ಆರೋಗ್ಯವೇ ಮಹಾ ಭಾಗ್ಯ – ಆನಂದವೇ ದಿವ್ಯ ಯೋಗ

Upayuktha
0

ಅಂತರಾಷ್ಟ್ರೀಯ ಯೋಗ ದಿನ – ಜೂನ್ 21 – ತದಂಗವಾಗಿ ವಿಶೇಷ ಚಿಂತನ 



ಯೋಗವು ಲೋಕಕ್ಕೆ ಮಾನವ ಕಲ್ಯಾಣಕ್ಕೆ ಭಾರತವು  ಕೊಟ್ಟಿರುವ ಅಮೂಲ್ಯವಾದ ಪ್ರಾಚೀನ ಕೊಡುಗೆ. ಅದು ನಮ್ಮ ಪೂರ್ವಾರ್ಜಿತ ವೈಭವೋಪೇತವಾದ ಸಂಪತ್ತು . ಆಧುನಿಕ ಮನೋವಿಜ್ಞಾನವನ್ನು ಅಭ್ಯಸಿಸಿದವರಿಗೆ ಯೋಗದ ಈ ಉನ್ನತ ಸ್ತರಗಳು ವಿಸ್ಮಯಕರವಾಗಿ ಕಾಣಬಹುದು. ಯೋಗವು ಭಾರತೀಯರ ಮನೋವಿಜ್ಞಾನಾತ್ಮಕವಾದ ಪ್ರಾಚೀನ ಸಿದ್ಧಿ.


ಯೋಗದ ಬಗ್ಗೆ ಸಮಗ್ರ ಚಿಂತನೆ ಮೂಡಿರುವುದೇ ಯೋಗಾನುಯೋಗ. ದೇಹ ಸ್ವಾಸ್ಥö್ಯದ ಜೊತೆಗೆ ಮಾನಸಿಕ ಸಮಚಿತ್ತತೆಯನ್ನು ಕಾಪಾಡಿಕೊಳ್ಳುವುದೇ ಯೋಗ ಸಾಧನೆಯ ಮೂಲೋದ್ದೇಶವಾಗಿದೆ. ಯೋಗಸಾಧನೆಯಿಂದಸಂಕಲ್ಪ ಶಕ್ತಿ, ವಿವೇಚನಾ ಶಕ್ತಿ ಬಲಯುತವಾಗುತ್ತದೆ. ಅಂತಃಸ್ಫುರಣೆಗೆ, ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ.


ಯೋಗ ಎನ್ನುವ ಪದವು ಬೇರೆ ಬೇರೆ ಅರ್ಥವನ್ನು ಕೊಡುತ್ತದೆ. ಯೋಗ ಎಂದರೆ ಕೇವಲ ದೈಹಿಕವಾದ ವ್ಯಾಯಾಮವಲ್ಲ ಅಥವಾ ಆಸನಗಳಲ್ಲ. ಯೋಗ ಎನ್ನುವುದು ಪರಿಪೂರ್ಣವಾದ ಜ್ಞಾನ. ಅದು ದೇಹವನ್ನು ಮನಸ್ಸನ್ನು ಆತ್ಮವನ್ನು  ಮತ್ತು ವಿಶ್ವವನ್ನು ಒಂದಾಗಿಸುತ್ತದೆ. ಪ್ರತಿ ವ್ಯಕ್ತಿಗೂ ಬೇಕಾದ ಶಾಂತಿಯನ್ನು ಯೋಗವು ತರುತ್ತದೆ.  ಒಬ್ಬರ ವರ್ತನೆಯಲ್ಲಿ, ಆಲೋಚನಾ ಮಾದರಿಯಲ್ಲಿ  ಮತ್ತು ಧೋರಣೆಯಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಯೋಗವು ಬಹಳ ಅನಿವಾರ್ಯವಾದದ್ದು ಎಂದೇ ಹೇಳಬಹುದು. ಸಾಮಾನ್ಯ ಮನಸ್ಥಿತಿಯನ್ನು  ಹೊಂದಲು, ಸೂಕ್ಷ್ಮವಾಗಿರಲು, ವಿವೇಚನೆ ಹೊಂದಲು, ಬಲಿಷ್ಠರಾಗಿರಲು ಮತ್ತು ಅಂತಃಸ್ಫುರಣೆ ಹೊಂದಲು  ಯೋಗ ಮಾರ್ಗ ಅತ್ಯವಶ್ಯವಾಗಿದೆ. ಕೆಲವರು ಹೀಗೆ ಅಭಿಪ್ರಾಯಿಸುತ್ತಾರೆ. ಯೋಗ ರಹಸ್ಯತಮವಾದ ಸಂಗತಿಯೇ? ಇಲ್ಲ... ಯೋಗವೆನ್ನುವುದು ರಹಸ್ಯವಾದ ವಿಷಯವಲ್ಲ. ಅದೇನಿದ್ದರು ಸ್ವಯಂ ಅನುಭವಕ್ಕೆ ಬರತಕ್ಕಂತಹದ್ದು. ಒಂದೊಮ್ಮೆ ಅದನ್ನು ರಹಸ್ಯ ವಿಷಯವೆಂದು ನೀವು ಭಾವಿಸಿದರೆ ಅದು ಸುಪ್ತವಾಗಿಯೇ ಉಳಿಯುತ್ತದೆ. ಹೊರಗೆಡಹಲು ಆಗುವುದಿಲ್ಲ. ಆದರೆ ಯಾವುದು ಸ್ವಯಂ ವೇದ್ಯವಾಗುವುದೋ ಅದುವೇ ಯೋಗ.  ಯೋಗ ಜೀವನಕ್ಕೆ ಜೀವಂತಿಕೆಯನ್ನು ತುಂಬುತ್ತದೆ. ಆ ಜೀವಂತಿಕೆಯು ಅನೇಕ ಜನ್ಮಗಳವರೆಗೆ ಹರಿದು ಬರುತ್ತದೆ. ಪ್ರೇಮಭಾವದಿಂದ  ಪೂರಿತವಾಗುವಂತೆ ಮಾಡುತ್ತದೆ.


