- ಶ್ರೀಮನ್ ನ್ಯಾಯ ಸುಧಾಮಂಗಳ ಮಹೋತ್ಸವದ 2ನೇ ದಿನದ ಪರೀಕ್ಷೆ ಕಲಾಪ
- ಕೃಷ್ಣಮೂರ್ತಿಪುರಂನ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ವಿದ್ವತ್ ಸಭೆ
ಮೈಸೂರು: ಬದುಕಿನುದ್ದಕ್ಕೂ ವಿದ್ಯಾರ್ಥಿಯಾಗಿದ್ದು, ಭಾರತೀಯ ಪುರಾತನ ಶಾಸ್ತ್ರಜ್ಞಾನ ಪಡೆಯುವ ಹಸಿವು ಇದ್ದರೆ ಜೀವನ ಸಾರ್ಥಕವಾಗುತ್ತದೆ. ಅಧ್ಯಯನ ಪ್ರವೃತ್ತಿ ಇದ್ದರೆ ಬದುಕು ತೇಜೋಮಯವಾಗುತ್ತದೆ ಎಂದು ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಸೋಸಲೆ ಶ್ರೀ ವ್ಯಾಸರಾಜ ಮಠ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ 2ನೇ ದಿನದ ಕಲಾಪಕ್ಕೆ ಸೋಮವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಜ್ಞಾನದ ಹಂಬಲ ಇದ್ದವನಿಗೆ ನಿರಂತರವಾಗಿ ಓದುವ ಪ್ರವೃತ್ತಿ ಬೇಕು. ಸಂಯಮ ಇರಬೇಕು. ಓದಿದ್ದನ್ನು ಚಿಂತನೆ ಮಾಡಬೇಕು. ಆಗ ಅದು ಜ್ಞಾನವಾಗಿ ನಮ್ಮಲ್ಲಿ ನೆಲೆಸಿ ಸಾರ್ಥಕತೆ ಪಡೆಯುತ್ತದೆ ಎಂದರು.
ನಾನು ಕಳೆದ ಒಂದು ದಶಕದಿಂದ ವಿದ್ಯಾರ್ಥಿಗಳಿಗೆ ಶಾಸ್ತ್ರಪಾಠ ಮಾಡಿದ್ದೇನೆ ಎಂದು ವಿದ್ವಾಂಸರು ಪ್ರಶಂಸೆ ನೀಡಿದ್ದಾರೆ. ನನ್ನೊಂದಿಗೆ ಪ್ರದ್ಯುಮ್ನ ಆಚಾರ್ಯ, ಶೇಷಗಿರಿ ಆಚಾರ್ಯರೂ ಸೇರಿ ಅನೇಕ ಪ್ರಾಧ್ಯಾಪಕರು ಮಕ್ಕಳಿಗೆ ಬೋಧನೆ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ವಿದ್ಯಾಪೀಠ ಬೆಳೆಯುತ್ತಿದೆ. ಸುಧಾ ಪರೀಕ್ಷೆ ಮುಗಿದಿದೆ. ಇನ್ನು ಮುಂದೆ ಓದುವುದು ಏನೂ ಇಲ್ಲ ಎಂಬ ಭಾವ ಮಕ್ಕಳಲ್ಲಿ ಬರಬಾರದು. ವಿದಿತ ವೇದ್ಯರು- ಆಗುವುದು ಬೇಡ. ಅವರಲ್ಲಿ ನಿತ್ಯವೂ ಸುಧಾ ಗ್ರಂಥದ ಮೇಲಿನ ಚಿಂತನೆಗಳು ಹೊಸ ರೂಪ ಪಡೆಯಬೇಕು ಎಂದು ಸೋಸಲೆ ಶ್ರೀಗಳು ಸಲಹೆ ನೀಡಿದರು.
