ಸಂಸ್ಕೃತಿ ಮೂಲವೇ ಕೃಷಿ: ನಳಿನ್ ಕುಮಾರ್

Upayuktha
0

ಆಳ್ವಾಸ್‌ನಲ್ಲಿ ಹಲಸು, ಹಣ್ಣುಗಳು, ಆಹಾರೋತ್ಸವ, ಕೃಷಿ ಮಹಾಮೇಳ



ವಿದ್ಯಾಗಿರಿ: ‘ಭಾರತೀಯ ಸಂಸ್ಕೃತಿಯ ಮೂಲವೇ ಕೃಷಿ. ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ‘ಆಳ್ವಾಸ್’ ನೆಲದ ಸಂಸ್ಕೃತಿಯನ್ನು ಪೋಷಿಸುವ ಕೆಲಸ ಮಾಡುತ್ತಿದೆ’ ಎಂದು ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಕೃಷಿಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆಯಲಿರುವ ಎರಡನೇ ವರ್ಷದ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.    


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಆಹಾರೋತ್ಸವ ಮಹಾಮೇಳ  ಸಮಿತಿ, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೃಷಿ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಮೇಳ ಹಮ್ಮಿಕೊಳ್ಳಲಾಗಿದ್ದು, ಜೂನ್ 14ರಿಂದ 16ರ ವರೆಗೆ ನಡೆಯಲಿದೆ. 


ನಮ್ಮದು ಕೃಷಿ ಮತ್ತು ಋಷಿ ಸಂಸ್ಕೃತಿಯ ದೇಶ. ಇವೆರಡೂ ತ್ಯಾಗ ಮತ್ತು ಆರಾಧನಾ ಸಂಸ್ಕೃತಿ. ತುಳುನಾಡಿನ ಸಂಸ್ಕೃತಿ ಕೃಷಿ ಮೂಲದ್ದು. ಕೃಷಿಯಿಂದ ಇಲ್ಲದೇ ಸಂಸ್ಕೃತಿ ಇಲ್ಲ ಎಂದರು. 


ಮಿಜಾರುಗುತ್ತು ಆನಂದ ಆಳ್ವ ಅವರು ಕೃಷಿಋಷಿ. ಕಂಬಳ ಹಾಗೂ ಕೃಷಿ ಪ್ರೋತ್ಸಾಹಿಸಿದ ಅವರು, ಉದ್ಯಮಶೀಲತೆಗೆ ಕಾಲಿಟ್ಟರು. ವರ್ಷಕ್ಕೊಮ್ಮೆ ಕೆಸರಿನಲ್ಲಿ ಒಂದು ದಿನ ಆಚರಣೆ ಮಾಡುವುದಲ್ಲ. ವರ್ಷ ಪೂರ್ತಿ ಕೃಷಿ ಜೊತೆಗಿರಬೇಕು. ಕರಾವಳಿಯಲ್ಲಿ ಒಂದು ಎಕರೆ ಕೃಷಿ ಭೂಮಿ ಇದ್ದರೆ, ವಾರ್ಷಿಕ 15 ಲಕ್ಷ ಆದಾಯ ಪಡೆಯಲು ಸಾಧ್ಯ ಎಂದರು. 


ಸರ್ಕಾರ ಮಾಡಬೇಕಾದ ಉನ್ನತ ಕಾರ್ಯಗಳನ್ನು ಡಾ.ಎಂ. ಮೋಹನ ಆಳ್ವ ಮಾಡುತ್ತಿದ್ದಾರೆ ಎಂದರು. 


ಶಾಸಕ ರಾಜೇಶ್ ನಾಯ್ಕ ಮಾತನಾಡಿ, ಕರಾವಳಿ ಹಾಗೂ ಮಲೆನಾಡಿನಲ್ಲಿ ಕೃಷಿ ನಷ್ಟದ ಕ್ಷೇತ್ರವಲ್ಲ. ಆದರೆ, ತಂತ್ರಜ್ಞಾನ- ಆಧುನಿಕ ವಿಧಾನಗಳನ್ನು ಬಳಸಿಕೊಂಡಾಗ ಫಲ ಪಡೆಯಲು ಸಾಧ್ಯ ಎಂದರು. 

ಎರಡು ತಿಂಗಳು ಕೃಷಿಯಲ್ಲಿ ದುಡಿದರೆ, ವರ್ಷಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಪಡೆಯಬಹುದು. ಕೃಷಿ ಇಲ್ಲದೇ ಏನಿಲ್ಲ. ಆನಂದ ಆಳ್ವರು ಕೃಷಿಯಲ್ಲಿ ನಮಗೆಲ್ಲ ಪ್ರೇರಣೆ ಎಂದರು. 


ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಮಾತನಾಡಿ, ‘ಆಳ್ವರು ಆರಂಭಿಸುವ ಕಾರ್ಯಗಳು ಯಶಸ್ಸಿನ ಉತ್ತುಂಗ ತಲುಪುತ್ತವೆ. ಈ ಹಲಸು ಮೇಳವೂ ಅದೇ ರೀತಿ ಯಶಸ್ವಿ ಆಗುತ್ತಿದೆ ಎಂದರು.  


ಹಲಸು ಹಸಿದ ಬಡವರ ತಿನಿಸು ಆಗಿತ್ತು. ಈಗ ಎಲ್ಲರಿಗೂ ಬೇಕಾದ ಆಹಾರವಾಗಿದೆ. ತುಳುನಾಡಿನಲ್ಲಿ ಬರ್ಕೆ ಮತ್ತು ತುಳುವೆ ಎಂಬ ಎರಡು ಜಾತಿಯ ಹಲಸಿದೆ ಎಂದರು. 


ನಮ್ಮ ಆಹಾರ ಸೇವನೆ ಮಾದರಿಯು ನಾವು ವೈದ್ಯರ ಬಳಿ ಹೋಗದಂತಿರಬೇಕು. ಅದಕ್ಕಾಗಿ ಒಂದು ಹೊತ್ತು ಆಹಾರ ಸೇವಿಸುವವ ಯೋಗಿ, ಎರಡು ಹೊತ್ತು ಭೋಗಿ, ಮೂರು ಹೊತ್ತು ರೋಗಿ, ನಾಲ್ಕು ಹೊತ್ತು ಸೇವಿಸಿದರೆ ಆಳ್ವಾಸ್ ಆಸ್ಪತ್ರೆಗೆ ಹೋಗಿ ಎಂದು ಚಟಾಕಿ ಹಾರಿಸಿದ ಅವರು, ಸರ್ವಜ್ಞ ಹೇಳಿದಂತೆ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂದರು. 


ಭಾರತದಲ್ಲಿ 17 ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕೃಷಿ ಮಾಡಲಾಗುತ್ತಿದ್ದು, ವಿಶ್ವದಲ್ಲಿಯೇ ಏಳನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಸರ್ಕಾರ ಹಡಿಲು ಭೂಮಿಯನ್ನು ಬಳಸಿಕೊಂಡು ಕೃಷಿ ತರಬೇತಿ ಕೇಂದ್ರ ಆರಂಭಿಸಬೇಕು. ಅಲ್ಲಿ ಯುವಜನತೆಗೆ ಉದ್ಯೋಗ ನೀಡಬೇಕು ಎಂದರು. 


ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ,  ಯುವಶಕ್ತಿ ಕೇಂದ್ರೀಕೃತವಾಗಿ ನಾವು ಪರಿಸರ ಹಾಗೂ ದೇಶವನ್ನು ಮುಖ್ಯವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ಕರ್ತವ್ಯ ಎಂದರು.


ಶಿಸ್ತುಬದ್ಧ ಕಾರ್ಯಕ್ರಮ ಆಯೋಜಿಸುವ ಮೂಲಕ ನಾವು ಹಲವಾರು ಸಂದೇಶ ಸಾರಬಹುದು ಎಂದರು. 


ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಕೆ. ಶ್ರೀಪತಿ ಭಟ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಮೂಡಬಿದಿರೆಯ ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಕೃಷಿಕ ಮುಳಿಯ ವೆಂಕಟ ಕೃಷ್ಣ ಶರ್ಮ,  ಸಹಾಯಕ  ಅರಣ್ಯ ಸಂರಕ್ಷಣಾಧಿಕಾರಿ ಎನ್ ಸತೀಶ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ. ಧನಂಜಯ್, ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಉದ್ಯಮಿ ಮೊಹಮ್ಮದ್ ಶರೀಫ್, ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಸುಭಾಷ್ ಚೌಟ, ಪ್ರವೀಣ್ ಇದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.


ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಹಾಮೇಳಕ್ಕೆ ಭೇಟಿ ನೀಡಿದರು. 


‘ಸಮೃದ್ಧಿ’ ಮಹಾಮೇಳವು ಶನಿವಾರ ಹಾಗೂ ಭಾನುವಾರವು ನಡೆಯಲಿದ್ದು, ಮುಂಜಾನೆ 9 ಗಂಟೆಯಿAದ ಸಂಜೆ 9 ಗಂಟೆಯವರೆಗೆ, ಸಾರ್ವಜನಿಕರಿಗೆ ಪಾಲ್ಗೊಳ್ಳಲು ಸಂಪೂರ್ಣ ಉಚಿತವಾಗಿದೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top