- ಡಾ. ಈಶ್ವರ ದೈತೋಟ, ಎಂ.ಎ. ಡಿ.ಲಿಟ್.
ಮಾಧ್ಯಮದಲ್ಲಿ ಅಂದರೆ, ಕೈಮುಷ್ಟಿಯೊಳಗಣ ಮೊಬೈಲ್‌ಗಳೂ ಸೇರಿದಂತೆ ಮಾಧ್ಯಮದ ಮೂಲಕ ದೇಶವಿಡೀ ಕಥೆ ಕೈಲಾಸವಾಗಿ ಬಿಡುತ್ತಲಿದೆ. ಹರಡುವ ಸುದ್ದಿಗಳಲ್ಲಿ 40 ಶೇಕಡ ಡೋಂಗಿಗಳಿರುತ್ತವೆ ಯೆಂದು ಪದೇ ಪದೇ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ. ಅದಕ್ಕೊಂದಿಷ್ಟು ಉಪ್ಪು ಎಂದು ನಮ್ಮಜ್ಜಿ ಇದ್ದಿದ್ದರೆ ಗೊಣಗಿ ಒಂದು ಗ್ಲಾಸು ಬಿಸಿ ಹಾಲು ಕುಡಿದು ಸ್ವಸ್ಥಕ್ಕೆ ಮಲಕೊಂಬಿಡ್ತಿದ್ದರು ಖಂಡಿತ.
ಆದರೆ, ದಿನದ 24 ಘಂಟೆಗಳಲ್ಲಿ ಹೊಸತೇನಿದೆ ಎಂದು ಕೈಮೈ ಪರಚಿಸಿಕೊಳ್ಳುವ ಈ ಕಲಿಕಾಲದಲ್ಲಿ ಸುದ್ದಿಗಳಂತೂ ಕಲಿಯಬಾರದಷ್ಟು ಅಶುದ್ಧವಾಗಿ ಸುತ್ತುತ್ತಲೇ ಇರುತ್ತವೆ. ಯಾವುದು ಸತ್ಯ, ಯಾವುದು ಮಿಥ್ಯ ಎಂದು ದಾಸರುಗಳಂತೆ ನಾವು ಜನಸಾಮಾನ್ಯರುಗಳು ಹೇಳುವುದರೊಂದಿಗೆ ಮೊಬೈಲ್ ತೆರೆದು, ತರೆದು ರಾತ್ರೆ ಹಗಲೆಂಬ ವ್ಯತ್ಯಾಸವಿಲ್ಲದೆ ನೋಡಿ ನೋಡಿ ಪರದಾಡುವ ಕಲಿಯುವ ಕಾಲವಲ್ಲ- ಸತ್ಯ ಯಾವುದು ಮಿಥ್ಯ ಯಾವುದು ಎಂದು ತಾಳ ಮತ್ತು ತಂಬೂರಿಯೊಂದಿಗೆ ಪರದಾಡುವ ಕಾಲವೇ ಬಾರದಿದ್ದರೆ ಸಾಕು.
