ಅಡ್ಯನಡ್ಕ: 'ವಿಕಸನ 2024-25' ಬೋಧಕ ಬೋಧಕೇತರರಿಗೆ ಕಾರ್ಯಾಗಾರ ಸರಣಿ ಉದ್ಘಾಟನೆ; ನೂತನ ಸ್ಕೂಲ್ ಬಸ್‌ಗೆ ಚಾಲನೆ

Upayuktha
0

 


ಅಡ್ಯನಡ್ಕ: ಭಾಷೆ ಚಿಂತನೆಯನ್ನು ಪ್ರಭಾವಿಸಿ, ಸ್ವಾನುಭವದ ಅಭಿವ್ಯಕ್ತಿಗೆ ಅವಕಾಶವನ್ನು ಒದಗಿಸುತ್ತದೆ. ವಿಜ್ಞಾನವು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುತ್ತದೆ. ಅನಂತವನ್ನು ಗ್ರಹಿಸುವ ಶಕ್ತಿಯನ್ನು ಗಣಿತ ಕಲಿಸುತ್ತದೆ. ಸಾಮಾಜಿಕ ಕೌಶಲ, ನಿರ್ಲಿಪ್ತತೆ, ಮಾನವೀಯತೆಯನ್ನು ಸಮಾಜ ವಿಜ್ಞಾನ ಸಾರುತ್ತದೆ. ಇವೆಲ್ಲದರ ಹಿಂದಿರುವ ಜ್ಞಾನವು ಯಾವಾಗಲೂ ಸಮಗ್ರವಾಗಿರುತ್ತದೆ ಎಂದು ಸಾಹಿತಿ, ಚಿಂತಕ ಹಾಗೂ ಅಧ್ಯಾಪಕ ಅರವಿಂದ ಚೊಕ್ಕಾಡಿ ಹೇಳಿದರು.


ಅವರು ಜೂನ್ 29ರಂದು ಜನತಾ ವಿದ್ಯಾಸಂಸ್ಥೆಗಳು ಅಡ್ಯನಡ್ಕ ಇಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗೆ ನಡೆದ 'ವಿಕಸನ 2024-25' ಸರಣಿಯ ಮೊದಲ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು 'ಒಗ್ಗಟ್ಟೇ ನೆಲೆಗಟ್ಟು' ವಿಷಯದಲ್ಲಿ ಉಪನ್ಯಾಸ ನೀಡಿದರು. ಬಳಿಕ ನಡೆದ ಸಂವಾದದಲ್ಲಿ ಅವರು ಪಾಲ್ಗೊಂಡಿದ್ದರು.


ಕಾರ್ಯಾಗಾರವನ್ನು ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಸಚ್ಚಿದಾನಂದ ಶಾಸ್ತ್ರಿ ನೆಕ್ಕರೆ ಹಾಗೂ ಯಶಸ್ವಿನಿ ಶಾಸ್ತ್ರಿ ನೆಕ್ಕರೆ ದಂಪತಿಯನ್ನು ಸನ್ಮಾನಿಸಲಾಯಿತು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ಅವರು ಸನ್ಮಾನ ಪತ್ರ ವಾಚಿಸಿದರು. ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು ಅವರು ಪ್ರಸ್ತಾವನೆಗೈದರು.


ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಸ್ವಾಗತಿಸಿದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ವಂದಿಸಿದರು. ಹಿರಿಯ ಶಿಕ್ಷಕ ರಾಜಗೋಪಾಲ ಜೋಶಿ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕನ್ನಡ ಅಧ್ಯಾಪಕರಾದ ಶಿವಕುಮಾರ್ ಸಾಯ ಅವರು ಸಂಪನ್ಮೂಲ ವ್ಯಕ್ತಿ ಅರವಿಂದ ಚೊಕ್ಕಾಡಿ ಅವರನ್ನು ಶಾಲು ಹೊದೆಸಿ ಸ್ವಾಗತಿಸಿದರು. ಜನತಾ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಅವರು ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ರವಿಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಹಿಂದಿ ಉಪನ್ಯಾಸಕ ಸೋಮಶೇಖರ್ ಎಚ್ ಕಾರ್ಯಾಗಾರದ ವಂದನಾರ್ಪಣೆ ನಡೆಸಿಕೊಟ್ಟರು. ಆಡಳಿತ ಮಂಡಳಿಯ ಇತರ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಭೆಯಲ್ಲಿದ್ದರು.


ನೂತನ ಸ್ಕೂಲ್ ಬಸ್‌ಗೆ ಚಾಲನೆ:

ಸಭಾ ಕಾರ್ಯಕ್ರಮಕ್ಕೂ ಮುನ್ನ ಕರ್ಣಾಟಕ ಬ್ಯಾಂಕ್ ವತಿಯಿಂದ ಜನತಾ ವಿದ್ಯಾಸಂಸ್ಥೆಗೆ ನೀಡಲಾದ ನೂತನ ಸ್ಕೂಲ್ ಬಸ್ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್ ಪುತ್ತೂರು ವಲಯ ಅಧಿಕಾರಿ ಶ್ರೀಹರಿ ಪಿ ಹಾಗೂ ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖಾ ಪ್ರಬಂಧಕರಾದ ರಾಮಕೃಷ್ಣ ವಿ. ಯು. ಅವರು ಜನತಾ ವಿದ್ಯಾಸಂಸ್ಥೆಗಳ ವಠಾರದಲ್ಲಿ ನೆರವೇರಿಸಿದರು. ಆಡಳಿತ ಮಂಡಳಿ ಸದಸ್ಯ ಗೋವಿಂದರಾಯ ಶೆಣೈ ಅವರಿಗೆ ವಲಯಾಧಿಕಾರಿ ಶ್ರೀಹರಿ ಪಿ. ಅವರು ವಾಹನದ ಕೀ ಹಸ್ತಾಂತರಿಸಿದರು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ ಎಂ. ಅವರು ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ನಿರೂಪಿಸಿದರು.





إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top