ಬೆಳಗಿನ ಜಾವ 5:30ಕ್ಕೆ ಮಕ್ಕಳಿಬ್ಬರನ್ನು ಎಬ್ಬಿಸಿ ಅವರು ಹಲ್ಲು ತಿಕ್ಕಿ ಮುಖ ತೊಳೆದು ಮನೆ ಉಡುಪು ಬದಲಿಸಿ ಬೇರೆ ಬಟ್ಟೆ ಧರಿಸಿ ಬಂದ ನಂತರ ಅವರಿಗೆ ಹಾಲನ್ನು ನೀಡಿದ ಪವಿತ್ರ ಅವರಿಬ್ಬರನ್ನು ಟ್ಯೂಷನ್‌ಗೆ ಕಳಿಸಿ, ಈಗಾಗಲೇ ಬಂದು ಬಿಟ್ಟಿದ್ದ ಪೇಪರ್ ಮತ್ತು ಹಾಲಿನ ಪಾಕೆಟ್ ತೆಗೆದುಕೊಂಡು ಮನೆಯೊಳಗೆ ಬಂದಳು.
ನಂತರ ಒಲೆಯ ಮೇಲೆ ಒಂದು ಕಪ್ಪು ಚಹಾ ಕುದಿಯಲಿಟ್ಟು ಮನೆಯ ಕಸ ಗುಡಿಸಲಾರಂಭಿಸಿದಳು. ಅಡುಗೆಮನೆ ದೇವರ ಕೋಣೆ ಗುಡಿಸಿ ಮಕ್ಕಳ ರೂಮಿಗೆ ಬಂದ ಆಕೆ ಕಸ ಗುಡಿಸುವಾಗ ಸಣ್ಣ ಸಣ್ಣ ಕೂದಲುಗಳ ಗಂಟು ಮಂಚದ ಕೆಳಗೆ ದೊರೆಯಿತು. ತುಸು ಆಶ್ಚರ್ಯದಿಂದಲೇ ಕಸ ಗುಡಿಸಿದ ಆಕೆ ಎಲ್ಲವನ್ನು ತುಂಬಿ ಹೊರಗೆ ಚೆಲ್ಲಿ ಕೈ ತೊಳೆದುಕೊಂಡು ಅಡುಗೆ ಮನೆಗೆ ಬಂದಳು. ಮರಳಿದ ಚಹಾದ ಎಸರಿಗೆ ಹಾಲು ಹಾಕಿ ಮತ್ತೊಂದು ಬಾರಿ ಕುದಿ ಬಂದಾಗ ಸೋಸಿ ಚಹಾದ ಕಪ್ ನೊಂದಿಗೆ ವರಾಂಡಕ್ಕೆ ಬಂದು ಕುಳಿತಳು. ಆಯಾ ದಿನದ ಪೇಪರ್ ನೋಡುತ್ತಾ ಚಹಾ ಕುಡಿಯುವುದು ಆಕೆಯ ಅತ್ಯಂತ ನೆಚ್ಚಿನ ಕೆಲಸವಾಗಿತ್ತು. ಆಕೆಯೇ ಹೇಳಿಕೊಳ್ಳುವಂತೆ ಇದು ಆಕೆಯ me time.
ಪವಿತ್ರಳ ಗಂಡ ಶಂಕರ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕ. ಈಗಾಗಲೇ 12 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಆತನಿಗೆ ಇನ್ನು ಎಂಟು ವರ್ಷಗಳ ಸರ್ವಿಸ್ ಬಾಕಿ ಇತ್ತು. ಮಕ್ಕಳು ಶಾಲೆಗೆ ಹೋಗುವ ವಯಸ್ಸಿಗೆ ಬರುತ್ತಿದ್ದಂತೆಯೇ ತನ್ನ ಹುಟ್ಟೂರಿಗೆ ಹತ್ತಿರವಿದ್ದ ಪುಟ್ಟ ಶಹರದ ಚಾಳೊಂದರಲ್ಲಿ ಒಂದು ಕೋಣೆಯ ಮನೆಯನ್ನು ಬಾಡಿಗೆಗೆ ಹಿಡಿದರು. ಮಧ್ಯಮ ವರ್ಗದವರೇ ವಾಸವಿದ್ದ ಆ ಚಾಳಿನಲ್ಲಿ ಹೆಂಡತಿಗೆ ಬಸ್ಟ್ಯಾಂಡ್, ರೈಲ್ವೇ ಸ್ಟೇಷನ್, ಮಾರುಕಟ್ಟೆಗಳು ಹತ್ತಿರವಿದ್ದು ಮಕ್ಕಳ ಶಾಲೆ ಕೂಡ ಕೂಗಳತೆ ದೂರದಲ್ಲಿತ್ತು. ಪವಿತ್ರ ಕೂಡ ಪದವೀಧರೆಯಾಗಿದ್ದು ಗಂಡನ ಅನುಪಸ್ಥಿತಿಯಲ್ಲಿ ಮನೆಯ ಎಲ್ಲ ಕೆಲಸಗಳನ್ನು ನಿರ್ವಹಿಸಿಕೊಂಡು ಮಕ್ಕಳ ಓದು, ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಕೂಡ ನಿಭಾಯಿಸುತ್ತಿದ್ದಳು.
