ಟೇಬಲ್ ಮೇಲೆ ಇದ್ದ ತನ್ನ ಪುಸ್ತಕವನ್ನು ತೆಗೆದುಕೊಳ್ಳಲು ಬಂದ ಸಾನ್ವಿಯನ್ನು ಕಂಡು "ಅಯ್ಯೋ, ಈ ಹುಡುಗೀನ ಒಂದ್ಕಡೆ ಕೂರಿಸಬಾರದ.... ಮಗುವಿಗಂತೂ ಬುದ್ಧಿ ಇಲ್ಲ ತಾಯಿಗೂ ಇಲ್ವಾ? ಮಡಿ ಮೈಲಿಗೆ ಅರಿವೇ ಇಲ್ಲ ಇವರಿಬ್ಬರಿಗೂ" ಎಂದು ಒಂದೇ ಸಮನೆ ಬೇಸರದಿಂದ ಕಮಲಮ್ಮ ವಟಗುಟ್ಟುತ್ತಿದ್ದರು.
"ಸುಮ್ನಿರಬಾರ್ದ ಕಮಲು... ಅದಿನ್ನೂ ಪುಟ್ಟ ಮಗು.
ದೊಡ್ಡೋಳಾದ್ ಮಾತ್ರಕ್ಕೆ ಅವಳಿಗೆಲ್ಲಾ ಗೊತ್ತಿರಬೇಕು ಅಂತ ಇಲ್ಲ. ಅಷ್ಟಕ್ಕೂ ನಿನಗೆ ಅವಳು ನಿನಗೆ ಬೇಕಾದ ಹಾಗೆ ಇರಬೇಕು ಅಂತ ಅನಿಸಿದ್ರೆ ನಿಧಾನವಾಗಿ ಕೂಡಿಸಿ ಎಲ್ಲಾ ವಿಷಯವನ್ನು ಅವಳಿಗೆ ಸಮಾಧಾನದಿಂದ ಹೇಳು.. ಸುಮ್ನೆ ಅವರಮ್ಮನನ್ನ ಯಾಕೆ ಅಂತೀಯಾ? ಪಾಪ ಅವಳೂ ಎಷ್ಟು ಅಂತ ಒಳಗೆ ಹೊರಗೆ ಒಬ್ಬಳೇ ಮಾಡ್ತಾಳೆ. ಅಷ್ಟಕ್ಕೂ ಅವಳ ಮಾತನ್ನು ಪುಟ್ಟಿ ಎಲ್ ಕೇಳ್ತಾಳೆ?" ಎಂದು ಪತ್ನಿ ಕಮಲಮ್ಮನವರನ್ನು ಗೋವಿಂದಪ್ಪನವರು ಸಮಾಧಾನಿಸಿದರು.
ಅಡುಗೆ ಮನೆಯಲ್ಲಿ ಅತ್ತೆ ಮಾವನಿಗೆ ಸಾಯಂಕಾಲದ ಚಹಾ ಮಾಡುತ್ತಿದ್ದ ಪ್ರಿಯಾಳ ಮುಖದಲ್ಲಿ ವಿಷಾದದ ನಗೆ ಮೂಡಿ ಮರೆಯಾಯಿತು. ಕುದಿಯುತ್ತಿರುವ ಚಹಾದ ಎಸರನ್ನು ನೋಡುತ್ತಾ ಆಕೆಯ ಮನ ಕೆಲವರ್ಷಗಳ ಹಿಂದೆ ಓಡಿತು.