**
ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಾಡಿನ ವಿವಿಧ ಮಠ- ಪೀಠಗಳಲ್ಲಿ ಜಯತೀರ್ಥರು ರಚಿಸಿದ ಶ್ರೀಮನ್ ನ್ಯಾಯಸುಧಾ ಗ್ರಂಥದ ಮಂಗಳ ಮಹೋತ್ಸವ ಆಗಾಗ್ಗೆ ನಡೆಯುತ್ತದೆ. ಆದರೆ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶ್ರೀ ವ್ಯಾಸರಾಜ ಯತಿಗಳ ವ್ಯಾಸತ್ರಯ ಗ್ರಂಥಗಳ ಸಹಿತ ಸುಧಾ ಮಂಗಳ ನಡೆಯುವುದು ಬಹಳ ವಿಶೇಷ ಎಂದರು.
4 ವಿದ್ಯಾರ್ಥಿಗಳೂ ಉತ್ತಮವಾಗಿ ಗ್ರಂಥಗಳ ಅನುವಾದ, ವ್ಯಾಖ್ಯಾನ ಮಾಡಿದ್ದಾರೆ. ವಿದ್ವಾಂಸರು ಎಲ್ಲೆಲ್ಲಿ ಕ್ರಾಸ್ ಮಾಡಿ ಪ್ರಶ್ನೆ ಕೇಳಿದರೂ ವಿಚಲಿತರಾಗದೇ ಸಮರ್ಥ ಉತ್ತರ ನೀಡಿದ್ದಾರೆ. ಈ ವಿದ್ಯಾಪೀಠದ ಮಕ್ಕಳ ಜ್ಞಾನಧಾರೆ ಹೀಗೆಯೇ ಗಂಗೆಯಂತೆ ಹರಿಯಲಿ. ಶ್ರೀ ವ್ಯಾಸರಾಜರು ವಿಜಯನಗರ ಸಾಮ್ರಾಜ್ಯವನ್ನೂ ಆಳ್ವಿಕೆ ಮಾಡಿ ಶಾಸ್ತ್ರಪಾಠಗಳನ್ನೂ ಮಾಡುತ್ತಿದ್ದ ಸಂದರ್ಭ 24 ಜನ ಕೇಶವಾದಿ ಯತಿಗಳು, ವಿವಿಧ ಗೃಹಸ್ಥ ಪಂಡಿತರು, ಬಂಗಾಲ ಮೊದಲಾದ ಪ್ರಾಂತ್ಯಗಳಲ್ಲಿ ವರಮಾಲಿನೀಶ್ವರ ಮುಂತಾದ ವಿದ್ವಾಂಸರು ಬೆಳೆದರು. ಅಂಥಾ ಕಾಲ ಮತ್ತೆ ಸೋಸಲೆ ವ್ಯಾಸರಾಜರ ಈ ಮಠಕ್ಕೆ ಬರಲಿ ಎಂದು ಅವರು ಆಶಿಸಿದರು.
====
ನನಗೂ ಅಧ್ಯಯನದ ಆಸೆ ಚಿಗುರಿದೆ:
ಶಿವಮೊಗ್ಗ ಜಿಲ್ಲೆ ಬಾಳಗಾರು ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಪಂಡಿತರು ಏನು ಪ್ರಶ್ನೆ ಕೇಳಿದರೂ ಈ ವಿದ್ಯಾರ್ಥಿಗಳು ಉತ್ತರ ನೀಡುತ್ತ ಇದ್ದಾರೆ. ಸುಘೋಷ, ಪ್ರಣವ, ಆಯಾಚಿತ ಶ್ರೀಶ ಮತ್ತು ಸೌಮಿತ್ರಿ ಅವರ ಪ್ರತಿಭೆಗೆ ವಿದ್ವಜ್ಜನರು ಸೈ ಎಂದಿದ್ದಾರೆ. ಇವರನ್ನು ನೋಡಿದರೆ ನನಗೆ ಇನ್ನಷ್ಟು ಅಧ್ಯಯನ ಮಾಡುವ ಆಸೆ ಚಿಗುರಿದೆ ಎಂದು ಹೇಳಿದರು. ವಿದ್ಯಾರ್ಥಿಗಳ ಆತ್ಮವಿಶ್ವಾಸ, ಟಿಪ್ಪಣಿ ಸಹಿತ ಅವಲೋಕನ, ವಿನಯ, ಧೀರೋದ್ಧಾತ ಶೈಲಿ, ಪ್ರಾಮಾಣಿಕತೆ, ವಿದ್ಯಾಗಾಂಭೀರ್ಯಕ್ಕೆ ನಾವು ಮೆಚ್ಚಿದ್ದೇವೆ ಎಂದರು. ಸೋಸಲೆ ಶ್ರೀಗಳು ತಮ್ಮ ದೀಕ್ಷೆ, ಮಠಾಧಿಕಾರ, ಸಂಚಾರ, ಪ್ರವಚನದ ಜತೆಗೆ ಈ ಮಕ್ಕಳಿಗೆ ಪಾಠ ಮಾಡುವ ವ್ರತವನ್ನೂ ಅನುಸರಿಸಿ ದಿಗ್ವಿಜಯ ಸಾಧಿಸಿದ್ದಾರೆ. ಇದು ಫಲ ಹೊತ್ತ ವಿದ್ಯಾಪೀಠವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಂಡಿತ, ವಿದ್ವಾಂಸರ ಉಪಸ್ಥಿತಿ:
