ವ್ಯಾಸ ಪೀಠ- 4: ಮಹಾಭಾರತ ತಾತ್ಪರ್ಯ ನಿರ್ಣಯಕ್ಕೊಂದು ಕೀಲಿ ಕೈ

Upayuktha
0

ಆಧ್ಯಾತ್ಮಿಕ ತತ್ವಗಳನ್ನು ಸಾಮಾನ್ಯ ಜನರಿಗೂ ಪರಿಚಯಿಸುವ ಮಹತ್ ಕೃತಿ 

(ಮಹಾಭಾರತ ತಾತ್ಪರ್ಯ ನಿರ್ಣಯದ ಅಧ್ಯಯನವನ್ನು ಸರಳಗೊಳಿಸಬಲ್ಲ 9 ಚಿಂತನೆಗಳು)



ಕೀರ್ತಿಶೇಷ ಪ್ರೊ. ಸಗ್ರಿ ರಾಘವೇಂದ್ರ ಉಪಾಧ್ಯಾಯರಿಗೆ ನುಡಿ ನಮನ

ದ್ವೈತ ವೇದಾಂತದಲ್ಲಿ ವಿಶೇಷ ಅಧ್ಯಯನ ಸಾಧನೆಗೈದಿದ್ದ ಹಿರಿಯ ವಿದ್ವಾಂಸ ಉಡುಪಿಯ ಪ್ರೊ. ಸಗ್ರಿ ರಾಘವೇಂದ್ರ ಉಪಾಧ್ಯಾಯರು ಈ ನಾಡು ಕಂಡ ಅಪರೂಪದ ಪ್ರವಚನಕಾರರು ಮತ್ತು ಲೇಖಕರು.

ತತ್ವವಾದದ ಅನೇಕ ಗ್ರಂಥಗಳನ್ನು ಕನ್ನಡದಲ್ಲಿ ಸರಳ ಸುಂದರ ಶೈಲಿಯಲ್ಲಿ ಪರಿಚಯಿಸಿ ಕೊಟ್ಟಂತಹ ವಿದ್ಯಾವಾರಿಧಿಗಳು. ಸುಜೀವಿಗಳಾದ ಶ್ರೀಯುತರು ಉಪಯುಕ್ತ ನ್ಯೂಸ್ ನಲ್ಲಿ ಮೂಡಿಬಂದ ಶ್ರೀರಾಮಕಥಾ ಲೇಖನ ಅಭಿಯಾನದಲ್ಲೂ ವಿದ್ವತ್ಪೂರ್ಣ ಲೇಖನವನ್ನು ನೀಡಿದ್ದರು. ಇಂತಹ ಹಿರಿಯ ಚೇತನ ಇತ್ತೀಚೆಗೆ ಬೆಂಗಳೂರಿನ ಗಿರಿನಗರದ ಶ್ರೀ ಭಂಡಾರ ಕೇರಿ ಮಠದಲ್ಲಿ ಶ್ರೀರಾಮಚಂದ್ರ ದೇವರು ನೀಡಿದ ಮೋಕ್ಷ ಪ್ರಸಂಗದ ಬಗ್ಗೆ ಮಾತನಾಡಿದ ನಂತರ ಹರಿಪಾದವನ್ನು ಸೇರಿದ ಪುಣ್ಯ ಪುರುಷರು.