ತಾನಾಗ 9ನೇ ತರಗತಿಯಲ್ಲಿ ಓದುತ್ತಿದ್ದಳು. ಮಧ್ಯವಾರ್ಷಿಕ ಪರೀಕ್ಷೆಗಳು. ಇನ್ನೇನು ನಾಳೆಯ ದಿನ ಕೊನೆಯ ಪರೀಕ್ಷೆ ಎನ್ನುವಾಗ ತನ್ನ ಮೊದಲ ಋತುಚಕ್ರ ಪ್ರಾರಂಭವಾಗಿತ್ತು. ಕೂಡಲೇ ಅಮ್ಮ ಸುತ್ತಣ ಮನೆಯ ಮುತ್ತೈದೆ ಹೆಂಗಸರನ್ನು ಕರೆದು, ಅವರೆಲ್ಲರೂ ಸೇರಿ ತನ್ನನ್ನು ಮುಟ್ಟಿಸಿಕೊಳ್ಳದೆ ಮೇಲಿನಿಂದಲೇ ತಲೆಗೆ ಎಣ್ಣೆ ಹಾಕಿ, ಹಣೆಗೆ ಕುಂಕುಮ ಅರಿಶಿಣ ಹಚ್ಚಿಕೊಳ್ಳಲು ತಾನು ಚಾಚಿದ ಕೈಗೆ ದೂರದಿಂದಲೇ ಹಾಕಿದರು. ನಂತರ ಕೂಡ ತನ್ನನ್ನು ಮುಟ್ಟಿಸಿಕೊಳ್ಳದೆ ದೂರದಿಂದಲೇ ತಲೆಗೆ ನೀರು ಎರೆದರು. ಇದು ಐದು ದಿನಗಳ ಕಾಲ ನಿರಂತರ ನಡೆದು 5ನೇ ದಿನ ಮತ್ತೊಮ್ಮೆ ತಲೆಗೆ ನೀರೆರೆದು ಸ್ನಾನ ಮಾಡಿಸಿ ಹೊಸ ರೇಶಿಮೆ ಸೀರೆ ಉಡಿಸಿ ಅಲಂಕಾರ ಮಾಡಿ ಕೆನ್ನೆಗೆ ಕಪ್ಪಿಟ್ಟು ಪಕ್ಕದಲ್ಲಿ ಒಂದು ಪುಟ್ಟ ಕಟ್ಟಿಗೆಯ ಗೊಂಬೆಯನ್ನು ಕೂರಿಸಿ ಅರಿಶಿಣ ಕುಂಕುಮ ಹಚ್ಚಿ ಆರತಿ ಮಾಡಿ ಎಲ್ಲರಿಗೂ ಊಟ ಹಾಕಿಸಿ ಸಂಭ್ರಮದ ಸಮಾರಂಭ ಮಾಡಿದರು. ತನಗೋ ವಿಪರೀತ ಸಂಕೋಚ. ಮನೆಯಲ್ಲಿ ಏನನ್ನೂ ಮುಟ್ಟದೆ ಮನೆಯ ಒಂದು ಮೂಲೆಯಲ್ಲಿ ಕುಳಿತು ಅಮ್ಮ ಕೊಡುವ ಬಿಸಿಬಿಸಿಯಾದ ಊಟ ತಿಂಡಿ ಸೇವಿಸುತ್ತಾ ಧಾರಾಳವಾಗಿ ಗೋಡಂಬಿ ದ್ರಾಕ್ಷಿ ಗೇರುಬೀಜ ಬಾದಾಮಿ ಉತ್ತತ್ತಿ ಆಳವಿ ಅಂಟು ತುಪ್ಪ ಬೆಲ್ಲ ಕೊಬ್ಬರಿ ಹಾಕಿ ಮಾಡಿದ ಅಂಟಿನ ಉಂಡೆಯನ್ನು ತಿನ್ನಲು ಕೊಡುತ್ತಿದ್ದರು. ಅಪ್ಪ ಅಣ್ಣ ಕೂಡ ನನ್ನೊಂದಿಗೆ ಮಾತನಾಡದೆ ದೂರ ದೂರವೇ ಓಡಾಡಿದಾಗ ಮನಸ್ಸು ಮುದುಡುತ್ತಿತ್ತು.
