ಬದಲಾಗುವ ಮನಸ್ಥಿತಿ- ಲೂಸಿಫರ್ ಎಫೆಕ್ಟ್

Upayuktha
0


ಕ್ರಿಶ್ಚಿಯನ್ ಪುರಾಣದಲ್ಲಿ ಲೂಸಿಫರ್ ಎಂಬ ಹೆಸರನ್ನು ಎಲ್ಲರೂ ಕೇಳಿಯೇ‌ ಇರುತ್ತೀರಿ. ಈತ ಮೊದಲು ಸ್ವರ್ಗದಲ್ಲಿ ದೇವತೆಯಾಗಿ ಕಂಗೊಳಿಸುತ್ತಿದ್ದ, ಧೈರ್ಯ, ಪ್ರಾಮಾಣಿಕತೆ, ಪ್ರೀತಿ ನಿಯತ್ತು ಇವುಗಳು ಅವನ ಲಕ್ಷಣಗಳಾಗಿದ್ದವು. ಜಾಣ್ಮೆ‌ ಹಾಗೂ ಚತುರತೆ, ಸೌಂದರ್ಯಗಳು ಅವನದಾಗಿದ್ದವು.


ಇಂತಹವನಿಗೆ ಅಹಂಕಾರ ಹಾಗೂ ಗರ್ವದ ಭೂತ‌ ಹತ್ತಿಕೊಂಡಿತು, ತಾನು ಯಾರಿಗೇನು ಕಮ್ಮಿ ಎಂಬ ಅಹಂಕಾರ ತನ್ನ ಸೌಂದರ್ಯದ ಬಗ್ಗೆ ಗರ್ವ, ಇವೆಲ್ಲಾ ಸೇರಿ ತಾನೇಕೆ ದೇವರಾಗಿ ಬಾರದು ಎಂಬ ದುರಾಸೆ ಹೊತ್ತಿಕೊಂಡಿತು. ಅಹಂಕಾರ ಅವನ ದೊಡ್ಡ ಪಾಪ, ಅದು ಬಂದ ಮೇಲೆ  ದೇವರೊಡನೆ ಯುದ್ದಕ್ಕೆಂದು ಹೊರಡುತ್ತಾನೆ, ಅಲ್ಲಿ ದೇವತೆಗಳ ಜೊತೆ‌ ಯುದ್ದ ಮಾಡುವಾಗ ಸೋತು ಕೆಳಗೆ ಬೀಳುತ್ತಾನೆ. ಅಲ್ಲಿಂದ ಆತ ಸೈತಾನನಾಗಿ ಬದಲಾಗುತ್ತಾನೆ. ಇದರಿಂದಾಗಿ ಭೂಲೋಕದ ಜನರಲ್ಲಿ ಪಾಪಗಳನ್ನು ಮಾಡುವ ಮನೋಭಾವ ತುಂಬುತ್ತಾನೆ ಒಂದೊಮ್ಮೆ ದೇವತೆಯಾಗಿದ್ದವನು ಈಗ ಪಾಪಿಷ್ಟನಾಗಿ ಬದಲಾಗಿ ಹೋದ.


ಇದೇ ರೀತಿ ಕಥೆ ನಮ್ಮ ಹಿಂದೂ ಪುರಾಣದಲ್ಲಿಯೂ ಬರುತ್ತದೆ. ನಹುಷನೂ ಕೂಡ ಇಂದ್ರನ ಅನುಪಸ್ಥಿತಿಯಲ್ಲಿ ಸ್ವರ್ಗಕ್ಕೇ ಅಧಿಪತಿಯಾಗುವ ಯೋಗವಿದ್ದಿತ್ತು, ಆದರೆ ತನ್ನ ಅಹಂಕಾರದಿಂದ ಇಂದ್ರನ ಪತ್ನಿಯನ್ನೇ ಬಯಸಿದನಲ್ಲದೇ ಕೊನೆಯ ಸಪ್ತರ್ಷಿಗಳ ಕೈಯ್ಯಲ್ಲಿ ರಥ ಹೊರಿಸಿಕೊಂಡು ಕೊನೆಗೆ ಅಗಸ್ತ್ಯರ ಕೋಪದಿಂದ ಶಪಿತನಾಗೀ ಸರ್ಪವಾಗಿ ಭೂಮಿಗೆ ಬಂದು ಬೀಳುತ್ತಾನೆ. ಸರ್ಪವಾಗೀ ದುಷ್ಟನಾಗಿರುತ್ತಾನೆ ಧರ್ಮರಾಜ ಬರುವವರೆಗೆ.


