ವನಿತಾ ಕಥನ -3: ಸತ್ಯವಾನ ಸಾವಿತ್ರಿ

Upayuktha
0


ಭಾರತೀಯರಲ್ಲಿ ಪಾತಿವ್ರತ್ಯದ ಬಲದ ಮೇಲೆ ಪತಿಯ ಜೀವವನ್ನು ಯಮನಿಂದ ಹಿಂದಿರುಗಿ ಪಡೆಯುವ ಸಾಮರ್ಥ್ಯವನ್ನು ಹೊಂದಿದ ಮಹಾನ್‌ ಪತಿವ್ರತೆ ಸಾವಿತ್ರಿಯಾಗಿದ್ದಾಳೆ. ಪತಿಯ ಆಯುಷ್ಯ ಮತ್ತು ತವರಿನ ಏಳಿಗೆ ಬಯಸಿದ ಮಹಾನ್‌ ಸಾಧ್ವಿಯೇ ಸಾವಿತ್ರಿ. ಮಹಾಭಾರತದ ವನಪರ್ವದಲ್ಲಿ ಸತ್ಯವಾನ ಸಾವಿತ್ರಿಯ ಕಥೆ ಬರುತ್ತದೆ. ಯುಧಿಷ್ಟಿರನಿಗೆ ಮಾರ್ಕಂಡೇಯ ಋಷಿಗಳು ಈ ಕತೆಯನ್ನು ಹೇಳುತ್ತಾರೆ.


ಸಾವಿತ್ರಿ ಮದ್ರ ದೇಶದ ರಾಜ ಅಶ್ವಪತಿ ಮತ್ತು ಮಾಲವಿಯ ಮಗಳು. ಅಶ್ವಪತಿಗೆ ಮಕ್ಕಳಿರದ ಕಾರಣ ಸವಿತೃ ನಾಮಕ ಸೂರ್ಯನನ್ನು ಕುರಿತು ಆರಾಧನೆ ಮಡಿ ಹೆಣ್ಣುಮಗಳನ್ನು ಪಡೆಯುತ್ತಾರೆ.  ಅವಳು ಸುಂದರಿಯು ಸಕಲ ಗುಣ ಸಂಪನ್ನಳು ಹಾಗೂ ಸಾತ್ವಿಕಳು ಆಗಿದ್ದಳು. ಅಶ್ವಪತಿ ಮಹಾರಾಜನು ಮಗಳಿಗೆ ಎಲ್ಲ ವಿದ್ಯೆಗಳನ್ನು ಕಲಿಸಿ ಸರ್ವಗುಣ ಸಂಪನ್ನಗಳನ್ನಾಗಿ ಮಾಡಿದ್ದನು. ಅವಳಿಗೆ ಜಾತಕದ ಅನುಸಾರವಾಗಿ ಅಲ್ಪಾಯುಷಿ ಪತಿ ದೊರೆಕುವನು ಎಂಬುದು  ರಾಜನಿಗೆ ತಿಳಿಯಿತು, ರಾಜನು ಮಗಳಿಗೆ ಅನುರೂಪನಾದ ವರನನ್ನು ಹುಡುಕಿಕೊಂಡು ಬರಲು ಕಳುಹಿಸಿದನು, ಅವಳು ಎಲ್ಲ ಕಡೆ ಹುಡುಕಿದರೂ ಅವಳ ಗುಣ ಲಕ್ಷಣಗಳಿಗೆ ಸಮನಾದ ವರ ಎಷ್ಟು ಹುಡುಕಿದರೂ ಸಿಗದೇ ಇದ್ದಾಗ, ನಾರದರು ಬಂದು ಸತ್ಯವಾನನೆಂಬ ದುಮತ್ಸೇನ ರಾಜನ ಮಗನು ಸತ್ಯವಾನನಿಗೆ ಸರಿಯಾದ ಜೋಡಿ ಎಂದು ಸೂಚಿಸಿದರು. ನಾರದರು ಸತ್ಯವಾನ ಅಲ್ಪಾಯುಷ್ಯ ಮತ್ತು ಅದರಿಂದ ಪಾರಾಗುವ ಜೇಷ್ಠ ಮಾಸದ ಹುಣ್ಣಿಮೆಯ ವ್ರತವನ್ನು ಮಾಡುವ ವಿಧಾನವನ್ನು ಹೇಳಿ ನಂತರ ಸತ್ಯವಾನ ಮತ್ತು ಸಾವಿತ್ರಿಯ ವಿವಾಹವನ್ನು ಗುರುಹಿರಿಯರ ಆಶೀರ್ವಾದದಿಂದ ಮಾಡಿಸಿದರು. 