ಮುಂದೆ ರಜೆ ಮುಗಿದು ಶಾಲೆಗೆ ಹೋದಾಗ ಸಮಾಜವಿಜ್ಞಾನ ಪತ್ರಿಕೆಯ ಅಂಕಗಳನ್ನು ಎಲ್ಲರಿಗೂ ಹೇಳಿ ನಾನು ಅಟೆಂಡ್ ಆಗದೆ ಇದ್ದುದನ್ನು ನಾಗೇಶ್ ಸರ್ ಪ್ರಶ್ನಿಸಿದಾಗ ತಾನು ಸಂಕೋಚದಿಂದ ತಲೆ ತಗ್ಗಿಸಿ ನಿಂತರೆ ಸ್ನೇಹಿತರೆಲ್ಲ ಮುಸಿ ಮುಸಿ ನಗುತ್ತಿದ್ದುದನ್ನು ಕಂಡು ಎಲ್ಲಾದರೂ ಓಡಿ ಹೋಗಿ ಬಚ್ಚಿಟ್ಟುಕೊಳ್ಳುವಂತಾಗಿತ್ತು.
ಕೈಗೆ ಚಹಾದ ಎಸರಿನ ಬಿಸಿನೀರ ಹನಿ ಸಿಡಿದಾಗ ಎಚ್ಚೆತ್ತ ಪ್ರಿಯಾ ತನ್ನ ಬಾಲ್ಯದ ಆ ದಿನಗಳನ್ನು ನೆನೆದು ಮುಗುಳ್ನಗುತ್ತಾ ಚಹಕ್ಕೆ ಹಾಲು ಹಾಕಿ ಕುದಿಸಿ ಸೋಸಿ ತಂದು ಮನೆಯ ಎಲ್ಲರಿಗೂ ಒಂದೊಂದು ಕಪ್ ಕೊಟ್ಟು ತಾನು ಕೂಡ ಒಂದು ಕಪ್ ಹಿಡಿದು ಡೈನಿಂಗ್ ಟೇಬಲ್ ಬಳಿ ಕುಳಿತಳು.
ಆಗ ತಾನೆ ಆಫೀಸಿನಿಂದ ಬಂದು ಕೈಕಾಲು ಮುಖ ತೊಳೆದ ಪ್ರಿಯಾಳ ಗಂಡ ಸತೀಶ್ ಹೆಂಡತಿಯಿಂದ ಕಪ್ಪನ್ನು ಪಡೆದು ಮನೆಯ ಬಿಗು ವಾತಾವರಣವನ್ನು ಕಂಡು ಕಣ್ಸನ್ನೆಯಲ್ಲಿಯೇ ಪತ್ನಿಗೆ ಏನಾಯಿತು ಎಂದು ಕೇಳಿದ. ಅಲ್ಲಿಯೇ ಹೋಂವರ್ಕ್ ಮಾಡುತ್ತಾ ಕುಳಿತಿದ್ದ ಮಗ ಸೂರಜ್ ಗೆ ಕೇಳಿಸದಂತೆ ಪ್ರಿಯಾ ಗಂಡನ ಕಿವಿಯಲ್ಲಿ ಮಗಳು ದೊಡ್ಡವಳಾದ ಸುದ್ದಿಯನ್ನು ಅರುಹಿದಳು.
ಕೇವಲ ಹನ್ನೊಂದರ ಹರೆಯದ ಪುಟ್ಟ ಮಗಳು ಋತುಮತಿಯಾದ ಸುದ್ದಿಯನ್ನು ಕೇಳಿ ಸತೀಶ ತುಸು ಸಂಭ್ರಮ ಮತ್ತು ಕೊಂಚ ಗಾಬರಿಯಿಂದ ಮುಂದೇನು ಎಂಬಂತೆ ಪತ್ನಿಯತ್ತ ನೋಡಿದ.
