ಬೆಳೆಯುವ ಪೈರು ಮೊಳಕೆಯಲ್ಲಿ ಅನ್ನುವ ಹಾಗೆ ಇಂದಿನ ಸಮಾಜವಿರೋಧಿ/ ಘಾತುಕ ಮನುಷ್ಯ ಚಿಕ್ಕಂದಿನಿಂದಲೇ ಇಂತಹ ಅವಗುಣಗಳನ್ನು (conduct disorders) ಪ್ರದರ್ಶಿಸಿರುತ್ತಾನೆ, ಆದರೆ ಹೆತ್ತವರು / ಶಿಕ್ಷಕರು/ ಪೋಷಕರು ನಿರ್ಲಕ್ಷಿಸಿರುತ್ತಾರೆ
ಇಂತಹ ಅವಗುಣಗಳ ಪ್ರದರ್ಶನದ ಸಮಯದಲ್ಲಿ ಸರಿಯಾದ ಸಮಯದಲ್ಲಿ ಮಕ್ಕಳನ್ನು ಬುದ್ದಿ ಹೇಳಿ ಅಥವಾ ವರ್ತನಾ ಚಿಕಿತ್ಸೆಯ ಮೂಲಕ ಸರಿದಾರಿಗೆ ತರಬೇಕು. ಯಾವ ಯಾವ ಅಂಶಗಳನ್ನು ಗಮನಿಸಬೇಕು. (ಮಕ್ಕಳ ಎರಡು ಮೂರು ವರ್ಷಗಳಿಂದಲೇ ಇವುಗಳನ್ನು ಗಮನಿಸಿ).
ಇದನ್ನು ವಿವರಿಸುವ ನಾಲಕ್ಕು ಅಂಶಗಳು ಇದನ್ನು ಟ್ರಾಪ್ (TRAP) ಎಂದೇ ಕರೆಯಬಹುದು.
ಅವುಗಳನ್ನು ಒಂದೊಂದಾಗಿ ನೋಡೋಣ.
T Theft ಯಾರದ್ದೋ ಆಟಿಕೆ/ ವಸ್ತು ವಿನ ಕಳ್ಳತನ/ ಇನ್ನೊಬ್ಬರ ವಸ್ತು/ ಜಾಗಆಟಿಕೆಯ ಮೇಲೆ ಆಸೆಪಡುವುದು, ಹಠ ಹಿಡಿದು ಕಿರುಚಿ ಅಳುವುದು.
ಉದಾಹರಣೆಗೆ ನೀವು ನೋಡಿರಬಹುದು ಒಂದು ಮಗು ತನ್ನ ಪಾಡಿಗೆ ತಾನು ಒಂದು ಸ್ಥಾನದಲ್ಲಿ ಕೂತಿರುತ್ತದೆ. ಅಲ್ಲಿ ಇನ್ನೊಂದು ಮಗು ಆ ಸ್ಥಳವೇ ಬೇಕು ಎಂದು ಹಠ ಹಿಡಿದು ಅಳುತ್ತದೆ ಅಥವಾ ಆ ಮೊದಲ ಮಗುವನ್ನು ನೂಕುತ್ತದೆ, ಕೊನೆಗೆ ಆ ಕಿರುಚಾಟ ನೋಡಿ ಹೆದರಿ ಮೊದಲ ಮಗು ಎದ್ದು ಹೋಗುತ್ತದೆ. ಈ ಮಗು ಕಿರುಚಿ ಅತ್ತರೆ ಅಥವಾ ಬಲ ಪ್ರಯೋಗಿಸಿದರೆ ಬೇರೆಯವರ ವಸ್ತು ತನ್ನದಾಗುತ್ತೆ ಎಂದು ಅರ್ಥ ಮಾಡಿಕೊಳ್ಳುತ್ತದೆ. ಇದರ ಬದಲಿಗೆ ಆತ ಮಗುವಿನ ಪೋಷಕರೋ ಅಥವಾ ಟೀಚರ್ ಆ ಸಮಯದಲ್ಲಿ ಮಗುವಿನ ಅರಚಾಟಕ್ಕೆ ಗಮನ ಕೊಡದಂತೆ ಬೇರೆಡೆ ಕೂರಲು ತಾಕೀತು ಮಾಡಬೇಕು. ಇದೇ ರೀತೀ ಯಾವದೋ ಮನೆಗೆ ಹೋದಾಗ ಅಲ್ಲಿ ಏನೋ ಬೇಕು ಎಂದು ಹಠ ಹಿಡಿದರೆ ಅಥವ ಅಲ್ಲಿಂದ ಏನಾದರೂ ಎತ್ತಿಕೊಂಡು ಬಂದರೆ ಕೂಡಲೇ ಅದರ ಮುಂದೆಯೇ ಬುದ್ದಿ ಹೇಳಿ ಮರಳಿಸಬೇಕು.
