ಮೇ 17: ಟೆಲಿಕಮ್ಯುನಿಕೇಷನ್ ಅಂಡ್ ಇನ್ಫಾರ್ಮೆಷನ್ ಸೊಸೈಟಿ ಡೇ

Upayuktha
0


ಪ್ಪತ್ತೊಂದನೇ ಶತಮಾನದ ಜಗತ್ತು ನಾಗಾಲೋಟದ ಬೆಳವಣಿಗೆಯನ್ನು ಹೊಂದಿದೆ. ಜ್ಞಾನ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆ ಮತ್ತು ವಿಕಾಸವು ಊಹೆಗೂ ಮೀರಿ ಬೆಳೆಯುತ್ತಿದೆ. ಮಾನವನ ಜೀವನದಲ್ಲಿ ಎಲ್ಲಾ ಕ್ಷೇತ್ರಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಪಡೆದಿರುವುದನ್ನು ನಾವು ನೀವೆಲ್ಲರೂ ಗಮನಿಸಿದ್ದೇವೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರವೂ ಅವುಗಳಲ್ಲಿ ಒಂದಾಗಿದ್ದು ಪ್ರತೀ ಕ್ಷಣದಲ್ಲಿಯೂ ಬೆಳವಣಿಗೆಯನ್ನು ಹೊಂದುತ್ತಿದೆ. ಸಂವಹನ ವಿಲ್ಲದ  ಮಾನವನ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯವೆನಿಸುತ್ತದೆ. ಮಾನವನ ಇಂದಿನ ಬದುಕಿನ ಮೇಲೆ ಬಹಳಷ್ಟು ಪ್ರಭಾವ ಬೀರಿರುವ ಕ್ಷೇತ್ರ ಸಂವಹನವಾಗಿದೆ. ಸಂವಹನವನ್ನು ಸಂಪರ್ಕ ಎಂತಲೂ ಹೇಳಲಾಗುತ್ತದೆ. ಸಮಾಜದಲ್ಲಿ ವಾಸಿಸುತ್ತಿರುವ ಮಾನವರಾದ ನಾವು ಒಂದಲ್ಲಾ ಒಂದು ರೀತಿಯಲ್ಲಿ ಸಂಪರ್ಕಕ್ಕೆ ಬರಲೇ ಬೇಕಾಗುತ್ತದೆ. ಮಾಹಿತಿಯನ್ನು ನೀಡಲೇ ಬೇಕಾಗುತ್ತದೆ ಮತ್ತು ಸ್ವೀಕರಿಸಲೇ ಬೇಕಾಗುತ್ತದೆ. ಏಕೆಂದರೆ ಯಾರೂ ಪರಿಪೂರ್ಣರಲ್ಲ, ಎಲ್ಲರೂ ಒಬ್ಬರನ್ನೊಬ್ಬರು ಅವಲಂಬಿಸಿ ಜೀವನ ಸಾಗಿಸುವವರೆ ಆಗಿದ್ದಾರೆ. ಸಮಾಜದಲ್ಲಿ ಮುಖಾಮುಖಿ ಸಂವಹನ ಮತ್ತು ದೂರ ಸಂವಹನವನ್ನು ನೋಡುತ್ತೇವೆ. ಇಂದು ನಾವಿಲ್ಲಿ ದೂರ ಸಂವಹನ ಅಂದರೆ ಟೆಲಿಕಮ್ಯುನಿಕೇಷನ್ ಅಂಡ್ ಇನ್ಫಾರ್ಮೆಷನ್ ಸೊಸೈಟಿ  ಬಗ್ಗೆ ತಿಳಿದುಕೊಳ್ಳೋಣ. 


ಇಂದು ದೂರ ಸಂವಹನ ಮತ್ತು ಮಾಹಿತಿ ಕ್ಷೇತ್ರದಲ್ಲಿ ಅಸಾಧಾರಣವಾದ ಪ್ರಗತಿ ಕಂಡು ಬಂದಿರುತ್ತದೆ. ಅಮೇರಿಕಾದ ವಿಜ್ಞಾನಿ ಅಲೆಕ್ಸಾಂಡರ್ ಗ್ರಾಹೆಂಬೆಲ್ ಟೆಲಿಫೋನನ್ನು ಆವಿಷ್ಕರಿಸಿದನು ಮತ್ತು ಅದನ್ನು 1876 ಮಾರ್ಚ್ 10 ರಂದು ಜಗತ್ತಿಗೆ ಅರ್ಪಿಸಿ ದೂರವಾಣಿಯ ಪಿತಾಮಹ ಎನಿಸಿದನು. 1865ರ ಮೇ 17 ರಂದು ವಿವಿಧ ರಾಷ್ಟ್ರಗಳ ಪ್ರತಿನಿಧಿಗಳಿಂದ ಕೂಡಿದ ಟೆಲಿಕಮ್ಯುನಿಕೇಷನ್ ಒಕ್ಕೂಟವು ಸ್ಥಾಪನೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಎಲ್ಲಾ ರಾಷ್ಟ್ರಗಳಲ್ಲಿ ದೂರ ಸಂವಹನದ ಕುರಿತು ಚರ್ಚಿಸಿತು. 


ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರತಿವರ್ಷ ಮೇ 17 ನ್ನು 'ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜ ದಿನ 'ವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. 1865 ಮೇ 17ರಂದು ಅಂತಾರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟ [ ಐಟಿಯು ] ಸ್ಥಾಪನೆಯಾದ ನೆನಪಿನಲ್ಲಿ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ. 1957ರ ಚೊಚ್ಚಲ ಉಪಗ್ರಹ ಉಡಾವಣೆ, 1876ರ ದೂರವಾಣಿ ಆವಿಷ್ಕಾರ, ನಂತರ 60ರ ದಶಕದ ಅಂತರ್ಜಾಲದ ಆವಿಷ್ಕಾರದ ಕಾಲಘಟ್ಟದಲ್ಲಿ ಅಂತಾರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟವು ನಿರ್ಣಾಯಕ ಪಾತ್ರ ವಹಿಸಿದ್ದು, ಮೇ 17 ರ ವಿಶ್ವ ದೂರ ಸಂವಹನ ದಿನದ ಆಚರಣೆಯಲ್ಲಿ ಎಲ್ಲಾ ಘಟನೆಗಳನ್ನು ಸ್ಮರಿಸಲಾಗುತ್ತದೆ. 


ಅಂತರ್ಜಾಲ ವ್ಯವಸ್ಥೆ ಮತ್ತು ಸಂಪರ್ಕ ವ್ಯವಸ್ಥೆ ಸೇರಿದಂತೆ ಹೊಸ ತಂತ್ರಜ್ಞಾನಗಳಿಂದ ಆಗುತ್ತಿರುವ ಸಾಮಾಜಿಕ ಮತ್ತು ಸಮುದಾಯದ ಬದಲಾವಣೆಗಳ ಬಗ್ಗೆ ವಿಶ್ವ ಮಟ್ಟದಲ್ಲಿ ಜನಜಾಗೃತಿ ಮೂಡಿಸುವುದೇ ವಿಶ್ವ ದೂರಸಂಪರ್ಕ ಮಾಹಿತಿ ಸಮಾಜ ದಿನದ ಪ್ರಮುಖ ಉದ್ದೇಶವಾಗಿದೆ. ಅಷ್ಟಲ್ಲದೆ, ಡಿಜಿಟಲೀಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಆಗುತ್ತಿರುವ ಡಿಜಿಟಲ್‌ ತಾರತಮ್ಯಗಳನ್ನು ನಿಯಂತ್ರಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಜನರಲ್ಲಿ ಅರಿವು ಮೂಡಿಸುವ ಗುರಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುವುದು ಪ್ರಮುಖ ಧ್ಯೇಯವಾಗಿದೆ. ವಿಶ್ವದಲ್ಲಿ ನಡೆಯುವ ಪ್ರತಿಯೊಂದು ವಿಷಯಗಳು ಜಗತ್ತಿನ ಮೂಲೆಮೂಲೆಗೂ ತಲುಪಿಸಲು ತಂತ್ರಜ್ಞಾನಗಳು ಸಹಕಾರಿ. ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಇಂದಿನ ಅನಿವಾರ್ಯತೆಯಾಗಿದೆ.


