿಗಳು ಮತ್ತು ಕರಾವಳಿಗಳನ್ನು ಸ್ವಚ್ಚಗೊಳಿಸುವುದು. ( THE THEME OF WORLD ENVIRONMENT DAY 2024 IS " LAND RESTORATION, DESERTIFICATION AND RESILIENCE " THE SLOGAN FOR THE EVENT WILL BE " OUR LAND, OUR FUTURE " )  ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಈ ಜಗತ್ತಿನಲ್ಲಿ ಮಾನವರಾದ ನಾವು ಏಕಾಂಗಿಗಳಲ್ಲ. ನಮ್ಮ ಸುತ್ತಲೂ ಗಿಡ, ಮರ, ಕ್ರಿಮಿ ಕೀಟಗಳು, ಪಕ್ಷಿ, ಪ್ರಾಣಿಗಳು, ನದಿ, ಸರೋವರ, ಸಾಗರ, ಬೆಟ್ಟ ಗುಡ್ಡ, ಪರ್ವತ, ಗಾಳಿ, ನೀರು, ಬೆಳಕು, ಮಣ್ಣು, ಆಕಾಶ ಇವೆಲ್ಲವೂ ಇವೆ. ಇವೆಲ್ಲವುಗಳನ್ನು ಒಟ್ಟುಗೂಡಿಸಿ ಪರಿಸರ ಎನ್ನುತ್ತೇವೆ. ಇಲ್ಲಿ ಜೈವಿಕ ಮತ್ತು ಅಜೈವಿಕ ಘಟಕಗಳು ಮುಖ್ಯವಾಗಿವೆ. ಇವು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರವನ್ನು ಸ್ವಚ್ಛ ವಾಗಿರಿಸಿಕೊಳ್ಳು ವುದು ನಮ್ಮ ಹೊಣೆ. 


ಮಾನವ ಪರಿಸರ ಕುರಿತಂತೆ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯು 1972 ರಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲು ನಿರ್ಣಯವನ್ನಿ ಟ್ಟಿತು. ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ಪರಿಸರದ ಏಕೀಕರಣ ಕುರಿತು ಚರ್ಚೆಗಳು ನಡೆದವು. ಎರಡು ವರ್ಷಗಳ ನಂತರ, 1974 ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು "ಕೇವಲ ಒಂದು ಭೂಮಿ" ಎಂಬ ಥೀಮ್‌ ಅಥವಾ ವಿಷಯದೊಂದಿಗೆ ನಡೆಸಲಾಯಿತು. 1974 ರಲ್ಲಿ ಮೊದಲ ಬಾರಿಗೆ ನಡೆದ ದಿನಾಚರಣೆಯಲ್ಲಿ ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಅಭಿಯಾನವಾಗಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ, ವಾರ್ಷಿಕವಾಗಿ 143 ಕ್ಕೂ ಹೆಚ್ಚು ರಾಷ್ಟ್ರಗಳ ಭಾಗವಹಿಸುವಿಕೆ ಇರುತ್ತದೆ. 1974 ರಿಂದ ವಾರ್ಷಿಕವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಆತಿಥೇಯ ರಾಷ್ಟ್ರಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ಮಾಡಿತು. 2021 ರ ವಿಶ್ವ ಪರಿಸರ ದಿನಾಚರಣೆಯ ಅತಿಥೇಯ ರಾಷ್ಟ್ರ ಪಾಕಿಸ್ತಾನವಾಗಿದೆ. 