ಧ್ಯಾನವೂ ಯೋಗವೇ

ಬಹಳಷ್ಟು ಜನರಲ್ಲಿ ಧ್ಯಾನವೇ ಬೇರೆ, ಯೋಗವೇ ಬೇರೆ ಎಂಬ ತಪ್ಪಾದ  ಅಭಿಪ್ರಾಯವಿದೆ. ಅದು ಸರಿಯಲ್ಲ. ಧ್ಯಾನ ಯೋಗದ ಒಂದು ಭಾಗ. ಯೋಗವು ಧ್ಯಾನಸ್ಥವಾಗಿರಬೇಕು, ಇಲ್ಲವಾದರೆ ಅದು ಮತ್ತೊಂದು ವ್ಯಾಯಾಮದಂತೆ, ಜಿಮ್‌ನಾಸ್ಟಿಕ್‌ನಂತೆ ಆಗುತ್ತದೆ.

ಯೋಗಾಭ್ಯಾಸದ ಕೊನೆಯ ಹಂತದಲ್ಲಿ ಶವಾಸನ ಮಾಡುವಾಗ ಕಾಲಿನ  ಬೆರಳುಗಳಿಂದ  ಪ್ರಾರಂಭಿಸಿ ನೆತ್ತಿಯ ತುದಿಯ ತನಕದ ಪ್ರತಿ ಭಾಗಗಳನ್ನು ಪ್ರತ್ಯೇಕವಾಗಿ ಹೆಸರಿಸುತ್ತ ಅವುಗಳಿಗೆ ವಿಶ್ರಾಂತಿ ಕೊಡಿ ವಿಶ್ರಾಂತಿ ಕೊಡಿ... ಎಂದು ಯೋಗ ಗುರು ಮೆಲುದನಿಯಲ್ಲಿ  ಸೂಚಿಸುತ್ತಿರುತ್ತಾರೆ. ಆಧುನಿಕ ಬದುಕು ವಿಶ್ರಾಂತಿಯನ್ನು ಕಳೆದುಕೊಳ್ಳುವಷ್ಟು ಭಾರವಾಗಿ  ಬಿಟ್ಟಿದೆ ಎಂಬುದರ ಸಂಕೇತವಿದು. ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಅಲೋಪತಿ ಮಾತ್ರೆಗಳಲ್ಲಿ ಅದನ್ನು ಶಮನಗೊಳಿಸುವುದು ಕಷ್ಟ ಎಂದು ಅರಿವಾದಾಗ ಜನ ಯೋಗದ ಮೊರೆ ಹೋಗುತ್ತಾರೆ. ಯೋಗದಿಂದ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳಿವೆ ಎಂಬುದು ಬಹು ಹಿಂದೆಯೇ ಸಾಬೀತಾಗಿದೆ. ಯೋಗಾಭ್ಯಾಸದಿಂದ  ಶಾರೀರಿಕ ಕ್ಷಮತೆ, ಭಾಷಾ ಶುದ್ಧಿ, ಶ್ರವಣ ಕೌಶಲ್ಯ, ಸಹಕಾರ ಮನೋಭಾವ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿ.


ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ದೃಢತೆಗೆ  ಸಹಕಾರಿ. ಮನಸ್ಸನ್ನು ನಿಯಂತ್ರಿಸಲೂ ಸಹಕಾರಿ. ಯೋಗದಿಂದ ಚಿತ್ತವೃತ್ತಿಗಳನ್ನು  ನಿಯಂತ್ರಿಸಬಹುದು ಎಂದು ಪತಂಜಲಿ ಮುನಿ ಹೇಳಿದ್ದಾನೆ.  ಯೋಗವು ಮನಸ್ಸನ್ನು ಶಾಂತಗೊಳಿಸುತ್ತದೆ ಎಂದು ಯೋಗವಾಸಿಷ್ಠ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ಯೋಗವೆಂದರೆ ಗಡಚು, ಕಠಿಣ ಎಂದು ತಿಳಿಯಬೇಕಿಲ್ಲ. ಅದನ್ನು ತಮಾಷೆಯ ಮತ್ತು ಆಟದ  ವಿಷಯವಾಗಿ ಹೇಳಿಕೊಡಬಹುದು. ಆಸನಗಳಿಂದ  ಸ್ನಾಯುಗಳ ಚಲನೆ, ಕೀಲು, ಎಲುಬುಗಳ ಚಲನೆಗೆ ಹೇಗೆ ಸಹಕಾರಿಯಾಗುತ್ತದೆ, ಧ್ಯಾನ, ಪ್ರಾಣಾಯಾಮ ಮತ್ತು ಆಸನಗಳಿಂದ  ಹೇಗೆ ಪಚನಕ್ರಿಯೆ ಸುಗಮಗೊಳ್ಳುತ್ತದೆ, ಹೇಗೆ ನರಗಳು ಬಲಿಷ್ಠವಾಗುತ್ತವೆ, ಹೇಗೆ  ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಇತ್ಯಾದಿಗಳನ್ನು  ಮನವರಿಕೆ ಮಾಡಬಹುದು. ಜೊತೆಗೆ, ಅಧ್ಯಯನ ಮಾಡುವಾಗ ಮತ್ತು ಪರೀಕ್ಷೆ ಬರೆಯುವಾಗ ಯಾಬ ರೀತಿ ಒತ್ತಡಗಳಿಂದ ಮುಕ್ತವಾಗಬಹುದು ಎಂಬ ಕುರಿತೂ ಅರಿವು ಮೂಡಿಸಬಹುದು.


ಯೋಗದಲ್ಲಿ ನಿರ್ದಿಷ್ಟ ಆಸನಗಳಿದ್ದು, ಅದರಲ್ಲಿ ಶರೀರದ ವಿವಿಧ ಅಂಗಗಳನ್ನು ಹಾಗೂ ಸ್ನಾಯುಗಳನ್ನು ನಿಧಾನ ಮತ್ತು ನಿಯತ ಚಲನೆ  ಮೂಲಕ ಸಡಿಲಗೊಳಿಸಲಾಗುತ್ತದೆ. ಮಾತ್ರವಲ್ಲ ಇದರಿಂದ  ಅಂಗಗಳಿಗೆ ಮತ್ತು ಸ್ನಾಯುಗಳಿಗೆ ಮಸಾಜ್ ಮಾಡಿದಂತಾಗುತ್ತದೆ. ಕ್ರಮೇಣ ಇದರಿಂದ ಇಡೀ ದೇಹಕ್ಕೆ ಪ್ರಯೋಜನವಾಗುತ್ತದೆ.


ಉತ್ಕರ್ಷದ ದಾರಿ ತೋರುವ ಯೋಗ 

ಯೋಗವನ್ನು ನಿಜಾರ್ಥದಲ್ಲಿ ನೋಡಿದರೆ ಅದು ಆತ್ಮದ ಅರಿವಿನ  ಸಾಧನ.ಬದಲಾಗುತ್ತಿರುವ ಜೀವನಶೈಲಿ ಮತ್ತು ಈಗಿನ ಆಹಾರ ಪದ್ಧತಿಯಿಂದಾಗಿ ದೇಹವೆನ್ನುವುದು ಅನಾರೋಗ್ಯದ ಗೂಡು. ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿಧಾನವಾಗಿ ಅನೇಕ ಮಂದಿ ಆಯುರ್ವೇದ ಮತ್ತು ಯೋಗದತ್ತ ವಾಲುತ್ತಿದ್ದಾರೆ. 