ನನಗೀಗ ನೆನಪಾಗಿ ಖುಶಿ ಕೊಡುತ್ತಲಿರುವ ಸುದ್ದಿ ಸಮಾಚಾರದ ಗುದ್ದೊಂದನ್ನು ಓದುಗರ ಜೊತೆ ಕೂಲ್ ಆಗಿ ಹಂಚಿಕೊಳ್ಳಬೇಕೆಂಬ ಹಂಬಲವೀಗ ನನ್ನದಾಗಿದೆ. 3 ದಶಕಗಳ ಹಿಂದೆ ಬೆಂಗಳೂರಿನಲ್ಲಿ ವಿಶ್ವ ಸುಂದರಿಯರ ಸ್ಪರ್ಧೆಗಳು ನಡೆದು ಸುರಸುಂದರಿಯರು ಬೆಂಗಳೂರಿನ 5 ಸ್ಟಾರ್ ಹೊಟೇಲ್‌ಗಳಲ್ಲಿ ಸ್ಥಳೀಯ ತರಕಾರಿಗಳ ಊಟೋಪಚಾರ ಎಂಜಾಯ್ ಮಾಡುತ್ತಲಿದ್ದ ಸಂಭ್ರಮದ ದಿನಗಳವು. ಅಂತಹ ಸಂದರ್ಭದಲ್ಲಿ ಮೈಸೂರು-ಬೆಂಗಳೂರಿನ ರಸ್ತೆಯುದ್ದಕ್ಕೂ ಚಂದ್ರಮುಖೀ ರಾಜಮಾರ್ಗದಲ್ಲಿ ವಾಹನಗಳೆಲ್ಲವೂ ಸಾಗಲಾರದೆ ಹಾರಿಹಾರಿ ಬೀಳುತ್ತಲಿದ್ದಾಗ ಸೌಂದರ್ಯ ಸ್ಪರ್ಧೆ ಅಸ್ವಾದಿಸುವ ಕಾಲಬಂದಿತ್ತು.
ನನಗಂತೂ ವಿದ್ಯಾರ್ಥಿತನದಲ್ಲೇ ಮೈಸೂರು-ಬೆಂಗಳೂರು ಯಾತ್ರೆಯೆಂದರೆ ದಾರಿಯುದ್ದಕ್ಕೂ ಸಿಗುವ ಸೌತೆಕಾಯಿ ಎಳನೀರು ತಳ್ಳಂಗಡಿಗಳ ಮುಂದೆ ವಾಹನ ನಿಲ್ಲಿಸಿ ಅವನ್ನೆಲ್ಲಾ ಸವಿಯುವ ಸಂಭ್ರಮ ಆವತ್ತಿನಿಂದಲೇ ಮೈಗೂಡಿತ್ತು. ಎಂದಿನಂತೆ ತಾಜಾ ಸೌತೆಕಾಯಿ ತುಂಬಿ ತುಳುಕಾಡುತ್ತಲಿದ್ದ ಗಾಡಿ ಹಿಂದೆಯೇ ಚಾಕು, ಖಾರದ ಮಸಾಲೆ ಸಿದ್ಧವಾಗಿಟ್ಟುಕೊಂಡು ನಮ್ಮನ್ನೇ ಕಾಯತ್ತಲಿದ್ದಂತಿದ್ದ 40ರ ಅಂದಾಜಿನ ಮಹಿಳೆ ಕೈಬೀಸಿ ಕರೆದಳು. ಎಲ್ಲವೂ ಸರಿಯಿತ್ತು. ಕಾಫಿ, ಬಾರುಗಳು ಎಳನೀರು ಅಂಗಡಿಗಳನ್ನೆಲ್ಲಾ ಬಿಟ್ಟು ಸೌತೆ ತಿನ್ನಲು ಸ್ಪೂರ್ತಿಯಾಗಿತ್ತೆಂದರೂ ತಪ್ಪಿಲ್ಲ.
ಎಳೆಯದಾಗಿರುವ ನಾಲ್ಕು ಕಾಯಿಗಳ ಸಿಪ್ಪೆಗಳನ್ನು ಸರಸರನೆ ತೆಗೆದು ಉದ್ದನೆಯ ಚಾಕುವಿನ ಚೂಪಿನಿಂದಲೇ ಹಸಿಮೆಣಸನ್ನು ಸೇರಿಸಿ ಉಜ್ಜಿ ಗರಂ ಮಸಾಲೆಯನ್ನು ಇಟ್ಟು ಹದವಾಗಿ ಒಳತುಂಬಿ ಮುತ್ತುಗದೆಲೆಯಲ್ಲಿಟ್ಟು ನಮ್ಮನ್ನೆಲ್ಲಾ ಕಡೆಗಣಿಸಿ ಡಾಕ್ಟರ್ ಸ್ನೇಹಿತರೊಬ್ಬರು ಸಂದರ್ಶನಕ್ಕಿಳಿದೇ ಬಿಟ್ಟರು. ಏನಿಮ್ಮಾ ನೀನು ಸೌತೆಕಾಯಿ ತಿನ್ನಲ್ವಾ? ಎಂದು ಪ್ರಶ್ನಿಸಿ ಕಾದರು.
