ಡಾ. ಯು.ಆರ್ ಅನಂತಮೂರ್ತಿಯವರ ಅಂತಿಮ ಮುಖದರ್ಶನ ಮಾಡಿ ಬಂದವನಿಗೆ ಅವರ ಬಗ್ಗೆ ಮೊದಲು ಸಿದ್ಧಪಡಿಸಿದ್ದ ಲೇಖನವನ್ನು ಬದಲಾಯಿಸಬೇಕೆನಿಸಿತು. ಅದಕ್ಕೆ ಕಾರಣವೂ ಇದೆ.
ನಾಲ್ಕು ದಶಕಗಳ ಹಿಂದೆ ಮೈಸೂರಿನಲ್ಲಿ ವಿದ್ಯಾರ್ಥಿಯಾಗಿ ನಾನು ನೋಡಲೇಬೇಕು ಎಂದು ಎರಡೆರಡು ಬಾರಿ, ಸರಸ್ವತಿಪುರಂ ಈಜುಕೊಳದ ಸಮೀಪದಲ್ಲಿದ್ದ ಅವರ ನಿವಾಸಕ್ಕೆ ಹಠ ಹಿಡಿದು ಹೋಗಿದ್ದೆ. ಅದಕ್ಕೆ ನೆರವಿತ್ತವರು ಮಹಾರಾಜಾದಲ್ಲಿ ಜಜರ್ನಲಿಸಂ ಕಲಿತು, ಮಾನ ಗಂಗೋತ್ರಿಯಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನದಲ್ಲಿದ್ದ ತರೀಕೆರೆಯ ಸ್ನೇಹಿತ ದೇವರಾಜು. ಅವರಿಗೂ ಯುಆರ್‍ಎ ಅವರ ತಮ್ಮನಿಗೂ, ಮನೆಗೆ ಹೋಗಿ ಬರುವಷ್ಟು ಸ್ನೇಹಾಚಾರವಿತ್ತು.
ಸಂಸ್ಕಾರವೆಂಬ ಕಾದಂಬರಿ ಟಾಮ್ ಕೊವೆನ್ ಕೆಮರಾ ಕೆಲಸದಲ್ಲಿ (ಪಟ್ಟಾಭಿರಾಮ ರೆಡ್ಡಿ ನಿರ್ದೇಶನ) ಚಲನಚಿತ್ರವಾಗಿ ಕಾಂಟ್ರೊವರ್ಸಿಯೊಂದಿಗೆ ಲೇಖಕರು ಪ್ರಸಿದ್ಧರಾಗಿದ್ದರಿಂದ, ನನಗಂತೂ ಅವರನ್ನು ನೋಡದೆ ಇರಲಾಗಲಿಲ್ಲ. ಎರಡನೆಯ ಬಾರಿಗೆ ತೆರಳಿದ್ದಾಗ ಅವರಿದ್ದರು. ಕೈಮುಗಿದು ಕುಶಲೋಪರಿ ಬಳಿಕ ಇನ್ನೇನೂ ಕೇಳಲು ತೋಚದೆ ವಾಪಸಾಗಿದ್ದೆ. ಆ ಬಳಿಕ ಅನೇಕ ಬಾರಿ ಮುಖಾಮುಖಿಯಾಗಿದೆ. ನಮ್ಮ ಕಛೇರಿಯಿದ್ದ ಮಣಿಪಾಲ್ ಸೆಂಟರ್‍ಗೆ ಅವರು ಆಗಾಗ ಬರುತ್ತಲಿದ್ದರು.
ಒಮ್ಮೆ ಶೆಲ್ಫ್‌ನಲ್ಲಿ ಜೋಡಿಸಿಟ್ಟಿದ್ದ 50ರಷ್ಟು ಪುಸ್ತಕಗಳ ಸಾಲು ನೋಡಿ, ಅವೆಲ್ಲಾ ಡಿಕ್ಷನರಿಗಳ ಸಂಗ್ರಹ ಎಂದು ತಿಳಿದು ''ಪರ್ವಾಗಿಲ್ಲ ಕಣಯ್ಯಾ, ಜರ್ನಲಿಸ್ಟ್ ಆಗಿ ಎಷ್ಟೊಂದು ಪದಕೋಶಗಳನ್ನು ಇಟ್ಟುಕೊಂಡಿದ್ದೀಯಾ'' ಎಂದು ನನ್ನ ಬೆನ್ನು ತಟ್ಟಿದ್ದರು. ಟಿ.ವಿ ಚಾನೆಲ್‌ಗಳಲ್ಲಿ ಅವರೊಂದಿಗೆ ಚರ್ಚೆ, ಸಂದರ್ಶನವನ್ನೂ ಮಾಡಿದ್ದೇನೆ. ಫೋನ್ ಮುಖಾಂತರವಂತೂ ಸದಾ ಸಂಪರ್ಕವಿತ್ತು.
