"ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್" ಎಂಬುದು ದೇಹದ ಒಳಗಿನ ಗ್ರಂಥಿಗಳಲ್ಲಿ ಹಾರ್ಮೋನ್‌ಗಳನ್ನು ಸುರಿಸುವುದರಲ್ಲಿ ಏರುಪೇರಾಗುವುದರಿಂದ ಉಂಟಾಗುವ ಒಂದು ಅವಸ್ಥೆ. ವಿಶೇಷವಾಗಿ ಗಂಡುಮಕ್ಕಳಲ್ಲಿ ಹೆಚ್ಚು ಇರಬೇಕಾದ ಆಂಡ್ರೋಜನ್ (ಪುರುಷತ್ವದ ರಸದೂತ) ಮಟ್ಟವು ಮಹಿಳೆಯರಲ್ಲಿ ಹೆಚ್ಚಾಗುವುದೇ ಇದರ ಮೂಲಕಾರಣ. ಐದರಿಂದ ಹತ್ತು ಶೇಕಡಾದಷ್ಟು, ಹನ್ನೆರಡರಿಂದ ನಲುವತ್ತೈದು ವರ್ಷ ವಯಸ್ಸಿನ ಮಹಿಳೆಯರು ಈ ಸಮಸ್ಯೆಗೆ ಒಳಗಾಗುತ್ತಾರೆ. ಅಂಡಾಶಯದಲ್ಲಿ ಗುಳ್ಳೆಗಳು ಉಂಟಾಗುವುದು ಇದರ ಪರಿಣಾಮ. ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಸ್ವಲ್ಪ ವ್ಯತ್ಯಾಸ ಇರಬಹುದು.
ಲಕ್ಷಣಗಳು:
ಋತುಚಕ್ರದಲ್ಲಿ ಏರುಪೇರು, ನಿಯಮಿತವಾಗಿ ಆಗದ ತಿಂಗಳ ಋತುಸ್ರಾವ, ಶರೀರದಲ್ಲಿ ಅತಿಯಾಗಿ ಕೂದಲುಗಳು ಬೆಳೆಯುವುದು, ಮೊಡವೆಗಳು, ಬೊಜ್ಜು ಅಥವಾ ದಪ್ಪ ಶರೀರ, ಮುಟ್ಟಿನ ಅವಧಿಯಲ್ಲಿ ಋತುಸ್ರಾವ ಆಗದೇ ಇರುವುದು, ಅತಿಯಾಗಿ ಆಗುವುದು ಅಥವಾ ಕಡಿಮೆ ಆಗುವುದು, ಶರೀರದ ತೂಕ ಹೆಚ್ಚುವುದು, ಮಕ್ಕಳಾಗದಿರುವುದು (ಸಂತಾನಹೀನತೆ), ಗರ್ಭಧಾರಣೆ ಆಗದೇ ಇರುವುದು, ಚರ್ಮದ ನೆರಿಗೆಗಳಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಮನಸ್ಸಿನ ಖಿನ್ನತೆ, ತಲೆಕೂದಲುಗಳು ಉದುರುವುದು, ನೆತ್ತಿಯ ಮೇಲೆ ಕೂದಲು ಕಡಿಮೆ ಆಗುವುದು, ಜಿಡ್ಡಿನಿಂದ ಕೂಡಿದ ಚರ್ಮ, ಅನಗತ್ಯವಾಗಿ ಮುಖ, ಎದೆ, ಬೆನ್ನು, ಅಂಡು ಇತ್ಯಾದಿ ಶರೀರದ ಬೇರೆ ಭಾಗಗಳಲ್ಲಿ ಕೂದಲುಗಳು ಅತಿಯಾಗಿ ಬೆಳೆಯುವುದು. ಸಕ್ಕರೆ ಕಾಯಿಲೆ, ಹೃದಯದ ತೊಂದರೆ, ಮೂಳೆಗಳ ದುರ್ಬಲತೆ, ಕ್ಯಾನ್ಸರ್ ಬರುವ ಸಾಧ್ಯತೆ ಇವರಲ್ಲಿ ಹೆಚ್ಚು.
ಪತ್ತೆ ಹಚ್ಚುವುದು:
1. ಅಂಡಾಶಯದಿಂದ ಅಂಡಾಣುಗಳು ಕ್ರಮ ತಪ್ಪಿ ಬಿಡುಗಡೆಯಾಗುವುದು. ಋತುಚಕ್ರದ ಏರುಪೇರು ಹಾಗೂ ಮುಟ್ಟಿನ ಸಂದರ್ಭದ ಋತುಸ್ರಾವ ಸರಿಯಾಗಿ ಆಗದೇ ಇರುವುದರಿಂದ ಅಂದಾಜಿಸಬಹುದು.
2. ಆಂಡ್ರೋಜನ್ (ಟೆಸ್ಟೋಸ್ಟೆರೋನ್) ಹಾರ್ಮೋನ್ ಮಟ್ಟದಲ್ಲಿ ಹೆಚ್ಚುವಿಕೆಯನ್ನು ರಕ್ತಪರೀಕ್ಷೆಯ ಮೂಲಕ ಕಂಡುಕೊಳ್ಳಬಹುದು.
3. ಅಂಡಾಶಯದಲ್ಲಿ (ಓವರಿ) ಗುಳ್ಳೆಗಳಂತಹ ರಚನೆಯನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮುಖಾಂತರ ಕಂಡುಹಿಡಿಯಬಹುದು.
ಏನು ಮಾಡಬೇಕು?