ಎರಡನೆಯದು
R Rule breaking:
ಮಕ್ಕಳು ಮನೆಯಲ್ಲಿಯೇ ಆಗಲಿ ಹೊರಗಡೆಯೇ ಆಗಲಿ ಒಂದಷ್ಟು ಅಲ್ಲಿನ ಸಾಮಾನ್ಯ ನಿಯಮಗಳನ್ನು ಪಾಲಿಸಬೇಕು . ಇದು ಶಾಲೆಯಲ್ಲಿ ಗಲಾಟೆಮಾಡುವುದೋ, ಅಥವಾ ಮನೆಯಲ್ಲಿ ಊಟದ ಸಮಯ ಇನ್ನೇನೋ ಮಾಡುವುದೋ ಏನೋ ಆಯಾ ಮನೆಯವರು ಒಂದಷ್ಟು ನಿಯಮಗಳನ್ನು ಹಾಕಿ ಆ ಮಗುವೂ ಪಾಲಿಸುವಂತೆ ಮಾಡಬೇಕು. ತಾವೂ ಅದನ್ನೇ ಪಾಲಿಸಬೇಕು. ಒಂದು ವೇಳೆ ಪದೇ ಪದೇ ಮಗು ನಿಯಮಗಳನ್ನು ಮುರಿಯುತ್ತಿದೆ ಎಂದಾದಲ್ಲಿ ಪೋಷಕರು ಅದನ್ನು ಬಿಹೇವಿಯರಲ್ ಟ್ರೈನಿಂಗ್ ಕೊಡಿಸಬೇಕು. ಇಂತಹ ಮಕ್ಕಳ ಮತ್ತೊಂದು ಗಮನಾರ್ಹ ಗುಣ ಎಂದರೆ ತನಗಿಂತ ದೊಡ್ಡವರಿಗೆ, ಅಥಾರಿಟಿಯಲ್ಲಿರುವವರ ಮಾತನ್ನು ಕೇಳದಿರುವುದು. ಇದನ್ನೂ ಸಹಾ ಗಮನಿಸಿ ಆ ಸಮಯಕ್ಕೆ ಬುದ್ದಿ ಕಲಿಸಬೇಕು.
ಮೂರನೆಯದ್ದು
A Aggression
ಜನರ ಮೇಲೆ ಅಥವಾ ಪ್ರಾಣಿಗಳ ಮೇಲೆ ಹಿಂಸಾಚಾರ. ಉದಾಹರಣೆಗೆ ಮಗು ನಿಮ್ಮ ಮುಂದೆ ಯಾವುದೋ ಅನಗತ್ಯವಾಗಿ ನಾಯಿಗೋ ಅಥವಾ ನಿಮಗೋ/ ಇನ್ಯಾರಿಗೋ ಹೊಡೆಯುವುದು ಅಥವಾ ಬೈಯ್ಯುವುದು ಮಾಡಿದರೆ , ಅದು ಮಗುವಿನ ಧೈರ್ಯವಲ್ಲ ಇನ್ನೊಬ್ಬರಿಗೆ ಹಾನಿ ಮಾಡುವ ಬುದ್ದಿ ಅದನ್ನು ಮೆಚ್ಚಿ ಕೂರಬೇಡಿ. ಹಾಗೆಯೇ ಕೋಪ ಬಂದಾಗ ಮನೆಯಸ್ತುಗಳನ್ನು ಎಸೆದು ಹಾನಿ ಮಾಡುವುದನ್ನು ಕಂಡಾಗ ಅದನ್ನು ಅಲ್ಲಿಯೇ ಸರಿಪಡಿಸಿ. ಹಿಂಸೆ ಮತ್ತು ಹಾನಿ ಮಾಡುವುದರಿಂದ ಬೇಕಾದ್ದು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಕೃತಿಯ ಮೂಲಕ ತೋರಿಸಿ.