ಪೇಪರ್ ಮಡಚಿಟ್ಟು, ಚಹಾದ ಕಪ್ ತೆಗೆದುಕೊಂಡು ಅಡುಗೆ ಮನೆಗೆ ಬಂದ ಆಕೆ ಬೆಳಗಿನ ತಿಂಡಿಗೆ ತಯಾರು ಮಾಡಿಕೊಂಡಳು.
ಇದೀಗ ಹೈಸ್ಕೂಲಿಗೆ ಬಂದಿದ್ದ ಹಿರಿಮಗಳು ಸಮನ್ವಿ ಮತ್ತು ಐದನೇ ತರಗತಿಯಲ್ಲಿ ಓದುತ್ತಿದ್ದ ಸುಮಂತ್ ಇಬ್ಬರನ್ನು ಈ ವರ್ಷದಿಂದ ಟ್ಯೂಷನ್ ಗೆ ಹಾಕಿದ್ದಳು. ಟ್ಯೂಷನ್ ನಿಂದ ಬಂದ ಮಕ್ಕಳು ಒಬ್ಬರ ಹಿಂದೆ ಒಬ್ಬರು ಕಿತ್ತಾಡಿಕೊಳ್ಳುತ್ತಲೇ ಸ್ನಾನ ಮಾಡಿ ಶಾಲಾ ಯೂನಿಫಾರ್ಮ್ ಧರಿಸಿ ಅಮ್ಮನ ಮುಂದೆ ಬಂದು ನಿಂತರು. ಇಬ್ಬರೂ ತಿಂಡಿ ತಿಂದ ನಂತರ ಬಾಚಣಿಕೆ ಹಿಡಿದು ತಂದ ಮಗಳು ಸಮನ್ವಿಗೆ ತಲೆ ಬಾಚುವಾಗ ಆಕೆಯ ಕಿವಿಯ ಹಿಂಭಾಗದ ಕೂದಲುಗಳು ಕಿತ್ತು ಹೋದಂತೆ ಕಂಡು ಬಂತು. ಸೂಕ್ಷ್ಮಜ್ಞಳಾದ ಪವಿತ್ರ ಏನೂ ಮಾತನಾಡದೆ ಮಗಳ ತಲೆ ಬಾಚಿ ಶಾಲೆಗೆ ಕಳುಹಿಸಿದಳು.
ಹೀಗೆ ಒಂದು ವಾರ ಕಳೆಯಿತು. ಪ್ರತಿದಿನ ಮಂಚದ ಕೆಳಗೆ ಜೊಂಪೆ ಕೂದಲುಗಳು ಸಿಕ್ಕುವುದು ಮಾಮೂಲಾಗಿತ್ತು, ಹಾಗೆಯೇ ಸಮನ್ವಿಯ ಕಿವಿಯ ಹಿಂದಿನ ಭಾಗ ತುಸು ಹೆಚ್ಛೇ ಖಾಲಿಯಾಗಿತ್ತು.