==========

ಪಂಚಮ ವೇದವೆನಿಸಿದ ಮಹಾಭಾರತವು ಭಾರತೀಯ ಸಂಸ್ಕೃತಿಯ ಆಕರ ಗ್ರಂಥ. ದಾರ್ಶನಿಕರಿಗೆ ಸ್ವಮತ ಸ್ಥಾಪನೆಗೆ ದೊಡ್ಡ ಆಧಾರ. ತ್ರೈಲೋಕ್ಯ ಗುರುಗಳಾದ ಶ್ರೀ ಮಧ್ವಾಚಾರ್ಯರು ಸನಾತನ ಸಂಸ್ಕೃತಿಯ ಬಗ್ಗೆ ಇದರ ಆಧಾರ ಸ್ತಂಭಗಳಾದ ರಾಮಾಯಣ- ಮಹಾಭಾರತ ಮುಂತಾದ ಗ್ರಂಥಗಳ ಬಗ್ಗೆ ಬರಬಹುದಾದ ಸಂದೇಹಗಳ ಪರಿಹಾರಕ್ಕಾಗಿ ರಚಿಸಿದ ದಿವ್ಯ ಗ್ರಂಥ ಮಹಾಭಾರತ ತಾತ್ಪರ್ಯ ನಿರ್ಣಯ. ಇದರ ಮೂಲಕ ರಾಮಾಯಣ ಮಹಾಭಾರತದಿ ಗ್ರಂಥಗಳ ಕುರಿತಾದ ಸಂದೇಹ ಪರಿಹರಿಸಿ ಆ ಗ್ರಂಥಗಳ ಬಗ್ಗೆ ಪ್ರಾಮಾಣ್ಯ ಬುದ್ಧಿ, ವಿಶ್ವಾಸ ದೃಢವಾಗುವಂತೆ ಮಾಡಿ ಅವುಗಳು ಪ್ರತಿಪಾದಿಸುವ ಸಂಸ್ಕೃತಿಗಳ ಬಗ್ಗೆ ತಿಳಿಸುತ್ತದೆ.


ಮಹಾಭಾರತ ತಾತ್ಪರ್ಯ ನಿರ್ಣಯದೊಂದಿಗೆ ಇಷ್ಟೊಂದು ತಾದ್ಯಾತ್ಮವನ್ನು ತಾಳಬೇಕೆಂದರೆ ಅದನ್ನು ವಿಶೇಷವಾಗಿ ಪರಿಚಯಿಸಿಕೊಳ್ಳಬೇಕು ಅದಕ್ಕಾಗಿಯೇ ಮಹಾಭಾರತ ತಾತ್ಪರ್ಯ ನಿರ್ಣಯಕ್ಕೊಂದು ಕೀಲಿ ಕೈ ಹೊರಟಿದೆ. ಕೀಲಿ ಕೈ ಬೀಗವನ್ನು ಬಿಡಿಸಿ ಬಾಗಿಲು ತೆರೆದು ಮಂದಿರದೊಳಗಿನ ಪದಾರ್ಥಗಳೆಲ್ಲದರ ದರ್ಶನಕ್ಕೆ ಹೇಗೆ ಪ್ರಯೋಜಕವಾಗಬಲ್ಲದು ಹಾಗೆ ಈ ಕೃತಿ ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ತಡೆಯಂತಿರುವ ಅಜ್ಞಾನ -ವಿಪರೀತ ಜ್ಞಾನ- ಸಂಶಯಗಳ ಬೇಲಿಯನ್ನು ತೆರವುಗೊಳಿಸಿ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ರಾಜಾಂಗಣಕ್ಕೆ ಪ್ರವೇಶಿಸಲು ಅಲ್ಲಿಯ ಪ್ರಮೇಯಗಳನ್ನು ಅಸ್ವಾದಿಸಲು ಪ್ರಯೋಜಕವೆನಿಸಬಲ್ಲದು.


ಪ್ರಾಯಃ ವೈದಿಕ ಪರಂಪರೆಯಲ್ಲಿಯೇ ಇದೊಂದು ಹೊಸ ಪರಿಕ್ರಮ ಶ್ರೀ ಮಧ್ವಾಚಾರ್ಯರದ್ದು, ತಮ್ಮ ಸಿದ್ದಾಂತಕ್ಕೆ ಪೂರಕವಾಗಿ ವೈದಿಕ ವಚನಗಳನ್ನು ಉದಾಹರಿಸುವ ಕ್ರಮ ಮೊದಲಿನಿಂದಲೂ ಇದೆ. ಇದು ಸಂಶೋಧಕರ ಪಾಲಿಗೆ, ಜಿಜ್ಞಾಸುಗಳ ಪಾಲಿಗೆ ನಿಜಕ್ಕೂ ಮುತ್ತುರತ್ನಗಳ ಗಣಿ.


