ಕನ್ನಡ ಸಾಹಿತ್ಯದ ಪ್ರಖ್ಯಾತ ಸಾಹಿತಿ, ಸಂಶೋಧಕರು, ವಚನ ಪಿತಾಮಹ ಎಂದು ಪ್ರಸಿದ್ಧಿಯಾಗಿದ್ದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು, ಧಾರವಾಡದಲ್ಲಿ 2-7-1880 ಜನಿಸಿದರು. ಗುರುಬಸಪ್ಪ ಹಳಕಟ್ಟಿ ಮತ್ತು ದಾನಾದೇವಿ ಅವರ ಪುತ್ರನಾಗಿ, ಅನೇಕ ಲೇಖನಗಳನ್ನು ಬರೆದು, ತುಂಬಾ ಹೆಸರು ಗಳಿಸಿದ್ದರು. ವಾಗ್ಭೂಷಣ ಪತ್ರಿಕೆಯಲ್ಲಿ ಇವರ ಮೌಲ್ಯಯುತ ಲೇಖನಗಳು ಪ್ರಕಟವಾಗಿ, ಕನ್ನಡ ನಾಡಿನ ಓದುಗರ ಗಮನ ಸೆಳೆದಿದ್ದವು. ಇತಿಹಾಸದ ಲೇಖನಗಳನ್ನು ಬರೆದು, ಅದರಲ್ಲೂ ಇಂಗ್ಲೆಂಡ್ ನ ಇತಿಹಾಸ, ಏಕನಾಥ ಸಾಧುಗಳ ಚರಿತ್ರೆ, ಫ್ರಾನ್ಸ್ ದೇಶದ ರಾಜ್ಯ ಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ, ಮುಂತಾದ ಕೃತಿಗಳನ್ನು ರಚಿಸಿ, ಪ್ರಖ್ಯಾತರಾದರು.
ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಉನ್ನತ ಶಿಕ್ಷಣ ಪಡೆಯಲು, ಮುಂಬಯಿಗೆ ತೆರಳಿ, ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅದೃಷ್ಟವಶಾತ್ ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು, ಸಹಪಾಠಿಯಾಗಿದ್ದುದು ವಿಶೇಷ! ಮುಂಬಯಿಯಲ್ಲಿ, ಗುಜರಾತಿ ಜನರ ಮರಾಠಿ ಜನರ ಭಾಷಾಭಿಮಾನ ಕಂಡು, ಕನ್ನಡಿಗರೂ ಭಾಷಾಭಿಮಾನ ಬೆಳಸಬೇಕೆಂದು ನಿಧ೯ರಿಸಿ, ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು, ವಿದ್ಯಾಥಿ೯ ದಿಸೆಯಲ್ಲೇ ಸಂಕಲ್ಪ ಮಾಡಿದರು. ಕನಾ೯ಟಕ ಏಕೀಕರಣದ ಮುಂಚೂಣಿಯಲ್ಲಿದ್ದ ಆಲೂರು ವೆಂಕಟರಾಯರು ಫ.ಗು. ಹಳಕಟ್ಟಿ ಅವರಿಗೆ ಸ್ಪೂರ್ತಿ ನೀಡಿದರು. 1901ರಲ್ಲಿ ಬಿ.ಎ.ಪದವಿ ಪಡೆದು, ನಂತರ 1904ರಲ್ಲಿ ಕಾನೂನು ಪದವಿ ಪಡೆದು, ಬೆಳಗಾವಿಯಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ಕಾರಣಾಂತರಗಳಿಂದ, ಬೆಳಗಾವಿಯಿಂದ ವಿಜಯಪುರಕ್ಕೆ ಬಂದು, ತಮ್ಮ ಕಾಯ೯ ಕ್ಷೇತ್ರ ಮಾಡಿಕೊಂಡರು. ಸಕಾ೯ರ ಇವರ ದಕ್ಷ ವಕೀಲಿ ಗುರುತಿಸಿ, ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರಕಾರಿ ಪ್ಲೀಡರ್ ಎಂದು ನೇಮಕ ಮಾಡಿತು! ಇವರ ಮೇಲೆ, ಸಿರಸಂಗಿ ಲಿಂಗರಾಜರ ವಿಚಾರಧಾರೆ ಸಾಕಷ್ಟು ಪ್ರಭಾವ ಬೀರಿತು.
