
ದೇವರನ್ನು ಮತ್ತು ಬೆರಳೆಣಿಕೆಯ ಒಬ್ಬಿಬ್ಬರನ್ನು ಹೊರತುಪಡಿಸಿ ವ್ಯಕ್ತಿ ಪೂಜೆ ಮಾಡಲೇಬಾರದು ಎಂಬ ಭಾವ ನನ್ನದು. ತಂದೆ ತಾಯಿಯನ್ನು ಪ್ರೀತಿಸಬೇಕು, ಅವರಲ್ಲೂ ಕೂಡ ಮನುಷ್ಯ ಸಹಜವಾದ ರಾಗ ದ್ವೇಷಗಳಿರುವುದರಿಂದ ಅವರ ವ್ಯಕ್ತಿತ್ವದ ಎಲ್ಲ ಒಳಿತು ಕೆಡುಕುಗಳೊಂದಿಗೆ ಅವರನ್ನು ಗೌರವಿಸಬೇಕು.
*ನಾಡು ಅತ್ಯಂತ ಗೌರವಿಸುವ ಸ್ವಾಮೀಜಿಯೊಬ್ಬರು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಹಗರಣದ ಆರೋಪದಿಂದಾಗಿ ತಮ್ಮ ಸಾಮಾಜಿಕ ಗೌರವ, ಸ್ನಾನಮಾನಗಳನ್ನು ಕಳೆದುಕೊಂಡು ಜೈಲಿನ ಕಂಬಿಗಳ ಹಿಂದೆ ನಿಂತಿದ್ದಾರೆ.
* ಕೆಲ ವರ್ಷಗಳ ಹಿಂದೆ ನಟಿಯೊಬ್ಬಳು ಯಶಸ್ವಿ ನಾಯಕ ನಟನೊಬ್ಬನಿಂದ ತನಗಾದ ಮುಜುಗರವನ್ನು ಹೇಳಿಕೊಂಡಾಗ, ತಪ್ಪು ಒಪ್ಪುಗಳ ಪರಾಮರ್ಶೆ ಮಾಡಲು ಸಾಧ್ಯವಾಗದಿದ್ದರೂ ಆಕೆಯ ವಿರುದ್ಧ ಎಲ್ಲರೂ ತಿರುಗಿ ಬಿದ್ದರು. ಮುಂದೆ ಆಕೆ ಹಲವಾರು ಅವಕಾಶಗಳನ್ನು ಕಳೆದುಕೊಂಡಳು.
*ರಾಷ್ಟ್ರೀಯ ಪಕ್ಷವೊಂದರ ಮುಖ್ಯ ಭಾಗವಾಗಿದ್ದು, ಇಡೀ ಕುಟುಂಬವೇ ರಾಜಕಾರಣದಲ್ಲಿದ್ದು ಸ್ವಯಂ ತಾನೂ ಕೂಡ ಸಂಸದನಾಗಿದ್ದ ವ್ಯಕ್ತಿಯೊಬ್ಬ ತನ್ನ ಅಧಿಕಾರ ಮದದಿಂದ ಸಾಕಷ್ಟು ಜನ ಹೆಣ್ಣು ಮಕ್ಕಳ ಬಾಳು ಹಾಳಾಗಲು ಕಾರಣವಾಗಿ ದೇಶ ತೊರೆದು ಹೋಗಿ ಇದೀಗ ಮರಳಿ ಬಂದ ನಂತರ ವಿಚಾರಣೆಯನ್ನು ಎದುರಿಸುತ್ತಿದ್ದಾನೆ .
*ಮತ್ತೋರ್ವ ನಟಿ ವಿರೋಧಿಸಬೇಕೆಂಬ ಒಂದೇ ಕಾರಣಕ್ಕಾಗಿ ಸರ್ಕಾರ ಕೊಡ ಮಾಡಿರುವ ಉಚಿತ ಬಸ್ ಪ್ರಯಾಣ ಮಾಡುವ ಹೆಣ್ಣು ಮಕ್ಕಳನ್ನು ಕುರಿತು ಅಸಭ್ಯವಾಗಿ ಮಾತನಾಡಿದ್ದಾಳೆ. ಇಂತಹ ಮಾತುಗಳನ್ನು ಆಡಿದ ಮಾಜಿ ಮುಖ್ಯಮಂತ್ರಿಗಳೊಬ್ಬರು ಕೂಡ ಜನರ ಆಕ್ರೋಶಕ್ಕೆ ಗುರಿಯಾಗಿ ಕ್ಷಮಾಪಣೆ ಕೇಳಿದರು.
