ಮಂಗಳೂರು: 'ಪಾಕಿಸ್ತಾನದ ಕುನ್ನಿಗಳೆ... ಎಂದು ಘೋಷಣೆ ಕೂಗಿದರೆ ಪಾಕ್ ಕುನ್ನಿಗಳು ಮಾತ್ರ ಪ್ರಚೋದನೆಗೆ ಒಳಗಾಗಬೇಕು. ಬೇರೆಯವರು ಏಕೆ ಪ್ರಚೋದನೆಗೆ ಒಳಗಾಗಬೇಕು? ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಸಾಮ್ರಾಜ್ಯ ಉಳ್ಳಾಲದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ ಎಂಬುದು ಸ್ಪಷ್ಟವಾಯ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಉಳ್ಳಾಲ ತಾಲ್ಲೂಕಿನ ಬೋಳಿಯಾರ್ ನಲ್ಲಿ ಕೆಲವು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿಯಿಂದ ಇರಿದ ಘಟನೆಗೆ ಸಂಬಂಧಿಸಿದಂತೆ ಅವರು ಮಾತನಾಡಿದರು.
'ಮಂಗಳೂರು ನಗರದ ಪೊಲೀಸ್ ಕಮಿಷನರ್ ಅವರು ಪಾಕಿಸ್ತಾನದ ಕುನ್ನಿಗಳನ್ನು ಗುರುತಿಸಿ, ಅವರ ಮೇಲೆ ಪ್ರಕರಣ ಹಾಕಿ ಅವರನ್ನು ಗಡೀಪಾರು ಮಾಡಬೇಕು. ಅಥವಾ ಖಾದರ್ ಅವರೇ ಗುರುತಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು' ಎಂದು ಸಿ.ಟಿ ರವಿ ಆಗ್ರಹಿಸಿದರು.
'ಭಾರತ್ ಮಾತಾಕೀ ಜೈ ಎಂದಾಗ ಹಾಗೂ ಪಾಕಿಸ್ತಾನಕ್ಕೆ ಬೈದಾಗ ನಮಕ್ ಹರಾಮ್‌ಗಳು ಮಾತ್ರ ಪ್ರಚೋದನೆಗೆ ಒಳಗಾಗುತ್ತಾರೆ. ಆದರೆ, 'ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಮಸೀದಿಯ ಎರಡೂ ಬದಿ ನಿಂತಿದ್ದವರು ಪ್ರಚೋದನೆಗೊಳಗಾಗಿ ಚೂರಿಯಿಂದ ಇರಿದಿದ್ದಾರೆ' ಎಂದು ಮಂಗಳೂರಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ. ಅವರು ಏಕೆ ಪಾಕಿಸ್ತಾನದ ಕಮಿಷನರ್ ರಂತೆ ವರ್ತಿಸುತ್ತಾರೋ ತಿಳಿಯದು. ಅವರು ಪಾಕಿಸ್ತಾನದ ಅಧಿಕಾರಿಯಲ್ಲ, ಭಾರತದ ಪೊಲೀಸ್ ಅಧಿಕಾರಿ. ಅವರ ಹೇಳಿಕೆ ಸಮರ್ಥನೀಯವಲ್ಲ. ಅದನ್ನು ವಾಪಸ್ ಪಡೆಯಬೇಕು. ಮಸೀದಿಯವರು ಕೊಟ್ಟ ದೂರಿಗೆ ತಕ್ಷಣ ಬಿ ವರದಿ ಸಲ್ಲಿಸಬೇಕು' ಎಂದು ಒತ್ತಾಯಿಸಿದರು.
ಇರಿತಕ್ಕೆ ಒಳಗಾದ ಹರೀಶ್, ನಂದನ್ ಕುಮಾರ್ ಕುಟುಂಬಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ರಾಜಧರ್ಮದ ಬಗ್ಗೆ ಮಾತನಾಡುವ ವಿಧಾನಸಭಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ತೆರಳಿದ್ದಾಗ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ. ಗಾಯಾಳುಗಳು ಪಾಕಿಸ್ತಾನದ ಕುನ್ನಿಗಳಾಗಿದ್ದರೆ ಅವರು ಆಸ್ಪತ್ರೆಯಲ್ಲೇ ಇರುತ್ತಿದ್ದರು. ಆದರೆ ಗಾಯಾಳುಗಳು ಭಾರತ ಮಾತೆಯ ಸುಪುತ್ರರಾದ ಕಾರಣ ಅವರು ಆಸ್ಪತ್ರೆಗೆ ಬಂದರೂ ಅವರನ್ನು ಭೇಟಿಯಾಗಿಲ್ಲ ಎಂದರು.
