ಮೊನ್ನೆ ಹಾಸನದ ಕಲಾಭವನದಲ್ಲಿ ನಾಟಕ ನೋಡುತ್ತಿದ್ದೆ. ಮತ್ತೆ ಮತ್ತೆ ಕುರುಕ್ಷೇತ್ರ ಅದೇ ರಾಮಾಯಣ ಇಲ್ಲಿ ನಡೆಯುತ್ತಿರುವುದೇ ಹೆಚ್ಚು. ಅದೇಕೆ ನಮ್ಮ ಕಲಾವಿದರು ಈ ಎರಡು ನಾಟಕಗಳ ಬಗ್ಗೆ ಇಷ್ಟು ಅಚ್ಚುಕೊಂಡಿದ್ದಾರೆ ಎನಿಸಿದುಂಟು. ಕಲಾಪ್ರೇಮಿಗಳು ಮೆಚ್ಚಿಕೊಂಡಿದ್ದಾರಲ್ಲ ಏನು ಮಾಡುವುದು.! ಇರಲಿ ಸೂತ್ರಧಾರಿ ಇಲ್ಲದೇ ಯಾವ ಪೌರಾಣಿಕ ನಾಟಕ ಆರಂಭವಾಗುವುದಿಲ್ಲ ಸರಿ ತಾನೆ. ಈ ಬಾರಿ ರಂಗದ ಮೇಲೇ ಬಂದು ಹಾಡುತ್ತಿದ್ದವರು ಎಂ.ನಂಜಪ್ಪನವರು. ಹಾಡು, ನಾಟಿಕ, ಸಿನಿಮಾ ಇಲ್ಲೆಲ್ಲಾ ಇವರ ಪಾತ್ರವಿದೆ. ಆದರೆ ಸೂತ್ರ ಇವರ ಕೈಯಲ್ಲಿ ಇಲ್ಲ. ಬೇರೆಯವರು ಆಡಿಸಿದಂತೆ ಹಾಡುವ ಕಲಾವಿದರು ಅಷ್ಟೇ.
ಇವರಲ್ಲಿ ಹಾಡು ಅಭಿನಯ ಎರಡೂ ಮೈಗೂಡಿದೆ. ಕಲಾತಂಡಗಳು ಕರೆದು ಅವಕಾಶ ಕೊಡುವುದುಂಟು. ಕೊಟ್ಟರೆ ನಟ ಇಲ್ಲದಿದ್ದರೆ ಪ್ರೇಕ್ಷಕ. ಹಾಗೇ ನೋಡಿದರೆ ನಂಜಪ್ಪನವರು ಕಲಾ ಕುಟುಂಬದ ಹಿನ್ನೆಲೆಯಿಂದಲೇ ಬಂದು ಕಲೆಗಾರಿಕೆ ರೂಢಿಸಿಕೊಂಡವರು. ಇವರ ತಂದೆ ಅಣ್ಣಪ್ಪ ತಾಯಿ ಸಣ್ಣಮ್ಮ. ಹುಟ್ಟಿದ್ದು ತಾವರೆಕರೆಯಲ್ಲಿ ತಾ.19-11-1950. ಇದು ನುಗ್ಗೆಹಳ್ಳಿ ಹೋಬಳಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದರು. ತಂದೆ ಅಣ್ಣಪ್ಪನವರು ರೈತರ ಕೆಲಸದ ಜೊತೆಗೆ ಡ್ರಾಮ ಸೀನರಿ ಇಟ್ಟಿದ್ದರು. ಗಾಡಿಯಲ್ಲಿ ಸೀನರಿಯ ಸಾಗಾಟ. ಸೀನರಿಗೆ ಯಾವ ಹೆಸರಿಲಿಲ್ಲ. ಆದರೂ ಜನ ಅಣ್ಣಪ್ಪನ ಸೀನ್ಸ್ ಎನ್ನುತ್ತಿದ್ದರು.