ಒಂದು ರವಿವಾರದ ದಿನ ಮಗಳಿಗೆ ತಲೆ ಸ್ನಾನ ಮಾಡಿಸಿ ಎಲ್ಲರೂ ತಿಂಡಿ ತಿಂದ ನಂತರ ಸುಮಂತ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೊರಟು ಹೋದ. ಇದೇ ಸಮಯವನ್ನು ಸಾಧಿಸಿ ಮಗಳನ್ನು ತನ್ನ ಎದುರು ಕೂರಿಸಿಕೊಂಡ ಪವಿತ್ರ ಆಕೆಯ ತಲೆ ಕೂದಲ ವಿಷಯವನ್ನು ಪ್ರಸ್ತಾಪಿಸಿದಳು. ಮೊದಮೊದಲು ತಡಬಡಾಯಿಸಿದ ಸಮನ್ವಿ "ಅದೇನೋ ಗೊತ್ತಿಲ್ಲ ಅಮ್ಮ, ರಾತ್ರಿ ಯಾವುದೋ ಒಂದು ಹೊತ್ತಿನಲ್ಲಿ ಓದುತ್ತಾ ಕುಳಿತಿರುವಾಗ ನನಗರಿವಿಲ್ದೆ ಕೂದಲು ಕಿತ್ಕೊತೇನೆ.. ನನಗೂ ಯಾಕೆ ಅಂತ ಗೊತ್ತಿಲ್ಲ" ಎಂದು ಬಿಕ್ಕಳಿಸಿದಳು. ವಿಷಯದ ಗಂಭೀರತೆಯನ್ನು ಅರಿತ ಪವಿತ್ರ ಮಗಳನ್ನು ಸಮಾಧಾನಿಸಿದಳು.
ಮೊನ್ನೆ ತಾನೆ ರಜೆ ಮುಗಿಸಿ ಕರ್ತವ್ಯಕ್ಕೆ ತೆರಳಿದ್ದ ಗಂಡನ ಮುಂದೆ ಈ ವಿಷಯ ಹೇಳಿ ಗಾಬರಿಗೊಳಿಸಬಾರದು ಎಂದು ತೀರ್ಮಾನಿಸಿದ ಪವಿತ್ರ ಮರುದಿನ ಮಧ್ಯಾಹ್ನ ನಗರದಲ್ಲಿ ವಾಸವಾಗಿದ್ದ ತನ್ನ ಆತ್ಮೀಯ ಸ್ನೇಹಿತೆ ಕವಿತಾಳಿಗೆ ಕರೆ ಮಾಡಿದಳು. ಕ್ಷೇಮ ಸಮಾಚಾರದ ನಂತರ ಯಾರಿಗೂ ಹೇಳಬಾರದು ಎಂದು ಸ್ನೇಹಿತೆಯಿಂದ ಮಾತು ತೆಗೆದುಕೊಂಡು ಮಗಳ ತೊಂದರೆಯನ್ನು ವಿವರಿಸಿದಳು.
ಮನಃಶಾಸ್ತ್ರದಲ್ಲಿ ತುಸು ಆಸಕ್ತಿ ಹೊಂದಿದ್ದ ಕವಿತಾ ಈ ಹಿಂದೆ ಈ ಕುರಿತು ತಾನು ಓದಿರುವುದಾಗಿಯೂ ಸಂಜೆ ಸಮನ್ವಿ ಮನೆಗೆ ಬಂದ ನಂತರ ಆಕೆಯಿಂದ ಕರೆ ಮಾಡಿಸಲು ಹೇಳಿದಳು. ಬಹಳ ಹೊತ್ತಿನವರೆಗೆ ಸ್ನೇಹಿತೆಯರಿಬ್ಬರೂ ಈ ಕುರಿತು ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬಂದರು.
ಸಂಜೆ ಸಮನ್ವಿ ಮನೆಗೆ ಬಂದ ನಂತರ ಆಕೆಗೆ ವಿಷಯವನ್ನು ವಿವರಿಸಿದ ಪವಿತ್ರ ಸಮನ್ವಿಯ ಕೈಯಲ್ಲಿ ಫೋನ್ ಇರಿಸಿ ತನ್ನ ಪಾಡಿಗೆ ತನ್ನ ಕೆಲಸಕ್ಕೆ ಹೊರಟು ಹೋದಳು.
ತನ್ನಮ್ಮನ ಆತ್ಮೀಯ ಸ್ನೇಹಿತೆ ಕವಿತಾ ಎಂದರೆ ಸಮನ್ವಿಗೂ ಅಚ್ಚು ಮೆಚ್ಚು. ಅಂತೆಯೇ ಕವಿತಾಳ ನಂಬರ್ಗೆ ಕರೆ ಮಾಡಿದಳು. ಶಾಲೆಯ, ಆರೋಗ್ಯದ ಕುರಿತು ಒಂದೆರಡು ಕುಶಲೋಪರಿ ಮಾತುಗಳಾದ ನಂತರ ನೇರ ವಿಷಯಕ್ಕೆ ಬಂದ ಕವಿತಾ ನಿಧಾನವಾಗಿ ಸಮನ್ವಿಯ ತೊಂದರೆಯ ಕುರಿತು ವಿಚಾರಿಸಿದಳು.