ಇದಕ್ಕೆ ಸಂಬಂಧಿಸಿದಂತೆ ಇತಿಹಾಸದ ಪುಟಗಳಿಂದ ತಿಳಿದು ಬರುವುದೇನೆಂದರೆ, ಹದಿನೆಂಟು ವರ್ಷಗಳ ಹಿಂದೆ ಟುನಿಸ್‌ ದೇಶದಲ್ಲಿ 2005 ರಲ್ಲಿ ವಿಶ್ವ ಮಾಹಿತಿ ಸೊಸೈಟಿಯ ಸಮಾವೇಶ ನಡೆದಿತ್ತು. ಸಂವಹನ ಮತ್ತು ಮಾಹಿತಿ ಕ್ಷೇತ್ರದಲ್ಲಿ ಉಂಟಾಗುತ್ತಿದ್ದ ಕ್ಷಿಪ್ರಗತಿಯ ಬೆಳವಣಿಗೆಗಳು ಹಾಗೂ ಮಾಹಿತಿ ಕ್ಷೇತ್ರಕ್ಕೆ ಅದರಿಂದ ಸಿಗುತ್ತಿದ್ದ ವಿಫುಲ ತಂತ್ರಜ್ಞಾನ ಪ್ರಯೋಜನಗಳನ್ನು ಗಮನಿಸಿದ ಅದು, 'ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನವನ್ನಾಗಿ ಆಚರಿಸಬೇಕು' ಎಂದು ವಿಶ್ವಸಂಸ್ಥೆಗೆ ಕರೆ ನೀಡಿತ್ತು. ಅದರಂತೆ, 2006 ಮಾರ್ಚ್‌ನಲ್ಲಿ ವಿಶ್ವಸಂಸ್ಥೆ ತನ್ನ ಸಾಮಾನ್ಯ ಸಭೆಯಲ್ಲಿ 'ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನ ' ಎಂದು ಆಚರಿಸುವ ನಿರ್ಧಾರವನ್ನು ಘೋಷಿಸಿತು. ಆ ಘೋಷಣೆಯಂತೆ, ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.ವಿಶ್ವದಾದ್ಯಂತ ಈ ದಿನದಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳು, ಅವುಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾರ್ಯಕ್ರಮಗಳು, ಧ್ಯೇಯ ವಾಕ್ಯ ರಚನೆ ಮತ್ತು ಘೋಷಣೆ, ಧ್ಯೇಯವಾಕ್ಯದ ಹಿಂದಿನ ವಿವಿಧ ಅಂಶಗಳ ಕುರಿತು ಚರ್ಚೆ, ಸಂವಾದ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. 


ಈ ದಿನದಂದು ಜಗತ್ತಿನಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನದ ಅಂಗವಾಗಿ ಭಾರತದಲ್ಲಿ ಹಲವಾರು ಸರಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ದೇಶದ ವಿವಿಧೆಡೆ ಯುವ ಸಮುದಾಯಕ್ಕೆ ಇರುವ ಸ್ಟಾರ್ಟಪ್ ಅವಕಾಶಗಳ ಕುರಿತು ವಿಚಾರ ಸಂಕಿರಣ, ಸಂವಾದ ಮತ್ತು ಚರ್ಚಾ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂಬೆಲ್ಲಾ ವಿಚಾರಗಳು ಅಧ್ಯಯನದಿಂದ ತಿಳಿದು ಬರುತ್ತವೆ. ಮೊಬೈಲ್ ಫೋನ್, ಇಂಟರ್ನೆಟ್, ಈ- ಮೇಲ್, ವೀಡಿಯೋ ಕಾನ್ಫರೆನ್ಸ್ ಗಳು, ಆನ್ ಲೈನ್ ಸಂವಾದಗಳು ಇಂದು ಮಾಯಾಲೋಕದ ಅದ್ಭುತ ಜಗತ್ತನ್ನೇ ಸೃಷ್ಟಿಸಿವೆ. ಇಂಟೆಲ್ ಸ್ಯಾಟ್ ಉಪಗ್ರಹಗಳು ಕಡಿಮೆ ದರದಲ್ಲಿ ಒದಗಿಸುತ್ತಿರುವ ಸೇವೆ, ಎಸ್. ಎಂ. ಎಸ್. ಸುಲಭ ಸಂದೇಶವಾಹಕ, ವಾಟ್ಸಪ್ , ಟ್ವಿಟರ್, ಫೇಸ್ ಬುಕ್, ಇನ್ ಸ್ಟಾಗ್ರಾಂ , ಮೊದಲಾದ ವಿಜ್ಞಾನ ಮತ್ತು ತಂತ್ರಜ್ಞಾನಗಳು ವಿಶ್ವವನ್ನು ಚಮತ್ಕಾರಿಯನ್ನಾಗಿಸಿವೆ.

-ಕೆ.ಎನ್.ಚಿದಾನಂದ. ಹಾಸನ


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top