ವೇದ ಮತ್ತು ಉಪನಿಷತ್ತಿನಲ್ಲಿ ಯೋಗದ ಬೇರುಗಳಿವೆ. ಭಾರತೀಯರ ಹೆಮ್ಮೆಯ ಕೊಡುಗೆಯಾದ ಯೋಗವು  ಪಾಶ್ಚಿಮಾತ್ಯ ದೇಶಗಳಲ್ಲೂ ಜನಪ್ರಿಯವಾಗಿದೆ. ವೈಜ್ಞಾನಿಕವಾಗಿ ಯೋಗದ ಮಹತ್ವ ದೃಢಪಟ್ಟಂತೆಲ್ಲ, ಯೋಗವನ್ನು ಅನುಸರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸ ಮಾದರಿಗಳಲ್ಲಿ ಯೋಗವನ್ನು  ಯೋಗಗುರುಗಳು ಪರಿಚಯಿಸುತ್ತಿದ್ದಾರೆ.

ಪ್ರಪಂಚದ  ಸಂಸ್ಕೃತಿಗೆ ಭಾರತದೇಶ ನೀಡಿರುವ ಶ್ರೇಷ್ಠ ಕಾಣಿಕೆ ಯೋಗ. ಇಂದು ಸಹಸ್ರಾರು ಯೋಗಾಭ್ಯಾಸಿಗಳು ನಾನಾ ನಾಡುಗಳಿಂದ  ಭಾರತಕ್ಕೆ ಬಂದು ಯೋಗವನ್ನು ಕಲಿತು ತಮ್ಮ  ದೇಶಗಳಲ್ಲಿ  ಅದರ ಹಿರಿಮೆಯನ್ನು ಸಾರುತ್ತಿದ್ದಾರೆ. ನೀವು ಅಮೆರಿಕದ  ನ್ಯೂಯಾರ್ಕಿಗೆ ಅಥವಾ ಜಪಾನಿನ ಟೋಕಿಯೀಗೆ ಅಥವಾ ಇಸ್ರೇಲಿನ ಜೆರುಸಲೆಮ್ ಗೆ ಹೋಗಿ  ನೋಡಿರಿ; ಅಲ್ಲೆಲ್ಲಾ ಯೋಗಶಾಲೆಗಳಿವೆ. ಯೋಗದ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಅದರ ಪ್ರಯೋಜನದ ಅರಿವೂ ಬೆಳೆಯುತ್ತಿದೆ.


ಜೀವನ ಯೋಗ

ಜನಸಾಮಾನ್ಯರ ನಿತ್ಯ ಜೀವನದಲ್ಲಿ ಯೋಗಾಭ್ಯಾಸವು ಅವಶ್ಯಕವೂ, ಉಪಯುಕ್ತವೂ ಆದುದು. ಈ ಮಾತು ಕೆಲವರಿಗೆ  ಆಶ್ಚರ್ಯ ಎನಿಸಬಹುದು. ಪ್ರಪಂಚವನ್ನು ತ್ಯಜಿಸಿ, ವಾನಪ್ರಸ್ಥಾಶ್ರಮವನ್ನು ಹೊಕ್ಕವರಿಗೆ, ಸನ್ಯಾಸಿಗಳಿಗೆ ಮಾತ್ರ ಯೋಗಾಭ್ಯಾಸವು ಸರಿ.  ಸಂಸಾರಸ್ಥರಿಗೆ ಯೋಗಾಭ್ಯಾಸವು ಹೇಗೆ ಉಪಯುಕ್ತ ಎಂಬುದೇ ಈ ಆಶ್ಚರ್ಯ. ವರಕವಿ ಕಾಳಿದಾಸನೂ ಕೂಡ “ಯೋಗೇನಾಂತೆ ತನುತ್ಯಜಾಂ” – ಯೋಗಾಭ್ಯಾಸದ ಸಿದ್ಧಿಯಿಂದ  ಶರೀರತ್ಯಾಗ ಮಾಡತಕ್ಕುದು – ಎಂದು ಹೇಳುತ್ತಾನಷ್ಟೆ ಹೀಗಿರುವಲ್ಲಿ ಯೋಗಾಭ್ಯಾಸವು ಸಾಮಾನ್ಯ ಜನಕ್ಕೆ ಹೇಗೆ ಉಪಯೋಗವಾದೀತು? ನಿತ್ಯ ಜೀವನಕ್ಕೂ ಯೋಗಾಭ್ಯಾಸಕ್ಕೂ ಸಂಬಂಧ  ಯಾವುವು? ಹೇಗೆ?


ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಯೋಗ ಎಂಬ ಮಾತಿಗೆ ಇರುವ ನಾನಾರ್ಥಗಳನ್ನು ಗ್ರಹಿಸಬೇಕು. ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಕರ್ಮಯೋಗ, ಜ್ಞಾನಯೋಗ, ಸನ್ಯಾಸಯೋಗ ಮುಂತಾಗಿ  ಹೇಳುತ್ತಾನೆ. ಸ್ವಾಮಿ ವಿವೇಕಾನಂದರು ರಾಜಯೋಗ ಭಕ್ತಿಯೋಗಗಳನ್ನು ಕುರಿತು ಮಾಡಿದ ಪ್ರವಚನಗಳನ್ನು ಉಪನ್ಯಾಸಗಳನ್ನು ನೀವು ಓದಿರಲಿಕ್ಕೆ ಬೇಕು. ಇಹಲೋಕದ ಸಮಸ್ತ ವ್ಯಾಪಾರಗಳಿಗೂ ದೇಹವೇ ಸಾಧನ. ದೇಹ ಎಂದರೆ ಶರೀರ, ಇಂದ್ರಿಯಗಳು, ಮನಸ್ಸು, ಅಂತಸಾಕ್ಷಿ ಎನಿಸಿರುವ ಜೀವಾತ್ಮ ಪರಮಾತ್ಮ ಇವನ್ನು ಕುರಿತದ್ದು. ಶರೀರವಿದ್ದರೇನೋ ಇವೆಲ್ಲಾ. ಶರೀರದಿಂದ ಉಳಿದವೆಲ್ಲಾ ಸಾಧ್ಯ. ಹಠಯೋಗವು  ಶರೀರವನ್ನೂ, ಇಂದ್ರಿಯಗಳನ್ನೂ ಮತ್ತು ಮನಸ್ಸöನ್ನೂ ಮುಖ್ಯವಾಗಿ ಆಧರಿಸಿದ್ದು. ಶರೀರವು ಐಹಿಕ ಸುಖಭೋಗಗಳಿಗೂ ಪಾರಮಾರ್ಥಿಕಕ್ಕೂ ಏಕಪ್ರಕಾರವಾದ ಸಾಧನ. ಅದಕ್ಕಾಗಿಯೇ ದೇಹವನ್ನು ದೇವರಗುಡಿಯೆನ್ನುವುದು. ಹಾಗೆಂದು ಭಾವಿಸಿಕೊಂಡು ಅದರ ಪರಿಷ್ಕರಣಕ್ಕೆ ಪರಿಶುದ್ಧಿಗೆ ನಾವು ಯತ್ನಿಸಬೇಕು. ದಷ್ಟ ಪುಷ್ಟವಾದ ಶರೀರ, ಇಂದ್ರಿಯಗಳು, ಮನಸ್ಸು ಇದ್ದವನು ಏನು ತಾನೇ ಮಾಡಲಾರ? ಆದಕಾರಣ ಜೀವನದ ತಯಾರಿಯಲ್ಲಿ ಮೊದಲು ಚೊಕ್ಕಪಡಿಸಿ ಕೊಳ್ಳಬೇಕಾದದ್ದು ದೇಹ.