ಅನಂತಮೂರ್ತಿಯವರಲ್ಲಿ ನಾನು ಕಂಡ ಅಪರೂಪದ ಗುಣ ಎಂದರೆ, ಸಾಹಿತ್ಯ- ಸಂಸ್ಕೃತಿಯ ಪರಿಧಿ ದಾಟಿ, ಅವರು ಸಮಾಜ ಮತ್ತು ರಾಜಕೀಯದಲ್ಲಿ ಅಗತ್ಯ ಬಿದ್ದಾಗೆಲ್ಲ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೋಹಿಯಾ, ಕಾಗೋಡು ಸತ್ಯಾಗ್ರಹ, ಕನ್ನಡ ಚಳವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈ ಹಿನ್ನೆಲೆಯಲ್ಲಿ ನಾನು ಅವರನ್ನು ಜೊತೆಗಿದ್ದು ಕಂಡ ಕೆಲವು ಘಟನೆಗಳನ್ನು ದಾಖಲಿಸುವುದು ನನ್ನ ಅಭಿಲಾಷೆ. ಇದಕ್ಕೆ ಕಾರಣ ಅವರ ಮೇಲಣ ಅಭಿಮಾನ.
ನನಗಾದ ಮರೆಯಲಾಗದ ಅನುಭವ ಅನಂತಮೂರ್ತಿಯವರೊಂದಿಗಿನ 5 ಕಿಲೋಮೀಟರ್ ನಡಿಗೆ. ಅದಕ್ಕೆ ಕಾರಣ ಪ್ರಜಾಪ್ರಭುತ್ವದ ತಳಹದಿ- ಮೂರನೆಯ ಹಂತದ ಸರಕಾರದಲ್ಲಿ ಜನ ಪಾಲುದಾರಿಕೆ ತೀವ್ರಗೊಳ್ಳಬೇಕು ಎಂಬ ಹಂಬಲದ ತಿಳುವಳಿಕಾ ಯಾತ್ರೆ ಎಂದರೆ ಸರಿ.
ಬೆಂಗಳೂರು ಮಹಾ ನಗರಪಾಲಿಕೆಯ 9 ವಾರ್ಡುಗಳಲ್ಲಿ ವಿಕೇಂದ್ರಿತವಾಗಿ ಆ ಪ್ರಯತ್ನ ನಡೆದಿತ್ತು. ಸಂಜಯ ನಗರ ವಾರ್ಡ್‌ನಲ್ಲಿ ಜನಾಗ್ರಹದ ವತಿಯಿಂದ ಈ ಪಾದಯಾತ್ರೆ ಉದ್ಘಾಟನೆ ಏರ್ಪಾಡಾಗಿತ್ತು.
ಹಿನ್ನೆಲೆ ಹೀಗಿದೆ. ನಾನಾಗ ವಿಜಯ ಕರ್ನಾಟಕದ ಪ್ರಧಾನ ಸಂಪಾದಕತ್ವದ ಕೆಲಸಕ್ಕೆ ರಾಜೀನಾಮೆಯಿತ್ತು, ಸಬಾಟಿಕಲ್ ಸೋಂಬೇರಿಯಾಗಿದ್ದೆನು. ಉದಯ ಟಿ.ವಿಯಲ್ಲಿ 5 ವರ್ಷಗಳ ಕಾಲ ನಡೆದ ನನ್ನ ಪಂಚಾಯ್ತಿ ಕಟ್ಟೆ ಡೆವಲಪ್ಮೆಂಟ್ ಡಿಬೇಟ್ ಗೆ ಅತಿಥಿಯಾಗಿ ಬಂದಿದ್ದ ರಮೇಶ್ ರಾಮನಾಥನ್ ತಮ್ಮ ಸಾಮಾಜಿಕ ಸಂಸ್ಥೆ ಜನಾಗ್ರಹದ ವಾಲೆಂಟಿಯರ್ ಆಗಲು ಆಹ್ವಾನಿಸಿದ್ದರು. ನಾನು ಮೀನಾಮೇಷ ಇಲ್ಲದೆ ಮೀಡಿಯಾ ಅಡ್ವೈಸರ್ ಆಗಿ ಸ್ವಯಂಸೇವಕನಾದೆ.
