ಇಂಧನ ಬೆಲೆಯೇರಿಕೆ- ಲೂಟಿ ಸರಕಾರದ ಮತ್ತೊಂದು ಗ್ಯಾರಂಟಿ: ಶಾಸಕ ಕಾಮತ್ ಆಕ್ರೋಶ

Upayuktha
0

ಮಂಗಳೂರು: "ಎಲ್ಲವೂ ಉಚಿತ, ಪ್ರತಿಯೊಬ್ಬರಿಗೂ ಖಚಿತ, ಇದು ನಮ್ಮ ಗ್ಯಾರಂಟಿ" ಎನ್ನುತ್ತಾ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ನಿರಂತರವಾಗಿ "ಬೆಲೆ ಏರಿಕೆಯ ಗ್ಯಾರಂಟಿ" ನೀಡಿದ್ದರ ಪರಿಣಾಮವಾಗಿ ರಾಜ್ಯದ ಜನರು ಹೈರಾಣಾಗಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್‌ ಹಾಗೂ ಡಿಸೇಲ್ ದರ ಏರಿಸಿ ಜನತೆಯನ್ನು ಇನ್ನಷ್ಟು ಸಂಕಟಕ್ಕೆ ದೂಡಲಾಗಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು. 


ಈಗಾಗಲೇ ಹಾಲು, ವಿದ್ಯುತ್, ಸಾರಿಗೆ ದರ, ಮನೆ ತೆರಿಗೆ, ರಿಜಿಸ್ಟ್ರೇಷನ್, ಸ್ಟ್ಯಾಂಪ್ ಡ್ಯೂಟಿ, ತಾಂತ್ರಿಕ ಶಿಕ್ಷಣ ಶುಲ್ಕ, ವಾಹನ ನೋಂದಣಿ, ಅಬಕಾರಿ ಸುಂಕ, ಸೇರಿದಂತೆ ಎಲ್ಲಾ ಅಗತ್ಯ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಕಂಗಲಾಗಿದ್ದ ಜನಸಾಮಾನ್ಯರಿಗೆ ಇದು ಬಹುದೊಡ್ಡ  ಹೊಡೆತವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ಇನ್ನೂ ಹೆಚ್ಚಳವಾಗಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದ್ದು ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರ ಆಕ್ರೋಶದ ಕಟ್ಟೆಯೊಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೂ ಧಿಡೀರನೆ ತಮ್ಮಿಷ್ಟದಂತೆ ಜನಸಾಮಾನ್ಯರ ಜೇಬಿಗೆ "ಕೈ" ಹಾಕಿರುವುದು ಕಾಂಗ್ರೆಸಿನ ಇನ್ನೊಂದು ಮುಖ ಅನಾವರಣಗೊಳಿಸಿದೆ ಎಂದರು.


ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದ್ದು ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಒಂದೇ ಒಂದು ರೂಪಾಯಿ ಬಿಡುಗಡೆಯಾಗುತ್ತಿಲ್ಲ. ಆದರೂ ಮುಖ್ಯಮಂತ್ರಿಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ, ಸುಭದ್ರವಾಗಿದೆ, ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ಪದೇ ಪದೇ ರಾಜ್ಯದ ಜನತೆಯ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಜನಸಾಮಾನ್ಯರಿಗೆ ಈ ಬೆಲೆಯೇರಿಕೆಯ ಹೊರೆ ಯಾಕೆ ಎಂಬುದನ್ನು ಕಾಂಗ್ರೆಸ್ಸಿನ ಮಹಾ ನಾಯಕರೇ ಉತ್ತರಿಸಬೇಕು. ಒಂದು ವೇಳೆ ಈಗೇನಾದರೂ ರಾಜ್ಯ ವಿಧಾನಸಭಾ ಚುನಾವಣೆ ನಡೆದರೆ ಇಡೀ ಕಾಂಗ್ರೆಸ್ ರಾಜ್ಯದೆಲ್ಲೆಡೆ ತನ್ನ ಠೇವಣಿಯಲ್ಲಿ ಕಳೆದುಕೊಳ್ಳಲಿದೆ ಎಂದು ಶಾಸಕರು ಛೀಮಾರಿ ಹಾಕಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top