ಬಿ. ಕೆ ಹರಿಪ್ರಸಾದ್ ರನ್ನು ಸಿಎಂ ಮಾಡಲು ಕಲ್ಯಾಣ ಕರ್ನಾಟಕ ಈಡಿಗರ ಒತ್ತಾಯ

Upayuktha
0

 


ಕಲಬುರಗಿ: ಕಾಂಗ್ರೆಸಿನಲ್ಲಿ ಸಿಎಂ ಪಟ್ಟ ಬದಲಾವಣೆಯ ಬಗ್ಗೆ ಚರ್ಚೆ ಕಾವೇರುತ್ತಿದ್ದು ಪಕ್ಷದ ಬಣ ರಾಜಕೀಯಕ್ಕೆ ಅಂತ್ಯ ಹಾಡಿ ರಾಜ್ಯದಲ್ಲಿ ಸುಗಮ ಆಡಳಿತ ನಡೆಸಲು ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ತೀವ್ರ ಒತ್ತಾಯ ಮಾಡಿದೆ. 

ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆ ದ್ದಿರುವ ನಾಯಕತ್ವ ಬದಲಾವಣೆ ಚರ್ಚೆಗೆ ಸೌಹಾರ್ದ ಪರಿಹಾರವೆಂದರೆ ಕಾಂಗ್ರೆಸ್ಸಿನಲ್ಲಿರುವ ಎರಡು ಬಣಗಳಲ್ಲಿಯು ಗುರುತಿಸಿಕೊಳ್ಳದೆ ಎಲ್ಲರಿಗೂ ಆಪ್ತರಾದ ಅತ್ಯಂತ ಹಿರಿಯರು ಮುತ್ಸದ್ದಿ ರಾಜಕಾರಣಿಗಳು ಹಿಂದುಳಿದ ವರ್ಗಗಳ ನಾಯಕರು ಆಗಿರುವ ಗಾಂಧಿ ಮನೆತನದ ನಿಕಟವರ್ತಿ ಬಿ. ಕೆ ಹರಿಪ್ರಸಾದ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದರ ಮೂಲಕ ಎಲ್ಲವನ್ನು ಇತ್ಯರ್ಥ ಪಡಿಸಬಹುದು ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.


ರಾಜ್ಯದಲ್ಲಿ ಬಹುಮತದಿಂದ ರಚನೆಗೊಂಡ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಬಣ್ಣ ರಾಜಕೀಯದಿಂದ ಮುಕ್ತಿ ಹಾಡಲು ಹೈಕಮಾಂಡ್ ತಕ್ಷಣ ಮಧ್ಯ ಪ್ರವೇಶಿಸಿ ಗಾಂಧಿ ಮನೆತನದ ಅತ್ಯಂತ ಹಿರಿಯ ನಾಯಕ ಕರ್ನಾಟಕದ ಹಿಂದುಳಿದ ವರ್ಗಗಳ ನಾಯಕರು ಆಗಿರುವ ಹರಿಪ್ರಸಾದ್ ಅವರಿಗೆ ಅವಕಾಶ ಮಾಡಿಕೊಟ್ಟರೆ ಕರ್ನಾಟಕದಲ್ಲಿ ದೇವರಾಜ ಅರಸು, ಬಂಗಾರಪ್ಪ ಮುಂತಾದ ನಾಯಕರ ಕನಸಿನ ಆಡಳಿತದ ಶೈಲಿಯನ್ನು ಮತ್ತೆ ಕಾಣಲು ಸಾಧ್ಯವಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಆರ್ಯ ಈಡಿಗ ಸಮಾಜದವರು ಒಟ್ಟಾಗಿ ಹೈಕಮಾಂಡ್ ನ ಮೇಲೆ ಪ್ರಭಾವ ಬೀರಲು ನಿರ್ಧರಿಸಲಾಗಿದೆ ಸುಸ್ಥಿರವಾದ ಆಡಳಿತ ನೀಡಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಸಾಗಲು ಹರಿಪ್ರಸಾದ್ ನಾಯಕತ್ವ ರಾಜ್ಯಕ್ಕೆ ಅನಿವಾರ್ಯವಾಗಿದೆ. ಕಳೆದ ಐದು ದಶಕಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ವಿವಿಧ ಸ್ಥಾನಮಾನಗಳನ್ನು ಹೊಂದಿ ರಾಜ್ಯದ ಮತ್ತು ರಾಷ್ಟ್ರದ ಸ್ಥಿತಿಗತಿಗಳನ್ನು ಬಹಳ ಸೂಕ್ಷ್ಮವಾಗಿ ಅರಿತುಕೊಂಡಿರುವ ದಕ್ಷ ನಾಯಕರಾಗಿರುವುದರಿಂದ ಮತ್ತು ಎಲ್ಲಾ ಸಮುದಾಯದವರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವ ಶಕ್ತಿ ಹೊಂದಿರುವ ಹರಿಪ್ರಸಾದ್ ಮುಖ್ಯಮಂತ್ರಿ ಸ್ಥಾನಕ್ಕೆ ಅತ್ಯಂತ ಅನಿವಾರ್ಯ ಹಾಗೂ ಅರ್ಹ ವ್ಯಕ್ತಿ ಎಂದು ಮುಖಂಡರು ಪ್ರತಿಪಾದಿಸಿದರು.