ಇದು 21ನೇ ಶತಮಾನದ ಆರಂಭಿಕ ವರ್ಷಗಳು. ತಳಮಟ್ಟದ ಸರಕಾರದಲ್ಲಿ ಯಾವುದಕ್ಕೂ ಕ್ಯಾರೇ ಅನ್ನದ ದಿನಗಳು. ಇವತ್ತಾದರೆ ಜನ ಎಚ್ಚರಗೊಂಡಿದ್ದಾರೆ. ಕಸ-ಕೊಳೆಯ ಸಮಸ್ಯೆಯೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಬಿಗ್ ಬಿಗ್ ಸಮಸ್ಯೆಗಳಿಗೆ ಸಿಗುವಷ್ಟೇ ವೃತ್ತಪತ್ರಿಕೆಗಳ ಮತ್ತು ಟೆಲಿವಿಶನ್ ಸ್ಕ್ರೀನ್‌ಗಳ ಜಾಗ- ಸಮಯವೆರಡನ್ನೂ ಕಬಳಿಸುತ್ತಿದೆ.
ಜನಾಗ್ರಹ- ಪೀಪಲ್ಸ್ ಮೂವ್‌ಮೆಂಟ್ ಆಗಷ್ಟೇ ಸ್ವಯಂಸೇವಾ ಸಂಘಟನೆಯಾಗಿ ಬೆಳೆಯತೊಡಗಿತ್ತು. ನನಗೂ ಅದರಲ್ಲಿ ಕಾರ್ಯ ಎಸಗುವಷ್ಟು ಹೆಗಲು ಕುಣಿಯಿತು. ಪಾದಯಾತ್ರೆ ಸಂದೇಶ ಸಮಗ್ರ ಬೆಂಗಳೂರನ್ನು ತಲುಪುವಂತೆ ಜನರನ್ನೆಚ್ಚರಿಸಲು, ಉತ್ಸಾಹಿಸಲು ಒಬ್ಬ ಜನರ ನಡುವಣ ಮುಖ್ಯ ಅತಿಥಿ, ಮಾಧ್ಯಮದಲ್ಲೂ ಮೆರೆಯುವವರು ನಮಗೆ ಬೇಕಿತ್ತು. ಹಲವು ಹೆಸರುಗಳು ಪ್ರಸ್ತಾಪಗೊಂಡವು.
ಕೊನೆಗೆ ರಮೇಶ್ ನನ್ನ ಅಭಿಪ್ರಾಯ ಕೇಳಿದರು. ತಕ್ಷಣವೇ ನಾನು ಡಾ. ಯು.ಆರ್ ಅನಂತಮೂರ್ತಿ ಎಎಂದು ಉಚ್ಚರಿಸಿದೆ. ಜ್ಞಾನಪೀಠ ಅವಾರ್ಡ್ ವಿನ್ನರ್, ಗ್ರೇಟ್ ಐಡಿಯಾ, ಬಟ್, ವಿಲ್ ಹೀ ಕಮ್?' ಎಂದು ಅನುಮಾನಿಸಿದರು. 'ಹೌ ವಿಲ್ ರೀಚ್ ಹಿಮ್, ಯು ನೋ ಹಿಮ್?' ಎಂದು ಕೆಲವು ಪ್ರಶ್ನೆಗಳನ್ನು ಉತ್ಸಾಹದಿಂದ ಕೇಳಿದರು. ಹೌದು, ಅನಂತಮೂರ್ತಿ ನಾನು ಮೆಚ್ಚಿ ಗೌರವಿಸುವವರಲ್ಲೊಬ್ಬರು. ಕಾಲೇಜು ದಿನಗಳಿಂದಲೇ ಪರಿಚಿತರು ಎಂದಾಗ ರಮೇಶ್ ಕುಣಿದಾಡುವುದೊಂದು ಬಾಕಿ.
