ಮತದಾನ ಒಂದು ಕಾಮನ್‌ಸೆನ್ಸ್: ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳ ಸಂಗಮ

Upayuktha
0


ಮತದಾನ ಅನ್ನುವುದು ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳ ಒಂದು ಕಾಮನ್ ಸೆನ್ಸ್!!!


ಅದೊಂದು ಸಾಮಾನ್ಯ ಅದ್ಧೂರಿಯ ಮದುವೆ ಮನೆ.


ಆರೆಂಟು ಜನ ಛತ್ರದ ಒಳಗೆ, ಫ್ಯಾನ್ ಕೆಳಗೆ ಕುಳಿತು ಲೋಕಾಭಿರಾಮ ಮಾತಾಡುತ್ತ ಕುಳಿತಿದ್ದು, ಮಾತು ಸಹಜವಾಗಿ ಹಾಟ್ ಟೆಂಪರೇಚರ್‌ನಿಂದ, ಹಾಟ್ ರಾಜಕೀಯದ ವಿಚಾರಕ್ಕೆ ತಿರುಗಿತು.  


ಬೆಂಗಳೂರಿನಿಂದ ಬಂದವರೊಬ್ಬರು "ನನಗೆ ಓಟಿಂಗ್ ಪವರ್ ಸಿಕ್ಕಿ 15 ವರ್ಷಗಳ ಮೇಲಾಯ್ತು. ಆದರೆ ಇಷ್ಟು ವರ್ಷ ನಾನು ಈ ಬಗ್ಗೆ ಸೀರಿಯಸ್ಸಾಗಿ ಗಮನ ಹರಿಸಿರಲಿಲ್ಲ. ಕಳೆದ ವಿಧಾನ ಸಭೆ ಚುನಾವಣೆಯಿಂದ ಓಟ್ ಮಾಡಲು ಶುರು ಮಾಡಿದ್ದೇನೆ. ಈ ವರ್ಷವಂತು ಓಟನ್ನು ತುಂಬ ಸೀರಿಯಸ್ಸಾಗಿ ತಗೊಂಡು, ಓಟ್ ಮಾಡಿ ಬಂದಿದ್ದೇನೆ" ಅಂತ ಎಡಗೈ ಬೆರಳು ತೋರಿಸಿದರು.


ಆಗ ಪಕ್ಕದಲ್ಲಿದ್ದ, ಸುಮಾರು 60+ ವರ್ಷದ ಹಿರಿಯರೊಬ್ಬರು "ಆಧುನಿಕತೆ ಮಾರ್ಗದಲ್ಲಿ ನೆಡೆಯುತ್ತಿರುವ ನಾವು, ನಮ್ಮೊಳಗಿನ ಸಾಮಾನ್ಯ ಜ್ಞಾನದ  ಕೋಶಗಳನ್ನು ನಿಷ್ಕ್ರಿಯೆಗೊಳಿಸಿ ಯಂತ್ರವಾಗುತ್ತಿದ್ದೇವೆ. ಮತ್ತು ಕೊರೋನಾ ನಂತರ 'ಯು ಟರ್ನ್' ಪಡೆದು, ಸ್ವಲ್ಪ ಮಟ್ಟಿಗೆ ಸಾಮಾನ್ಯ ಜ್ಞಾನದ  ಕೋಶಗಳು ಮತ್ತೆ ಸಕ್ರಿಯವಾಗಿ ಬೆಳೆಯುವ ಹಾಗೆ ನಾವು ಬದಲಾಗುತ್ತಿದ್ದೇವೆ' ಅಂದರು.


ಒಂದು ಕ್ಷಣ ಈ ಮಾತಿನ ಅರ್ಥ ಏನು ಅಂತ ಅಲ್ಲಿದ್ದ ಯಾರಿಗೂ ಅರ್ಥ ಆಗಲಿಲ್ಲ. ಎಲ್ಲರೂ ಪರಸ್ಪರ ಮುಖ ನೋಡಿಕೊಂಡರು!!!.


ಚುನಾವಣೆ, ಮತದಾನ, ರಾಜಕಾರಣಿ, ಭ್ರಷ್ಟಾಚಾರ, ಮತಾಂಧತೆ ವಿಚಾರಗಳು ಮಾತಾಡ್ತಾ ಇದ್ರೆ, ಇದೇನಿದು ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಈ ಹಿರಿಯರು ಪ್ರಸ್ತಾಪ ಮಾಡ್ತಾ ಇದ್ದಾರಲ್ಲ ಅಂತ ಕುಳಿತವರಲ್ಲಿ ಕೆಲವರಿಗೆ ಅನಿಸಿರಬೇಕು.


