ವೃತ್ತಿಪರತೆ ಮರೆತು ಕರೆಂಟು ಹೊಡೆಸಿಕೊಂಡ “ಕಾಗೆ” ಮಾಧ್ಯಮಗಳು!

Upayuktha
0


ಪರಾಧ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡುವ ಬದಲು ತಾವೇ “ವಿಚಾರಣೆ” ನಡೆಸುವ ಶೈಲಿಯ ಬಗ್ಗೆ ಪೊಲೀಸರು, ನ್ಯಾಯಾಲಯಗಳು ಹಲವು ಬಾರಿ ಎಚ್ಚರಿಸಿದರೂ ನಮ್ಮ ಡಿಯರ್_ಮೀಡಿಯಾ ಬುದ್ಧಿ ಕಲಿಯುವುದಿಲ್ಲ.


ಈಗ ಸುದ್ದಿಯಲ್ಲಿರುವ ಈ ಕೊಲೆ ಪ್ರಕರಣದ ಆಯಕಟ್ಟಿನ ತನಿಖಾ ಮಾಹಿತಿಗಳು ಮಾಧ್ಯಮಗಳ ಕೈಗೆ ಸಿಗುತ್ತಿರುವ ರೀತಿ, ಸಿಗುವ ವೇಗ ಮತ್ತು ಅವು ತಾವೇ ಸ್ವತಃ ಸ್ಥಳದಲ್ಲಿದ್ದು ವರದಿ ಮಾಡುತ್ತಿರುವಂತೆ ಕಾಣಿಸುತ್ತಿರುವ ವರದಿಗಳು ತೀರಾ ಅಪಾಯಕಾರಿ. ಇಂತಹ ಸೋರಿಕೆಗಳು ಅಧಿಕೃತ ಮೂಲಗಳಿಂದಲೇ ಆಗುತ್ತಿದ್ದರೆ, ಅದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕು. ಅವರಿಗೆ ಅದು ಆಗದಿದ್ದರೆ ನ್ಯಾಯಾಂಗವಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು.


ಇಂತಹ ಸೋರಿಕೆಗಳ ಫಲವಾಗಿ ತಪ್ಪು ಮಾಹಿತಿಗಳು ಹೊರಗೆ ಹರಡುವುದಕ್ಕೆ ಲೇಟೆಸ್ಟ್ ಉದಾಹರಣೆ ಇಲ್ಲಿದೆ. ಇದು ಇಂದಿನ ಪತ್ರಿಕೆಯೊಂದರ ವರದಿ. ಇದರಲ್ಲಿ ಶವದ ಪರೀಕ್ಷಾ ವರದಿಯನ್ನು (ಇದು ಮಾಧ್ಯಮಗಳ ಕೈಗೆ ಸಿಕ್ಕಿದ್ದು ಹೇಗೆ?!)  ಉಲ್ಲೇಖಿಸಿ, “Death due to shock and hemorrhage as a result of multiple blunt injuries sustained” ಎಂದು ಹೇಳಲಾಗಿದೆ. ಅದನ್ನು ಡಿಯರ್_ ಮೀಡಿಯಾದ ಬುದ್ಧಿವಂತರು “ವಿದ್ಯುತ್ ಶಾಕ್‌ನಿಂದ” ಎಂದು ಅರ್ಥ ಮಾಡಿಕೊಂಡಿದ್ದಾರೆ. ಅವರಿಗೆ ಗೊತ್ತಿರುವ “ಶಾಕ್” ಅದೊಂದೇ! ಕನಿಷ್ಠ ಪಕ್ಷ ಯಾರಾದರೂ ವೈದ್ಯರೊಬ್ಬರಲ್ಲಿ ಈ ಬಗ್ಗೆ ಇನ್ನಷ್ಟು ವಿವರ ಪಡೆಯುವ, ವಿಷಯ ಅರ್ಥ ಮಾಡಿಕೊಂಡು ಮುಂದುವರಿಯುವ ವೃತ್ತಿಪರತೆಯೂ ಅವರಲ್ಲಿಲ್ಲ. 


ಸಾಮಾನ್ಯವಾಗಿ ತೀವ್ರ ಜಖಂಗಳಾದಾಗ, ದೇಹದ ರಕ್ತನಾಳಗಳು ಒಡೆದು, ದೇಹದಲ್ಲಿ ರಕ್ತದ ಒತ್ತಡ ಕಡಿಮೆ ಆಗಿ, ದೇಹದ ಭಾಗಗಳಿಗೆ ಆಮ್ಲಜನಕ ಸರಬರಾಜು ಕಡಿಮೆ ಆಗುವ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ “ಹೆಮೊರೇಜಿಕ್ ಶಾಕ್” ಎಂದು ಕರೆಯುವುದಿದೆ. ಅದು ಮಾರಣಾಂತಿಕ. ವಿದ್ಯುತ್ ಆಘಾತವನ್ನು ವೈದ್ಯಕೀಯ ಭಾಷೆಯಲ್ಲಿ “ಶಾಕ್” ಎಂದು ಕರೆಯುವುದಿಲ್ಲ! ಈ ಪ್ರಕರಣದಲ್ಲಿ, ಶವ ಪರೀಕ್ಷಾ ವರದಿ ನಿಜಕ್ಕೂ ಏನು ಹೇಳಿದೆ - ಮಾಧ್ಯಮ ಏನು ವರದಿ ಮಾಡಿದೆ ಎಂಬುದಕ್ಕೆ ತಾಳಿ-ತಂತಿ ಇದ್ದಂತಿಲ್ಲ; ವಿವರಗಳೂ ಅಧಿಕೄತ ಮೂಲದ್ದರಂತೆ ಕಾಣಿಸುತ್ತಿಲ್ಲ. ಇಂತಹ ವರದಿಗಳಿಂದ ಉಪಕಾರಕ್ಕಿಂತ ಸಮಸ್ಯೆಯೇ ಹೆಚ್ಚು.


ಸುದ್ದಿ ಕೊಡದಿದ್ದರೂ ತೊಂದರೆ ಇಲ್ಲ, ತಪ್ಪು ಸುದ್ದಿ ಹರಡಬಾರದು ಎಂಬ ಸಾಮಾಜಿಕ ಪ್ರಜ್ಞೆ ನಮ್ಮ ಸುದ್ದಿಮನೆಗಳಲ್ಲಿ ಮೂಡುವುದು ಯಾವಾಗಲೋ?!


- ರಾಜಾರಾಂ ತಲ್ಲೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top