ಅಂದರೆ ಇದೊಂದು ಅಂಗಸಾಧನೆಯ ಕ್ರಮ ಎಂದು ಭಾವಿಸಿಕೊಳ್ಳಕೂಡದು. ಹಠಯೋಗದಲ್ಲಿ ಅಂಗಸಾಧನೆಯಿದ್ದರೂ ಅದು ಅಷ್ಟೆ ಅಲ್ಲ. ಅದು ಮನುಷ್ಯನ ಇಡೀ ಇರುವಿಕೆಯನ್ನು ಕುರಿತದ್ದು. ಮನುಷ್ಯ ಬದುಕುವುದು ದೈಹಿಕ ಕ್ರಿಯೆಗಳಿಂದ ಮಾತ್ರವೇ ಅಲ್ಲ; ಮಾನಸಿಕ ಕ್ರಿಯೆಗಳಿಂದಲೂ ಅವನು ಬದುಕುತ್ತಾನೆ; ಆಧ್ಯಾತ್ಮಿಕ ವಿಶೇಷಣಗಳಿಂದಲೂ ಅವನು ಬದುಕುತ್ತಾನೆ. ಇವು ಮೂರು ಸ್ತರಗಳಲ್ಲಿ ಹಂತಗಳಲ್ಲಿ ಮನುಷ್ಯ ಏಕತ್ರವಾಗಿ ಬದುಕನ್ನು ನಡೆಸುತ್ತಾನೆ. ಇವು ಮೂರೂ ಮನುಷ್ಯನ ಜೀವನದ ಪ್ರತ್ಯೇಕ ಇಲಾಖೆಗಳಲ್ಲ; ಪರಸ್ಪರ ಅನುಸಂಬಂಧವಿಲ್ಲದ ನಡೆವಳಿಕೆಗಳಲ್ಲ. ಒಂದನ್ನೊಂದು ಆಧರಿಸಿದ್ದು, ಒಂದರೊಳಗೊಂದು ಪ್ರವೇಶ ಪ್ರಭಾವ ಉಳ್ಳದ್ದು. ಈ ಮೂರೂ ಅಖಂಡವಾಗಿ ವಿಹಿತವಾಗಿ ವರ್ತಿಸಿದರೇನೇ ಮನುಷ್ಯನ ಬದುಕು ಬಂಗಾರ. ಈ ಹದ ತಪ್ಪಿದರೆ ಬದುಕೇ ನರಕ.

ಸಮಗ್ರ ಚಿಕಿತ್ಸೆಯನ್ನೂ ಬಲ್ಲ ಏಕೈಕ ಕ್ರಮವೆಂದರೆ ಯೋಗಾಭ್ಯಾಸ. ಅದು ಪ್ರಾಚೀನ ಕಾಲದಿಂದ  ಮಾನವ ಕಲ್ಯಾಣವನ್ನು ನಡೆಸುತ್ತಾ ಬಂದಿದೆ. ಅದರ ಬಗ್ಗೆ  ಆಧುನಿಕರಿಗೆ ಮನವರಿಕೆ ಆಗುತ್ತಿರುವುದು ಸಂತಸದ ವಿಚಾರ. ಪಾಶ್ಚಾತ್ಯರು ಅದರ ಉಪಯುಕ್ತತೆಯನ್ನು ಮನಗಂಡ ಮೇಲಾದರೂ ಈ ಜಾಗೃತಿಯು ಯೋಗಾಭ್ಯಾಸದ ತವರಾದ ಭಾರತದಲ್ಲಿ ಉಂಟಾಗುತ್ತಿರುವುದು ಸಮಾಧಾನದ ವಿಚಾರ.


ಯೋಗಾಭ್ಯಾಸ ಮಾಡಲು ಬೇಕಾಗುವುದು ದಿನಕ್ಕೆ ಕೆಲವು ನಿಮಿಷಗಳು ಮಾತ್ರ. ನಮ್ಮ ಜನಕ್ಕಿರುವ ಕೊರತೆ ಕಾಲದ್ದಲ್ಲ; ಮನಸ್ಸಿನ  ಸಂಕಲ್ಪದ್ದು. ಎಲ್ಲ ಭಾರತೀಯರೂ ಯೋಗಾಭ್ಯಾಸ ಮಾಡಲು ತಕ್ಕ ಕಾಲಾವಕಾಶವನ್ನು ಪಡೆದಿದ್ದಾರೆ. ಮನಸ್ಸು ಮಾಡಬೇಕು.