ಕಮಲಮ್ಮನವರು "ಸತೀಶ ಐದು ದಿನ ನಿನ್ನ ಮಗಳ್ನ ಒಂದ್ ಕಡೆ ಕೂತ್ಕೊಳಕ್ಕೆ ಹೇಳು, ಹಾಗೆ ನಿನ್ ಹೆಂಡ್ತಿಗ್ ಹೇಳು ಆಕೆಗೆ ಚಂದಾಗಿ ಗೋಡಂಬಿ, ದ್ರಾಕ್ಷಿ, ಕೇರಬೀಜ, ಬಾದಾಮಿ, ಉತ್ತತ್ತಿ , ತುಪ್ಪ ಅಂಟು, ಆಳವಿ ಹಾಕಿದ ಕೊಬ್ಬರಿ ಬೆಲ್ಲದ ಉಂಡಿ ಕೊಡಲಿ 5ನೇ ದಿನ ತಲೆಗೆ ನೀರೆರೆದು ಬಳೆ ಹಾಕಿ ಜಂಗಮರನ್ನ ಕರೆಸಿ ಪಾದೋದಕ ಪ್ರಸಾದ ಮಾಡಬೇಕು ಎಂದು ಜೋರಾಗಿ ಹೇಳಿದರು.
ಇದೆಲ್ಲಾ ಮಗಳಿಗೆಲ್ಲಿ ಮುಜುಗರ ತರುತ್ತದೆ ಎಂಬ ಭಾವದಿಂದ ಸತೀಶ ಅಯ್ಯೋ!ಅಮ್ಮ ಅದ್ಯಾವ ಓಬಿರಾಯನ ಕಾಲದ ಮಾತು ಅಂತ ಹೇಳ್ತೀಯಾ" ಎಂದು ತುಸು ದಿಗಿಲಿನಿಂದ ಜೋರಾಗಿ ಹೇಳಿದಾಗ... ಅಲ್ಲಿಯೇ ಕುಳಿತಿದ್ದ ಮಗ ಸೂರಜ್
ಕೂಲ್ ಡ್ಯಾಡ್.... ಗಾಬರಿಯಾಗೋ ಅಥವಾ ಆತಂಕ ಪಡುವ ಅವಶ್ಯಕತೆ ಇಲ್ಲ.. ಅಜ್ಜಿ,ಅಮ್ಮ ತಮಗೆ ತಿಳಿದ ಹಾಗೆ ಅವರ ಮನಸ್ಸಿನ ಸಮಾಧಾನಕ್ಕೆ ಶಾಸ್ತ್ರಗಳನ್ನು ಮಾಡಲಿ. ಸೈಂಟಿಫಿಕ್ ಆಗಿ ಅದು ಒಳ್ಳೆಯದು ಎಂದು ಹೇಳಿ ಅಜ್ಜಿಯ ಬಳಿ ಸಾರಿದ.
ಗಂಡು ಹುಡುಗ ಈ ರೀತಿ ಮಾತನಾಡಿದ್ದನ್ನು ನೋಡಿ ತುಸು ಅಚ್ಚರಿಯಿಂದ ಬಳಿ ಬಂದು ಕುಳಿತ ಮೊಮ್ಮಗನನ್ನು "ಏನೋ, ನಿನಗೇನು ಗೊತ್ತು" ಎಂದು ಅಜ್ಜಿ ಕೇಳಿದರು.