P property destruction. ಮನೆಯ ಅಥವಾ ಹೊರಗಡೆಯ ಯಾವುದೇ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಯಾವುದೇ ಕೃತ್ಯಕ್ಕೆ ಚಪ್ಪಾಳೆ ತಟ್ಟಬೇಡಿ. ಕೂಡಲೇ ಅದರ ಕಾನ್ಸೀಕ್ವೆನ್ಸ್ ಕಲಿಸಿ. ಅವರೊಂದಿಗೆ ಮನೆಯ ಕಷ್ಟ ನಷ್ಟ, ಸಮಸ್ಯೆಗಳ ಬಗ್ಗೆ ಮಾತಾಡಿ, ಅವರ ಕೃತ್ಯಗಳಿಗೆ ಅವರೇ ಹೊಣೆ ಎಂಬುದನ್ನು ಕಲಿಸಿ.
ಮುಖ್ಯವಾಗಿ ಮಕ್ಕಳು ಕಂಡಕ್ಟ್ ಡಿಸ್ ಆರ್ಡರ್ ನ ಟ್ರಾಪ್ನಲ್ಲಿ ಬೀಳದಂತೆ ನೋಡಿಕೊಳ್ಳಿ.
ಈಗಂತೂ ಮಕ್ಕಳು ಹತ್ತು ಹನ್ನೆರಡಕ್ಕೆಲ್ಲಾ ಅತೀ ಬುದ್ದಿವಂತರಾಗಿಬಿಟ್ಟಿದ್ದೇವೆ ಅಂದುಕೊಂಡು ತಾವು ಮಾಡಿದ್ದೇ ಸರಿ ಎಂಬ ಹುಂಬತನಕ್ಕೆ ಬಿದ್ದಿರುತ್ತಾರೆ. ಆದ್ದರಿಂದ ಈಗಿನ ಮಕ್ಕಳಿಗೆ ಬದುಕಿನ ಪಾಠ ಚಿಕ್ಕವಯಸ್ಸಿನಲ್ಲೇ ಶುರು ಆಗಬೇಕು.
ಮತ್ತೊಂದು ನಾ ಗಮನಿಸಿರುವಂತೆ ರೀಲ್ ಮಾಡುವ ಅತ್ಯುತ್ಸಾಹದಲ್ಲಿ ಹೆತ್ತವರು ಮಕ್ಕಳಿಗೆ ಚಿಕ್ಕವಯಸಿನಲ್ಲಿಯೇ ಅಟೆನ್ಶನ್ ಸೀಕಿಂಗ್ ಮತ್ತು ವ್ಯಾಲಿಡೇಶನ್ ಗಾಗಿ ಹಂಬಲಿಸುವರಾಗಿಬಿಡುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಅನಗತ್ಯ ಅಟೆನ್ಷನ್ ಪಡೆದುಕೊಂಡು ಮುಂದೆ ಬೆಳೆದಾಗ ಅದೇ ಅಟೆನ್ಷನ್ ಅನ್ನು ಬಯಸುತ್ತಾರೆ, ಆದರೆ ಆಗ ಇರುವ ಕಾಂಪಿಟೇಶನ್ ಅನ್ನು ಎದುರಿಸಲಾಗದೇ ಖಿನ್ನರಾಗಿಬಿಡುವ/ ಸಮಾಜ ವಿರೋಧಿಗಳಾಗಿ ಬಿಡುವ ಸಾಧ್ಯತೆಗಳಿವೆ.
ಆದ್ದರಿಂದ ಆದಷ್ಟು ಮಕ್ಕಳು ತಮ್ಮ ಸಾಮರ್ಥ್ಯ ಹಾಗು ಸ್ವ ಅರಿವು ಪಡೆಯುವ ತನಕ ಅವರನ್ನು ಅತಿಯಾಗಿ ಸಮಾಜಕ್ಕೆ ಬಿಂಬಿಸದಿರುವುದು ಒಳಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