ಮೇಲೆ ಹೇಳಿದ ಎರಡೂ ನಡೆಗಳಿಗೆ ಸೈಕಾಲಜಿಯಲ್ಲಿ ಲೂಸಿಫರ್ ಎಫೆಕ್ಟ್ ಎಂದೇ ಹೆಸರು‌. ಲೂಸಿಫರ್ ಎಫೆಕ್ಟ್ ಡಾ. ಜಿಂಬಾರ್ಡೊ ಅವರ ಪ್ರಸಿದ್ದ ಪ್ರಿಸನ್ ಎಕ್ಸ್ಪರಿಮೆಂಟ್ ಸಂಶೋಧನೆಯ ಒಂದು‌ ಭಾಗ.


ಇದು ಕೇವಲ ಅಹಂಕಾರದ ಬಗ್ಗೆ ಅಲ್ಲ ಸಾಮಾಜಿಕ ಅಧಿಕಾರ, ಹಣ ಸಿಕ್ಕರೆ‌ ಮನುಷ್ಯ ದುಷ್ಟನಾಗುವ ಪ್ರಕ್ರಿಯೆ. ಅದಕ್ಕೆ ಕಾರಣ ಅಹಂಕಾರದ ಎಲ್ಲೆ ಮೀರಿದ ದುರಹಂಕಾರದ ಅಮಲು. ಈ ಅಮಲಿಗೆ ಸಿಕ್ಕವ ದುಷ್ಟನಾಗಿಯೇ ಹೊರಬರುತ್ತಾನೆ. 


ಅಹಂಕಾರ ಮತ್ತು ಕ್ರೋಧದ ಕೈಗೆ ಬುದ್ಧಿಯನ್ನು ಕೊಟ್ಟವರು ಇಲ್ಲಿಯವರೆಗೆ ಉದ್ದಾರವಾದ ಉದಾಹರಣೆಗಳಿಲ್ಲ. ಒಂದೋ ಅವರು ಸಮಾಜಘಾತುಕರಾಗಿ ಬಾಳುತ್ತಾರೆ ಇಲ್ಲ. ಬದುಕನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತಾರೆ.



ಈ ಲೂಸಿಫರ್ ಎಫೆಕ್ಟ್ ಬಗ್ಗೆ ಇನ್ನಷ್ಟು ತಿಳಿಯುವ ಬನ್ನಿ.


ಇದು ಇತರರಿಗೆ ಹಾನಿ ಮಾಡುವ- ನಿಂದನೆಯ ಮೂಲಕ, ಬೆದರಿಸುವಿಕೆಯ ಮೂಲಕ, ಕೀಟಲೆಯ ಮೂಲಕ, ಗಾಸಿಪ್ ಮೂಲಕ, ವದಂತಿಗಳ ಮೂಲಕ, ಅಮಾನವೀಯತೆಯ ಮೂಲಕ, ಇತರರನ್ನು‌ ಮಾನಸಿಕವಾಗಿ ಅಥವಾ ದೈಹಿಕವಾಗಿ ನೋಯಿಸಲು, ಚಿತ್ರಹಿಂಸೆ, ದೈಹಿಕವಾಗಿ ನಿಂದನೆ ಮತ್ತು ನಾಶಪಡಿಸಲು ಅಥವಾ ಕೊಲ್ಲಲು ಮಾಡುವ ಉದ್ದೇಶಪೂರ್ವಕ ಶಕ್ತಿಯ ಪ್ರದರ್ಶನ.


ಇದಕ್ಕೆ ಉದಾಹರಣೆ ಹುದ್ದೆ ಸ್ವೀಕರಿಸಿದ ಒಂದೆರೆಡು ವರ್ಷಗಳಲ್ಲಿ ಇಡೀ ಇಡೀ ಧೋರಣೆಯೇ ಬದಲಾಗುವ ಪೋಲೀಸರು, ವಕೀಲರು ಪತ್ರಿಕೋದ್ಯಮಿಗಳು, ರಾಜಕೀಯ ಪುಡಾರಿಗಳು ಇತ್ಯಾದಿ.