ಯಾಕ್ ಸೋಮಿ, ಬೇಕಾದಾಗಲೆಲ್ಲಾ ತಿಂತೀವಲ್ಲಾ!
ಮತ್ಯಾಕೆ ನೀನು ಸಣ್ಣಕ್ಕಾಗಿಲ್ಲಾ?
ಸೌತೆಕಾಯಿ ತಿಂದೋರೆಲ್ಲಾ ಸಣ್ಣಕ್ಕಾಯ್ತಾರಾ?
ಹೌದಮ್ಮಾ ಸಣ್ಣಕ್ಕಾಗೋದಿಕ್ಕೇ ಸೌತೆಕಾಯಿ ತಿನ್ನೋದು
ನೀವು ತಿಂತೀರಲ್ಲಾ! ನೀವೇಕೆ ಸಣ್ಣಕ್ಕಾಗಿಲ್ಲಾ?
ನಮ್ಮ ಡಾಕ್ಟರು ಗಲಿಬಿಲಿಗೊಂಡರು. ಸಾವರಿಸಿಕೊಂಡು ಹೊಟ್ಟೆಯೊಳಗೆಳೆದುಕೊಂಡು ಉಸಿರು ಬಿಗಿಹಿಡಿದು "ಯಾಕೆ, ನಾನು ಸಣ್ಣಕ್ಕಿದ್ದೀನಲ್ಲಾ" ಎಂದು ಸಮಜಾಯಸಿಕೊಂಡರು.
ಟೈಟ್ ಆಗಿ ಪ್ಯಾಂಟು ಶರ್ಟು ಹಾಕ್ಕೊಂಡ್ರೆ ನೀವು ಸಣ್ಣಕಾಯ್ತೀರಾ! ನಾವೆಲ್ಲಾ ಸೀರೆ ಕಟ್ಕೊಂಡ್ರೆ ದಪ್ಪಕ್ಕಾಗಿದೀವಿ ಅಂದ್ಕೋತೀರಾ! ಎಂದು ರೇಗಿಸಿದಳು ಆ ಮೂರು ಮಕ್ಕಳ ಮದರ್. ವಿಷಯಾಂತರ ಮಾಡಿದ ನಮ್ಮ ಡಾಕ್ಟರ್ ಸ್ನೇಹಿತರು "ಹೆಂಗಿದೆಯಮ್ಮಾ ನಿನ್ನ ವ್ಯಾಪಾರ" ಎಂದು ಕೇಳಿದರು.
ಅದಕ್ಕವಳು "ಇನ್ನೆಂಗಿರುತ್ತೆ! ಮಾರ್ಕೆಟ್ನಲ್ಲಿ ಡಿಮ್ಯಾಂಡು, ಸಪ್ಲೈ ಇದ್ದಂಗಿರುತ್ತೆ"
ದಿನಕ್ಕೆಷ್ಟು ಕಾಯಿ -ಎಳನೀರು ಮಾರ್ತೀಯಾ?
ಒಂದೊಂದು ದಪಾ ಡಿಮ್ಯಾಂಡಿದ್ರೆ ಸಾವಿರದ ಮೇಲೆ ಹೋಗೋದಿದೆ. ಇಲ್ಲಾಂದ್ರ ಇವತ್ನಂಗೆ ಸೋನೇ ಹಿಡೀತೂಂದ್ರೆ ಬಿಸಿನೆಸ್ ಏನಿರಲ್ಲಾ-ಲುಕ್ಸಾನಷ್ಟೆ!
ವ್ಯಾಪಾರ ಆಗದೆ ಉಳಿಯೋ ಕಾಯಿನೆಲ್ಲಾ ಏನ್ಮಾಡ್ತೀಯಾ?
ಅವನ್ನೆಲ್ಲಾ ಮಾರ್ನೆ ದಿನಾ ಬಾರ್ ಆಂಡ್ ರೆಸ್ಟಾರೆಂಟುಗಳಿಗೆ ಹಾಕ್ತೀವಿ-ಕುಡುಕರಿಗೆ ಮಜಾ ಬರುತ್ತೆ. ಫ್ರೆಶ್‌ಮಾತ್ರ ಇಲ್ಲಿ ರಸ್ತೆಬದೀನಲ್ಲಿ ವಹಿವಾಟು ಮಾಡ್ತೀವಿ.
ಇಷ್ಟೊಂದು ರುಚಿರುಚಿ ಕಾಯಿ ಎಲ್ಲಿಂದ ತತ್ತೀಯಾ?
ನಾವು ಅದ್ರಲ್ಲೇ ವ್ಯಾಪಾರ ಮಾಡೋವ್ರಿಗೆ ಯಾವೂರಿಂದ ಒಳ್ಳೆ ಕಾಯ ಬರ್ತದೆ ಅಂತ ಗೊತ್ತಿರುತ್ತೆ! ಇಡೀ ಗೋಣೀ ಚೀಲಾನೆ ಬೀಟ್ ಕೂಗ್ಬಿಟ್ರೆ ಒಳ್ಳೆ ಮಾಲು ಸಿಗತ್ತೆ. ಆಮೇಲೆ ನಾವು ಅವನ್ನು ಸೈಜ್‌ವಾರ್ ಗ್ರೇಡಿಂಗ್ ಮಾಡ್ಬುಟ್ಟು ಒಂದಕ್ಕೆರಡು ರೂ ಮಾಡಿ ಮಾರ್ತೀವಿ.
ಅಂತೂ ಜೋರಾಗಿದೀಯಾ?
ಏಯ್, ಬರೀ ಸೌತೆಕಾಯಿ ಮಾರಿ ಸಂದಾಕಿರೋಕಾಗುತ್ತಾ ಸೋಮಿ! ಯಜಮಾನ್ರು ಬಿಲ್ಡಿಂಗ್ ಕಂಟ್ರಾಕ್ಸ್ ಮಾಡ್ತಾವ್ರೆ. ಮಗ ಒಬ್ಬ ಮಾರ್ಕೆಟ್ನಲ್ಲಿ ಶಾಪ್ ಮಡ್ಕೊಂಡವ್ನೆ ಇನ್ನೊಬ್ಬ ಮಗಾ ಫೋಟೋಗ್ರಾಫರ್ ಆಗವ್ನೆ ಮೊನ್ನೆ ದೊಡ್ಡ ಗೌಡ್ರು ಬಂದಿದ್ದಾಗ ಅವರ್ಜೊತೆನೇ ಫೋಟೋ ಹೋಡ್ಕೋಂಡವನೆ.
ಮತ್ತೇನಿದು ಸೌತೆಕಾಯಿ ವ್ಯಾಪಾರ??? (ಚಕಿತರಾಗುವ ಸರದಿ ನಮ್ಮದಾಗಿತ್ತು.)
ಅಯ್ಯಾ, ಇದು ಸುಮ್ಮನೆ ಹೊತ್ತೋಗೋದಿಕ್ಕೆ ಸ್ವಾಮೀ, ನಮ್‌ಹಾಬಿ ಅಷ್ಟೇ.
ನಾವಲ್ಲಿಂದ ಕಾಲು ಕಿತ್ತೆವು- ಬಂದ ದಾರಿಯಲ್ಲೇ ವಾಪಾಸಾದೆವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