ಉಡುಪಿ ಜಿಲ್ಲೆಯ ಸಾಲಿಗ್ರಾಮದ ಚಿತ್ರಪಾಡಿಯ ಕೃಷ್ಣಮೂರ್ತಿ ಉರಾಳ ಹಾಗೂ ಭವಾನಿ ಉರಾಳ ಇವರ ಮಗನಾಗಿ 09.10.1992ರಂದು ಶ್ರೀನಾಥ ಉರಾಳ ಚಿತ್ರಪಾಡಿ ಅವರ ಜನನ. ಪದವಿ ವಿದ್ಯಾಭ್ಯಾಸ ಮಾಡಿರುವ ಇವರು ವೃತ್ತಿಯಲ್ಲಿ ಫೋಟೋಗ್ರಫಿಯನ್ನು ಮಾಡುತ್ತಿದ್ದಾರೆ. ತಂದೆ ಕೃಷ್ಣಮೂರ್ತಿ ಉರಾಳ ಹಾಗೂ ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
ಬಾಲ್ಯದಲ್ಲಿ ಹಂದೆಟ್ಟು ಗೋವಿಂದ ಉರಾಳ ಹಾಗೂ ಕೃಷ್ಣಮೂರ್ತಿ ಉರಾಳ ಪ್ರಥಮ ಗುರುಗಳು. ನಂತರ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣ, ಗುರು ಪ್ರಸಾದ್ ಮೊಗೆಬೆಟ್ಟು, ಗುರು ಗಣೇಶ್ ಚೇರ್ಕಾಡಿ, ಗುರು ಮಂಜುನಾಥ ಕುಲಾಲ್ ಐರೋಡಿ ಇವರಲ್ಲಿ ಪರಂಪರೆಯ ನಾಟ್ಯಾಭ್ಯಾಸ ಹಾಗೂ ಗುರು ಸತೀಶ್ ಕೆದಿಲಾಯ ಹಾಗೂ ಗುರು ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ಇವರಲ್ಲಿ ತಾಳ, ಪ್ರಸಂಗ ಅಭ್ಯಾಸ ಹಾಗೂ ಗುರು ಕೃಷ್ಣಮೂರ್ತಿ ಭಟ್ ಹಾಗೂ ದೇವದಾಸ್ ರಾವ್ ಕೊಡ್ಲಿ ಬಳಿ ಮದ್ದಳೆ ಅಭ್ಯಾಸ ಮಾಡಿರುತ್ತಾರೆ.
ಇತ್ತೀಚಿಗೆ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಲ್ಲಿ ಹೆಚ್ಚಿನ ಪ್ರಸಂಗ ತರಬೇತಿಯನ್ನು ಪಡೆಯುತ್ತಿದ್ದಾರೆ.
ಬಾಲ್ಯದಲ್ಲಿ 3 ವರ್ಷದ ಬಾಲಕನಾಗಿದ್ದಾಗ ಹೆಜ್ಜೆ ಕಲಿತು ಬಾಲಗೋಪಾಲ ವೇಷವನ್ನು ಹಲವಾರು ಕಡೆ ನಿರ್ವಹಿಸಿದ್ದಾರೆ. ಕಳೆದ 15 ವರ್ಷಗಳಿಂದ ಪ್ರಸಾದನ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನೆಚ್ಚಿನ ಪ್ರಸಂಗಳು:-
ಪಂಚವಟಿ, ಧ್ರುವ ಚರಿತ್ರೆ, ಚಿತ್ರಸೇನ ಕಾಳಗ, ಕನಕಾಂಗಿ ಕಲ್ಯಾಣ, ದೇವಿ ಮಹಾತ್ಮೆ, ವಾಲಿ ಮೋಕ್ಷ, ಜಾಂಬವತಿ ಕಲ್ಯಾಣ, ರತಿ ಕಲ್ಯಾಣ, ಹಿಡಿಂಬಾ ವಿವಾಹ, ಕರ್ಣಾರ್ಜುನ, ತುಳಸಿ ಜಲಂಧರ, ತಾಮ್ರಧ್ವಜ ಕಾಳಗ, ಲವ ಕುಶ, ಭೀಷ್ಮ ವಿಜಯ, ಚೂಡಾಮಣಿ, ಮಾಯಾಪುರಿ, ವೀರಮಣಿ ಕಾಳಗ.
