ತೆಂಕನಿಡಿಯೂರು: “2022-23ನೇ ಸಾಲಿನ ಸುಶಾಸನ ದಿನದ ಪ್ರಯುಕ್ತ ಶಿಕ್ಷಣ ಇಲಾಖೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದನ್ನು ಅತ್ಯುತ್ತಮ ಫಲಿತಾಂಶ ಗಳಿಸಿದ ಕಾಲೇಜು ಎಂದು ಘೋಷಿಸಿದೆ. ಇದು ನನ್ನ ವಿಧಾನ ಸಭಾ ಕ್ಷೇತ್ರದಲ್ಲಿದೆ ಎಂಬುದೇ ಹೆಮ್ಮೆ ಎಂದು ಉಡುಪಿ ಶಾಸಕ ಯಶ್‌ಪಾಲ ಸುವರ್ಣ ಹೇಳಿದರು.
ಅವರು ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 2006 ರಿಂದ ಇಂದಿನ ವರೆಗೆ 52 ರ‍್ಯಾಂಕ್‌ಗಳನ್ನು ಗಳಿಸಿದ ಈ ಕಾಲೇಜಿನ ಸಾಧನೆ ನಿಜಕ್ಕೂ ಅಭಿನಂದನೀಯ. ಇದಕ್ಕಾಗಿ ಶ್ರಮಿಸಿದ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಹಾಗೂ ಎಲ್ಲಾ ಬೋಧಕ ವರ್ಗದವರನ್ನು ಶಾಸಕರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಂ.ಎ. ಇತಿಹಾಸ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ದಯೇಶ್, ಎಂ.ಎ. ಸಮಾಜಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಕು. ನಾಗರತ್ನ, ಬಿ.ಎಸ್.ಡಬ್ಲ್ಯೂ. ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಕು. ಅನ್ವಿತಾ ಜಿ.ವಿ., ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸುರೇಶ್, ಧನುಷ್ ಪ್ರಥಮ ಬಿ.ಕಾಂ., ಕು. ಪೂಜಾ ತೃತೀಯ ಬಿ.ಎ. ಇವರುಗಳನ್ನು ಸನ್ಮಾನಿಸಿದ ಶಾಸಕರು ಅವರಿಗೆ ತಲಾ ರೂ. 2,000/- ರೂಗಳ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಡುಪಿ ತುಳುಕೂಟ ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಎಷ್ಟು ಬುದ್ಧಿವಂತರಿದ್ದಾರೆ, ಎಷ್ಟು ಚೆನ್ನಾಗಿದ್ದಾರೆ ಅಥವಾ ಎಷ್ಟು ಚೆನ್ನಾಗಿ ಸಂಪರ್ಕಗಳನ್ನು ಹೊಂದಿದ್ದಾರೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಪರಿಶ್ರಮ ಹಾಗೂ ಆತ್ಮವಿಶ್ವಾಸವಿದ್ದರೆ ಮಾತ್ರ ಯಶಸ್ವಿ ವ್ಯಕ್ತಿಗಳಾಗಬಹುದು. ನಮ್ಮ ಜೀವನ ಪಠ್ಯಕ್ರಮ ಇಲ್ಲದ, ಪ್ರಶ್ನೆ ಪತ್ರಿಕೆ ಹಾಗೂ ಮಾದರಿ ಪ್ರಶ್ನೆ ಪತ್ರಿಕೆ ಇಲ್ಲದ ಒಂದು ಪರೀಕ್ಷೆ ಎಂದು ನುಡಿದರು. ಕ್ರಿಯೆ ಇಲ್ಲದ ದೃಷ್ಟಿ ಕೇವಲ ಕನಸಾಗಿ ಉಳಿಸುತ್ತದೆ. ಕನಸಿಲ್ಲದ ಕ್ರಿಯೆಯಿಂದ ಕೇವಲ ಕಾಲಹರಣವಾಗುತ್ತದೆ ಆದರೆ ಕ್ರಿಯೆ ಮತ್ತು ಕನಸು ಒಟ್ಟಾದರೆ ಪ್ರಪಂಚವನ್ನೇ ಬದಲಾಯಿಸ ಬಹುದು ಎಂದು ಅವರು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾಲೇಜಿನ ಬಗ್ಗೆ ಕಿರು ಪಕ್ಷಿನೋಟವನ್ನು ತೆರೆದಿಟ್ಟದರು. ಅಲ್ಲದೆ ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದಿದ ಸಿಬ್ಬಂದಿಗಳಾದ ಶೇಖ್ ಸಾಬ್ಜಾನ್ ಸಾಹೇಬ್, ಜಾನಿ ಕೆ.ಎಂ. ಹಾಗೂ ವರ್ಗಾವಣೆಗೊಂಡ ಶ್ರೀ ಅಬ್ರಾಹಂ ಚಾಕೋ ಅವರುಗಳನ್ನು ಗೌರವಿಸಲಾಯಿತು. ಅಲ್ಲದೆ ನೆಟ್ ಮತ್ತು ಸ್ಲೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಉಡುಪಿ ಅಮೃತ್‌ನ ಅಧ್ಯಕ್ಷೆ ಭಾರತಿ ಹೆಚ್.ಎಸ್., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಜಾತ ಆಚಾರ್ಯ, ಉಡುಪಿಯ ಸಾಫಲ್ಯ ಟ್ರಸ್ಟ್‌ನ ನಿರುಪಮಾ ಶೆಟ್ಟಿ, ಶೈಕ್ಷಣಿಕ ಸಲಹೆಗಾರರಾದ ಡಾ. ಪ್ರಸಾದ್ ರಾವ್ ಎಂ., ವಿದ್ಯಾಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕರಾದ ರಾಧಾಕೃಷ್ಣ ಮತ್ತು ಡಾ. ರಾಘವ ನಾಯ್ಕ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಕೃಷ್ಣ ಸಾಸ್ತಾನ ಮತ್ತು ರತ್ನಮಾಲಾ, ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ಆಂಗ್ಲಭಾಷಾ ಸಹ ಪ್ರಾಧ್ಯಾಪಕ ನಿತ್ಯಾನಂದ ವಿ. ಗಾಂವಕರ್ ಹಾಗೂ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಗೂ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ನಿರೂಪಿಸಿದರು. ಈ ಕಾರ್ಯಕ್ರಮ ಕು. ನಿಶಾ ಇವರು ಧನ್ಯವಾದದೊಂದಿಗೆ ಮುಕ್ತಾಯವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