ಲೋಕಸಭೆ ಫಲಿತಾಂಶ: ಸತತ ಮೂರನೇ ಬಾರಿ ಮೋದಿ ಸರ್ಕಾರಕ್ಕೆ ಮತದಾರರ ಮನ್ನಣೆ

Upayuktha
0

ಎನ್‌ಡಿಎಗೆ 292 ಸ್ಥಾನಗಳ ಸರಳ ಬಹುಮತ; ಕಾಂಗ್ರೆಸ್ ಮೈತ್ರಿಕೂಟಕ್ಕೆ 232



ಹೊಸದಿಲ್ಲಿ: ಹದಿನೆಂಟನೇ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು, ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಗೆದ್ದು ನಿರಾಯಾಸವಾಗಿ ಮೂರನೇ ಬಾರಿಗೆ ಕೇಂದ್ರದಲ್ಲಿ ಸರಕಾರ ರಚಿಸುವ ಬಹುಮತವನ್ನು ಪಡೆದಿದೆ. ಬಿಜೆಪಿ ಏಕಾಂಗಿಯಾಗಿ 242 ಸ್ಥಾನಗಳನ್ನು ಗೆದ್ದಿದೆ.


ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ 232 ಸ್ಥಾನಗಳನ್ನು ಗೆದ್ದಿದೆ. ಅವುಗಳ ಪೈಕಿ ಕಾಂಗ್ರೆಸ್ 100 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕಳೆದ ಬಾರಿಗಿಂತ 50 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಈ ಬಾರಿ ಯಶಸ್ವಿಯಾಗಿದೆ.


ಬಿಜೆಪಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳ ಮೇಲೆ ಗೆಲ್ಲುವ ಗುರಿಯಿಟ್ಟು ಪ್ರಚಾರ ನಡೆಸಿದ್ದರೂ ನಿರೀಕ್ಷೆಯ ಆ ಮಟ್ಟವನ್ನು ತಲುಪಲು ಸಾಧ್ಯವಾಗಿಗಿಲ್ಲ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಲೆಕ್ಕಾಚಾರಗಳು ಭಾರೀ ಪ್ರಮಾಣದಲ್ಲಿ ತಲೆ ಕೆಳಗಾಗಿವೆ. ಹೀಗಾಗಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯುವ ಶಕ್ತಿಯನ್ನು ಈ ಬಾರಿ ಕಳೆದುಕೊಂಡಿದೆ.


ಲೋಕಸಭೆ ಚುನಾವಣೆಯ ಜತೆಗೇ ನಡೆದ ನಾಲ್ಕು ರಾಜ್ಯಗಳ ವಿಧಾನಸಭೆಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿ ಪಕ್ಷಗಳು ಭರ್ಜರಿ ಜಯಗಳಿಸಿವೆ. ಅರುಣಾಚಲ ಪ್ರದೇಶ ಮತ್ತು ಒಡಿಶಾದಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆ. ಆಂಧ್ರಪ್ರದೇಶದಲ್ಲಿ ಮಿತ್ರಪಕ್ಷ ಟಿಡಿಪಿ ಸ್ವಂತ ಬಲದಲ್ಲಿ ಅಧಿಕಾರ ಪಡೆದಿದೆ. ಬಿಹಾರದಲ್ಲೂ ಎನ್‌ಡಿಎ ಅಧಿಕಾರಕ್ಕೆ ಬಂದಿದೆ.



ಕರ್ನಾಟಕದಲ್ಲಿ ಬಿಜೆಪಿ 17 ಮತ್ತು ಮಿತ್ರಪಕ್ಷ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲ್ಲುವುದರೊಇಂದಿಗೆ ಎನ್‌ಡಿಎ ಒಟ್ಟು 19 ಸ್ಥಾನಗಳನ್ನು ಗೆದ್ದಿವೆ. ಆಡಳಿತ ಪಕ್ಷ ಕಾಂಗ್ರೆಸ್ 9 ಸ್ಥಾನಗಳ ಗೆಲುವಿಗೆ ತೃಪ್ತಿಪಟ್ಟುಕೊಂಡಿದೆ. ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ,ಎನ್ ಮಂಜುನಾಥ್ 1.5 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಡಿ.ಕೆ ಸುರೇಶ್ ಅವರಿಗೆ ಸೋಲುಣಿಸಿದ್ದಾರೆ.


ಮಂಡ್ಯದಲ್ಲಿ ಎಚ್‌.ಡಿ ಕುಮಾರಸ್ವಾಮಿ, ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ, ಕರಾವಳಿಯ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ (ಉತ್ತರ ಕನ್ನಡ), ಕೋಟ ಶ್ರೀನಿವಾಸ ಪೂಜಾರಿ (ಉಡುಪಿ- ಚಿಕ್ಕಮಗಳೂರು), ಕ್ಯಾಪ್ಟನ್ ಬ್ರಿಜೇಶ್ ಚೌಟ (ದಕ್ಷಿಣ ಕನ್ನಡ) ಭರ್ಜರಿ ಜಯಗಳಿಸಿದ್ದಾರೆ.


ಪೆನ್‌ಡ್ರೈವ್‌ ಪ್ರಕರಣದಿಂದ ಕುಖ್ಯಾತಿ ಪಡೆದ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋತು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಗೌಡ ಗೆಲುವು ಸಾಧಿಸಿದ್ದಾರೆ.


ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದ್ದು, ತ್ರಿಶೂರಿನಲ್ಲಿ ನಟ ಸುರೇಶ್ ಗೋಪಿ ಭರ್ಜರಿ ಜಯಗಳಿಸಿದ್ದಾರೆ. ಗೆಲುವಿನ ನಿರೀಕ್ಷೆಯಿದ್ದ ತಿರುವನಂತಪುರಂನಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್‍‌ ಅವರು ಕಾಂಗ್ರೆಸ್‌ನ ಶಶಿ ತರೂರ್ ಅವರ ಮುಂದೆ ಕೇವಲ 19,000 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.


ತಮಿಳುನಾಡಿನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದರೂ ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ರಾಜ್ಯದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು 18,000 ಮತಗಳ ಅಲ್ಪ ಅಂತರದಿಂದ ಸೋಲು ಕಂಡಿದ್ದಾರೆ.


ಅಭಿವೃದ್ಧಿಯ ಶಕೆ ಮುಂದುವರಿಯಲಿದೆ; ಪ್ರಧಾನಿ ಮೋದಿ


ಚುನಾವಣೆ ಫಲಿತಾಂಶಗಳು ಪ್ರಕಟವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ 8 ಗಂಟೆಗೆ ದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಆದ ಬದಲಾವಣೆಗಳು, ಅಭಿವೃದ್ಧಿಯ ನಾಗಾಲೋಟದಲ್ಲಿ ಕೈಗೊಂಡ ಕ್ರಮಗಳನ್ನು ನೆನಪಿಸುತ್ತಲೇ, ಮುಂದಿನ ಅವಧಿಯಲ್ಲಿ ಇನ್ನಷ್ಟು ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ವಿಕಸಿತ ಭಾರತದ ನಿರ್ಮಾಣಕ್ಕೆ ಶಕ್ತಿ ತುಂಬಲಾಗುವುದು ಎಂದು ಹೇಳಿದರು.


ಎಲ್ಲ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸಿದ ಪ್ರಧಾನಿ ಮೋದಿ, ಎಲ್ಲರ ಸಹಕಾರದೊಂದಿಗೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದಾಗಿ ವಾಗ್ದಾನ ಮಾಡಿದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top