ಶಾಲ್ವ  ರಾಜನಾದ ದುಮತ್ಸೇನ ಮಹಾರಾಜನು ಕಣ್ಣನ್ನು ಮತ್ತು ರಾಜ್ಯವನ್ನು ಕಳೆದು ಕೊಂಡು ಪುತ್ರನೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದನು. ಸಾವಿತ್ರಿಯು ಸತ್ಯವಾನನನ್ನು ಗುರುಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ಅತ್ತೆಮಾವಂದಿರ ಸೇವೆಯನ್ನು ಮಾಡುತ್ತಿದ್ದಳು. ಅವಳಿಗೆ ಜೇಷ್ಠ ಹುಣ್ಣಿಮೆಯ ವ್ರತ ಮತ್ತು ಪತಿಯ ಅಲ್ಪಾಯುಷ್ಯದ ಚಿಂತೆ ಇದ್ದೇ ಇತ್ತು. ಕಷ್ಟಕರವಾದ ಆ 3 ದಿನಗಳ ವ್ರತವನ್ನು ಮಾಡುತ್ತಿದ್ದಾಗ ಸತ್ಯವಾನನ ಅಪಮೃತ್ಯುವಿನ ದಿನ ಬಂದೇ ಬಿಟ್ಟಿತು. ಅಂದು ಉಪವಾಸ ಮಾಡಿದ್ದರೂ ಕೂಡ ಪತಿಯೊಂದಿಗೆ ಕಟ್ಟಿಗೆ ತರುವ ಸಮಯದಲ್ಲಿ ತಾನು ಕೂಡ ವನಕ್ಕೆ ಬರುವೆನೆಂದು ಹಠಮಾಡಿ ಪತಿಯೊಂದಿಗೆ ಹೊರಟಳು. ಸಂಜೆಯವರೆಗೂ ಕಟ್ಟಿಗೆ ಶೇಖರಿಸಿದ ದಂಪತಿಗಳು ಒಂದು ವಟ ವೃಕ್ಷದ ಕೆಳಗೆ ಆಯಾಸ ಪರಿಹರಿಸಿಕೊಳ್ಳಲು ಕುಳಿತರು. ಸತ್ಯವಾನನಿಗೆ ಆಯಾಸವಾಗಿ ಸಾವಿತ್ರಿಯ ತೊಡೆಯ ಮೇಲೆ ಮಲಗಿದನು.


