ಲೇಖಾ ಲೋಕ-3: ಚದುರಂಗ- ಕನ್ನಡ ಸಾಹಿತ್ಯಲೋಕದ ಅಚ್ಚಳಿಯದ ಹೆಸರು

Upayuktha
0




ಥೆ, ಕಾದಂಬರಿಗಳನ್ನು ಬರೆದು, ಹೆಸರು ಮಾಡಿದ್ದ ಚದುರಂಗ ಅವರು (ಸುಬ್ರಹ್ಮಣ್ಯರಾಜು ಅರಸು) ಆಧುನಿಕ ಕನ್ನಡ ಸಾಹಿತ್ಯದ  ಪ್ರಖ್ಯಾತ ಸಾಧಕರಲ್ಲೊಬ್ಬರು! ಚಲನಚಿತ್ರ ನಿರ್ದೇಶಕರಾಗಿಯೂ ಪ್ರಖ್ಯಾತರಾದ ಮಹನೀಯರು.  ಚದುರಂಗ ಅವರ ವಂಶಸ್ಥರು, ಮಂಗರಸ ಕವಿಯ ವಂಶಸ್ಥರಾಗಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಿಕೊಂಡಿರುವ ಮಹನೀಯರು.

ಮೈಸೂರು ರಾಜಮನೆತನದ ಸಂಬಂಧಿಯಾಗಿದ್ದ ಚದುರಂಗ ಅವರು, ಮೈಸೂರು ಮಹಾರಾಜರಾಗಿದ್ದ, ಜಯಚಾಮರಾಜ ಒಡೆಯರ್ ಸಮಕಾಲೀನರು, ಮತ್ತು ಮೈಸೂರಿನ ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ದು, ಇವರ ವೈಶಿಷ್ಟ್ಯತೆ! ತದನಂತರ, ಬೆಂಗಳೂರಿನ ಮಿಡಿಯಟ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದರು. ಪುಣೆಯಲ್ಲಿ ಕಾನೂನು, ಎಂ.ಎ ಶಿಕ್ಷಣ ಕಲಿಯಲು ಹೋಗಿ, ಅರ್ಧಕ್ಕೆ  ಕಾರಣಾಂತರಗಳಿಂದ ನಿಲ್ಲಿಸಿದರು! ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 1-1-1916 ರಂದು ಜನಿಸಿದರು.


ಬಾಲ್ಯದಲ್ಲಿಯೇ, ತಮ್ಮ ತಾಯಿಯವರಿಂದ, ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಕೇಳುತ್ತಿದ್ದರು. ಮಹಾತ್ಮಾ ಗಾಂಧೀಜಿಯವರ  ವಿಚಾರಧಾರೆಗೆ ಮನಸೋತು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಕ್ರಮೇಣ, ಇವರು, ಎಡಪಂಥ ವಿಚಾರ ಧಾರೆಗೆ ಆಸಕ್ತಿ ಹೊಂದಿ,  ಎಂ ಎನ್ ರಾಯ್ ಅವರ  ವಿಚಾರಗಳಿಗೆ ಮನಸೋತರು. ಯೌವನದಲ್ಲಿ ಪ್ರೀತಿಸಿ ವಿವಾಹವಾಗಿ ಸಂಪ್ರದಾಯ, ಸಾಮಾಜಿಕ ಕಟ್ಟುಪಾಡುಗಳನ್ನು ಎದುರಿಸಿ, ಸಂಗಾತಿಯನ್ನು ಆಯ್ಕೆ ಮಾಡಿ, ಬದುಕಿನಲ್ಲಿ ಸಂಕಟ, ನೋವನ್ನೂ ಉಣ್ಣಬೇಕಾಯಿತು! ತಮ್ಮ ಜನ್ಮಸ್ಥಳವಾದ ಕಲ್ಲಹಳ್ಳಿಯಲ್ಲಿ ಬೇಸಾಯ ಮಾಡುತ್ತಾ, ಅನೇಕ ಅನುಭವಗಳನ್ನು ಪಡೆದು, ಕಥೆ, ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಕನ್ನಡ ಸಾಹಿತ್ಯದ  ದಿಗ್ಗಜರಾದ, ಕುವೆಂಪು, ಮಾಸ್ತಿ, ಗೋರೂರು ಅವರು ಚದುರಂಗ ಅವರಿಗೆ ಪ್ರಭಾವ ಬೀರಿದರು. ಪ್ರಖ್ಯಾತ ಕಾದಂಬರಿಕಾರರಾದ, ಅ.ನ.ಕೃ, ತ.ರಾ.ಸು. ಮುಂತಾದವರ ಪ್ರಭಾವದೊಂದಿಗೆ, ಅವರ ಒಡನಾಟದಲ್ಲಿ ಪ್ರಗತಿಶೀಲ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