ತಂದೆ ಸೇರಿ ಒಡಹುಟ್ಟಿದ ಏಳು ಜನ ಅಣ್ಣ ತಮ್ಮಂದಿರು ಎಲ್ಲರೂ ಕಲಾವಿದರೇ. ಅವರ 2ನೇ ವಯಸ್ಸಿಗೆ ತಂದೆ ತೀರಿಕೊಂಡರು. ನಾವು ನಾಲ್ಕು ಜನ ಅಣ್ಣ ತಮ್ಮಂದಿರು. ನಾವು ನಾಲ್ವರು ಕಲಾವಿದರೇ. ನಾನು ಪೊಲೀಸ್ ಇಲಾಖೆಯ ಡಿಎಆರ್‌ನಲ್ಲಿ 1976ರಲ್ಲಿ ಕೆಲಸಕ್ಕೆ ಸೇರಿದೆ. ಹೆಡ್ ಕಾನ್ಸ್‌ಟೇಬಲ್ ಆಗಿ ನಿವೃತ್ತನಾದೆ. ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯ ಮಾಡುತ್ತಿದ್ದರು. ಬಬ್ರುವಾಹನ, ಭಿಕ್ಷುಕ, ದಾಸಯ್ಯನ ಪಾತ್ರ. ಇಲಾಖೆ ಅಧಿಕಾರಿ ನೌಕರರ ಬೀಳ್ಕೊಡುಗೆ ನಿವೃತ್ತಿ ಸಮಾರಂಭಕ್ಕೆ ಇವರದೇ ಪ್ರಾರ್ಥನೆ. ಅಪ್ಪನ ಮನೆಯಲ್ಲಿ ಹಾರ್ಮೋನಿಯಂ, ಮೃದಂಗ, ತಬಲ ಇತ್ತು. ಇಬ್ಬರು ಚಿಕ್ಕಪ್ಪನವರು ಇವುಗಳನ್ನು ನುಡಿಸುತ್ತಿದ್ದರು. ಅಜ್ಜ ಚೌಡೇಗೌಡರು ತಬಲ ಬಾರಿಸುತ್ತಿದ್ದರು. ರಾಮನವಮಿ ಭಜನೆಗೆ ಹೋಗ್ತಿದ್ರು. ಕೋಲಾಟ ಆಡುತ್ತಿದ್ದರು, ಸೋಮನ ಕುಣಿತ ಕುಣಿಯುತ್ತಿದ್ದರು. ಊರಿನಲ್ಲಿ ವರ್ಷಕ್ಕೆ 2 ಬಾರಿ ಶನಿ ಮಹಾತ್ಮೆ ನಾಟಕ ಆಡ್ತಿದ್ರು. ನಂಜಪ್ಪನವರೇ ರಾಜವಿಕ್ರಮ. ಹತ್ತಕ್ಕೂ ಹೆಚ್ಚು ಬಾರಿ ಈ ಪಾತ್ರ ಮಾಡಿದ್ದಾರೆ..
ನಿಮ್ಮ ಸಿನಿಮಾ ಪ್ರವೇಶ ಹೇಗೆ.? ಕೇಳಿದೆ. ''ನನ್ನ ಮೊದಲ ಸಿನಿಮಾ ದೇವರ ಮನೆ. ರಾಜೇಶ್, ಅಂಬರೀಶ್, ಜೈ ಜಗದೀಶ್, ತೂಗುದೀಪ ಶ್ರೀನಿವಾಸ್ ನಟಿಸಿದ್ದಾರೆ. ಈ ಚಿತ್ರದಲ್ಲಿ ನಮ್ಮ ಪೊಲೀಸ್ ಅಧಿಕಾರಿ ಎಸ್.ಎಸ್. ಪಾವಟೆಯವರು ಪೊಲೀಸ್ ಪಾತ್ರ ಕೊಡಿಸಿದರು. ಶೂಟಿಂಗ್ ನಡೆದಿದ್ದು ಚಿಕ್ಕಮಗಳೂರಿನಲ್ಲಿ. ಆಗ ನಾನು ಅಲ್ಲಿ ಪೊಲೀಸ್ ಕೆಲಸದಲ್ಲಿದ್ದೆ. ಪ್ರಭಾಕರ್, ಜಯಮಾಲ, ಅರ್ಜುನ ಸರ್ಜಾ ಅಭಿನಯದ ಪ್ರೇಮಯುದ್ಧದಲ್ಲಿ ಪೊಲೀಸ್, ಭೀಮಾ ನಾಗರಾಜ ನಿರ್ದೇಶನದ ನ್ಯಾಯಕ್ಕಾಗಿ ಸವಾಲು ಚಿತ್ರದಲ್ಲಿ ಇದೇ ಪೊಲೀಸ್, ವಿಷ್ಣುವರ್ಧನ ನಟನೆಯ ದಾದಾ ಸೀನಿಮಾದಲ್ಲಿ 2 ಸೀನ್ ಎಸ್.