ವಾಸುದೇವಾಚಾರ್ಯರ ಮನೆಯಲ್ಲಿ ಗಾಯನ ಸಮರ್ಪಣೆ ಮಾಡುವುದೇ ಒಂದು ಯೋಗ

Upayuktha
0


* ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅಭಿಮತ

*  ಕಲಾ ಪೋಷಕರಾದ ಯದುಪತಿ ಪುಟ್ಟಿ ಮತ್ತು ಶ್ರೀನಿವಾಸ ಪುಟ್ಟಿಗೆ ಸನ್ಮಾನ


ಮೈಸೂರು: ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮೈಲಿಗಲ್ಲನ್ನೇ ಸ್ಥಾಪಿಸಿ ವಿಶ್ವ ವಿಖ್ಯಾತರಾಗಿ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ ಮೈಸೂರು ವಾಸುದೇವಾಚಾರ್ಯರ ಮನೆಯಲ್ಲಿ ಗಾಯನ ಸಮರ್ಪಣೆ ಮಾಡುವುದು ಪೂರ್ವ ಜನ್ಮದ ಸುಕೃತವೇ ಆಗಿದೆ ಎಂದು ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಹೇಳಿದರು.


ಮೈಸೂರಿನ ಆಚಾರ್ಯ ಪಾಠಶಾಲಾ ಸಮೀಪ ಇರುವ ಶ್ರೀವಾಸುದೇವಾಚಾರ್ಯರ ಮನೆಯಲ್ಲಿ ಶಾಸ್ತ್ರೀಯ ಗಾಯನ ಸಮರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.


ವಾಸುದೇವಾಚಾರ್ಯರ ರಚನೆಗಳು ಎಂದರೆ ಅದು ಸಾಕ್ಷಾತ್ ನಾದ ಸರಸ್ವತಿಯಷ್ಟೇ ಮಾನ್ಯವಾದವು. ಸಂಗೀತ ತಪಸ್ವಿಗಳಾದ ಅವರು ಬಾಳಿ, ಬದುಕಿದ ಮನೆಯನ್ನು ಒಂದು ಪಾರಂಪರಿಕ ತಾಣವಾಗಿ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಯದುಪತಿ ಪುಟ್ಟಿ ಮತ್ತು ಶ್ರೀನಿವಾಸ ಪುಟ್ಟಿ ಅವರ ಶ್ರಮ ಅಪಾರವಾಗಿದೆ. ಇಬ್ಬರು ಸಹೋದರರು ವಾಸುದೇವಾಚಾರ್ಯರ ವಂಶಿಕರ ಮನ ಒಲಿಸಿ, ಈ ಮನೆಯನ್ನು ಕಲಾವಿದರ ಕ್ಷೇತ್ರವನ್ನಾಗಿಸಿದ್ದಾರೆ. ಇದು ನಮ್ಮ ನಾಡಿನ ಸಂಗೀತ ಪರಂಪರೆಯ ದೇಗುಲ ಇದ್ದಂತೆ ಎಂದರು.


ಮೈಸೂರು ವಾಸುದೇವಾಚಾರ್ಯರ ಮನೆಗೆ ಹೊಸ ಪೀಳಿಗೆಯ ಗಾಯಕರೂ, ಕಲಾವಿದರೂ ಪ್ರವೇಶ ಮಾಡಬೇಕು. ಇಲ್ಲಿ ಅನುದಿನವೂ ಕಲಾ ಚಟುವಟಿಕೆ, ಗೋಷ್ಠಿ ನಡೆಯಬೇಕು. ಆ ಮೂಲಕ ನವ ಕಲಾವಿದರಿಗೆ ನಮ್ಮ ಪೂರ್ವಿಕರ ಮಹತ್ವ ಪರಿಚಯ ಆಗಬೇಕು. ಆಗ ಮಾತ್ರ ವಾಸುದೇವಾಚಾರ್ಯರನ್ನು ನಾವು ಗೌರವಿಸಿದಂತಾಗುತ್ತದೆ ಎಂದರು.

 

ಖ್ಯಾತ ವೀಣಾವಾದಕ ವಿದ್ವಾನ್ ಪ್ರಶಾಂತ ಅಯ್ಯಂಗಾರ್ ಅವರೂ ಗಾಯನ ಸಮರ್ಪಣೆ ಮಾಡಿದರು. ಮೃದಂಗ ವಿದ್ವಾನ್ ಪಿ.ಎಸ್. ಶ್ರೀಧರ ಇತರರು ಹಾಜರಿದ್ದರು.

ಸಾಧಕರಿಗೆ ಸನ್ಮಾನ:

ಇದೇ ಸಂದರ್ಭ ಸಂಗೀತ ಕಲಾ ಪೋಷಕರು ಮತ್ತು ವಾಸುದೇವಾಚಾರ್ಯರ ಮನೆಯನ್ನು ಪುನರುತ್ಥಾನ ಮಾಡಿದ ಯದುಪತಿ ಪುಟ್ಟಿ ಮತ್ತು ಶ್ರೀನಿವಾಸ ಪುಟ್ಟಿ ಅವರನ್ನು ವಿದ್ವಾನ್ ನಾಗರಾಜ್ ಸನ್ಮಾನಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top