ಆಗ ಅವನನ್ನು ಕರೆದೊಯ್ಯಲು ಬಂದ ಯಮಧರ್ಮನೊಡನೆ ಸಾವಿತ್ರಿಯು ಮಾತನ್ನು ಆರಂಭಿಸಿದಳು. ಶಾಸ್ತ್ರದ ವಿಷಯಗಳ ಬಗೆಗೆ ಚರ್ಚಿಸಿದಳು ಮೂರು ದಿನ ಸತತವಾದ ಈ ಶಾಸ್ತ್ರದ ಚರ್ಚೆಯಲ್ಲಿ ಸಾವಿತ್ರಿಯ ಜ್ಞಾನದಿಂದ ಸಂತಸಗೊಂಡ ಯಮಧರ್ಮನು ಪತಿಯ ಪ್ರಾಣವನ್ನು ಬಿಟ್ಟು ಬೇರೆ ಯವುದೇ ವರವನ್ನು ಕೇಳಬಹುದು ಎಂದನು. ಆಗ ತನ್ನ ಮಾವನಿಗೆ ಕಣ್ಣು ಮತ್ತು ರಾಜ್ಯವನ್ನು ಹಿಂತಿರುಗಿಸುವಂತೆ ಕೇಳಿದಳು. ಆಗ ಯಮಧರ್ಮನು ಕೊಟ್ಟನು ನಂತರವೂ ಮತ್ತೊಂದು ವರವನ್ನು ಕೇಳಲು ಹೇಳಿದಾಗ ತಂದೆಯ ರಾಜ್ಯಕ್ಕೆ ಉತ್ತರಾಧಿಕಾರಿಯಾಗಿ ಸಂತಾನವಾಗಲಿ ಸಮೃದ್ಧಿಯಾಗಲಿ ಎಂದು ಕೇಳಿದಳು. ಸಾವಿತಿಯ ಸಾತ್ವಿಕತೆ ಸತ್ಯನಿಷ್ಠೆ ಹಾಗೂ ಪತಿಯ ಪ್ರೇಮದ ಮುಂದೆ ಯಮಧರ್ಮನು ತಲೆ ಬಾಗಿ ಸತ್ಯವಾನನ ಪ್ರಾಣವನ್ನು ಅವಳಿಗೆ ಹಿಂತಿರುಗಿಸಿದನು. ಮರದ ಕೆಳಗೆ ಮಲಗಿದ್ದ ಸತ್ಯವಾನನು ನಿದ್ರೆಯಿಂದ ಎದ್ದಂತೆ ಎದ್ದು ಪತ್ನಿಯೊಡನೆ ವನದಲ್ಲಿ ಹೋಗಲು ಅವರ ರಾಜ್ಯವು ಪುನಃ ಪ್ರಾಪ್ತವಾಗಿತ್ತು. ಮುಂದೆ ಆನಂದದಿಂದ ಬದುಕಿದರು. ಇಂದಿಗೂ ಕೂಡ ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನ ವಟ ಸಾವಿತ್ರಿ ವ್ರತವನ್ನು ಎಲ್ಲ ಮುತ್ತೈದೆಯರು ಮುತ್ತೈದೆತನದ ಪ್ರಾಪ್ತಿಗಾಗಿ ಆಚರಿಸುತ್ತಾರೆ. 


ಸಾವಿತ್ರಿ ಆದರ್ಶ ಮಗಳು, ಪತ್ನಿ ಮತ್ತು ಸೊಸೆಯಾಗಿ ನಮಗೆ ಪಾಠವನ್ನು ಕಲಿಸುತ್ತಾಳೆ. ಮಗಳಾಗಿ ತಂದೆ ತಾಯಿಯ ಆಸೆಯಂತೆ ನಡೆಯಬೇಕು. ಸೊಸೆಯಾಗಿ ಎಂತದ್ದೇ ಪರಿಸ್ಥಿತಿ ಇರಲಿ ಅದಕ್ಕೆ ಹೊಂದಿಕೊಂಡು ನಡೆಯಬೇಕು ಎಂದು ಆದರ್ಶವಾಗುತ್ತಾಳೆ. ಅರಮನೆಯಲ್ಲಿ ಹುಟ್ಟಿದರೂ ವನದ ಬಾಳನ್ನು ನಗುನಗುತ್ತ ನಡೆಸುತ್ತಾಳೆ. ಪತಿಯ ಸುಖ ದುಃಖಗಳಲ್ಲಿ ಸಮನಾಗಿ ಪಾಲ್ಗೊಂಡು ಪತಿಯನ್ನು ಯಮ ಧರ್ಮನೊಡನೆ ಹೋರಾಡಿ ಬದುಕಿಸಿಕೊಳ್ಳುತ್ತಾಳೆ. ಇಲ್ಲಿ ಸಾವಿತ್ರಿಯ ಹೋರಾಟ ಬೌದ್ಧಿಕವಾಗಿ ತನ್ನ ಜಾಣತನ ಹಾಗೂ ಜ್ಞಾನದ ಮಾತಿನಿಂದ ಯಮನನ್ನು ಗೆಲ್ಲುತ್ತಾಳೆ. ಬುದ್ದಿವಂತಿಕೆಯು ನಮಗೆ ಕೊನೆಯವರೆಗೂ ಕೈ ಹಿಡಿಯುತ್ತದೆ ಎಂಬುದನ್ನು ತೋರಿಸಿದ ಸಾವಿತ್ರಿ ಇಂದಿನ ಹೆಣ್ಣುಮಕ್ಕಳಿಗೆ ಪತಿಯ ಮತ್ತು ತವರು ಮನೆಯನ್ನು ಸಮನಾಗಿ ನೋಡುವ ಸ್ವಭಾವ ಬೆಳೆಸಿಕೊಳ್ಳುವ ಪ್ರೇರಣೆ ನೀಡುತ್ತಾಳೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top