ಇಲ್ಲಿ ಬಗೆದಷ್ಟು ತಾತ್ವಿಕ ಚಿಂತನೆಗಳು ಹೊಸ ಹೊಸದಾಗಿ ತೆರೆದುಕೊಳ್ಳುತ್ತವೆ. ಮಂದಮತಿಗಳಿಗೂ ನಿಲುಕುವ ಸತ್ಯಗಳಿವೆ, ಮನಿಷಿಗಳಿಗೂ ಅರ್ಥವಾಗದ ಪ್ರಮೇಯಗಳು ಇವೆ. ಇಂತಹ ಒಂದು ಅಪೂರ್ವ ಗ್ರಂಥ ಭಾರತೀಯ ತತ್ವಶಾಸ್ತ್ರ ಪ್ರಪಂಚಕ್ಕೆ ಮಧ್ವಾಚಾರ್ಯರು ನೀಡಿದ ಒಂದು ಅನುಪಮ ಕೊಡುಗೆ ಎಂಬುದರಲ್ಲಿ ಸಂದೇಹವೇ ಇಲ್ಲ.


ಇಂತಹ ಅನನ್ಯ  ಪುಸ್ತಕವನ್ನು ಸಂಪಾದಿಸಿದವರು ಪ್ರೊ. ಸಗ್ರಿ ರಾಘವೇಂದ್ರ ಉಪಾಧ್ಯಾಯರು. ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯು ಒಂದೆಡೆ ಸಿಗುವಂತಾಗಬೇಕೆಂಬುದು ಅವರ ಬಯಕೆ. ಅದು ಅವರ ಬರವಣಿಗೆಯ ಕ್ರಮವೂ ಕೂಡ. ಒಂದು ವಿಚಾರವನ್ನು ಕೈಗೆತ್ತಿಕೊಂಡರೆ ಅದಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಕ್ರೋಢೀಕರಿಸುತ್ತಾರೆ. ಪ್ರಾಣ ಚಿಂತನೆ, ಗೀತೆಗೊಂದು ಕಡೆಗೋಲು ಮುಂತಾದ ಅವರ ಪುಸ್ತಕಗಳನ್ನು ಓದುವ ಸಹೃದಯರಿಗೆ ಈ ವಿಚಾರ ಗೊತ್ತೇ ಇದೆ.ಅದರಂತೆ ಹಲವಾರು ಸಮಯದ ಪರಿಶ್ರಮದಿಂದ ಮೂಡಿಬಂದಿರುವಂಥದ್ದು ಈ ಮಹಾಭಾರತ ತಾತ್ಪರ್ಣ ನಿರ್ಣಯಕ್ಕೊಂದು ಕೀಲಿ ಕೈ ಎಂಬ ಅಪೂರ್ವಕೃತಿ.


ಮಹಾಭಾರತಾದಿಗಳ ಬಗ್ಗೆ ಶ್ರೀಮದಾಚಾರ್ಯರು ತಮ್ಮ ಹೃದಯವನ್ನು ಎಷ್ಟು ತೆರೆದುಕೊಂಡರು ಅದನ್ನು ಸಮಗ್ರವಾಗಿ ಅರಗಿಸಿಕೊಳ್ಳದಾರದಷ್ಟು ಕುರುಡುತನ ನಮ್ಮದು. ಆದರೂ ನಮ್ಮ ನಮ್ಮ ಯೋಗ್ಯತೆಗೆ ತಕ್ಕಂತೆ ಆಂತರ್ಯವನ್ನು ಗುರುತಿಸಿಕೊಳ್ಳಲು ಯತ್ನಿಸಬೇಕು. ಈ ನಿಟ್ಟಿನಲ್ಲಿ ಹೊರಟ ಮಹಾಭಾರತ ತಾತ್ಪರ್ಯ ನಿರ್ಣಯಕ್ಕೊಂದು ಕೀಲಿ ಕೈ ಬೆಳಕು ಚೆಲ್ಲಬಲ್ಲ ಒಂದು ಹೊಂಗಿರಣ. 