ನೀವು ನೋಡಿರಬಹುದು, ಬದುಕಲ್ಲಿ ಕಷ್ಟಪಟ್ಟು ಮೇಲೆ ಬಂದ ಕೆಲವು ಸಿನಿನಟರು, ಸೆಲೆಬ್ರಿಟಿಗಳು ಮೊದಲ ಮೊದಲು ಒಳ್ಳೆಯವರಾಗಿ ನಂತರ ಕೆಡುಕಿನ ಹಾದಿ ತುಳಿದದ್ದು.


ಈ ಮನಸ್ಥಿತಿ ಬರಲು ಕಾರಣಗಳೇನು ನೋಡೋಣ ಬನ್ನಿ


1. ಅಧಿಕಾರ ಅಥವಾ ಹಣ ಇದ್ದಾಗ ಯಾರೇನು ಮಾಡುವರು ಎಂಬ ನಿರ್ಲಕ್ಷ್ಯ.


2. ಒಂದು ಗುಂಪಿನ ಭಾಗವಾದಾಗ ತಮ್ಮ ಪ್ರತ್ಯೇಕ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು. ಭ್ರಷ್ಟಾಚಾರದಲ್ಲಿ ತೊಡಗಿರುವ ಜನರೊಂದಿಗೆ ಸೇರಿದಾಗ ತಾವೂ ಅವರೇ ಆಗಿಬಿಡುವ, ಹೆಣ್ಣನ್ನು ಚುಡಾಯಿಸುವ ಗ್ಯಾಂಗಿನೊಡನೆ ಸೇರಿ ತಾವು ಚುಡಾಯಿಸುವವರಾಗಿಬಿಡುವುದು.

ಇದು ಮಾನಸಿಕ ಸ್ಥಿತಿಯಾಗಿದ್ದು, ವ್ಯಕ್ತಿಗಳು ತಮ್ಮ ಸ್ವಯಂ-ಅರಿವು ಮತ್ತು ಪ್ರತ್ಯೇಕತೆಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ.


3. ಯಾಂತ್ರಿಕತೆ: ಜನರು ಗುಂಪಿನ ಭಾಗವಾಗಿದ್ದಾಗ, ವಿಶೇಷವಾಗಿ ಗುಂಪಿನಲ್ಲಿ ಒಬ್ಬರಾದಾಗ‌, ಅವರು ತಮ್ಮ ಕೃತ್ಯಗಳ ಹೊಣೆಯಿಂದ ನುಣುಚಿಕೊಳ್ಳಬಹುದು ಎಂದು ಭಾವಿಸಬಹುದು. ಎಲ್ಲರೂ ಹೀಗೇ ಮಾಡುತ್ತಿದ್ದಾರೆ ನಾನೂ ಹೀಗೇ‌ಮಾಡಿದರೇ ತಪ್ಪಿಲ್ಲ‌ ಎಂಬ ಸ್ವಯಂ ಸಮರ್ಥನೆ ಕೊಟ್ಟುಕೊಳ್ಳುವಿಕೆ


4. ಗುಂಪು ಡೈನಾಮಿಕ್ಸ್ ಮತ್ತು ಪೀರ್ ಒತ್ತಡ:


ಒಂದು ಗುಂಪು ತನ್ನ ಸದಸ್ಯರ ಮೇಲೆ ಬೀರುವ ಪ್ರಭಾವ. ಮೇಲೆ‌ಹೇಳಿದ ಉದಾಹರಣೆಯೇ ಇಲ್ಲಿಯೂ ಅನ್ವಯವಾಗುತ್ತದೆ. ಹಾಗೆಯೇ ಒಂದು ಕೆಟ್ಟ ಕೆಲಸ‌ ಮಾಡುವಾಗ ಅಥವಾ ಮಾಡಲು ಸುತ್ತ ಅಥವಾ ಜೊತೆ ಇರುವವರು ಉತ್ತೇಜನವೂ ಕಾರಣವಾಗುತ್ತದೆ.


5. ಅನಾಮಧೇಯತೆ/ ಆನ್ಲೈನ್ ಅವಕಾಶ:


ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಎಲ್ಲೋ ಕೂತು ಒಬ್ಬರ ಮೇಲೆ ಮಾನ‌ಸಿಕವಾಗಿ ನಡೆಸುವ ಆಕ್ರಮಣ. ಈ ಆಕ್ರಮಣ ಮಾಡಿದರೆ ಸುಲಭವಾಗಿ ಹಿಡಿಯಲಾರರು ಎಂಬ ಭ್ರಮೆ ಈ ನಿರ್ಭಯ ಭಾವನೆಗೆ ಕಾರಣವಾಗಬಹುದು.


