ಕೆಲ ದಿನದ ಹಿಂದೆ ಪರಿಚಯದ ಗೋಡಾಕ್ಟರ್ ಮನೆಗೆ ಬಂದಿದ್ದರು. ಮಾತಿನ ಮಧ್ಯೆ ಅನೇಕ ಆಘಾತಕಾರಿ ವಿಷಯಗಳನ್ನ ಹೇಳಿದರು. ಸಾಂಪ್ರದಾಯಿಕವಾಗಿ ದನ ಸಾಕುವವರೆಲ್ಲ ದನಗಳನ್ನು ಮಾರಾಟ ಮಾಡಿ ಖಾಲಿಹಟ್ಟಿಯನ್ನು ಇಟ್ಟುಕೊಂಡಿದ್ದಾರೆ. ದಿನವೊಂದರ 500 ರಿಂದ 600 ಲೀಟರ್ನವರೆಗೆ ಸಂಗ್ರಹವಾಗುತ್ತಿದ್ದ ಹಾಲಿನ ಸೊಸೈಟಿಗಳ ಸಂಗ್ರಹ ಇಂದು 50 ಲೀಟರ್ ನಿಂದ ಕೆಳಗೆ ಇವೆಯಂತೆ. ಮುಂದಿನ ದಿನಗಳಲ್ಲಿ ಹಾಲಿಗೆ ಹಾಹಾಕಾರ ಬಂದೇ ಬರಲಿದೆ ಅಂತ ತಿಳಿಸಿದರು. ಯಾಕೆ ಮನುಷ್ಯರು ಇಷ್ಟೊಂದು ಸ್ವಾರ್ಥಿಗಳಾಗುತ್ತಾರೆ? ಎರಡು ಎಕರೆ ತೋಟ ಇರುವವನಿಗೆ 4 ಎಕ್ರೆಗೆ ವಿಸ್ತರಿಸಲು ಸಾಧ್ಯವಿದೆ ಮತ್ತು ಸಾಮರ್ಥ್ಯವಿದೆ ಅಂತಾದರೆ ಕನಿಷ್ಠ ಮನೆ ಬಳಕೆಯ ದೃಷ್ಟಿಯಿಂದಲಾದರೂ ಎರಡು ದನ ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ? ಉತ್ತಮ ಹಾಲನ್ನು ಸೇವಿಸಬೇಕು ಅಂತಾದರೂ ಅನಿಸುವುದಿಲ್ಲವೇ? ಅಂತ ತಮ್ಮ ಮನಸ್ಸಿನ ದುಗುಡವನ್ನು ಹಂಚಿಕೊಂಡಿದ್ದರು. ಅವರ ಮಾತುಗಳಿಗೆ ಸಹಮತವನ್ನು ವ್ಯಕ್ತಪಡಿಸುತ್ತಾ ನನ್ನ ಯೋಚನೆಗಳು ಹಿಂದು ಹಿಂದಕ್ಕೆ ಹೋಯಿತು.