2018 ರಲ್ಲಿ ಭಾರತ ಆತಿಥೇಯ ರಾಷ್ಟ್ರವಾಗಿತ್ತು. ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂಬ ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. “ನಮ್ಮ ನಿಸರ್ಗವನ್ನು ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಬೇಕು. ನಮ್ಮ ವನ್ಯಜೀವಿಗಳು, ಪರಿಸರದ ರಕ್ಷಣೆಯಾಗಬೇಕು. ಪ್ಲಾಸ್ಟಿಕ್‌ನ ಘೋರ ಪರಿಣಾಮಗಳಿಂದ ಜಗತ್ತಿನ ರಕ್ಷಣೆಯಾಗಬೇಕು’ ಎಂದು ಅಭಿಯಾನ ಸಾಗಿತು. ಅಂದಹಾಗೆ, 2022 ರೊಳಗೆ ಭಾರತವನ್ನು ಪ್ಲಾಸ್ಟಿಕ್‌ ಮುಕ್ತ ದೇಶವನ್ನಾಗಿ ಮಾಡುವ ಪ್ರತಿಜ್ಞೆಯನ್ನು ಭಾರತ ಸರಕಾರ ಕೈಗೊಂಡಿತ್ತು. ಇದೇ ರೀತಿ ವಿಶ್ವಸಂಸ್ಥೆಯಲ್ಲಿ ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಗಳ ವಿಭಿನ್ನ ಹಾಗೂ ವೈವಿಧ್ಯಮಯ ಆಲೋಚನೆಗಳು ಪ್ರಾರಂಭವಾದವು. "ನಮಗೆ ಇರುವುದೊಂದೇ ಭೂಮಿ- ಅದರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ" ಎಂಬುದು ಸಾರ್ವತ್ರಿಕವಾದ ಆಶಯ. ಆದರೆ ಪರಿಸರ ಸಂರಕ್ಷಣೆ ನಮ್ಮಿಂದ ಸಾಧ್ಯವಾಗದೆ ಹೋಗುತ್ತಿರುವುದು ಒಂದು ಶೋಚನೀಯ ಸಂಗತಿ. ಇಂದು ಪರಿಸರ ಮಾಲಿನ್ಯ ವಿಶ್ವವನ್ನು ಅತ್ಯಂತ ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳುವುದೇ ಮಹತ್ವದ ಕರ್ತವ್ಯವಾಗಿದೆ. ಈ ಆಶಯದೊಂದಿಗೆ, ಜನಜಾಗೃತಿಯ ಅಭಿಯಾನಕ್ಕೆ ಪ್ರತೀ ವರ್ಷ ಜೂನ್‌ 5ರಂದು ಆಚರಣೆಯಾಗುವ ವಿಶ್ವ ಪರಿಸರ ದಿನವು ಸ್ಫೂರ್ತಿಯಾಗಿದೆ.


ಇಂದಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ನಾಲ್ಕು ಮುಖ್ಯವಾದ ಪರಿಸರ ಮಾಲಿನ್ಯಗಳೆಂದರೆ ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಮಣ್ಣಿನ ಮಾಲಿನ್ಯ. ಆಧುನೀಕರಣ, ಪಾಶ್ಚಾತ್ಯೀಕರಣ, ನಗರೀಕರಣ, ಕೈಗಾರಿಕೀಕರಣ, ಮಿತಿಮೀರಿದ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ, ವಿವಿಧ ರಾಸಾಯನಿಕ ವಸ್ತುಗಳ ಬಳಕೆ, ಜೈವಿಕಾಸ್ತ್ರಗಳ ಬಳಕೆ, ಜನಸಮೂಹದ ಮಿತಿಮೀರಿದ ಬಯಕೆಗಳು, ಅಗತ್ಯಕ್ಕಿಂತ ಹೆಚ್ಚಿನ ವಾಹನದಟ್ಟಣೆ, ಅಗತ್ಯಕ್ಕಿಂತ ಹೆಚ್ಚಿನ ಮೊಬೈಲ್‌ ಬಳಕೆ, ಅರಣ್ಯ ನಾಶ, ಅಳಿನಂಚಿನಲ್ಲಿರುವ ವಿಶೇಷ ಜೀವವೈವಿಧ್ಯತೆ, ಪ್ರಾಕೃತಿಕ ಸಂಪನ್ಮೂಲಗಳ ಮಿತಿಮೀರಿದ ಶೋಷಣೆ ಮುಂತಾದ ಅಂಶಗಳು ಪರಿಸರ ಮಾಲಿನ್ಯಕ್ಕೆ ಕಾರಣವೆಂದು ಹೇಳಬಹುದಾಗಿದೆ. 


ಪರಿಸರ ಮಾಲಿನ್ಯದ ಪರಿಣಾಮಗಳೂ ಕೂಡಾ ಭೀಕರವಾಗಿಯೇ ಇವೆ. ಪರಿಶುದ್ಧವಾದ ಗಾಳಿ ಸಿಗದೆ ಜೀವಿಗಳಲ್ಲಿ ಉಸಿರಾಟದ ಸಮಸ್ಯೆ ಉಂಟಾಗುವುದು. ಪ್ರಸ್ತುತ ನಾವು ನೋಡುತ್ತಿರುವಂತೆ ಕೋವಿಡ್-19 ರ ವ್ಯಾಪಕ ಸಾಂಕ್ರಾಮಿಕ ರೋಗದಿಂದ ಜನರಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ( ಆಮ್ಲಜನಕ ) ದೊರೆಯದ ಕಾರಣದಿಂದಾಗಿ ಅದೆಷ್ಟೋ ರೋಗಿಗಳು ಸಾವನ್ನಪ್ಪಿದರು. ಇದು ಪರಿಸರ ಮಾಲಿನ್ಯದ ಪರಿಣಾಮವೇ ಆಗಿದೆ. ಗಾಳಿಯ ಕಳಪೆ ಗುಣಮಟ್ಟದಿಂದಾಗಿ ಜನರಲ್ಲಿ ಆಸ್ತಮಾದ ಸಂಭವ ಇಂದು ಅತಿ ಹೆಚ್ಚಾಗಿದೆ. ನಗರದ ಜನರಲ್ಲಿ ಕೆಮ್ಮು ಮತ್ತು ಉಬ್ಬಸ ಹೆಚ್ಚು ಹೆಚ್ಚಾಗಿ ಕಾಣಬರುತ್ತಿದೆ. ಕೇವಲ ವೈರಸ್ ತಡೆಗಟ್ಟುವಿಕೆ ಗಾಗಿ ಮಾತ್ರವಲ್ಲ, ವಿಷಾನಿಲ ಭರಿತ ವಾಯುಸೇವನೆಯಿಂದ ರಕ್ಷಣೆ ಪಡೆಯಲೂ ಜನರು ಈಗ ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿಯೇ ಬರಬೇಕಾದ ಅನಿವಾರ್ಯತೆ ಉಂಟಾಗಿದೆ. ಕೈಗಾರಿಕೆಗಳ ಬೆಳವಣಿಗೆಯಿಂದ ಶಬ್ದಮಾಲಿನ್ಯ,ಜಲ ಮಾಲಿನ್ಯ, ವಾಯುಮಾಲಿನ್ಯ ಕ್ರಮವಾಗಿ ಉಂಟಾಗುತ್ತಿದ್ದು ಮಾನವನ ಆರೋಗ್ಯದ ಮೇಲೆ ಭೀಕರ ಪರಿಣಾಮವೇ ಆಗಿದೆ. ಹೃದಯ ಹಾಗೂ ಶ್ವಾಸಕೋಶ ಸಂಬಂಧಿ, ಚರ್ಮ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಶುದ್ಧ ಕುಡಿಯುವ ನೀರು ಇಲ್ಲದಾಗಿದೆ. ಜಲಮಾಲಿನ್ಯದಿಂದಾಗಿ ಮಾನವನ ಬದುಕು ಬಹಳ ದುಸ್ತರವಾಗಿದ್ದು, ಅತೀ ಸೂಕ್ಷ್ಮವಾದ ಜೀವನ ನಡೆಸುವಂತಾಗಿದೆ. ಭೂಮಿಯಲ್ಲಿ ನೈಸರ್ಗಿಕವಾಗಿ ಸಿಗುವ ನೀರನ್ನು ಮತ್ತೊಮ್ಮೆ ಸಂಸ್ಕರಣೆ ( ಫಿಲ್ಟರ್ ) ಮಾಡಿ ಸೇವಿಸುವಂತಾಗಿದೆ. ಮಿತಿಮೀರಿದ ಅರಣ್ಯ ಬಳಕೆಯಿಂದಾಗಿ ಜೀವವೈವಿಧ್ಯತೆಯು ವಿನಾಶವಾಗುತ್ತಿದೆ. ಅದೆಷ್ಟೋ ಪ್ರಾಣಿ ಪಕ್ಷಿಗಳ ಸಂಕುಲ ಮಾಯವಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಕೊರತೆ ಮತ್ತಷ್ಟು ಹೆಚ್ಚುತ್ತಿದೆ. ಜಾಗತಿಕ ತಾಪಮಾನ ದಿನೇದಿನೇ ಹೆಚ್ಚುತ್ತಿದೆ. ಪರಸರ ಮಾಲಿನ್ಯದ ನಿಯಂತ್ರಣವನ್ನು ಆದಷ್ಟು ವೇಗವಾಗಿ ಮಾಡುತ್ತಾ ಪರಿಸರ ಸಂರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.