ಈ ಗ್ರಂಥದ ವಿಶೇಷತೆ ಎಂದರೆ ಶ್ರೀ ರಾಘವೇಂದ್ರ ಸ್ವಾಮಿಗಳು ಸಂಗ್ರಹಿಸಿದ ಮಹಾಭಾರತ ತಾತ್ಪರ್ಯ ನಿರ್ಣಯದ ಅನುಸಂಧಾನ, ಮಹಾಭಾರತ ತಾತ್ಪರ್ಯ ನಿರ್ಣಯದ 17 ಟಿಪ್ಪಣಿಗಳು ಮತ್ತು ಟಿಪ್ಪಣಿಕಾರರ ಪರಿಚಯ, ಮಹಾಭಾರತ ಯುದ್ಧದ 18 ದಿನಗಳಲ್ಲಿ ನಡೆದಿರುವ ಪ್ರಮುಖ ಘಟನೆಗಳು ಹಾಗೂ ಅವುಗಳಿಗೆ ಶ್ರೀಮದಾಚಾರ್ಯರ ನಿರ್ಣಯದ ಪರಿಷ್ಕಾರ, ಸ್ತುತಿಗಳ ಪ್ರಾರ್ಥನೆಗಳ ಪ್ರಸ್ತುತಿ, ಪ್ರಶ್ನೋತ್ತರ ಚಿಂತನೆಯಿಂದ ಸಂಶಯಾದಿಗಳ ಪರಿಹಾರ ವಿಶೇಷತೆಗಳಿಂದ ಕೂಡಿರುವ ಈ ಕೃತಿಯನ್ನು ಪಾಜಕದಲ್ಲಿ ಶ್ರೀ ವಾದಿರಾಜ ಸ್ವಾಮಿಗಳು ಪ್ರತಿಷ್ಠಾಪಿಸಿದ ಶ್ರೀ ಮಧ್ವಾಚಾರ್ಯರ ಸನ್ನಿಧಾನದಲ್ಲಿ ಶ್ರೀ ವೇದವ್ಯಾಸರಿಗೆ ಪೂಜ್ಯ ಆಚಾರ್ಯರು ಸಮರ್ಪಿಸಿದ್ದಾರೆ.


ಇಂತಹ ವಿದ್ವತ್ಪೂರ್ಣ ಗ್ರಂಥವನ್ನು  ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಪೂಜ್ಯ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರ ಅಪೇಕ್ಷೆಯಂತೆ ವೇದವ್ಯಾಸ ಸಂಶೋಧನಾ ಕೇಂದ್ರದಿಂದ ಪ್ರಕಟಿಸಲಾಗಿದೆ.


ಕೃತಿಯ ಹೆಸರು: ಮಹಾಭಾರತ ತಾತ್ಪರ್ಯ ನಿರ್ಣಯಕ್ಕೊಂದು ಕೀಲಿ ಕೈ 

ಸಂಪಾದನ -ಸಂಕಲನ: ಪ್ರೊ.ಸಗ್ರಿ  ರಾಘವೇಂದ್ರ ಉಪಾಧ್ಯಾಯ, ಉಡುಪಿ 

ಪ್ರಕಾಶಕರು: ಶ್ರೀ ವೇದವ್ಯಾಸ ಸಂಶೋಧನಾ ಕೇಂದ್ರ (ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ)

ಸುಬ್ರಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ, ದ. ಕ ಜಿಲ್ಲೆ 

ಪುಟಗಳು: 942 

ಬೆಲೆ: ರೂ. 800 

ಪ್ರತಿಗಳಿಗೆ: +91 94824 14444


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top