ತಾಯಿಗೆ ಹೇಳಿದಂತೆಯೇ ಕವಿತಳಿಗೂ ಎಲ್ಲ ವಿಷಯವನ್ನು ಅರುಹಿದ ಸಮನ್ವಿಯ ಮಾತುಕತೆಗಳಿಂದ ಆಕೆ ಅಮಾಯಕಳು, ಆಕೆಗೆ ಅರಿವಿಲ್ಲದೆ ಹೀಗಾಗುತ್ತಿದೆ ಎಂಬುದನ್ನು ಅರಿತ ಕವಿತಾ... "ಪುಟ್ಟಿ, ಹೀಗೆ ಮಾಡಿದರೆ ನಿನಗೆ ಈ ತೊಂದರೆಯಿಂದ ಮುಕ್ತಿ ಸಿಗಬಹುದು. ಪ್ರಯತ್ನಿಸುತ್ತೀಯಾ?? ಎಂದು ಕೇಳಿದಳು ಕವಿತಾ.
"ಹೇಳಿ ಆಂಟಿ, ಏನು ಬೇಕಾದರೂ ಮಾಡ್ತೀನಿ ನನ್ನ ಶಾಲೆಯ ಓದಿಗೆ ತೊಂದರೆ ಆಗಬಾರದು. ಅಷ್ಟೇ" ಎಂದು ಉತ್ತರಿಸಿದಳು ಸಮನ್ವಿ.
ಕೂಡಲೇ ಆಂಜನೇಯನ ಕುರಿತಾದ
ಬುದ್ದಿರ್ಬಲಮ್ ಯಶೋಧೈರ್ಯಂ ನಿರ್ಭಯತ್ವಂ ಮರೋಗತಃ
ಅಜಾಡ್ಯಂ ವಾಕ್ ಪಟುತ್ವಂ ಚ
ಹನುಮದ್ ಸ್ಮರಣಾದ್ಭವೇತ್
ಮಂತ್ರವನ್ನು ಬರೆದು ವಾಟ್ಸಪ್‌ನಲ್ಲಿ ಕಳುಹಿಸಿದ ಕವಿತಾ ಸಮನ್ವಿಗೆ ಆತಂಕ ಉಂಟಾದಾಗಲೆಲ್ಲ ಈ ಮಂತ್ರವನ್ನು ಹೇಳಿಕೊ. ಆ ಹನುಮ ದೇವರು ನಿನಗೆ ಶಕ್ತಿ ತುಂಬುತ್ತಾನೆ. ಆಗ ನೀನು ಕೂದಲು ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿದಳು. ಕವಿತಾಳ ಮಾತಿನ ಭರವಸೆಯ ಮೇಲೆ ತನ್ನ ತೊಂದರೆಯನ್ನು ಬಹು ಪಾಲು ನಿವಾರಿಸಿಕೊಂಡ ಸಮನ್ವಿ ಮುಂದಿನ 15 ದಿನಗಳಲ್ಲಿ ಕವಿತಳಿಗೆ ಕರೆ ಮಾಡಿ "ಆಂಟಿ, ನೀವು ಹೇಳಿದಂತೆ ನನಗೆ ಗಾಬರಿ ಎನ್ನಿಸಿದಾಗಲೆಲ್ಲ ಈ ಮಂತ್ರ ಹೇಳಿಕೊಳ್ಳುತ್ತಾ ಇದೀನಿ... ಇದೀಗ ನನ್ನ ಕೂದಲು ಕಿತ್ತುಕೊಳ್ಳುವುದು ಬಹುತೇಕ ನಿಂತು ಹೋಗಿದೆ" ಎಂದು ಖುಷಿಯನ್ನು ಹಂಚಿಕೊಂಡಳು.
ಮರುದಿನ ಕವಿತಾ ಮತ್ತು ಪವಿತ್ರ ಸಮಸ್ಯೆಯೇನೋ ನಿವಾರಣೆಯಾಗಿದೆ ಆದರೆ ಅದರ ಮೂಲ ಬೇರು ಇನ್ನೂ ಹಾಗೆ ಇರುವುದರಿಂದ ಮುಂದೆ ಈ ತೊಂದರೆ ಮರುಕಳಿಸಬಹುದು ಎಂದು ಮುಂದಾಲೋಚಿಸಿ ಮಾನಸಿಕ ತಜ್ಞ ವೈದ್ಯರೊಬ್ಬರ ಬಳಿ ಆಕೆಯನ್ನು ಕರೆದೊಯ್ಯಲು ತೀರ್ಮಾನಿಸಿದರು.