ಬಿಜೆಪಿ ಯಾವತ್ತೂ ಮುಸ್ಲಿಮರನ್ನು ವಿರೋಧಿಸಿಲ್ಲ. ಆದರೆ ಪಾಕಿಸ್ತಾನದ ಕುನ್ನಿಗಳಂತೆ ವರ್ತಿಸುವವರನ್ನು ಮಾತ್ರ ವಿರೋಧಿಸುತ್ತದೆ. ಈ ನೆಲದಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನ ತಿಂದು ದೇಶದ್ರೋಹದ ಮನಸ್ಥಿತಿ ಬೆಳೆಸಿಕೊಂಡಿರುವವರನ್ನು ಮಾತ್ರ ಬಿಜೆಪಿ ಸದಾ ವಿರೋಧಿಸುತ್ತದೆ ಎಂದು ಸಿ.ಟಿ ರವಿ ಹೇಳಿದರು.
ಕಾಂಗ್ರೆಸ್ ಸರಕಾರದ ತುಷ್ಟೀಕರಣ ನೀತಿಯೇ ಜಿಹಾದಿ ಮನಸ್ಥಿತಿ ಬೆಳೆಯಲು ಕಾರಣವಾಗಿದೆ. ಇದನ್ನು ಮಟ್ಟಹಾಕದಿದ್ದರೆ ದೇಶದ ಭದ್ರತೆಗೆ ಗಂಭೀರ ಅಪಾಯ ಎದುರಾದೀತು. ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎನ್ನುವವರಿಗೆ ಬೆಂಬಲ ನೀಡಿ ಬಚಾವ್ ಮಾಡುವ ಕಾಂಗ್ರೆಸ್ ಸರಕಾರ, ಭಾರತ್ ಮಾತಾ ಕೀ ಜೈ ಎಂದರೆ ಕೇಸು ಜಡಿದು ಜೈಲಿಗಟ್ಟುವ ಮತ್ತು ಜಿಹಾದಿ ಮನಸ್ಥಿತಿಯವರಿಂದ ದಾಳಿ ಮಾಡಿಸುವ ವರ್ತನೆ ತೋರುತ್ತದೆ. ರಸ್ತೆಯಲ್ಲಿ ನಮಾಜ್ ಮಾಡಿದವರ ವಿರುದ್ಧ ಸುಮೋಟೋ ಕೇಸ್ ಹಾಕಿದ ಪೊಲೀಸ್ ಅಧಿಕಾರಿಯನ್ನು ಶಿಕ್ಷಿಸುವ ಸರಕಾರ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಯಾವ ಸಂದೇಶ ನೀಡಲು ಹೊರಟಿದೆ? ಎಂದು ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರ ಬಂದ ನಂತರ ಕೊಲೆ ಅಪರಾಧ ಹಾಗೂ ಆತ್ಮಹತ್ಯೆ ಪ್ರಕರಣಗಳು ತೀವ್ರವಾಗಿ ಹೆಚ್ಚಳಗೊಂಡಿವೆ. ಐಸಿಸ್ ಸ್ಲೀಪರ್ ಸೆಲ್‌ಗಳು ಎಲ್ಲಾ ಜಿಲ್ಲೆಗಳಲ್ಲೂ ಸಕ್ರಿಯಗೊಂಡಿದ್ದು, ದೇಶದ್ರೋಹಿ ಚಟುವಟಿಕೆಗಳು ಗರಿಗೆದರಿವೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಗೆ ಮೊದಲು ಸಿ.ಟಿ ರವಿ, ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಉತ್ತರದ ಶಾಸಕ ಡಾ. ವೈ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪಕ್ಷದ ಹಿರಿಯ ಮುಖಂಡ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಹಾಗೂ ಪ್ರೇಮಾನಂದ ಶೆಟ್ಟಿ, ಮಾಧ್ಯಮ ಸಂಚಾಲಕ ವಸಂತ ಪೂಜಾರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಹಿರಿಯ ಮುಖಂಡ ಜಗದೀಶ್ ಶೇಣವ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