ಮಂತ್ರಾಲಯದ ಹಿರಿಯ ವಿದ್ವಾಂಸ ರಾಜಾ ಎಸ್. ಗಿರಿ ಆಚಾರ್ಯ, ಹಿರಿಯ ಪಂಡಿತರಾದ ವಾದಿರಾಜ ಆಚಾರ್ಯ, ವಿದ್ವಾಂಸ ಶೇಷಗಿರಿ ಆಚಾರ್ಯ, ನಾಗಸಂಪಿಗೆ ಆಚಾರ್ಯ, ಶ್ರೀನಿವಾಸಮೂರ್ತಿ ಆಚಾರ್ಯ,ಮಾತರಿಶ್ವಾಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಶ್ರೀನಿಧಿ ಆಚಾರ್ಯ ಪ್ಯಾಟಿ, ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ. ಮಧುಸೂದನಾಚಾರ್ಯ ಇದ್ದರು. ಸಂಜೆ ವಿದ್ವಾನ್ ಸಮೀರಾಚಾರ್ಯರ ದಾಸವಾಣಿ ಸಂಗೀತ ಕಚೇರಿ ರಂಜಿಸಿತು.
ಇಂದಿನ ಕಾರ್ಯಕ್ರಮ:
ಕೃಷ್ಣಮೂರ್ತಿ ಪುರಂನ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಜೂನ್ 4 ರಂದು ದ್ವಾದಶಿ ಪ್ರಯುಕ್ತ ಬೆಳಗಿನ ಅವಧಿಯಲ್ಲಿ ವಿವಿಧ ಪೀಠಾಧೀಶರಿಂದ ಸಂಸ್ಥಾನ ಪೂಜೆ, ಮಧ್ಯಾಹ್ನದ ಅವಧಿಯಲ್ಲಿ ವಿವಿಧ ವಿದ್ವಾಂಸರಿಂದ ಉಪನ್ಯಾಸವಿದೆ. ಸಂಜೆ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ.
(ಚಿತ್ರಗಳು)
1. ನಗರದ ಕೃಷ್ಣಮೂರ್ತಿಪುರಂನ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಸೋಮವಾರ ಸೋಸಲೆ ಮಠ ಹಮ್ಮಿಕೊಂಡಿದ್ದ ಶ್ರೀ ಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ 2ನೇ ದಿನದ ಕಲಾಪದಲ್ಲಿ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಸೋಸಲೆ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಬಾಳಗಾರು ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
2. ಶ್ರೀ ಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಪಂಡಿತರು ಮತ್ತು ವಿದ್ವಾಂಸರು.
3. ಮೈಸೂರಿನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಪ್ರಾಚೀನ ಗ್ರಂಥಗಳ ಸಂಗ್ರಹ ಮತ್ತು ಗ್ರಂಥಾಲಯವನ್ನು ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