ತಜ್ಞ ವೈದ್ಯರ ಬಳಿ ಆಪ್ತ ಸಮಾಲೋಚನೆಯಲ್ಲಿ ಅರಿವಿಗೆ ಬಂದದ್ದು ಸಮನ್ವಿಯ ತಂದೆ ತುಸು ಶಿಸ್ತಿನ ಮನುಷ್ಯರಾಗಿದ್ದು ಮಕ್ಕಳನ್ನು ಅಂಕೆಯಲ್ಲಿಟ್ಟು ಬೆಳೆಸುತ್ತಿದ್ದರು, ಇದಕ್ಕೆ ಪವಿತ್ರ ಬದಲು ಹೇಳುತ್ತಿರಲಿಲ್ಲ. ಚಿಕ್ಕವಳಿದ್ದಾಗ ಇದು ಅಷ್ಟೇನೂ ಬಾಧಿಸದಿದ್ದರೂ ಹೈಸ್ಕೂಲಿಗೆ ಬಂದ ಮೇಲೆ ತನ್ನ ಸ್ನೇಹಿತರನ್ನು ನೋಡಿ ಅವರಂತೆ ತಾನು ಕೂಡ ಉಡುಗೆ ತೊಟ್ಟು ನಲಿಯಬೇಕೆಂಬ, ಸ್ನೇಹಿತರೊಂದಿಗೆ ಓಡಾಡಬೇಕೆಂಬ ಆಕೆಯ ಆಸೆ ವ್ಯಕ್ತಪಡಿಸಲೂ ಆಗದೆ ಆಕೆಯ ಸುಪ್ತ ಮನಸ್ಸಿನಲ್ಲಿ ಉಳಿದು ಹೋಯಿತು.
ಇದರ ಜೊತೆಗೆ ಅತ್ಯುನ್ನತ ಶಾಲೆಯಲ್ಲಿ ಪ್ರವೇಶ ದೊರೆತಿದ್ದರಿಂದ ಅಲ್ಲಿಯ ಸ್ನೇಹಿತರ ವಲಯದಲ್ಲಿಯೇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕೆಂಬ ಮಹತ್ವಕಾಂಕ್ಷೆಯೂ ಕೂಡ ಹೆಚ್ಚಾಯಿತು. ತನ್ನ ನಿರೀಕ್ಷೆಯೇ ತನಗೆ ಭಾರವಾಗುತ್ತಾ ಹೋದಂತೆ, ಮೆದು ಸ್ವಭಾವದ ಆಕೆಗೆ ಅರಿವಿಲ್ಲದೆಯೇ ತೀವ್ರ ಆತಂಕಕ್ಕೆ ಒಳಗಾದಳು. ಇದರ ಫಲಶ್ರುತಿಯೇ ಆತಂಕ ಹೆಚ್ಚಾದಾಗ ತನ್ನ ಕೂದಲನ್ನು ತಾನೇ ಕಿತ್ತುಕೊಳ್ಳುತ್ತಿದ್ದದ್ದು.
ಸಮಸ್ಯೆಯ ಮೂಲದ ಅರಿವಾದಾಗ ಉಳಿದದ್ದು ಅದರ ನಿವಾರಣೆ ಮಾತ್ರ. ನಿರಂತರ ಸಂವಹನದ ಮೂಲಕ ಸೂಕ್ತವಾದ ತಿಳುವಳಿಕೆಯನ್ನು ಆಕೆಗೆ ನೀಡುತ್ತಾ ಹೋದಂತೆ ಮನಸಿನ ತಲ್ಲಣಗಳೆಲ್ಲವೂ ನಿವಾರಣೆಯಾಗಿ ಆಕೆಯ ಬಾಳಿನಲ್ಲಿ ಭರವಸೆಯ ಹೊಂಗಿರಣ ಮೂಡಿತು. ಓದು ಮತ್ತು ಆಟೋಟಗಳಲ್ಲಿ ಸಮಾನವಾಗಿ ಭಾಗವಹಿಸಿ ಆತ್ಮವಿಶ್ವಾಸವನ್ನು ತುಂಬಿಕೊಂಡ ಸಮನ್ವಿ ಮುಂದಿನ ಎರಡೇ ವರ್ಷಗಳಲ್ಲಿ 10ನೇ ತರಗತಿಯ ಪರೀಕ್ಷೆಯನ್ನು ಬರೆದು ಇಡೀ ಶಾಲೆಗೆ ಮೂರನೇ ರ್‍ಯಾಂಕ್ ಪಡೆದಳು.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