ಸಿರಿಗೆರೆಯ ಅಂದಿನ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ದಾವಣಗೆರೆಯಲ್ಲಿ ಇವರನ್ನು ಅತಿಥಿಗಳಾಗಿ ಆಹ್ವಾನಿಸಿ, ಗೌರವಿಸಿದರು. ಮನೆ ಮನೆಗೆ ತೆರಳಿ, ಹಳಕಟ್ಟಿ ಅವರು, ವಚನ ಸಾಹಿತ್ಯದ ಕೈ ಬರಹಗಳನ್ನು ಸಂಗ್ರಹಿಸಿ, ತುಂಬಾ ಶ್ರಮಪಟ್ಟರು. ಒಂದು ರಾಷ್ಟ್ರದ ಅಥವಾ ಜನಾಂಗದ ಸತ್ವವನ್ನು ಅಳೆಯಬೇಕಾದರೆ, ಅಲ್ಲಿಯ ಜನತೆಯ ದೇಹಬಲದಿಂದಲ್ಲ, ಆತ್ಮಬಲದಿಂದ ಎಂದು ನಂಬಿದ್ದರು. ವೀರಶೈವ ಪ್ರಪಂಚಕ್ಕೆ ಸುಪರಿಚಿತರಾಗಿ, ಶರಣ ಸಾಹಿತ್ಯದ ಮಹತ್ವವನ್ನು ತಿಳಿಸಿ, ಹೇಳಿದ್ದಾರೆ.
ಶರಣ ಸಾಹಿತ್ಯದ ಸೇವೆಯನ್ನು ಸಮಥ೯ವಾಗಿ ಮಾಡಿ, ಪ್ರಖ್ಯಾತರಾದವರು, ಶ್ರೀ ಫ.ಗು. ಹಳಕಟ್ಟಿ ಅವರು! ಸಮೃಧ್ಧವಾದ ಕನ್ನಡ ಸೇವೆ ಮಾಡಿ, ಪ್ರಾಮಾಣಿಕರಾಗಿ ದುಡಿದು, ಅಮೋಘ ಕೆಲಸ ಮಾಡಿದ ಮಹನೀಯರು. ಸಂಶೋಧನೆ ಮೂಲಕ, ವಚನ ಶಾಸ್ತ್ರದ ಅನೇಕ ಗ್ರಂಥಗಳನ್ನು ಹೊರತಂದರು. ತಮ್ಮ ಸಂಶೋಧನೆ ಮೂಲಕ, 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು! ಹರಿಹರನ 42 ರಗಳೆಗಳನ್ನು ಸಂಶೋಧಿಸಿ, ಪ್ರಕಟಿಸಿದರು. ಏಕಕಾಲಕ್ಕೆ ಎರಡು ಪತ್ರಿಕೆಗಳನ್ನು ಸಂಪಾದಿಸಿ, ಪ್ರಕಟಿಸಿದರು. ಸತತ 35 ವಷ೯ ನಿರಂತರ ಶಿವಾನುಭವ ಮಾಸಿಕ ಪತ್ರಿಕೆ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1927ರಲ್ಲಿ ನವಕನಾ೯ಟಕ ಪತ್ರಿಕೆ ಆರಂಭಿಸಿದರು. ಅಪೂವ೯, ಅಧ್ಭುತ ಕೃತಿಯಾದ, "ವಚನ ಸಾಹಿತ್ಯ ಸಾರ" ಸಂಪಾದಿಸಿ, ಪ್ರಕಟಿಸಿದರು. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ಧಕೋಶ, ಆದಿಶೆಟ್ಟಿ ಪುರಾಣ, ಮುಂತಾದ ಪ್ರಸಿದ್ಧ ಗ್ರಂಥಗಳನ್ನು ರಚಿಸಿದ್ದಾರೆ. ಶಿವಾನುಭವ ಪತ್ರಿಕೆ ಆರಂಭಿಸಿ, ಅದು 1951ರಲ್ಲಿ, ಬೆಳ್ಳಿ ಹಬ್ಬ ಅದ್ದೂರಿಯಾಗಿ ಆಚರಿಸಿತು. ನವಕನಾ೯ಟಕ ವಾರ ಪತ್ರಿಕೆ ಆರಂಭಿಸಿ, ತಮ್ಮ ಪ್ರಕಾಶಕ ಮತ್ತು ಮುದ್ರಕನ ಸಾಧನೆಯನ್ನು ಪತ್ರಿಕಾ ರಂಗದಲ್ಲಿ ವ್ಯಕ್ತ ಮಾಡಿದರು. ದೂರದೃಷ್ಟಿ ಹೊಂದಿದ ಫ.