*  ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದು.

*  ಜೈವಿಕ ಸಂರಕ್ಷಣೆಯನ್ನು ಮಾಡುವುದು. ಅಂದರೆ ವಿಶ್ವದ ಜೀವ ಜಂತುಗಳನ್ನು ಸಂರಕ್ಷಿಸುವುದು.

*  ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವುದು ಮತ್ತು ನಿಷೇಧಿಸುವುದು.

*  ಕೈಗಾರಿಕೆಗಳಲ್ಲಿ ಹೊಗೆ ನಳಿಕೆಗಳನ್ನು ಹೆಚ್ಚು ಎತ್ತರದಲ್ಲಿ ನಿರ್ಮಿಸುವುದು. ಆ ಮಾಲಿನ್ಯ ರಹಿತ ವಾತಾವರಣವನ್ನು ರೂಪಿಸುವುದು ಮತ್ತು ಈ ಕುರಿತು ಜಾಗೃತಿ ಮೂಡಿಸುವುದು. 

*  ಶಾಲಾ-ಕಾಲೇಜುಗಳ ಆವರಣದಲ್ಲಿ ದೇವಾಲಯಗಳ ಖಾಲಿ ಜಾಗ, ರಸ್ತೆಗಳ ಅಕ್ಕಪಕ್ಕದಲ್ಲಿ , ಹಾಸ್ಟೆಲ್ ಗಳ ಖಾಲಿಜಾಗ , 

ಹೀಗೆ ಹತ್ತು- ಹಲವು ಜಾಗಗಳಲ್ಲಿ ಸಸಿಗಳನ್ನು ಬೆಳೆಸುವುದು. 

*  ಸಾಧ್ಯವಿರುವಷ್ಟುಮಟ್ಟಿಗೆ ಅವಕಾಶವಿರುವ ಜಾಗದಲ್ಲಿ ಗಿಡಮರಗಳನ್ನು ಬೆಳೆಸಿ ಪೋಷಿಸುವುದು. ಆ ಮೂಲಕ ಪರಿಸರ ಸಂರಕ್ಷಣೆ ಮಾಡುವುದು. ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ಸಂರಕ್ಷಿಸುವುದು.

*  ಮರಗಳನ್ನು ಕಡಿದ ಸ್ಥಳದಲ್ಲಿ ಹೊಸ ಗಿಡವನ್ನು ನೆಟ್ಟು ಬೆಳೆಸುವುದು.