50 ವರ್ಷದ ಹಿಂದೆ ಎಲ್ಲೆಲ್ಲೂ ಗದ್ದೆ ಬೇಸಾಯ. ಗದ್ದೆ ಇದ್ದಲ್ಲೆಲ್ಲ ಹೂಡುವ ಎತ್ತುಗಳಿಲ್ಲದ ಮನೆ ಇರಲಿಲ್ಲ. ಹೆಚ್ಚಾಗಿ ಬ್ರಾಹ್ಮಣ ಸಮಾಜದಲ್ಲಿಯಂತೂ ದನಗಳು ಮತ್ತು ಎಮ್ಮೆಗಳೂ ಇಲ್ಲದ ಮನೆಯೂ ಇರಲಿಲ್ಲ. ಹಾಲು, ಮಜ್ಜಿಗೆ, ತುಪ್ಪ ಮನೆ ಬಳಕೆಗಾದರೆ, ಸೆಗಣಿ ತೋಟಕ್ಕೆ ಗದ್ದೆಗೆ ಗೊಬ್ಬರವಾಗಿ ಉಪಯೋಗ. ಔಷಧೀಯ ಉಪಯೋಗಕ್ಕಾಗಿ ನೆರೆಕೆರೆಯ ಮಂದಿ ಹಾಲು,ಮಜ್ಜಿಗಾಗಿ ಇಂತಹ ಮನೆಗಳಿಗೆ ಬಂದಾರು. ಅದೆಲ್ಲ ಸಾಮಾನ್ಯವಾಗಿ ಉಚಿತ ಸೇವೆ. ಹೀಗಿದ್ದ ನಮ್ಮ ಹೈನು ಸಂಸ್ಕೃತಿಗೆ ಕ್ಷೀರ ಕ್ರಾಂತಿಯ ಉದ್ದೇಶದಿಂದ ಜರ್ಸಿ, ಎಚ್ಎಫ್ ತಳಿಗಳನ್ನು ಪರಿಚಯಿಸಲಾಯಿತು. ಹೆಚ್ಚಾದ ಹಾಲನ್ನು ಸಮೀಪದ ಪೇಟೆಯ ಹೋಟೆಲ್ಗಳಿಗೆ ಅವರು ಹೇಳಿದ ಕ್ರಯಕ್ಕೆ ಕೊಟ್ಟು ಕೈ ಮುಗಿಯುವುದು ಮಾಮೂಲಾಗಿತ್ತು. ತದನಂತರ ನಿಶ್ಚಿತ ಮಾರುಕಟ್ಟೆಯಾಗಿ ಕೆಎಂಎಫ್ ಸೊಸೈಟಿಗಳು ಹಳ್ಳಿಯ ಮೂಲೆ ಮೂಲೆಗಳಲ್ಲಿ ಬಂದು ಹೈನುಗಾರರಿಗೆ ಒಂದಷ್ಟು ಸಹಾಯವು ಆಗಿತ್ತು.
ಸಾಕುವ ಖರ್ಚು ಏರಿದಂತೆ, ಕೊಂಡುಕೊಳ್ಳುವ ಎಲ್ಲಾ ವಸ್ತುಗಳ ಕ್ರಯ ಏರಿದ ಪ್ರಮಾಣದಲ್ಲಿ ಹಾಲಿನ ಮಾರುಕಟ್ಟೆ ಬೆಲೆ ಏರಲೇ ಇಲ್ಲ. (ಉದಾಹರಣೆಗೆ 40 ವರ್ಷದ ಹಿಂದೆ ಹಾಲಿನ ಕ್ರಯ ಲೀಟರ್ ಒಂದರ ಮೂರು ರೂಪಾಯಿ ನಮಗೆ ಸಿಗುತ್ತಿತ್ತು. ಇಂದು 34 ರೂಪಾಯಿ ನಮಗೆ ಸಿಗುತ್ತದೆ ಅಂದರೆ 11 ಪಟ್ಟು ಮಾತ್ರ ಜಾಸ್ತಿ. ದಿನಗೂಲಿ ಮಜೂರಿ ಆಗ ಮೂರು ರೂಪಾಯಿ ಇತ್ತು. ಈಗ 600 ಎಷ್ಟು ಪಟ್ಟು ಏರಿಕೆ ಎಂದು ಓದುಗರು ಲೆಕ್ಕ ಹಾಕಿಕೊಳ್ಳಿ.) ಯಾಕೆಂದರೆ ಸರಕಾರ ಕೃಷಿಕನ ದೃಷ್ಟಿಯಿಂದ ನೋಡಲೇ ಇಲ್ಲ. ಬಳಕೆದಾರನ ದೃಷ್ಟಿ ಮಾತ್ರ ಸರಕಾರಕ್ಕಾಗಲಿ, ಮಾಧ್ಯಮಗಳಿಗಾಗಲಿ ದೃಶ್ಯಮಾಧ್ಯಮಗಳಿಗಾಗಲಿ ಕಂಡದ್ದೇ ವಿನಹ, ಹೈನುಗಾರನ ಸಂಕಷ್ಟಗಳ ಕೂಗು ಯಾರಿಗೂ ಕೇಳಿಸದೆ ಹಳ್ಳಿಯ ಹೈನು ಹಟ್ಟಿಯಲ್ಲಿಯೇ ಲೀನವಾಗಿತ್ತು. ಉತ್ಪಾದನಾ ಖರ್ಚು ಕನಿಷ್ಠ ಲೀಟರ್ ಒಂದರ 60 ರೂಪಾಯಿ ಇರುವಾಗ ಕೇವಲ 30 ರೂಪಾಯಿಗಳಿಗೆ ಎಷ್ಟು ದಿನವೆಂದು ರೈತ ಹಾಲು ಕೊಟ್ಟಾನು? ಬರುವ ನಾಲ್ಕು ರೂಪಾಯಿಯ ಪ್ರೋತ್ಸಾಹ ಧನಕ್ಕಾಗಿ ತಿಂಗಳಾನುಗಟ್ಟಲೆ ಕಾಯುವ ಪ್ರಮೇಯ.ಇದರ ಪರಿಣಾಮವೇ ಹಳ್ಳಿಯ ಹಟ್ಟಿಗಳ ಸಾಮೂಹಿಕ ಖಾಲಿಯಾಗುವಿಕೆಯ ಸಮೂಹ ಸನ್ನಿ.
ರೈತರಾಗಿ ನಾವು ಯೋಚಿಸಬೇಕಾದದ್ದು ದನಗಳೆಂದರೆ ಕೇವಲ ಹಾಲು ಉತ್ಪಾದಿಸುವ ಯಂತ್ರಗಳಲ್ಲ. ಅದೊಂದು ಸಂಸ್ಕಾರ, ಅದು ಕೃಷಿಯ ಆಧಾರ ಸ್ತಂಭ, ಶಿಸ್ತನ್ನು ಸಮಯಪ್ರಜ್ಞೆಯನ್ನು ಒತ್ತಾಯಪೂರ್ವಕವಾಗಿ ಹೇರುವ ಸಂಸ್ಕೃತಿ, ಸ್ವಾವಲಂಬನೆಯ ಪ್ರತೀಕ, ಸ್ವಾಭಿಮಾನದ ಸಂಕೇತ. ಆದರೆ ವೈಜ್ಞಾನಿಕ ಯುಗದ ಮೆದುಳು ತೊಳೆಯುವಿಕೆಯಲ್ಲಿ (ಬ್ರೈನ್ವಾಶಿನಲ್ಲಿ) ಸಹಸ್ರಮಾನಗಳಿಂದ ಕಟ್ಟಿ ಬೆಳೆಸಿದ ನಮ್ಮ ಹೈನು ಸಂಸ್ಕೃತಿ ನಶಿಸಿ ಹೋಗುವಂತಾದದ್ದು ದುರಂತ.