ಎಂ.ಎ ಪದವಿ ಪಡೆಯಲು, ಪುಣೆಗೆ ಚದುರಂಗ ಅವರು ಹೊರಟಾಗ, ಅಲ್ಲಿ ಚಿತ್ರರಂಗದವರ ಸಂಪರ್ಕ ಮಾಡಿದರು. ಪ್ರಖ್ಯಾತ ಸಿನೆಮಾ  ಪತ್ರಿಕೆಯಾದ, ಮೋಷನ್ ಪಿಕ್ಚರ್ಸ್ ಮ್ಯಾಗಜಿನ್‌ನಲ್ಲಿ, ರಾಂಡಮ್ ಶಾಟ್ಸ್ ಗೆ ಅಂಕಣಕಾರರಾದರು. ಮಾಯಾ ಎಂಬ ಇಂಗ್ಲೀಷ್ ಚಿತ್ರಕ್ಕೆ ಸಹನಿದೇ೯ಶಕರಾಗಿ ಕೆಲಸ ಮಾಡಿದರು. ತಮ್ಮ ಸೋದರ ಸಂಬಂಧಿ, ಕೆಂಪರಾಜ್ ಅರಸ್ ತಯಾರಿಸಿದ ಭಕ್ತ ರಾಮದಾಸ ಚಲನಚಿತ್ರಕ್ಕೆ  ನಿದೇ೯ಶಕರಾದರು. ಹಲವಾರು ಚಲನಚಿತ್ರಗಳಿಗೆ ಸಂಭಾಷಣೆ, ಗೀತೆಗಳನ್ನು ರಚಿಸಿದ ಮಹನೀಯರು.


ಚದುರಂಗ ಅವರು ಬರೆದ ಅತ್ಯುತ್ತಮ ಕಾದಂಬರಿ. "ಉಯ್ಯಾಲೆ" ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಲಕ್ಷ್ಮೀನಾರಾಯಣ್ ಅವರು ಚಲನಚಿತ್ರ ನಿದೇ೯ಶನ  ಮಾಡಿ, ಅದ್ಭುತವಾಗಿ ಯಶಸ್ಸು  ಕಂಡು, ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆಯಿತು. ಡಾ॥ ರಾಜ್ ಕುಮಾರ್, ಕಲ್ಪನಾ, ಅಶ್ವಥ್ ಮುಂತಾದವರು   ನಟಿಸಿ, ಹೊಸ ಅಲೆಯ ಚಿತ್ರವೆನಿಸಿ, ಕಲಾತ್ಮಕವೆನಿಸಿತು! ಚದುರಂಗ ಅವರು, ಕುವೆಂಪುರವರ ಮತ್ತು ನೃತ್ಯ ಕಲಾವಿದೆ ವೆಂಕಟಲಕ್ಷ್ಮಮ್ಮ ಅವರ    ಸಾಕ್ಷ್ಯ ಚಿತ್ರ ಸಹ ನಿರ್ದೇಶಿಸಿದರು.  