*  ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಬೋಧನೆಯ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಭೂ ಸಂರಕ್ಷಣೆ, ಜಲ ಸಂರಕ್ಷಣೆ, ವನ ಸಂರಕ್ಷಣೆ ಮುಂತಾದ ಪರಿಸರ ವಿಚಾರಗಳ ಕುರಿತು ಅರಿವು ಮೂಡಿಸುವುದು. 

*  ಪರಿಸರವಾದಿಗಳಾದ‌ ಸುಂದರ್ಲಾಲ್ ಬಹುಗುಣ, ಸಾಲುಮರದ ತಿಮ್ಮಕ್ಕ, ತುಳಸೀಗೌಡ, ಅಲ್ಮಿತ್ರಾ ಪಟೇಲ್, ಡಾ||ರಾಜೇಂದ್ರ ಕೆ. ಪಚೌರಿ, ರಾಹಿಬಾಯಿ ಪೊಪೆರೆ, ಲಿಸಿಪ್ರಿಯಾ ಕಂಗುಜಮ್, ವೃಕ್ಷ ಸಂರಕ್ಷಕ ಚ.ನಂ. ಅಶೋಕ್ ಮುಂತಾದವರ ಕಾರ್ಯವೈಖರಿ, ತತ್ವಾದರ್ಶಗಳನ್ನು ಸಾರ್ವಜನಿಕರಿಗೆ ತಿಳಿಸುವುದು. ಶಾಲಾ ಕಾಲೇಜುಗಳಲ್ಲಿ ಪಠ್ಯ ಬೋಧನಾ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಪರಿಸರವಾದಿಗಳ ಚಿಂತನೆಗಳನ್ನು ಬೋಧಿಸುವುದು.

*  ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಂದ ಭೂಮಿ, ನೀರು, ಗಾಳಿ, ಮಣ್ಣು, ಅರಣ್ಯ ಮುಂತಾದ ಪ್ರಾಕೃತಿಕ ವಿಷಯಗಳ ಸಂಬಂಧ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಬೀದಿ ನಾಟಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನ ಜಾಗೃತಿ ಮೂಡಿಸುವುದು.

*  ವಿಶ್ವ ರಾಷ್ಟ್ರಗಳ ಸರ್ಕಾರಗಳು ಈಗಾಗಲೇ ಪರಿಸರ ಸಂರಕ್ಷಣೆಯ ಕುರಿತಾಗಿ ಜಾರಿಗೆ ತಂದಿರುವ ಕಾನೂನು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಪಾಲನೆ ಮಾಡುವುದು.

*  ವಾಹನಗಳ ಸಂಖ್ಯೆಯನ್ನು ಮತ್ತು ಮಿತಿ ಮೀರಿದ ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ

ಮೂಡಿಸುವುದು.

*  ಹಳೆಯ ವಸ್ತುಗಳನ್ನು ಸಾಧ್ಯವಾದಷ್ಟು ಪುನರ್ಬಳಕೆ ಮಾಡಲು ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸುವುದು. ಈ ಕುರಿತು ಸಾರ್ವಜನಿಕವಾಗಿ ಅರಿವು ಮೂಡಿಸುವುದು.

* ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ ಗೀತರಚನೆ , ನಾಟಕ ರಚನೆ , ಚರ್ಚಾಸ್ಪರ್ಧೆ , ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಜಾಗೃತಿ ಮೂಡಿಸಲು ಅವಕಾಶ ಕಲ್ಪಿಸುವುದು.

*  ಶಕ್ತಿಯ ಅಪವ್ಯಯವನ್ನು ತಪ್ಪಿಸಿ , ಶಕ್ತಿಯ ಉಳಿತಾಯದ ಬಗ್ಗೆ ಪ್ರಜ್ಞೆ ಮೂಡಿಸುವುದು.