ಒಂದು ಸಣ್ಣ ಉದಾಹರಣೆಯೊಂದಿಗೆ ಮಾತು ಮುಂದುವರಿಸಿದ ಆ ಹಿರಿಯರು "ಈಗ ನೋಡಿ, ನಾವು ಪ್ರತಿಯೊಂದಕ್ಕೂ ಅವಲಂಬಿತರಾಗಿದ್ದೇವೆ.  ಸ್ಕೂಲ್ ಬಸ್ಸು, ಫ್ಲಿಪ್ ಕಾರ್ಟ್, ಜೊಮೆಟೋ, ಹೋಟೆಲ್, ಮನೆ ಕೆಲಸದವರು, ವಾಹನಗಳು, ಕರೆಂಟ್, ಟಿವಿ, ಮೊಬೈಲ್, ಇಂಟರ್‌ನೆಟ್... ಇತ್ಯಾದಿ. ಈ ಅವಲಂಬನೆಗಳ ಮೇಲೆ ನಮ್ಮ ಬದುಕಿದೆ. ನಾವು ಹಣ ಗಳಿಸುವ ನಮ್ಮ ವೃತ್ತಿಯಲ್ಲಿ ಮಾತ್ರ ಪರಿಣತರು. ವೃತ್ತಿಗೆ ಸಂಬಂಧಿಸದ ಯಾವ ವಿಚಾರಗಳ ಬಗ್ಗೆಯೂ ನಮಗೆ ಆಸಕ್ತಿ ಇಲ್ಲ, ಆಸಕ್ತಿ ತಳೆಯಬೇಕಾದ ಅಗತ್ಯವೂ ಇಲ್ಲ ಎನ್ನುವುದು ನಮ್ಮ ಮನಸ್ಥಿತಿಯಾಗುತ್ತಿದೆ. ಗೂಗಲ್ ಪೇ ಮೂಲಕ ನಮ್ಮ ಫಿಂಗರ್ ಪ್ರಿಂಟ್ ಟಚ್ ಮಾಡಿ, ಹಣ ಕಳಿಸಿ ಎಲ್ಲವನ್ನೂ ಪಡೆದುಕೊಳ್ಳಬಹುದು. ಬ್ಯಾಲೆನ್ಸು, ಬೆರಳು ಎರಡಿದ್ದರೆ ಸಾಕು, ಕಾಮನ್ ಸೆನ್ಸೂ ಬೇಡ, ಯಾವ ಸಾಮಾನ್ಯ ಜ್ಞಾನವೂ ಬೇಡ. ಇದು ಆಧುನಿಕ ಬದುಕಿಗೆ ಹೋಗುತ್ತಿರುವ ನಮ್ಮ ಸ್ಥಿತಿ. ಯಾವಾಗ ಕಾಮನ್ ಸೆನ್ಸ್ ಬೇಡ ಅಂತಾಗಲು ಪ್ರಾರಂಭವಾಯಿತೋ, ನಮ್ಮೊಳಗೆ ಕಾಮನ್‌ಸೆನ್ಸ್ ಬೆಳವಣಿಗೆಗೆ ಪೂರಕವಾಗಿದ್ದ ಜೀವಕೋಶಗಳು ತಟಸ್ಥವಾಗುತ್ತಿವೆ." 


ಮದುವೆ ಛತ್ರದಲ್ಲಿ ಕುಳಿತವರಲ್ಲಿ ಬಹುತೇಕರು ಈ ಡಿಪೆಂಡೆನ್ಸಿ ಚಕ್ರದೊಳಗೆ ಬಂಧಿತರಾಗಿ, ಕಾಮನ್‌ಸೆನ್ಸ್ ಕಡಿಮೆ ಇದ್ದವರಾದುದರಿಂದ, ಹಿರಿಯರ ಮಾತು ನಿಧಾನವಾಗಿ ಅರ್ಥವಾಗುವುದಕ್ಕೆ ಪ್ರಾರಂಭವಾಯ್ತು.