ಚದುರಂಗ ಅವರು, ಕನ್ನಡದ ಅಪರೂಪದ ಕೃತಿಗಳನ್ನು ರಚಿಸಿ, ನಾಡಿಗೆ ನೀಡಿದ ಮಹಾನುಭಾವರು. ಸರ್ವಮಂಗಳಾ, ಉಯ್ಯಾಲೆ, ವೈಶಾಖ,  ಹೆಜ್ಜಾಲ, ಹೆಸರಾಂತ ಕಾದಂಬರಿಗಳು ಮತ್ತು ಸ್ವಪ್ನ ಸುಂದರಿ, ಶವದ ಮನೆ, ಇಣುಕು ನೋಟ, ಬಂಗಾರದ ಹೆಜ್ಜೆ, ಮೀನಿನ ಹೆಜ್ಜೆ, ಕ್ವಾಟೆ,  ಮೃಗಯಾ, ಬಣ್ಣದ ಬೊಂಬೆ ಮುಂತಾದ ಕಥಾ ಸಂಕಲನಗಳನ್ನು ಸಹ ಬಿಡುಗಡೆ ಮಾಡಿಸಿದರು. ನಾಲ್ಕು ಮೊಳಭೂಮಿ ಇವರ ಕನ್ನಡ  ಕಥೆಗಳಲ್ಲಿ  ಅತ್ಯುತ್ತಮ ಎಂದು ಭೂವಿವಾದದ ಸಾರಾಂಶವಾಗಿ, ಗ್ರಾಮ ಜೀವನದ ಅನ್ಯಾಯವನ್ನು  ಸಾಂಕೇತಿಕ ರೂಪದಲ್ಲಿ ಪ್ರತಿಬಿಂಬಿಸಿದರು! ಕುಮಾರ ರಾಮ, ಇಲಿಬೋನು, ಬಿಂಬ ಎಂಬ ಮೂರು ನಾಟಕಗಳನ್ನೂ ಬರೆದರು. ಭಕ್ತ ಕುಂಬಾರ ಚಲನಚಿತ್ರಕ್ಕೆ, (ಡಾ॥ ರಾಜ್ ಕುಮಾರ್ ಅಭಿನಯಿಸಿದ್ದ ಚಿತ್ರ)   ಕಥಾ ಲೇಖಕರಾಗಿದ್ದುದು ವಿಶೇಷ. 



ಸರ್ವಮಂಗಳಾ ಚಿತ್ರ ನಿರ್ಮಿಸಿ, 'ಮಾಯಾ' ಆಂಗ್ಲ ಚಿತ್ರಕ್ಕೆ ಸಹನಿರ್ದೇಶಕರಾದರು. ಅನೇಕ ಪ್ರಶಸ್ತಿಗಳಿಗೆ ಸನ್ಮಾನಗಳಿಗೆ ಪುರಸ್ಕೃತರಾದರು. ಸರ್ವಮಂಗಳಾ ಚಿತ್ರಕ್ಕೆ, ರಾಜ್ಯ ಚಲನಚಿತ್ರ ಪ್ರಶಸ್ತಿ, ಉಯ್ಯಾಲೆ ಚಲನಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ, ವೈಶಾಖ ಕಾದಂಬರಿಗೆ 1982ರಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಚದುರಂಗ ಅವರಿಗೆ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ. ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.


ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಯಶಸ್ವಿಯಾಗಿ ಜರುಗಿಸಿ ಕೀರ್ತಿ ಸಂಪಾದಿಸಿದರು (1994).  ಮೈಸೂರಿನಲ್ಲಿ ತಮ್ಮ 82ನೇ ವಯಸ್ಸಿನಲ್ಲಿ, ಕನ್ನಡ ನಾಡಿಗೆ ಅಪರೂಪದ, ಕಲಾತ್ಮಕ ಚಿತ್ರಗಳನ್ನು, ಕಾದಂಬರಿಗಳನ್ನು ನೀಡಿ, 19-10-1998ರಂದು ನಿಧನರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top