ಮೈಗೆ ನೆಮ್ಮದಿ, ಮನಸ್ಸಿಗೆ ಶಾಂತಿ, ಜೀವನಕ್ಕೆ ತಂಪು ಮಾಡಿದಾಗ ಉಸಿರಾಟ ನಿಧಾನವಾಗಿ ಕ್ರಮಬದ್ಧವಾಗಿ ಸಾಗುತ್ತದೆ. ಇದನ್ನು ಯಾರು ತಾನೇ ತಿಳಿಯರು? ಆದರೆ ಇದರ ಬಗ್ಗೆ ಮುಂದಿನ ಹೆಜ್ಜೆಯನ್ನು ಇಡುವುದಿಲ್ಲ. ಹಠಯೋಗ ಅದನ್ನು ಕಲಿಸಿಕೊಡುತ್ತದೆ. ನೆಮ್ಮದಿಯಿಂದ ಉಸಿರಾಟ ಹದವಾಗಿರುವಂತೆ, ಉಸಿರಾಟವನ್ನು ಹದಗೊಳಿಸಿಕೊಳ್ಳುವುದರಿಂದ ಮೈಮನಸ್ಸು ಅಂತರAಗ ಶುದ್ಧಿ ಉಂಟಾಗುತ್ತದೆAಬ ಘನವಾದ ಸತ್ಯವನ್ನು ಅದು ಸಾರುತ್ತದೆ.


ಕ್ರಿಯಾಶೀಲತೆಗೆ ಯೋಗವೇ ಬುನಾದಿ 

ಯೋಗವಿದ್ಯೆ  ಎಂಬುದೊಂದು ಮಹಾಸಾಗರವಿದ್ದಂತೆ. ಸಾಗರದಲ್ಲಿ ಮೇಲೆ ತೋರುವ  ತೆರೆನೊರೆಗಳನ್ನಷ್ಟೇ ಕಂಡು ಸಂತೃಪ್ತಿಗೊಂಡರೆ ಅದರ ಸಮೃದ್ಧತೆಯನ್ನು ಅರಿತಂತಾಗುವುದಿಲ್ಲ.... ಅಲ್ಲೂ ಮನತಣಿಸುವ ಸೌಂದರ್ಯವನ್ನು ಕಾಣಬಹುದಾದರೂ ಸಮುದ್ರದ ಸಂಪತ್ತಿರುವುದು ಅದರ ತಳಪಾಯದಲ್ಲಿ; ಅಲ್ಲಿ ನಿಗೂಢವಾದ ಐಶ್ವರ್ಯದ ಖನಿಯೇ ಇದೆ. ಕೇವಲ ಹಡಗಿನಲ್ಲೋ, ನಾವೆಯಲ್ಲೋ ಸಾಗರದಲ್ಲಿ  ಸಂಚರಿಸಿದ ಮಾತ್ರಕ್ಕೆ ಅದರಲ್ಲಿಯ ಸಂಪದ ಶ್ರೀಯನ್ನು ಹೊಂದಲು ಸಾಧ್ಯವೇ? ಅದೇ ರೀತಿಯಲ್ಲಿ ಯೋಗದ ವಿಷಯದಲ್ಲಿ  ನಾಲ್ಕು ಪುಸ್ತಕಗಳನ್ನು ಓದಿದಾಕ್ಷಣ, ಕೆಲಕಾಲ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದಾಕ್ಷಣ ಯೋಗ ಮಹಾಂಬುಧಿಯ ಆಳವನ್ನಾಗಲೀ ಅಥವಾ ಆದರ ಮಗತ್ವವನ್ನಾಗಲೀ ಅರಿಯಲು ಸಾಧ್ಯವೇ ಇಲ್ಲ. ಇಳಿಯಬೇಕು; ಆಳವಾಗಿ ಇಳಿದು ಅಧ್ಯಯನ ಮಾಡಬೇಕು; ಮಾಡಬೇಕು ಅದರ ಮಹತ್ವವನ್ನು ತಿಳಿಯುವ ಮಹತ್ವಾಕಾಂಕ್ಷೆಯಿಂದ  ಜೀವನವನ್ನೇ ಮುಡುಪಾಗಿಟ್ಟು ಸಾಧನೆ ಮಾಡಬೇಕು. ಆಗ ಮಾತ್ರ ಯೋಗವಿದ್ಯೆಯ ಒಂದೊಂದು ದಿವ್ಯ ರತ್ನಗಳನ್ನು ಹೊಂದಲು ಸಾಧ್ಯ.