"ಕೊರೋನಾ ಸಂದರ್ಭದಲ್ಲಿ ಹೆಚ್ಚು ತೊಂದರೆಗೆ ಒಳಗಾದವರು ಅಂದರೆ, ನಮ್ಮ ನಿಮ್ಮ ತರಹ ಹೆಚ್ಚು ಡಿಪೆಂಡೆನ್ಸಿ ಸರ್ಕಲ್‌ನಲ್ಲಿ ಇರುವವರು ಮತ್ತು ಕಾಮನ್‌ಸೆನ್ಸ್ ಜೀವಕೋಶಗಳನ್ನು ಕಡಿಮೆ ಬೆಳಸಿಕೊಂಡವರು ಮಾತ್ರ.  ತಿಂಗಳಿಗೆ ಎರಡು ಲಕ್ಷ ಸಂಬಳ ಅಕೌಂಟಿಗೆ ಬರುವಷ್ಟು ಲ್ಯಾಪ್‌ಟ್ಯಾಪ್‌ನಲ್ಲಿ ಕೆಲಸ ಮಾಡ್ತೇವೆ, ಆದರೆ, ನಮ್ಮ ಜೀವಕ್ಕೆ ಅಗತ್ಯ ಬೇಕಾದ 100ಗ್ರಾಮ್ ಅಕ್ಕಿ ಹಾಕಿ ಅನ್ನ ಮಾಡುವ ಬೇಸಿಕ್ ಪ್ರೊಸೀಜರ್ ನಮಗೆ ಗೊತ್ತಿಲ್ಲ.  'ನಿತ್ಯ ತಿನ್ನುವ ಅನ್ನವನ್ನು ಸಿದ್ದ ಮಾಡಲು ಬಾರದಷ್ಟು ವೀಕ್ ನಾಲೆಜ್ ನಮ್ಮದು' ಅನ್ನುವಷ್ಟು ಅರಿವು ಬೆಳೆಸುವ ಕೆಲಸ ಮಾಡಿದ್ದು ಕೊರೋನಾ.  ಥ್ಯಾಂಕ್ಸ್ ಟು ಕೊರೋನಾ.  ನಾಗರಿಕತೆಯ ಪೀಕ್‌ನಲ್ಲಿದ್ದೇವೆ ಅಂದುಕೊಂಡವರು ಹೆಚ್ಚು ಡಿಪೆಂಡ್ ಆಗಿರ್ತಾರೆ ಮತ್ತು ಕಡಿಮೆ ಕಾಮನ್ ಸೆನ್ಸ್ ಹೊಂದಿರುತ್ತಾರೆ.  ಹೆಚ್ಚು ಡಿಪೆಂಡ್ ಆದವರು, ಕಡಿಮೆ ಕಾಮನ್‌ಸೆನ್ಸ್ ಇರುವವರಿಗೆ ಕೊರೋನ ಹೆಚ್ಚು ತೊಂದರೆ ಕೊಟ್ಟು U ಟರ್ನ್ ಪಾಠ ಕಲಿಸಿದೆ."


"ಹೌದು, ನೀವು ಹೇಳ್ತಿರೋದೆಲ್ಲ ಸರಿ ಅಂಕಲ್.  ಆದ್ರೆ, ನಾವು ಎಲೆಕ್ಷನ್ ವಿಚಾರ ಮಾತಾಡುವಾಗ, ನೀವೂ ಮಾತು ಪ್ರರಂಭ ಮಾಡಿದ್ದು ನೋಡಿ, ನೀವೂ ಎಲೆಕ್ಷನ್ ಬಗ್ಗೇನೇ ಮಾತಾಡ್ತೀರಿ ಅಂದ್ಕೊಂಡ್ವಿ.  ನೀವು ವಿಷಯ ಡೈವರ್ಟ್ ಮಾಡಿದ್ರಿ.  ಯಾಕೆ ಅಂಕಲ್? ನಿಮಗೆ ರಾಜಕೀಯ ಇಷ್ಟ ಇಲ್ವಾ?" ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಯಲ್ಲಿರುವವನು ಅಂತ 

ಟಿ ಶರ್ಟ್‌ ಧಿರಿಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದವ ಹಿರಿಯರಿಗೆ ಒಂದು ಪ್ರಶ್ನೆ ಇಟ್ಟ.