* ಕಳೆದ ವಾರ ಜವಾಬ್ದಾರಿಯುತ ಪ್ರಜೆಗಳ ಪ್ರತಿನಿಧಿ ಯಾಗಿ ಆಯ್ಕೆಯಾದ ಚಿತ್ರನಟಿಯೊಬ್ಬಳು ಹರತಾಳಕ್ಕೆ ಬರುವ ಹೆಣ್ಣು ಮಕ್ಕಳ ಅನಿವಾರ್ಯತೆಯನ್ನು, ಬದುಕಿನ ದಾರಿಯನ್ನು ಹಂಗಿಸಿ ಮಾತನಾಡಿದ್ದಾಳೆ. ಕೋಟಿ ಕೋಟಿಗಳಲ್ಲಿ ಹಣ ದುಡಿಯುವ ಆಕೆಗೆ ತುತ್ತು ಅನ್ನಕ್ಕಾಗಿ ಪರದಾಡುವ, ತನ್ನಿಡೀ ಸಂಸಾರವನ್ನು ಸಾಗಿಸಲು ಒದ್ದಾಡುವ ಭಾರತದ ಕೋಟ್ಯಾಂತರ ಹೆಣ್ಣು ಮಕ್ಕಳ ಬದುಕಿನ ಬವಣೆಯ ಅರಿವಾದರೂ ಹೇಗೆ ಆದೀತು?
*ಇದೀಗ ಬಂದಿರುವ ಹೊಸ ಸುದ್ದಿ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ಓರ್ವ ಯಶಸ್ವಿ ನಾಯಕ ನಟ ತನ್ನ ಸ್ನೇಹಿತೆಗೆ ಕೆಟ್ಟದಾಗಿ ಮೆಸೇಜ್ ಮಾಡಿದ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿಗೆ ಬುದ್ಧಿ ಕಲಿಸಲು ಹೋಗಿ ಆತನ ಜೀವವನ್ನೇ ತೆಗೆಯಲು ಕಾರಣನಾಗಿದ್ದಾನೆ.
ಇದನ್ನೆಲ್ಲ ನೋಡುತ್ತಿದ್ದರೆ ನಮ್ಮ ಸಾಂಸ್ಕೃತಿಕ ಅಧಪತನದ ಹಾದಿಗಳು ನಿಚ್ಚಳವಾಗಿ ತೋರುತ್ತವೆ. ನಮ್ಮಲ್ಲಿರುವ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂಕೇತ ನಮಗೆ ಸ್ಪಷ್ಟವಾಗಿ ಕಾಣಸಿಗುತ್ತದೆ.
ಇವರಾರು ನಮಗೆ ಆದರ್ಶಪ್ರಾಯರಲ್ಲ, ಇವರಾರು ನಮ್ಮ ನಾಯಕರಲ್ಲ, ಇವರಾರಿಗೂ ನಾವು ಅಭಿಮಾನಿಗಳಾಗಬೇಕಾಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ವಿತ ಚರ್ವಣವಾಗಿ ವರದಿಯಾಗುವ ಚಲನಚಿತ್ರ ತಾರೆಯರ, ಸೆಲೆಬ್ರಿಟಿಗಳ ಬದುಕಿನ ರೀತಿ ನೀತಿಗಳನ್ನು ನಮಗೆ ತೋಚಿದಂತೆ ಅರ್ಥೈಸಿಕೊಳ್ಳುವ ಜನರು ಅವರನ್ನು ಅಭಿಮಾನದಿಂದ ನೋಡುತ್ತಾರೆ , ಹುಚ್ಚು ಪ್ರೀತಿಯಿಂದ ಅವರ ಹೆಸರುಗಳನ್ನು ದೇಹದ ಅಂಗಗಳ ಮೇಲೆ ಹಚ್ಛೆ ಹಾಕಿಸಿಕೊಳ್ಳುತ್ತಾರೆ, ಅವರ ಚಲನಚಿತ್ರಗಳು ಬಿಡುಗಡೆಯಾದಾಗ ನಾಲ್ಕಾಳೆತ್ತರದ ಕಟೌಟ್ಗಳನ್ನು ಹಾಕಿ ಹಾಲಿನ ಅಭಿಷೇಕ ಮಾಡಿ ತಮ್ಮ ಹುಚ್ಚು ಅಭಿಮಾನವನ್ನು ಮೆರೆಯುತ್ತಾರೆ!