ಮಾನವ ಶರೀರವೆಂಬುದೊಂದು ಭಗವಂತನ ಅದ್ಭುತ ರಮ್ಯ ಸೃಷ್ಟಿ. ಮಹಾಶಿಲ್ಪಿಯಾದ ಆತನು ಮನುಷ್ಯನ ದೇಹದಲ್ಲೇ ಸೂಕ್ಷ್ಮವಾದ ಬ್ರಹ್ಮಾಂಡವನ್ನು ರಚಿಸಿ ತನ್ನೀರಚನೆಯ ಮೋಹಕ ಸೃಷ್ಟಿಯನ್ನು ಕಂಡು ತಾನೇ ಆಕರ್ಷಿತನಾಗಿ ಅಂಶರೂಪನಾಗಿ ಅಲ್ಲಿಯೇ ವಿರಾಜಮಾನನಾಗಿದ್ದಾನೆ. ಇದನ್ನೇ ಒಬ್ಬ ಕನ್ನಡ ಜಾನಪದಕವಿಯು “ದೇವಕಟ್ಟಿದ ಗುಡಿಯ ನೋಡಣ್ಣಾ” ಎಂದು ಅರ್ಥಗರ್ಭಿತವಾಗಿ ಮಾನವ  ಶರೀರವನ್ನು ವರ್ಣಿಸಿದ್ದಾನೆ. ಸಾಕ್ಷಾತ್ ಭಗವಂತನೇ ವಾಸವಾಗಿರುವ ಈ ಮನುಷ್ಯ ದೇಹದಲ್ಲಿ ಸರ್ವಲೋಕ.


ಯೋಗಾಭ್ಯಾಸಿಗೆ ಆಹಾರ ನಿಯಮ, ವಿಹಾರ ನಿಯಮ, ವಾಕ್ ಇಯಮ ಇತ್ಯಾದಿಗಳು ಮುಖ್ಯವಾಗಿರುತ್ತವೆ. ಆಹಾರ ವಿಹಾರಾದಿ ನಿಯಮಗಳಿಲ್ಲದವರು ಯೋಗಾಭ್ಯಾಸವನ್ನು ಮಾಡಿದರೂ ಯೋಗದ ಗುರಿಯನ್ನು ಸಾಧಿಸಲು ಸಾಧ್ಯವಾಗಲಾರದು. ಆದಕಾರಣ ಆಹಾರ  ವಿಹಾರಾದಿಗಳು ಅತಿ ಮುಖ್ಯ. “ಆಹಾರ ಶುದ್ಧೌಸತ್ವ್ಃ ಶುದ್ಧಿಃ ಸತ್ವ್ಃ ಶುದ್ಧೌಧ್ರುವಾಸ್ಮೃತಿಃ” ಆಹಾರವು ಶುದ್ಧವಾಗಿದ್ದರೆ ಅಂತಃಕರಣವು  ಶುದ್ಧವಾಗಿ ವಿಚಾರಜ್ಞಾನ ಉಂಟಾಗುವುದು. ವಿಚಾರಜ್ಞಾನದಿಂದ ಸ್ಮೃತಿಜ್ಞಾನವುಂಟಾಗುವುದು. ನಾವು ಯಾವ ವಿಧವಾದ ಆಹಾರವನ್ನು  ಸೇವಿಸಿದರೆ ಆ ರೀತಿಯ ಮನವು ವೃದ್ಧಿಯಾಗುತ್ತದೆ. ಆಹಾರದಿಂದಲೇ ಮನಸ್ಸು ವೃದ್ಧಿ ಕ್ಷಯಗಳನ್ನು ಹೊಂದುತ್ತದೆ. ಆದಕಾರಣ ಆಹಾರಶುದ್ಧಿಯು ಮುಖ್ಯವಾದುದು. ಶುದ್ಧವಾದ ಆಹಾರ ಸೇವನೆಯಿಂದ  ವಿಚಾರಜ್ಞಾನದಿಂದ ಸ್ಮೃತಿಜ್ಞಾನ ಉಂಟಾಗುತ್ತದೆ. ಸ್ಮೃತಿಜ್ಞಾನದಿಂದ ಆತ್ಮಜ್ಞಾನಿಯಾಗಲು ಸಾಧ್ಯ. ಹಾಗಲ್ಲದೆ ಕೇವಲ ಭೌತಿಕ ವಾದದಲ್ಲಿಯೇ ನಿರತವಾದ ಮನವು ಭೌತಿಕ ವಿಜ್ಞಾನದಲ್ಲಿಯೇ ತೊಳಲಿ ಬೆಂಡಾಗಿ ಇಹಪರಗಳ ಸೌಖ್ಯವನ್ನು ತಿಳಿದು ಅನುಭವಿಸಲು ಶಕ್ತವಾಗಲಾರದು.

-ಡಾ.ಗುರುರಾಜ ಪೋಶೆಟ್ಟಿಹಳ್ಳಿ, 
ಸಂಸ್ಕೃತಿ ಚಿಂತಕರು , 9739369621



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top