ನೆಚ್ಚಿನ ವೇಷಗಳು:-
ಚಿತ್ರಸೇನ, ರಕ್ತಬೀಜ, ಸುಗ್ರೀವ, ಜಾಂಬವ, ಕೃಷ್ಣ, ಶಲ್ಯ, ಅರ್ಜುನ, ದೇವೇಂದ್ರ, ದಕ್ಷ, ಕೌರವ, ಪರಶುರಾಮ, ಕಿರಾತಕ, ದ್ರೋಣ, ರುಕ್ಮಾಂಗ, ಶುಭಾಂಗ; ಬಣ್ಣದ ವೇಷಗಳಾದ ಹಿಡಿಂಬ, ರಾವಣ ಇತ್ಯಾದಿ ಹಾಗೂ ಹೆಣ್ಣು ಬಣ್ಣದ ವೇಷಗಳಾದ ಶೂರ್ಪನಖಿ, ಲಂಕಿಣಿ ಇತ್ಯಾದಿ ಹಾಗೂ ಪೌರಾಣಿಕ ಪ್ರಸಂಗದ ಎಲ್ಲಾ ವೇಷಗಳು ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ವೇಷ ಹಾಗೂ ಪದ್ಯದ ಬಗ್ಗೆ ತಿಳಿದುಕೊಳ್ಳುತ್ತೇನೆ. ಹಳೆಯ ಪೌರಾಣಿಕ ಪ್ರಸಂಗ ಆದಲ್ಲಿ ಹಿಂದಿನ ಕಲಾವಿದರ ರಂಗ ನಡೆ ಹಾಗೂ ವೇಷದ ಬಗ್ಗೆ ಕೇಳಿ ತಿಳಿದುಕೊಳುತ್ತೇನೆ. ಯಾವುದೇ ವೇಷ ಕೊಟ್ಟರು ತಂದೆ ಹಾಗೂ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಬಳಿ ಕೇಳಿ ಪೂರ್ಣ ತಯಾರಿ ಮಾಡಿಕೊಳ್ಳುತ್ತೇನೆ. ಹೆಚ್ಚಾಗಿ ಎಲ್ಲಾ ವೇಷಗಳನ್ನು ಬಡಗಿನ ಪರಂಪರೆಯ ವೇಷ ಕ್ರಮ ಹಾಗೂ ಮುಖವರ್ಣಿಕೆಯಲ್ಲೇ ಮಾಡುತ್ತೇನೆ. ಬಣ್ಣದ ವೇಷ ಆದಲ್ಲಿ ಪರಂಪರೆಯ ಅಕ್ಕಿಹಿಟ್ಟಿನ ಚಿಟ್ಟಿಯ ಮುಖವರ್ಣಿಕೆ ಸ್ವಂತ ನಾನೆ ಮಾಡಿಕೊಂಡು ವೇಷಕ್ಕೆ ಸಿದ್ಧನಾಗುತ್ತೇನೆ ಎನ್ನುತ್ತಾರೆ ಶ್ರೀನಾಥ ಉರಾಳ ಚಿತ್ರಪಾಡಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಇಂದಿನ ಸ್ಥಿತಿ ಉತ್ತಮವಾಗಿದೆ. ಯುವ ಜನಾಂಗ ಯಕ್ಷಗಾನದತ್ತ ಆಕರ್ಷಿಸುತ್ತಿದ್ದಾರೆ. ಅಲ್ಲದೇ ಯುವ ಜನಾಂಗ ಹವ್ಯಾಸಿಯಾಗಿಯೋ ಅಥವಾ ವೃತ್ತಿ ಕಲಾವಿದರಾಗಿ ತಯಾರಾಗುತ್ತಿದ್ದಾರೆ. ಇತ್ತೀಚಿನ ಹೊಸ ಪ್ರಸಂಗಗಳು ಯಕ್ಷಗಾನ ಚೌಕಟ್ಟು ಮೀರಿ ಪ್ರದರ್ಶನಗೊಳ್ಳುತ್ತಿವೆ. ಯಕ್ಷಗಾನದಲ್ಲಿ ಹೊಸತನದ ಜೊತೆಗೆ ಪರಂಪರೆಯನ್ನು ಮರೆಯಬಾರದು. ಇಂದು ಬಡಗುತಿಟ್ಟಿನಲ್ಲಿ ಕಿರಾತ, ಗಂಧರ್ವ, ಈಶ್ವರ, ಕೃಷ್ಣ, ಬಣ್ಣದ ವೇಷ ಇತ್ಯಾದಿ ಪರಂಪರೆಯ ವೇಷ ಕ್ರಮಗಳು ಮರೆಯಾಗುತ್ತಿದೆ. ಇನ್ನಾದರೂ ಯುವ ಕಲಾವಿದರು ಹೊಸತನದೊಂದಿಗೆ ಪರಂಪರೆಯನ್ನು ಉಳಿಸುವಲ್ಲಿ ಮನಸ್ಸು ಮಾಡಬೇಕು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇತ್ತೀಚಿಗೆ ಯಕ್ಷಗಾನಕ್ಕೆ ಪ್ರೇಕ್ಷಕರ ಸಂಖ್ಯೆ ಅಧಿಕವಾಗಿದೆ. ವಿದ್ಯಾವಂತ ಯುವ ಜನಾಂಗವೂ ಕೂಡ ಅಧಿಕ ಸಂಖ್ಯೆಯಲ್ಲಿ ಯಕ್ಷಗಾನಕ್ಕೆ ಆಕರ್ಷಿಸುತ್ತಿದ್ದಾರೆ. ಪ್ರೇಕ್ಷಕ ವರ್ಗ ಯಾವುದೇ ಒಬ್ಬ ಕಲಾವಿದನ ಅಭಿಮಾನಿ ಆಗಿರದೆ ಯಕ್ಷಗಾನ ಕಲೆಯ ಅಭಿಮಾನಿಯಾದರೆ ಯಕ್ಷಗಾನ ಬೆಳವಣಿಗೆಗೆ ಪೂರಕ.
ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಇಲ್ಲ. ಅಮೃತೇಶ್ವರಿ ಮೇಳದಲ್ಲಿ ಬಾಲಗೋಪಾಲ ಮಾಡಿದ ಅನುಭವ. ಒಂದು ವರ್ಷ ಉಡುಪಿ ಯಕ್ಷಗಾನ ಕೇಂದ್ರದ ಯಕ್ಷಗಾನ ತಂಡದಲ್ಲಿ ಕಲಾವಿದನಾಗಿ ಹಾಗೂ ಪ್ರಸ್ತುತ ಕೋಟದ ಯಕ್ಷ ತರಂಗ ವ್ಯವಸಾಯೀ ತಂಡದ ಕಲಾವಿದ ಮತ್ತು ಕೋಟದ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾ ತಂಡದ ಪ್ರಧಾನ ಕಾರ್ಯದರ್ಶಿ ಹಾಗೂ ಕಲಾವಿದರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಶ್ರೀನಾಥ ಉರಾಳ ಚಿತ್ರಪಾಡಿ.
ಅಜ್ಜ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಪ್ರಾಂಶುಪಾಲರಾಗಿದ್ದ ಮಣೂರು ಮದ್ದಳೆ ಮಹಾಬಲ ಕಾರಂತರ ಸ್ಮರಣಾರ್ಥವಾಗಿ ಪ್ರತೀ ವರ್ಷ ಕಾರ್ಯಕ್ರಮ ಮಾಡಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಒಬ್ಬ ಕಲಾವಿದರಿಗೆ ನೀಡಬೇಕು ಎನ್ನುವ ಯೋಜನೆ ಇದೆ. ಹವ್ಯಾಸಿ ಕಲಾವಿದರಿಗಾಗಿ ಸಂಘಟನೆ ಮಾಡಿ ಒಂದು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಬೇಕು ಎಂಬ ಯೋಜನೆ ಇದೆ.
ಯಕ್ಷಗಾನ ಕಲಿಯುವುದಕ್ಕೆ ಅವಕಾಶ ಮಾಡಿಕೊಟ್ಟ ಉಡುಪಿಯ ಯಕ್ಷಗಾನ ಕೇಂದ್ರ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವುದಕ್ಕೆ ಅವಕಾಶ ಮಾಡಿಕೊಡುತ್ತಿರುವ ಯಕ್ಷಾಂತರಂಗ(ರಿ.) ಕೋಟ ಹಾಗೂ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ(ರಿ) ಕೋಟ, ಈ ಮೂರು ಸಂಸ್ಥೆಗಳು ಜೀವನದಲ್ಲಿ ಮರೆಯಲಾರದ ಕಲಾಸಂಸ್ಥೆಗಳು.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಶ್ರೀನಾಥ ಉರಾಳ ಚಿತ್ರಪಾಡಿ ಹೇಳುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