ರಾಜ್ಯಸಭಾ ಸದಸ್ಯರಾಗಿರುವ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಯ ಅನೇಕ ಕಾನೂನು ಮತ್ತು ಶಾಸನಗಳನ್ನು ಜಾರಿ ಮಾಡಲು ತಮ್ಮ ವೈಚಾರಿಕ ಚಿಂತನೆಯನ್ನು ನೀಡಿ ರಾಷ್ಟ್ರದ ಪ್ರಗತಿಗೆ ಕಾರಣಿಭೂತರಾಗಿದ್ದು ಅವರ ಸೇವೆ ಕರ್ನಾಟಕಕ್ಕೆ ಅತ್ಯಂತ ಅನಿವಾರ್ಯವಾಗಿದೆ. ಕರಾವಳಿಯಲ್ಲಿ ಕಾಂಗ್ರೆಸ್ಸಿನಲ್ಲಿ ವೀರಪ್ಪ ಮೊಯ್ಲಿ ಯವರ ನಂತರ ಮುಖ್ಯಮಂತ್ರಿ ಸ್ಥಾನ ಇದುವರೆಗೂ ಯಾರು ಪಡೆಯದಿರುವುದರಿಂದ ಇವರ ಆಯ್ಕೆಗೆ ಸರ್ವರ ಬೆಂಬಲ ದೊರೆಯಲಿದೆ ಮತ್ತು ಪ್ರಸಕ್ತ ರಾಜಕಾರಣದಲ್ಲಿ ಕವಿದಿರುವ ಆತಂಕ ಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿ  ಅಥವಾ ಡಿಸಿಎಂ ಮಾಡುವಂತೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯರಾದ ಡಾ. ಪ್ರಣವಾನಂದ ಸ್ವಾಮೀಜಿಯವರು ಈಗಾಗಲೇ ಒತ್ತಾಯಿಸಿದ್ದು ಕರ್ನಾಟಕದ 70 ಲಕ್ಷಕ್ಕೂ ಅಧಿಕ ಇರುವ ಈಡಿಗ ಸಮುದಾಯದ ಈ ಬೇಡಿಕೆಯನ್ನು ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡುವಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ನಿರ್ಣಾಯಕ ಕೈಗೊಂಡು ಒತ್ತಾಯಿಸಿದೆ.


ಬಿ ಕೆ ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕೈಗೊಂಡ ನಿರ್ಣಯದ ಸಂದರ್ಭದಲ್ಲಿ ಹೋರಾಟ ಸಮಿತಿಯ ಇತರ ಪದಾಧಿಕಾರಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ್ ಗುಂಡಾನೂರು, ಡಾ. ಸದಾನಂದ ಪೆರ್ಲ, ರಾಜೇಶ್ ದತ್ತು ಗುತ್ತೇದಾರ್, ಕುಪೇಂದ್ರ  ಗುತ್ತೇದಾರ್ ಆಳಂದ , ಶ್ರೀಕಾಂತ್ ಬಿ.ಗುತ್ತೇದಾರ್, ತಿಮ್ಮಪ್ಪ  ಗಂಗಾವತಿ, ಸುರೇಶ್ ಮಟ್ಟೂರು, ಅಂಬಯ್ಯ ಗುತ್ತೇದಾರ ಇಬ್ರಾಹಿಂಪುರ್, ನಾಗಯ್ಯ ಗುತ್ತೇದಾರ್ ಕರದಾಳು, ಮಹೇಶ್ ಯರಗೋಳ್, ಅಂಬಯ್ಯ ಗುತ್ತೇದಾರ್ ಶಾಬಾದಿ,ಮಲ್ಲಯ್ಯ ಕುಕ್ಕುಂದ,ಶೇಖರ್  ಗುತ್ತೇದಾರ್ ಗಾರಂಪಳ್ಳಿ ಮಹೇಶ್ ಹೊಳಕುಂದ, ಅನಿಲ್ ಯರಗೋಳ,ಶರಣಯ್ಯ ಗುತ್ತೇದಾರ್ ಕೊಂಚೂರ್, ಜಗದೇವ ಗುತ್ತೇದಾರ್ ಕಲ್ ಬೇನೂರು, ಆಕಾಶ ವೀರಯ್ಯ ಗುತ್ತೇದಾರ್, ಶಿವು ಗುತ್ತೇದಾರ್ ಜೇವರ್ಗಿ,ಲಾಲಯ್ಯ ಗುತ್ತೇದಾರ್ ಇಜೇರಿ, ಮತ್ತಿತರರು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top