"ಡೋಂಟ್ ವರಿ ಅಜ್ಜಿ, ನಮ್ಮ ಪಠ್ಯದಲ್ಲಿ ಈ ಕುರಿತು ಎಲ್ಲಾ ವಿವರಣೆ ಕೊಟ್ಟಿದ್ದಾರೆ. ಹಾಲು ಹಲ್ಲು ಉದುರಿ ಹೊಸ ಹಲ್ಲು ಬರುವ ಈ ಸಮಯದಲ್ಲಿ ಹೆಣ್ಣು ಮಕ್ಕಳ ಪಿರಿಯಡ್ಸ್ ಅಂದ್ರೆ ಋತುಚಕ್ರ ಪ್ರಾರಂಭವಾದರೆ ಅದಕ್ಕೆ ಪ್ಯೂಬರ್ಟಿ ಅಂತ ಹೇಳ್ತಾರೆ. ಇವತ್ತಿನ ಅತಿಯಾದ ಜಿಡ್ಡಿನ ಮತ್ತು ಪೌಷ್ಟಿಕ ಪದಾರ್ಥಗಳು, ನಾವು ನೋಡುವ, ಕೇಳುವ ಚಿತ್ರಗಳ ದೃಶ್ಯಗಳು ನಮ್ಮ ಹಾರ್ಮೋನುಗಳ ಮೇಲೆ ಬೀರುವ ಪರಿಣಾಮದಿಂದ ಈಗಿನ ಹೆಣ್ಣು ಮಕ್ಕಳು ತುಸು ಬೇಗನೆ ದೊಡ್ಡವರಾಗುತ್ತಾರೆ. ಇದು ಮೈಲಿಗೆ ಅಲ್ವೇ ಅಲ್ಲ ಅಜ್ಜಿ. ಈ ಸಮಯದಲ್ಲಿ ಹೊಸದೊಂದು ಅನುಭವಕ್ಕೆ ತೆರೆದುಕೊಳ್ಳುವ ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೊಂಚ ವಿಶ್ರಾಂತಿ ಬೇಕೇ ಬೇಕು. ಅದಕ್ಕೆ ಶಾಸ್ತ್ರ ಸಂಪ್ರದಾಯದ ಹೆಸರಿನಲ್ಲಿ ಆಕೆಯನ್ನು ಹೈಜಿನಿಕ್ ಆಗಿ ಮೈನ್ಟೈನ್ ಮಾಡ್ತಾರೆ. ಪ್ರತಿ ತಿಂಗಳು ಪೀರಿಯಡ್ಸ್ ಆದಾಗ ಹೆಚ್ಚು ಬ್ಲೀಡಿಂಗ್ ಆಗೋದ್ರಿಂದ ರಕ್ತಹೀನತೆ ಆಗದೆ ಇರಲಿ ಅಂತ ಆಕೆ ದೈಹಿಕವಾಗಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪೌಷ್ಟಿಕವಾದ ಸಿಹಿ ಪದಾರ್ಥಗಳು, ಅಡುಗೆ ತಿಂಡಿಗಳನ್ನ ಮಾಡಿ ಹಾಕ್ತಾರೆ ಎಂದು ಹೇಳಿದಾಗ ಇದುವರೆಗೂ ಇದು ಹೆಣ್ಣು ಮಕ್ಕಳ ವಿಚಾರ ಎಂದು ಸಂಕೋಚದಿಂದ ಮಾತನಾಡದೆ ಉಳಿದಿದ್ದ ಗೋವಿಂದಪ್ಪ ಮತ್ತು ಸತೀಶ ಅಚ್ಚರಿಯಿಂದ ಸೂರಜನತ್ತ ನೋಡಿದರು.
"ಹಾಗಾದ್ರೆ...ಆಕೆಯನ್ನು ಮೂಲೆಯಲ್ಲಿ ಕೂಡ್ಸೋದು ಬೇಡ್ವಾ" ಎಂದು ಕಮಲಮ್ಮ ತುಸು ಅಸಹನೆಯಿಂದ ಕೇಳಿದಾಗ...ಉಹೂಂ ಬೇಡ ಅಜ್ಜಿ. ಅವಳು ನಮ್ಮ ಹಾಗೆ ಎಲ್ಲರ ಜೊತೆ ಓಡಾಡಿಕೊಂಡಿರಲಿ. ನಿಮ್ಮದೇನೇ ಶಾಸ್ತ್ರ ಸಂಪ್ರದಾಯ ಇದ್ರೂ ಅದನ್ನ ಮನೆಮಟ್ಟಿಗೆ ಮಾಡಿ. ನಾನೇನು ಆಕೆಗೆ ಕೀಟಲೆ ಮಾಡಿ ಹೊಡೆದಾಡೋದು ಮಾಡಲ್ಲ ಎಂದು ಹೇಳಿದವನೆ ತಂಗಿಯತ್ತ ತಿರುಗಿದ.