ನಾವಿಬ್ಬರೂ, ನ್ಯೂ ಬಿಇಎಲ್ ರಸ್ತೆಯ ಸನಿಹದ ಬಡಾವಣೆ ತಲುಪಿದೆವು. ಕಾಫಿ ಕೊಡಿಸಿ, ನಾವು ಬಂದ ಕಾರಣ ಕೇಳಿದ ಅನಂತಮೂರ್ತಿ, 'ದಿಸ್ ಈಸ್ ನೀಡೆಡ್ ಇನ್ ದಿಸ್ ಕಂಟ್ರಿ. ನಮ್ಮ ಜನತೆ ನೇರವಾಗಿ ಸರಕಾರದಲ್ಲಿ ಪಾಲ್ಗೊಳ್ಳುವ ಕನಸು ನನಸಾಗಬೇಕು'' ಎಂದವರೇ, ಖಂಡಿತಾ ಬರುತ್ತೇನೆಂದು ಕೈಕುಲುಕಿ ಬೀಳ್ಕೊಟ್ಟರು.
ನನಗೆ ನೆನಪಿದ್ದಂತೆ ಅಂದು ಗಾಂಧಿ ಜಯಂತಿ. ಅನಂತಮೂರ್ತಿಯವರನ್ನು ಕಾರಿನಲ್ಲಿ ಕರೆದೊಯ್ದೆನು. ಉದ್ಯಾನವೊಂದರಲ್ಲಿ ಸುಮಾರು ನೂರರಷ್ಟು ನೆರೆಕರೆಯ ನಿವಾಸಿಗಳು, ಹೆಮ್ಮಕ್ಕಳು, ಮಕ್ಕಳೂ ಸೇರಿದ್ದರು. ಸರಳವಾಗಿ ಸಹಭಾಗಿತ್ವದ ಮಹತ್ವ ಹೇಳಿ, ಜನಾಗ್ರಹದ ಉಪಕ್ರಮಕ್ಕೆ ಪ್ರಜೆಗಳು ಕೈ ಕೂಡಬೇಕೆಂದು ಮನವಿ ಅವರಿಂದ ಬಂದಿತು.
ಅನಂತಮೂರ್ತಿ ಬಂದಿದ್ದಾರೆಂದು ಬಾಯ್ಮಾತಿನಲ್ಲಿ ಪ್ರಚುರವಾದಾಗ ಮತ್ತಷ್ಟು ಜನ ಸೇರತೊಡಗಿದರು. ನಮ್ಮ ಮೈಚಳಿ ಬಿಟ್ಟಿತು. ಪ್ರತಿಕ್ರಿಯೆ ನಿರೀಕ್ಷೆ ಮೀರಿ ಬರತೊಡಗಿತು. ಇನ್ನು ಅನಂತಮೂರ್ತಿಯವರು ನನ್ನೊಡನೆ ಪಾದಯಾತ್ರೆಗೆ ಬಂದರೆ... ನಮ್ಮ ಆಸೆ ಗರಿಗೆದರಿತು.
ಅಪಾಲಜಿಕ್ ಆಗಿ ಅವರನ್ನು 'ಪಾದಯಾತ್ರೆಗೆ ನಮ್ಮೊಡನೆ ಬರುವಿರಾ ಸಾರ್?' ಎಂದು ಕೇಳಿದೆವು. ಮತ್ತಿನ್ನೇನು? ನಾನೇನು ರಾಜಕಾರಣಿಯೇ, ಭಾಷಣ ಮಾಡಿ ಕಾರು ಹತ್ತಿ ಹೋಗಲು? ನಾನೂ ಬೆಂಗಳೂರಿನ ಸಿಟಿಜನ್. ಎಲ್ಲರಂತೆ ಹಕ್ಕಿರುವ ನಾನು ಅರ್ಹತೆ ಹೊಂದಿದ್ದೇನೆ. ಬನ್ನಿ, ನಿಮ್ಮೊಂದಿಗೆ ನಾನೂ ಬರುವೆ' ಎಂದು ಎದ್ದು ಹೊರಟೇಬಿಟ್ಟರು ಯು.ಆರ್. ಅನಂತಮೂರ್ತಿ. ಅವರ ದೆಸೆಯಿಂದ ಅಂದಿನ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