ಗು. ಹಳಕಟ್ಟಿ ಅವರು, ಉತ್ತಮ ಸಂಘಟಕರಾಗಿ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಸಂಘ ಸಂಸ್ಥೆಗಳ ರೂವಾರಿಯಾದರು. ವಿಜಯಪುರ ಜಿಲ್ಲಾ ಲಿಂಗಾಯತ ವಿದ್ಯಾವಧ೯ಕ ಸಂಘ, ಸಿದ್ದೇಶ್ವರ ಅಬ೯ನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದರು. ಆನೇಕ ಸಾಮಾಜಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಅದರ ಮೂಲಕ ಸಮಾಜದ ಅಭಿವೃದ್ಧಿಗೆ ದುಡಿದ, ಮಹನೀಯರು. ಕನಾ೯ಟಕ ವಿಶ್ವವಿದ್ಯಾಲಯದ ಸ್ಥಾಪನೆಗೂ ಮಹತ್ವದ ಪಾತ್ರ ವಹಿಸಿದವರು. ಬಿಎಲ್ ಡಿಇ ಸಂಸ್ಥೆ ಇವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದೆ.
ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯರು, ಕನಾ೯ಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ, ಮಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ, ಕನಾ೯ಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 1926 ರಲ್ಲಿ, ಬಳ್ಳಾರಿಯಲ್ಲಿ ಜರುಗಿದ, 12 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವಹಿಸಿದ್ದರು. ಭಾರತ ಸಕಾ೯ರ "ರಾವ ಬಹದ್ದೂರ" ಪದವಿ ನೀಡಿ, ಫ.ಗು.ಹಳಕಟ್ವಿ ಅವರನ್ನು ಗೌರವಿಸಲಾಯಿತು. ಇವರು ಸಂಗ್ರಹಿಸಿದ ಅನೇಕ ವಚನಗಳನ್ನು ಆಂಗ್ಲ ಭಾಷೆಯಲ್ಲಿ ಆನುವಾದಿಸಲಾಯಿತು. ಇವರ ವಚನ ಸಾಹಿತ್ಯದ ಕಾಯ೯ಗಳನ್ನು ಗುರುತಿಸಿ, "ವಚನ ಪಿತಾಮಹ" ಎಂದು ಬಿರುದು ನೀಡಿ, ಗೌರವಿಸಿದ್ದು ವಿಶೇಷ!!! ವಿಜಯಪುರದಲ್ಲಿ, ಬಿಎಲ್ ಡಿಇ ಸಂಸ್ಥೆಯು, ಡಾ॥ ಫ.ಗು. ಹಳಕಟ್ಟಿ ಸ್ಮಾರಕ ಭವನ ನಿಮಿ೯ಸಿ, ಗೌರವ ಸೂಚಿಸಿದೆ. ಕನ್ನಡ ಸಾಹಿತ್ಯದ ಸೇವಕರಾಗಿ, ಅನೇಕ ತ್ಯಾಗ, ಸಾಧನೆ ಮಾಡಿ, ಬಹಳಷ್ಟು ಸಂಸ್ಥೆಗಳನ್ನು ಸ್ಥಾಪಿಸಿ, 29-6-1964 ರಂದು, ನಾಡನ್ನು ಅಗಲಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