ಯೋಗಾಭ್ಯಾಸದ ವಿವಿಧ ಪ್ರಯೋಜನಗಳ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ 'ಜೂನ್ 21' ರಂದು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತದೆ. 'ಯೋಗ' ಎಂಬ ಶಬ್ದ ಭಾರತೀಯರಾದ ನಮಗೆಲ್ಲ ಚಿರಪರಿಚಿತವಾಗಿದ್ದು, ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತು. ಅಂದಿನ ಹಿರಿಯರು, ಋಷಿ- ಮುನಿಗಳು ಯೋಗದ ವಿವಿಧ ಬಗೆಯ ಮಹತ್ವಗಳನ್ನು ಅರಿತು, ತಮ್ಮ ಬದುಕಿನಲ್ಲಿ ಅಳವಡಿಸುವ ಮೂಲಕ ಸಾಧನೆಯ ಮಾರ್ಗ ಕಂಡುಕೊಂಡರು ಮತ್ತು ಯೋಗದ ಸಹಾಯದಿಂದ ತಾವು ಪಡೆದ ಅತ್ಯಮೂಲ್ಯ ಪ್ರಯೋಜನಗಳನ್ನು ಜಗತ್ತಿಗೆ ಪರಿಚಯಿಸಿದರು. ಹಾಗೆಯೇ 'ಯೋಗ' ಎಂಬುದು ಸಂಸ್ಕೃತ ಪದವಾದ 'ಯುಜ್'ನಿಂದ ಬಂದಿದ್ದು, ಇದರ ಅರ್ಥ 'ಸೇರಲು','ನೊಗಕ್ಕೆ' ಅಥವಾ 'ಒಗ್ಗೂಡಿಸಲು' ಅಂತಿದೆ.ಅಂದರೆ ಯೋಗವು ನಮ್ಮ ಮನಸ್ಸು, ದೇಹ ಮತ್ತು ಆತ್ಮಕ್ಕೆ ಸಾಮರಸ್ಯವನ್ನು ತರುವ ತತ್ವವನ್ನು ಒಳಗೊಂಡಿದ್ದು, ದೈಹಿಕ ವ್ಯಾಯಾಮಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ.
ಯೋಗವು ನಮ್ಮ ಉಸಿರಾಟದ ವ್ಯಾಯಾಮ, ಧ್ಯಾನ ಮತ್ತು ನೈತಿಕ ತತ್ವಗಳನ್ನು ಸಂಯೋಜಿಸುವ ಆರೋಗ್ಯಕ್ಕೆ ಸಮಗ್ರ ವಿಧಾನವಾಗಿದೆ. ನಮ್ಮ ಹಿರಿಯರ ತಮ್ಮ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ನಿಭಾಯಿಸುವಲ್ಲಿ ಈ ಯೋಗವು ಬಹಳ ಸಹಕಾರಿಯಾಗಿತ್ತು ಎಂಬ ಸಂಗತಿ ನಮಗೆಲ್ಲ ತಿಳಿದ ವಿಷಯವೇ ಆಗಿದೆ.
ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ, ಒತ್ತಡದ ಬದುಕಿನಿಂದ ನಾವು ದಿನನಿತ್ಯ ಒಂದಲ್ಲ ಒಂದು ಕಾಯಿಲೆಗೆ ತುತ್ತಾಗಿ ಅನಾರೋಗ್ಯದಿಂದ ಬಳಲುವಂತಾಗಿದೆ.ಯೋಗವು ಇದಕ್ಕೆಲ್ಲ ಒಂದು ಅತ್ಯದ್ಭುತ ಉಪಾಯವಾಗಿದ್ದು, ಅದು ಬಹಳ ಸರಳವಾದ ಅಭ್ಯಾಸವಾಗಿದೆ. ಈ ಯೋಗವು ನಮ್ಮ ದೈಹಿಕ ವ್ಯಾಯಾಮವನ್ನು ಮೀರಿದ್ದು, ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಸಂಯೋಜಿಸಿ ಒಟ್ಟಾರೆಯಾಗಿ ನಮ್ಮ ಯೋಗಕ್ಷೇಮದ ಅರ್ಥವನ್ನು ಉತ್ತೇಜಿಸುತ್ತದೆ.
ಹೀಗಾಗಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಅತ್ಯಂತ ಉಲ್ಲಾಸದಿಂದ ಮಾಡಲು ಸಹಕರಿಸಿದ ಈ 'ಯೋಗ'ದ ಪ್ರಯೋಜನಗಳು ವಿಶ್ವದ ಜನತೆಗೆ ತಲುಪಿಸುವ ಉದ್ದೇಶದಿಂದ ಸೆಪ್ಟೆಂಬರ 2014 ರ ವಿಶ್ವಸಂಸ್ಥೆಯ 69 ನೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ವಾರ್ಷಿಕ ಅಂತರರಾಷ್ಟ್ರೀಯ ಯೋಗ ದಿನವನ್ನು ಸ್ಥಾಪಿಸುವ ಪ್ರಸ್ತಾವವನ್ನು ಮಾಡಿದರು. ಈ ಪ್ರಸ್ತಾವನೆಯು ವೇಗವನ್ನು ಪಡೆಯುವ ಮೂಲಕ ಡಿಸೆಂಬರ 2014 ರಲ್ಲಿ ನಿರ್ಣಯವು ಅಂಗೀಕಾರ ಪಡೆದು, ಜೂನ್ 21 ಅಂತರರಾಷ್ಟ್ರೀಯ ಯೋಗದಿನವೆಂದು ಅಧಿಕೃತವಾಗಿ ಘೋಷಣೆಯಾಯಿತು. ಅಂದು ದಾಖಲೆ ಮುರಿದ 175 ಸದಸ್ಯ ರಾಷ್ಟ್ರಗಳು ಈ ನಿರ್ಣಯವನ್ನು ಅನುಮೋದಿಸಿದವು.
ಹೀಗೆ ಯೋಗವು ತನ್ನ ಗಡಿಯನ್ನು ದಾಟಿ ವಿಶ್ವದ ಮನ್ನಣೆಯನ್ನು ಪಡೆಯುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಬಹಳ ಮಹತ್ವವಾಗಿದೆ. ಇಂದು ಇದನ್ನು ಪ್ರಪಂಚದಾದ್ಯಂತ ವಿವಿಧ ರೂಪಗಳಲ್ಲಿ ಅಭ್ಯಾಸ ಮಾಡಲಾಗುತ್ತಿದೆ ಮತ್ತು ಜನಪ್ರಿಯವಾಗಿ ಬೆಳೆಯುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯವಾಗಿದೆ.
ಈ ಬಾರಿಯ ಈ ಯೋಗ ದಿನಾಚರಣೆಗೆ "ಹತ್ತು ವರ್ಷಗಳ" ಸಂಭ್ರಮ.ಈ ಬಾರಿ 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ' ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ. ಈ ಸರಳವಾದ ಯೋಗಪದ್ಧತಿಯನ್ನು ಅಭ್ಯಾಸ ಮಾಡುವ ಮೂಲಕ ವಿಶ್ವವು ರೋಗಮುಕ್ತವಾಗಿ, ಆರೋಗ್ಯಕರ ವಾತಾವರಣವನ್ನು ಹೊಂದಲಿ ಎಂದು ಆಶಿಸೋಣ.
- ಶ್ರೀಮತಿ ವೀಣಾ ಬರಗಿ ಹುಬ್ಬಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


