ಮಂಗಳೂರು: ಬಿಜೆಪಿಯ ವಿಜಯೋತ್ಸವದಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಹೆಡೆಮುರಿ ಕಟ್ಟುವ ಮೂಲಕ ಕಾನೂನು ಕ್ರಮಗಳನ್ನು ಬಿಗಿಗೊಳಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭವನ್ನು ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಪಕ್ಷದ ವತಿಯಿಂದ ಎಲ್ಲೆಡೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ ತಮ್ಮ ಪಾಡಿಗೆ ಬೋಳಿಯಾರ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ದುಷ್ಕರ್ಮಿಗಳ ತಂಡ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದೆ. ರಾಜ್ಯದ ಗೌರವಾನ್ವಿತ ಸ್ಪೀಕರ್ ಅವರ ಕ್ಷೇತ್ರದಲ್ಲೇ ಇಂತಹ ರಾಜಕೀಯ ದ್ವೇಷದ ದುಷ್ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು ಜಿಲ್ಲೆಯಲ್ಲಿ ಕೇರಳ ಹಾಗೂ ಪ. ಬಂಗಾಳ ಮಾದರಿಯ ಅರಾಜಕತೆಯನ್ನು ಸೃಷ್ಟಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ, ಗೂಂಡಾ ಕಾಯ್ದೆ ಸೇರಿದಂತೆ ದೌರ್ಜನ್ಯ ಮುಂದುವರಿದಿದ್ದು ಇದೀಗ ಚೂರಿ ಇರಿತ, ಮಾರಣಾಂತಿಕ ಹಲ್ಲೆಯ ಮಟ್ಟಕ್ಕೆ ತಲುಪಿ ಕಾಂಗ್ರೆಸ್ ಆಡಳಿತದಲ್ಲಿ ನ್ಯಾಯವೇ ಇಲ್ಲವಾಗಿದೆ. ಇಂತಹ ರಾಜಕೀಯ ದ್ವೇಷದ ಹಲ್ಲೆಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ಅಶಾಂತಿಗೆ ಕಾರಣವಾಗಲಿದ್ದು ಕೂಡಲೇ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಶಾಸಕರು ಎಚ್ಚರಿಸಿದರು.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕರು:
ಬಿಜೆಪಿ ವಿಜಯೋತ್ಸವದ ವೇಳೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ಹಾಗೂ ಇರಿತಕ್ಕೊಳಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಕಾರ್ಯಕರ್ತರನ್ನು ಶಾಸಕ ವೇದವ್ಯಾಸ ಕಾಮತ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಕಾಂಗ್ರೆಸ್ ಆಡಳಿತದಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಹಾಕುವುದು ಕೂಡಾ ಅಪರಾಧವೇ? ಹಲ್ಲೆ ನಡೆಸಿದ ದುಷ್ಕರ್ಮಿಗಳ ಜೊತೆಗೆ ಬಿಜೆಪಿ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ?. ಸರ್ಕಾರವು ಕೊನೆಪಕ್ಷ ಇಂತಹ ಪ್ರಕರಣಗಳಲ್ಲಾದರೂ ಓಲೈಕೆ ರಾಜಕಾರಣವನ್ನು ಬಿಟ್ಟು ನಿಷ್ಪಕ್ಷವಾದ ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಮೇಶ್ ಕಂಡೆಟ್ಟು, ವಿಜಯಕುಮಾರ್ ಶೆಟ್ಟಿ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ರಾಜೇಂದ್ರ ಶೆಟ್ಟಿ, ಕಿರಣ್ ರೈ, ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