ನಮ್ಮಲ್ಲಿ ಅನೇಕ ಚಿಂತಕರಿದ್ದಾರೆ. ಕಳೆದ ಹತ್ತಿಪತ್ತು ವರ್ಷಗಳಿಂದ ಆಧುನಿಕ ಹೈನುಗಾರಿಕೆಗೆ ಬದಲಿಯಾಗಿ ನಮ್ಮ ದೇಶಿ ತಳಿಗಳ ಕ್ರಾಂತಿಯನ್ನೇ ಎಬ್ಬಿಸಿದ್ದಾರೆ. ಆದರೆ ಕೃಷಿಕನ ಮನಮುಟ್ಟುವಲ್ಲಿ ಯಶಸ್ವಿಯಾದದ್ದು ಕಡಿಮೆ ಅಂತಲೇ ಅನಿಸುತ್ತದೆ. ಯಾಕೆಂದರೆ ಆಧುನಿಕ ಮನುಷ್ಯನ ಯೋಚನೆ ಯೋಜನೆಗಳೆಲ್ಲ ಸುಲಭೀಕರಣದತ್ತ, ಸಮಸ್ಯಾರಹಿತ ಜೀವನದತ್ತ, ಹಣ ಒಂದಿದ್ದರೆ ಎಲ್ಲವೂ ಕೊಂಡುಕೊಳ್ಳಬಹುದು ಎಂಬ ಚಿಂತನೆಯತ್ತ. ಸರಕಾರವೇ ಎಲ್ಲವನ್ನೂ ಉಚಿತವಾಗಿಯೇ ಕೊಡಬೇಕು ಎಂಬ ಹಂಬಲದತ್ತ.
ನಾವು ದಕ್ಷಿಣ ಕನ್ನಡಿಗರು ಹೇಳಿಕೇಳಿ ಬುದ್ಧಿವಂತರ ಜಿಲ್ಲೆ ಅಂತ ಅನಿಸಿಕೊಂಡವರು. ಬುದ್ಧಿವಂತರಾದ ನಾವು ಪರಾವಲಂಬನೆಯತ್ತಲೇ ಬುದ್ಧಿವಂತಿಕೆಯನ್ನು ಉಪಯೋಗಿಸುದು ಮಾತ್ರ ದುಃಖದ ಸಂಗತಿ. ಉಣ್ಣುವ ಅನ್ನ ಕೈಬಿಟ್ಟೆವು, ತಿನ್ನುವ ತರಕಾರಿ ಕೈ ಬಿಟ್ಟೆವು, ಕುಡಿಯುವ ಹಾಲು ಬಳಸುವ ಗೊಬ್ಬರ ಕೈಬಿಟ್ಟೆವು, ಉಚಿತವಾಗಿ ಸಿಗುತ್ತಿದ್ದ ಅನಿಲ ಸ್ಥಾವರ ಕೈಬಿಟ್ಟೆವು. ಇನ್ನೇನಿದೆ ನಾವು ಬಿಡಲು ಬಾಕಿ? ಎತ್ತ ಸಾಗುತ್ತಿದ್ದೇವೆ ನಾವು ದಕ್ಷಿಣ ಕನ್ನಡದ ಮಂದಿ?
ಮಾತನಾಡುತ್ತಾ ಯೋಚನೆ ಮುಗಿಯುವಾಗ ಪತ್ನಿ ಹಾಕಿದ್ದ ಆಡಿಯೋ ಒಂದು ಕೇಳುತ್ತಲಿತ್ತು. ರಾಮಚಂದ್ರಾಪುರ ಮಠದ ಪ್ರಸಿದ್ಧ ಹಾಡು ತೇಲಿ ಬರುತ್ತಲಿತ್ತು.
ಗೋವಿಂದ ಬಾಳ್ ಗೋವಿಂದ, ಗೋವಿರದಿರೆ ಗತಿ ಗೋವಿಂದ |
ತೋಟದ ಕೃಷಿಯು ಗೋವಿಂದ,
ಊಟದ ರುಚಿಯು ಗೋವಿಂದ,
ಜನತೆಗೆ ನೆಮ್ಮದಿ ಗೋವಿಂದ,
ಭರತ ಸಂಸ್ಕೃತಿ ಗೋವಿಂದ,
ಭಾರತ ಪ್ರಗತಿ ಗೋವಿಂದ,
ಜನತೆಗೆ ನೆಮ್ಮದಿ ಗೋವಿಂದ,
ಗೋವಿಂದ ಬಾಳ್ ಗೋವಿಂದ ಗೋವಿರದಿರೆ ಗತಿ ಗೋವಿಂದ ||
- ಎ ಪಿ ಸದಾಶಿವ ಮರಿಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