ಆಹಾರ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಳ್ಳದೇ ಯಾವುದೇ ಹರಸಾಹಸ ಮಾಡಿದರೂ ಇದರ ನಿಭಾವಣೆ ಕಷ್ಟಸಾಧ್ಯ. ಸಕ್ಕರೆ ನಿಯಂತ್ರಿಸುವ ಇನ್ಸುಲಿನ್ ಹಾರ್ಮೋನ್ ಹೆಚ್ಚಾದಾಗ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದುದರಿಂದ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಪಿಷ್ಟ, ಸಕ್ಕರೆ ಇತ್ಯಾದಿ ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಸಿರಿಧಾನ್ಯಗಳಾದ ಸಾಮೆ, ನವಣೆಗಳನ್ನು ಬದಲಿಯಾಗಿ ಬಳಸಬೇಕು. ಒತ್ತಡದಿಂದ ಕೂಡಿದ, ಕುಳಿತೇ ಕೆಲಸ ಮಾಡುವ ಸ್ವರೂಪದ(ವ್ಯಾಯಾಮ ಇಲ್ಲದ) ಉದ್ಯೋಗದ ಮಾದರಿಗಳು ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಲು ಒಂದು ಕಾರಣ. ತೆಂಗಿನಕಾಯಿ, ಅರಸಿನ, ಹೆಚ್ಚು ನಾರಿನಂಶ ಇರುವ ಹಣ್ಣು-ಸೊಪ್ಪುತರಕಾರಿಗಳು,ಅಗಸೆಬೀಜ, ಪಾಲಿಶ್ ಮಾಡದ ಕಪ್ಪು ಅಥವಾ ಕೆಂಪು ಅಕ್ಕಿ, ಸೇವಿಸಿದರೆ ತುಂಬಾ ಒಳ್ಳೆಯದು. ಇತರ ಎಣ್ಣೆಗಳಿಂದ ಓಲಿವ್ ಎಣ್ಣೆ ಉತ್ತಮ. ಹಾಗೆಂದು ಒಂದೇ ರೀತಿಯ ಆಹಾರ ಎಲ್ಲರಿಗೂ ಹೊಂದಾಣಿಕೆ ಆಗುವುದಿಲ್ಲ. ನಮ್ಮಲ್ಲಿ ವೈಯಕ್ತಿಕ ಸ್ಥಿತಿಯ ಆಧಾರದಲ್ಲಿ ಆಯುರ್ವೇದ ರೀತಿಯಲ್ಲಿ ಆಹಾರ ಪದ್ಧತಿಯನ್ನು ಸೂಚಿಸುತ್ತೇವೆ.
ಆಯುರ್ವೇದ ಚಿಕಿತ್ಸೆ:
ಆಯುರ್ವೇದ ಪಂಚಕರ್ಮ ಚಿಕಿತ್ಸೆಗಳಲ್ಲಿ ವಮನ, ವಿರೇಚನ, ಬಸ್ತಿ ಚಿಕಿತ್ಸೆಗಳನ್ನು ಅವಸ್ಥಾನುಸಾರವಾಗಿ ನಮ್ಮ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಅಸ್ಪತ್ರೆಯಲ್ಲಿ ಬಳಸಿ ಫಲಿತಾಂಶ ಕೊಟ್ಟಿದ್ದೇವೆ. ತೊಂದರೆ ಸರಿಪಡಿಸಲು ಕೆಲವು ತಿಂಗಳ ಕಾಲಾವಕಾಶವನ್ನು ಇದು ಬೇಡುತ್ತದೆ. ರೋಗಿಗೂ ತಾಳ್ಮೆ ಬೇಕಾಗುತ್ತದೆ. ಹಾಗೆಂದು ಚಿಕಿತ್ಸೆ ಯಾವುದೇ ತ್ರಾಸ ನೀಡುವುದಿಲ್ಲ. ಅಮೃತಬಳ್ಳಿ, ನೆಲ್ಲಿಕಾಯಿ, ನೇರಳೆಬೀಜ, ಅರಸಿನ, ಮೆಂತೆ, ಅಶ್ವಗಂಧಾ, ಶತಾವರೀ, ಕರಿಮೆಣಸು ಇತ್ಯಾದಿಗಳನ್ನು ಕಂಡೀಷನ್ ಅವಲಂಬಿಸಿ ಹೊಟ್ಟೆಗೆ ಸೇವನೆ ಮಾಡಬಹುದು. ಯೋಗ, ಪ್ರಾಣಾಯಾಮ, ಧ್ಯಾನಗಳ ಅಳವಡಿಕೆ ತುಂಬಾನೇ ಮುಖ್ಯ. ನಮ್ಮಲ್ಲಿ ಒಳರೋಗಿಯಾಗಿ ಸೇರಿಸಿಕೊಂಡು ಇವೆಲ್ಲವನ್ನು ಸಂಯೋಜಿಸಿ, ಆಯುರ್ವೇದ ಸಿದ್ಧೌಷಧಗಳನ್ನು ಬಳಸಿ ಪರಿಣಾಮಕಾರಿ ಚಿಕಿತ್ಸೆ ನೀಡಿ ಯಶಸ್ಸು ಸಿಕ್ಕಿದೆ.
ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ.
ಬಿ.ಎ.ಎಂ.ಎಸ್., ಎಂ.ಎಸ್.(ಆಯು)
ಆಯುರ್ವೇದ ತಜ್ಞ ವೈದ್ಯರು ಹಾಗೂ ಆಡಳಿತ ನಿರ್ದೇಶಕರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ಪಾದೆ,
ಕಾಣಿಯೂರು-ಸುಬ್ರಮಣ್ಯ ರಾಜ್ಯ ಹೆದ್ದಾರಿ,
ನರಿಮೊಗರು (ಗ್ರಾಮಪಂಚಾಯತ್ ಸಮೀಪ), ಪುತ್ತೂರು.- 574202
ಮೊಬೈಲ್: 9740545979
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