ಸಾನು... ನಿಂಗೆ ಏನಾದರೂ ಹೊಟ್ಟೆ ನೋವು, ಸೊಂಟ ನೋವು ಬಂದ್ರೆ ಹೇಳು.... ಬಿಸಿ ನೀರು ಕಾಯಿಸಿ ಹಾಟ್ ಬ್ಯಾಗ್ ಗೆ ಹಾಕ್ಕೊಡ್ತೀನಿ ಹೊಟ್ಟೆ ಮೇಲೆ ಇಟ್ಕೊಂಡ್ರೆ... ಯು ವಿಲ್ ಫೀಲ್ ಬೆಟರ್ ಎಂದು ಹೇಳಿ ತನ್ನಮ್ಮ ಪ್ರಿಯಾಳತ್ತ ತಿರುಗಿ
ಆದರೆ ಅಮ್ಮ... ಅವಳಿಗೆ ಕೊಡೋ ಅಂಟಿನ ಉಂಡಿಯಲ್ಲಿ ನನಗೂ ಪಾಲು ಬೇಕು ಎಂದು ಮೂತಿಯುಬ್ಬಿಸಿ ಹೇಳಿದಾಗ ಎಲ್ಲರೂ ಜೋರಾಗಿ ನಕ್ಕರೆ, ತನ್ನ ಪರವಾಗಿ ಅಣ್ಣನಾಡಿದ ಮಾತು ಕೇಳಿ ಪುಟ್ಟ ಸಾನ್ವಿಯ ಮುಖ ಅರಳಿತು.
ತಾನು ಅನುಭವಿಸಿದ ಕೆಲವು ಮುಜುಗರಗಳನ್ನು ನೆನೆದು ಅತ್ತೆಯ ಮನಃಸ್ಥಿತಿಯನ್ನು ಬದಲಿಸಲು ಏನೆಲ್ಲಾ ಹರಸಾಹಸ ಮಾಡಬೇಕು ಎಂದು ಚಿಂತಿಸುತ್ತಿದ್ದ ಪ್ರಿಯ ನಿರಾಳವಾದ ಭಾವದಿಂದ ಮನದುಂಬಿ ನಕ್ಕಳು.
ಇತ್ತ ಗೋವಿಂದಪ್ಪ ಮತ್ತು ಸತೀಶರ ಮನದಲ್ಲಿ ಅಯ್ಯೋ ಇಷ್ಟು ವರ್ಷಗಳ ಕಾಲ ಋತು ಚಕ್ರವನ್ನು ಅಸ್ಪೃಶ್ಯತೆ, ಮೈಲಿಗೆ ಎಂಬಂತೆ ಈ ವಿಷಯದ ಕುರಿತು ಅರಿಯಲು, ಹೆಣ್ಣು ಮಕ್ಕಳ ಆ ದಿನಗಳ ದೈಹಿಕ ನೋವು ಸಂಕಟವನ್ನು, ಮನದ ತಳಮಳವನ್ನು ಅರಿಯದೆ ಹೋದೆವು, ಪುಟ್ಟ ಹುಡುಗ ಸೂರಜ್ ಇದೆಲ್ಲದರ ಕುರಿತು ಅರಿತಿದ್ದಲ್ಲದೇ ಅಜ್ಜಿ ಮತ್ತು ತಾಯಿಗೆ ಅದೆಷ್ಟು ಚೆನ್ನಾಗಿ ಅರ್ಥ ಮಾಡಿಸಿದ ಎಂದು ಮನದಲ್ಲಿಯೇ ಅಚ್ಚರಿಪಟ್ಟು ಒಬ್ಬರು ಇನ್ನೊಬ್ಬರ ಮುಖ ನೋಡಿ ನಸುನಕ್ಕರು. ಅಜ್ಜಿ ಕಮಲಮ್ಮ ಹೌದಲ್ವೆ... ನಮ್ಮ ಕಾಲದಲ್ಲಿ ಮನೆ ಕೆಲಸ ಎಲ್ಲ ಮಾಡ್ತಾ ಇದ್ವಿ, ಈ ಸಮಯದಲ್ಲಿ ದೈಹಿಕ ಶ್ರಮದ ಕೆಲಸಗಳ್ನ ಮಾಡೋದು ಅಷ್ಟು ಒಳ್ಳೆಯದಲ್ಲ ಅಂತ ದೂರ ಕೂರಿಸುತ್ತಿದ್ದರು. ಕುಳಿತಲ್ಲೇ ಊಟ ತಿಂಡಿ ಮಾಡಿ ಕೊಡ್ತಿದ್ರು... ಪ್ರತಿ ತಿಂಗಳು ಆ ಮೂರು ದಿನಗಳಲ್ಲಿ ಮನೆಯ ಹಿತ್ತಲಲ್ಲಿ ಕುಳಿತು ತುಂಬು ಮುಜುಗರಕ್ಕೆ ಈಡಾಗುತ್ತಿದ್ದ ನನ್ನ ಪರಿಸ್ಥಿತಿ ನನ್ನ ಮೊಮ್ಮಗಳಿಗೆ ಬೇಡ. ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಅವಳು ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಮನದಲ್ಲಿ ಯೋಜಿಸಿದರು. ಕೂಡಲೇ ಮೊಮ್ಮಗಳನ್ನು ಬಳಿ ಕರೆದು ಕೂಡಿಸಿಕೊಂಡು ಆ ದಿನಗಳಲ್ಲಿ ಹೇಗೆ ಇರಬೇಕು ಎಂಬುದರ ಕುರಿತು ಆಕೆಗೆ ಅರಿವಾಗುವಂತೆ ನಿಧಾನವಾಗಿ ತಿಳಿ ಹೇಳುತ್ತಿರುವುದನ್ನು ಕಂಡು ಮನೆಯ ಎಲ್ಲಾ ಸದಸ್ಯರು ಅಚ್ಚರಿಯಿಂದ ಅಜ್ಜಿ ಮತ್ತು ಮೊಮ್ಮಗಳನ್ನು ನೋಡಿದರು. ಎಲ್ಲರ ದೃಷ್ಟಿ ತಮ್ಮತ್ತ ನೆಟ್ಟುದನ್ನು ಕಂಡು ಕಮಲಮ್ಮನವರು "ಹಾಗೆಲ್ಲ ನೋಡಬೇಡಿ, ನನ್ನ ಮೊಮ್ಮಗಳಿಗೆ ದೃಷ್ಟಿಯಾಗುತ್ತೆ ಎಂದು ಹುಸಿ ಮುನಿಸಿಕೊಂಡರೆ ಎಲ್ಲರೂ ಜೋರಾಗಿ ನಗುತ್ತಾ ತಂತಮ್ಮ ಕೋಣೆಗಳಿಗೆ ತೆರಳಿದರು. ಪ್ರಿಯಾ ಕೂಡ ಮೆಲ್ಲನೆ ಮುಗುಳ್ನಗುತ್ತಾ ಸನ್ನಿವೇಶಕ್ಕೆ ತಕ್ಕನಾದ "ಹೊಸ ಚಿಗುರು ಹಳೇ ಬೇರು ಕೂಡಿದರೆ ಮರ ಸೊಗಸು" ಎಂಬ ತನ್ನಿಷ್ಟದ ಭಾವಗೀತೆಯನ್ನು ಗುನುಗುತ್ತಾ ರಾತ್ರಿಯ ಅಡುಗೆ ತಯಾರಿಗೆ ಅಡುಗೆ ಕೋಣೆಯತ್ತ ನಡೆದಳು.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