ಐ.ಗೆ ಪ್ರಮೋಷನ್. ಸ್ವರ್ಣ ಕಮಲ ಪ್ರಶಸ್ತಿ ಪಡೆದ ಗಿರೀಶ್ ಕಾಸರವಳ್ಳಿ ನಿರ್ದೇಶನದ ತಬರನ ಕಥೆಯಲ್ಲಿ ಕಛೇರಿ ಜವಾನ, ಎಸ್.ನಾರಾಯಣ ನಿರ್ದೇಶನದ ಬಾನಲ್ಲೂ ನೀನೇ ಬುವಿಯಲ್ಲೂ ನೀನೇ ಇಲ್ಲೂ ನಾನೇ ಪೊಲೀಸ್. ಹಾಸನ ರಮೇಶ್ ನಿರ್ದೇಶನದ ಶ್ರೀಮಂತ ಸಿನಿಮಾದಲ್ಲಿ ಮಾತ್ರ ಬಡ ರೈತ''.
ಹಾಸನದ ಕಲಾಭವನದಲ್ಲಿ ಪ್ರದರ್ಶನಗೊಳ್ಳುವ ಒಂದಲ್ಲ ಒಂದು ನಾಟಕದಲ್ಲಿ ನಂಜಪ್ಪರವರ ಪಾತ್ರ ಚಿಕ್ಕದಾದ್ದರೂ ಸರಿಯೇ ಇರುತ್ತದೆ. ಪಾತ್ರಗಳು ವೈವಿಧ್ಯ. ರಾಜ ಸತ್ಯವ್ರತದಲ್ಲಿ ವಸಿಷ್ಠ, ಗ್ರಹಗಳು, ಕಾರವಾನ, ರಾಮಾಯಣದಲ್ಲಿ ವಶಿಷ್ಠ, ವಿಭೀಷಣ, ಗುಹ, ಕುರುಕ್ಷೇತ್ರದಲ್ಲಿ ಸಾತ್ಯಕಿ, ಭೀಷ್ಮ, ಭಕ್ತ ಮಾಂಧಾತದಲ್ಲಿ ಯಜಮಾನ. ಹೀಗೆ 74ರ ಇಳಿ ವಯಸ್ಸಿನಲ್ಲೂ ಇವರು ಅಭಿನಯದಲ್ಲಿ ವಿರಾಜಮಾನ. ಇವರ ರಂಗಗೀತೆಗಳಿಗೆ ರಂಗಪ್ಪದಾಸ್, ಪಾಲಾಕ್ಷಾಚಾರ್, ಸಚಿನ್, ಹೇಮಂತ್, ವೀರಭದ್ರಾಚಾರ್ ಹಾರ್ಮೋನಿಯಂ ಮೀಟಿದ್ದಾರೆ. ಮೊದಲಿಗೆ ಇವರು ತೋಟಿ ಲಕ್ಕಪ್ಪರ ಹತ್ತಿರ ಸೂತ್ರಧಾರಿಯಾಗಿ ರಂಗದ ಮೇಲೆ ಬಂದವರು ಇಂದಿಗೂ ಪಕ್ಕ ಮುಂದುವರೆದಿದ್ದಾರೆ. ಇವರು ಜನಪದ ಗಾಯಕರು ಹೌದು. ಸಾಮಾಜಿಕ ನಾಟಕದಲ್ಲಿ 'ಗ್ಯಾರಂಟಿ ರಾಮಣ್ಣರ ಬಾಡಿದ ಬದುಕು'ನಲ್ಲಿ ಅಪ್ಪನ ಪಾತ್ರ ಇಪ್ಪತ್ತೈದು ಬಾರಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಇವರ ಬಳಿ ಅಭಿನಂದನಾ ಪತ್ರಗಳ ಕಟ್ಟೇ ಇದೆ.
- ಗೊರೂರು ಅನಂತರಾಜು, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