*  ವಿಶ್ವ ರಾಷ್ಟ್ರಗಳ ಸರ್ಕಾರಗಳು ಪರಿಸರ ಪೂರಕ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿರುವವರನ್ನು ಗುರ್ತಿಸಿ ಪ್ರಶಂಸಿಸಿ ಆರ್ಥಿಕ ಉತ್ತೇಜನವನ್ನು ನೀಡುವುದು. 

*  ಭಾರತದಲ್ಲಿ ವನಮಹೋತ್ಸವವನ್ನು ದೇಶದಾದ್ಯಂತ ಜುಲೈ ತಿಂಗಳು ಪೂರ್ತಿ ಪರಿಸರ ಸಂಬಂಧಿ ಚಟುವಟಿಕೆಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತದೆ. ಪ್ರತಿಯೊಂದು ಶಾಲೆ ಕಾಲೇಜು, ವಿಶ್ವ ವಿದ್ಯಾನಿಲಯ, ಸಂಘ ಸಂಸ್ಥೆಗಳಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸುವಂತೆ ಕ್ರಮವಹಿಸುವುದು ಮತ್ತು ಅರಿವು ಮೂಡಿಸುವುದು.

 

ಇಷ್ಟೇ ಅಲ್ಲದೇ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಇಂದು ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಬೇಕಾದದ್ದು ನೂರಕ್ಕೆ ನೂರರಷ್ಟು ಅಗತ್ಯವಿದೆ. ಏಕೆಂದರೆ " ನಮ್ಮ ಪರಿಸರ ನಮ್ಮ ಹೆಮ್ಮೆ " ಎಂದು ಅರಿತು ಪರಿಸರ ಸಂರಕ್ಷಣೆ  ಮಾಡುವುದು ನಮ್ಮ ಸಾಂವಿಧಾನಿಕ ಕರ್ತವ್ಯವೂ ಆಗಿದೆ. " ನಮ್ಮ ಪರಿಸರವೇ ನಮ್ಮ ಮನೆ " ಎಂದು ತಿಳಿದು ಪರಿಸರದ ಸಂರಕ್ಷಣೆ ಮಾಡೋಣ. ಇದು ರಾಜ್ಯ, ರಾಷ್ಟ್ರ, ವಿಶ್ವ ಸರ್ಕಾರಗಳ ಜವಾಬ್ದಾರಿ ಮಾತ್ರವಾಗಿರದೆ ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿ ವ್ಯಕ್ತಿಯ ವೈಯಕ್ತಿಕ ಜವಾಬ್ದಾರಿಯೂ ಆಗಿದೆ ಎಂದು ತಿಳಿದು ನಿಸರ್ಗ ಸಂರಕ್ಷಣೆ ಮಾಡೋಣ. ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ, ವಿಶ್ವ ಭೂ ದಿನ ಆಚರಣೆಗಳ ಸಂದರ್ಭದಲ್ಲಿಯೂ ವಿಶ್ವ ಪರಿಸರ ದಿನವನ್ನು ಆಚರಿಸುವುದು ನಮ್ಮ ಸಾಮಾಜಿಕ ಮತ್ತು ಮೂಲಭೂತ ಕರ್ತವ್ಯವೆಂದು ತಿಳಿದು ಈಗಲಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ನಮ್ಮ ಪರಿಸರವನ್ನು ಉಳಿಸುವ ಕಾರ್ಯದಲ್ಲಿ ಕೈಜೋಡಿಸಿ ತೊಡಗಿಕೊಳ್ಳೋಣ. ನಮಗಿರುವುದೊಂದೇ ಭೂಮಿಯನ್ನು ಅಪಾಯದಿಂದ ರಕ್ಷಿಸಿಕೊಳ್ಳೋಣ. ನಿಸರ್ಗ ಮಾತೆಯನ್ನು ನಿತ್ಯವೂ ಆರಾಧಿಸೋಣ ಬನ್ನಿ. 


-ಕೆ.ಎನ್.ಚಿದಾನಂದ. ಹಾಸನ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top