ಯಾವುದೇ ವ್ಯಕ್ತಿ ಪರಿಪೂರ್ಣನಲ್ಲ... ಅಂತೆಯೇ ಯಾರೂ ಪೂಜನೀಯರಲ್ಲ. ನಿಜವಾಗಿ ಪೂಜಿಸಲ್ಪಡುವವರು ಕೂಡ ಒಂದೊಮ್ಮೆ ಮಾನವ ಸಹಜ ಗುಣಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಬದುಕಿನ ಬೆಂಕಿಯಲ್ಲಿ ಬಿದ್ದು ಶುದ್ಧ ಅಪರಂಜಿ ಚಿನ್ನವಾಗಿ ಹೊರಹೊಮ್ಮಿದವರು.
ನಾವು ಗೌರವಿಸಬೇಕಾಗಿರುವುದು ನಮ್ಮನ್ನು ಹೆತ್ತು ಹೊತ್ತು, ಸಾಕಿ ಸಲಹಿ, ಜೀವಿತದ ಕಷ್ಟಾರ್ಜಿತವನ್ನು ನಮ್ಮ ಮೇಲೆ ಸುರಿದು ವಿದ್ಯಾಭ್ಯಾಸ ಕೊಡಿಸಿ ನಾವು ಬದುಕಿನ ದಾರಿಯಲ್ಲಿ ಮುನ್ನಡೆಯುವಾಗ ದೂರ ನಿಂತು ಕಣ್ತುಂಬಿಕೊಳ್ಳುವ ಪಾಲಕರನ್ನು, ಅವರ ಶ್ರಮ, ಪ್ರೀತಿ ಮತ್ತು ಮಮತೆಯನ್ನು ನಾವು ಗೌರವಿಸಬೇಕಾಗಿರುವುದು ಹಿಡಿ ಪಗಾರಕ್ಕಾಗಿ ತಮ್ಮೆಲ್ಲ ವಿದ್ಯೆಯನ್ನು ನಮಗೆ ಧಾರೆಯೆರೆದು, ನಮ್ಮೆಲ್ಲ ಅವಗುಣಗಳನ್ನು ಕಟೆದು ಕಗ್ಗಲ್ಲಿನಂತಿದ್ದ ನಮ್ಮನ್ನು ಸುಂದರ ಶಿಲ್ಪವನ್ನಾಗಿ ರೂಪಿಸಿದ ನಮ್ಮ ಗುರುಗಳನ್ನು ಮತ್ತು ಅವರ ಶಿಕ್ಷಣವನ್ನು.
ನಾವು ಗೌರವಿಸಬೇಕಾಗಿರುವುದು ನಮ್ಮೆಲ್ಲಾ ಕಷ್ಟ ಸುಖಗಳಲ್ಲಿ ನೋವು ನಲಿವಿನಲ್ಲಿ ಭಾಗಿಯಾಗುವ, ಬದುಕಿನಲ್ಲಿ ಏನೇ ಬಂದರೂ ನಮ್ಮ ಜೊತೆಗೆ ಹೆಗಲು ಕೊಡುವ, ಭರವಸೆ ತುಂಬುವ, ತಪ್ಪು ಮಾಡಿದರೆ ಕಾಲೆಳೆದು ತಿದ್ದುವ ನಮ್ಮ ಸ್ನೇಹಿತರನ್ನು ಮತ್ತು ಅವರ ಸ್ನೇಹವನ್ನು ನಾವು ಗೌರವಿಸಬೇಕಾಗಿರುವುದು ಜೀವಿತದ ಕೊನೆಯವರೆಗೂ ನಮ್ಮೊಂದಿಗೆ ಬಾಳುತ್ತೇನೆ ಎಂದು ದೇವರ ಸಾಕ್ಷಿಯಾಗಿ ಗುರು ಹಿರಿಯರ ಸಾಕ್ಷಿಯಾಗಿ ನಮ್ಮನ್ನು ವಿವಾಹವಾಗುವ ನಮ್ಮ ಸಂಗಾತಿಯನ್ನು, ನಮ್ಮೆಲ್ಲ ಸಿಟ್ಟು, ಸೆಡವು, ನೋವು,ನಿಷ್ಟುರಗಳನ್ನು ಸಹಿಸಿಕೊಂಡು ಬದುಕಿನಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುವ ಸಂಗಾತಿಯನ್ನು, ಅವರ ಪ್ರೀತಿಯನ್ನು.