ಈ ಎಲ್ಲಾ ಅಂಶಗಳು ಒಬ್ಬ ಒಳ್ಳೆಯ‌ ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡಲು ಕಾರಣವಾಗಬಹುದು.



ಲೂಸಿಫರ್ ಎಫೆಕ್ಟಿಗೆ ಸಿಗದಿರಲು ಏನು ಮಾಡಬಹುದು?


1. ನಾವು ಅನುಸರಿಸುವ ಹಾಗೂ ನಮ್ಮನ್ನು ಅನುಸರಿಸುವ ಜನರಲ್ಲಿ ಹೆಚ್ಚಿನ ಜನರು ಗುಣಗಳು ಯಾವುದಿರುತ್ತದೋ  ಅದೇ ನಮ್ಮ  ವ್ಯಕ್ತಿತ್ವವಾಗಿಬಿಡುತ್ತದೇ, ಹಾಗಾಗಿ ಮೊದಲು ನಾವು  ಸರಿಯಾದ ಜನರನ್ನು ಅನುಸರಿಸಬೇಕು ಆಗ ನಮ್ಮನ್ನು ಅನುಸರಿಸುವ ಜನರೂ ಸರಿಯಾದವರಾಗುತ್ತಾರೆ. ನಮ್ಮ ಸುತ್ತಲಿನ ಜನರ ಅಭಿಪ್ರಾಯ ನಮ್ಮದೇ ಅಭಿಪ್ರಾಯವಾಗದಂತೆ ನೋಡಿಕೊಳ್ಳಬೇಕು.


2. ಯಾವುದೇ‌ ಗುಂಪಿನಲ್ಲಿದ್ದರೂ ಆ ಗುಂಪು ನಮ್ಮನ್ನು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸದಂತಹ‌ ಸೆಲ್ಫ್ ಅವೇರ್ನೆಸ್ ಬೆಳೆಸಿಕೊಳ್ಳಬೇಕು.


3. ನಮ್ಮ ದೌರ್ಬಲ್ಯಗಳನ್ನು ಅರಿತು ಅವುಗಳು ಯಾವ ಕ್ಷಣದಲ್ಲಿ ಸುಲಭವಾಗಿ ನಮ್ಮನ್ನು ಬದಲಾಯಿಸಬಹುದು ಎಂದು ಅರಿತು ದೌರ್ಬಲ್ಯಗಳನ್ನು ಆದಷ್ಟೂ ಕಡಿಮೆ‌ ಮಾಡಿಕೊಳ್ಳಬೇಕು.


4. ನಮ್ಮ ಪ್ರಾಬಲ್ಯಗಳೇ ಕೆಲವೊಮ್ಮೆ ನಮ್ಮ ದೌರ್ಬಲ್ಯಗಳಾಗಿಬಿಡುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಪ್ರಾಬಲ್ಯಗಳು ಓವರ್ ಯೂಸ್ ಆಗುತ್ತಿದೆಯಾ ನೋಡಿಕೊಳ್ಳಬೇಕು.


5. ಚಟದ ಅಮಲು, ಅಧಿಕಾರ ಮತ್ತು ಹಣ ಇವುಗಳು ಮನುಷ್ಯನನ್ನು ಅವನತಿಯತ್ತ ಸುಲಭವಾಗಿ ಕರೆದೊಯ್ಯಬಹುದು. ಆದ್ದರಿಂದ ಇವುಗಳು ನೆತ್ತಿಗೇರದಂತೆ ನೋಡಿಕೊಳ್ಳಬೇಕು.


6. ಅಹಂಕಾರದ ಅಮಲು ತಲೇಗೇರದಂತೆ ನೋಡಿಕೊಳ್ಳಬೇಕು. 


ಸಮಾಜದಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ವಿಷಯಗಳಿರುತ್ತವೆ, ನಾವು ಏನಾಗಬೇಕೆಂದು ಬಯಸುತ್ತೇವೋ ನಮ್ಮ ಬದುಕು ಅಲ್ಲಿಯೇ ಕರೆದುಕೊಂಡು ಹೋಗುತ್ತದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top