ನಾವು ಗೌರವಿಸಬೇಕಾಗಿರುವುದು ಬಿಸಿಲಾದರೇನು ಮಳೆಯಾದರೇನು ಉತ್ತಿ, ಬಿತ್ತಿ, ಬೆಳೆ ಬೆಳೆದು ನಮಗೆ ಅನ್ನ ಕೊಡುವ ರೈತನನ್ನು, ತಾನು ಅರೆ ಹೊಟ್ಟೆ ಉಂಡರೂ ಇಡೀ ಜಗತ್ತಿನ ಹೊಟ್ಟೆ ತುಂಬಿಸುವ ಅನ್ನದಾತನನ್ನು ಮತ್ತು ಆತನ ಶ್ರಮವನ್ನು ನಾವು ಗೌರವಿಸಬೇಕಾಗಿರುವುದು ತನ್ನ ತಂದೆ, ತಾಯಿ,ಹೆಂಡತಿ, ಮಕ್ಕಳನ್ನು, ಕುಟುಂಬವನ್ನು ಸಾವಿರಾರು ಕಿಲೋಮೀಟರ್ಗಳ ದೂರದಲ್ಲಿ ಇದ್ದು ಕಡುಬಿಸಿಲು ಚಳಿ ಮಳೆ ಎನ್ನದೆ ಬೆಚ್ಚದೆ ಬೆದರದೆ ನಮ್ಮ ದೇಶದ ಗಡಿ ರಕ್ಷಣೆಯನ್ನು ಮಾಡುವ, ದೇಶದ ಯಾವುದೇ ಮೂಲೆಯಲ್ಲಿಯೂ ತೊಂದರೆಯಾದರೆ ಕ್ಷಣಾರ್ಧದಲ್ಲಿ ಬಂದು ಕಾಪಾಡುವ ಮಿಲಿಟರಿ ಯೋಧರನ್ನು
ನಾವು ಗೌರವಿಸಬೇಕಾಗಿರುವುದು ನಮ್ಮ ಮನೆ ಮಂದಿಯಲ್ಲವಾದರೂ ನಮ್ಮ ಆಗುಹೋಗುಗಳ ಮೇಲೆ ನಿಗಾ ಇಟ್ಟಿರುವ, ಸೂಕ್ತ ಸಮಯದಲ್ಲಿ ಸಹಾಯಕ್ಕೆ ಒದಗುವ ನಮ್ಮ ಸುತ್ತಲ ಸಮಾಜದ ಜೀವಿಗಳನ್ನು ಮತ್ತು ಅವರ ಸಹಾಯವನ್ನು, ಬೆಂಬಲವನ್ನು ನಿಜವಾಗಿ ಈ ಸಮಾಜಕ್ಕೆ ಉನ್ನತ ಕೊಡುಗೆಗಳನ್ನು ಕೊಟ್ಟ ದಾರ್ಶನಿಕರ, ವಿಜ್ಞಾನಿಗಳ, ಗುರುಗಳ, ಸಂತರ, ಸಾಮಾಜಿಕ ವ್ಯಕ್ತಿಗಳ ಅತಿ ದೊಡ್ಡ ಗುಂಪೇ ಇದೆ. ಆ ಎಲ್ಲರೂ ನಮ್ಮ ಬದುಕಿನ ಒಂದಲ್ಲ ಒಂದು ಗಳಿಗೆಯಲ್ಲಿ ನಮಗೆ ಸ್ಪೂರ್ತಿಯನ್ನು ತುಂಬಿದವರೇ.
ಅಂತಹವರು ನಮಗೆ ಮಾದರಿಯಾಗಬೇಕು. ಅವರು ತೋರಿದ ಹಾದಿಯಲ್ಲಿ ನಾವು ಸಾಗಬೇಕು. ನಮ್ಮ ಆದರ್ಶ ಅವರುಗಳಾಗಬೇಕೇ, ಹೊರತು ಬೇರೆಯವರಲ್ಲ.
ಯಶ ಮದ, ಅಧಿಕಾರ ಮದ, ಧನ ಮದ, ಜಾತಿ ಮದ, ಧರ್ಮಾಂಧತೆಯನ್ನು ಹಾಸು ಹೊದ್ದಿರುವ ಯಾರೂ ಕೂಡ ನಮಗೆ ಆದರ್ಶವಲ್ಲ ಎಂಬುದನ್ನು ಅರಿತು ಮುಖ್ಯವಾಗಿ "ನಮ್ಮ ಅರಿವೇ ನಮಗೆ ಗುರು" ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಸಭ್ಯ ಸುಸಂಸ್ಕೃತ ಸಮಾಜದ ನೀತಿ ನಿಯಮಾವಳಿಗಳನ್ನು ಅನುಸರಿಸಿ ಭವ್ಯ ಭಾರತದ ಪ್ರಜೆಗಳಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ. ಭಾರತೀಯ ಸಂಸ್ಕೃತಿಯ ಕುಟುಂಬ ಪದ್ಧತಿಯ ಸನಾತನ ಬೇರುಗಳನ್ನು ಭದ್ರವಾಗಿಸೋಣ.
ಏನಂತೀರಾ??
-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