"ಇಲ್ಲ.  ನಾನು ಮಾತಾಡ್ತಾ ಇರುವುದೂ ರಾಜಕೀಯ ವಿಚಾರವನ್ನೆ. ಕೊರೋನಾ ನಂತರ ಜನರಲ್ಲಿ ಆದ ಕಾಮನ್‌ಸೆನ್ಸ್ ಬೆಳವಣಿಗೆಯಲ್ಲಿ, ರಾಜಕೀಯ-ಸಾಮಾಜಿಕ-ಕೃಷಿ-ಕೌಟುಂಬಿಕದಂತಹ  ವಿಚಾರಗಳು ಸೇರ್ಪಡೆಯಾಗಿವೆ. ಇವರು ("ಈ ವರ್ಷವಂತು ಓಟನ್ನು ತುಂಬ ಸೀರಿಯಸ್ಸಾಗಿ ತಗೊಂಡು, ಮತ ಹಾಕಿದಿನಿ" ಅಂದ ವ್ಯಕ್ತಿಯನ್ನು ತೋರಿಸಿ) ಓಟು ಹಾಕುವುದಕ್ಕೆ, ಇಫ್ ಐಯಾಮ್ ರೈಟ್, ಕೊರೋನೋತ್ತರ ಬೆಳವಣಿಗೆ ಪರೋಕ್ಷ ಕಾರಣ. 'ನಮಗೆಂತಕ್ಕೆ ರಾಜಕೀಯ?' ಅಂತಿದ್ದವರು, ಇವತ್ತು ಅರ್ಟಿಕಲ್ 370, ದೇಶದ ಭದ್ರತೆ, ಮತಾಂಧ ಉಗ್ರಗಾಮಿಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮಾತಾಡುತ್ತ, 'ನಾನೂ ಓಟ್ ಮಾಡುವ ಕರ್ತವ್ಯ ಮಾಡಬೇಕು' ಎಂದು ಮಾತಾಡುವಲ್ಲಿಗೆ ಕಾರ್ಪೋರೇಟ್ ಉದ್ಯೋಗದಲ್ಲಿರುವವರು ಬಂದಿದ್ದಾರೆ ಅಂದರೆ, ಅದು ಕೊರೋನಾ ನಂತರದ ಬೌದ್ಧಿಕ ಬೆಳವಣಿಗೆ.  ಯಾರೂ ತಪ್ಪು ತಿಳಿಯಬೇಡಿ. ಇತ್ತೀಚಿನ ದಿನಗಳಲ್ಲಿ ಸಾಮೋಹಿಕವಾಗಿ ಕಂಡುಬರುತ್ತಿರುವ ಒಂದು ಧನಾತ್ಮಕ ಅಭಿನಂದನೀಯ ಬದಲಾವಣೆ ಇದು." 


ಮಾತು ಇನ್ನೂ ಮುಂದುವರೆಯುತ್ತಿತ್ತೇನೋ, ಬೀಗರಲ್ಲಿ ಒಬ್ಬರಾಗಿದ್ದ ಆ ಹಿರಿಯರನ್ನು ಯಾರೋ ಬಂದು ಮಂಟಪದ ಹತ್ರಕ್ಕೆ ಕರೆದು ಕೊಂಡು ಹೋದರು. 

***

ಈ ಸಂಭಾಷಣೆ ನೆಡೆಯುತ್ತಿದ್ದ ಗುಂಪಿನ ಸಮೀಪ ಮೊಬೈಲ್ ಉಜ್ಜುತ್ತ ಕುಳಿತಿದ್ದ ನನಗೆ, ಈ ಹೊಸ ವಿಚಾರ ಆಕರ್ಷಣೀಯವಾಗಿ ಕಂಡಿತು.  ಮೊಬೈಲ್ Note ನಲ್ಲಿ ಜಸ್ಟ್ ಕನ್ನಡ ಆ್ಯಪ್ ಕೇಳಿದ್ದನ್ನು ಟೈಪ್ ಮಾಡ್ತಾ ಹೋಯ್ತು!!!

***

ಎರಡು ದಿನಗಳ ಮೊದಲು,ಉಪನಯನ ಒಂದರ ಆರತಕ್ಷತೆಯ ಮಂತ್ರಾಕ್ಷತೆಯಲ್ಲಿ ಪುರೋಹಿತರು ಹೇಳಿದ "'ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ'ಗಳನ್ನು ವೃದ್ದಿಸಿಕೊಳ್ಳುವ ಶಿಕ್ಷಣದ ಪ್ರಾರಂಭ ಈ ಉಪನಯನ" ಎಂಬ ಮಾತಿಗೆ, ಮದುವೆ ಮನೆಯಲ್ಲಿ ಹಿರಿಯರು ಹೇಳಿದ ಕಾಮನ್‌ಸೆನ್ಸ್ ಜೀವ ಕೋಶದ ಬೆಳವಣಿಗೆಯೂ ಇದೇ ಅರ್ಥ ಕೊಡುತ್ತದೆ ಅಂತ ಅನಿಸಿತು.

**

ಅವೆಲ್ಲವನ್ನು ರಾಜಕೀಯದಲ್ಲಿನ ಸಾಮಾನ್ಯರ ಕರ್ತವ್ಯಕ್ಕೆ ಲಿಂಕ್ ಮಾಡಿದರೆ.... ಮತದಾನ ಅನ್ನುವುದು ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳ ಕಾಮನ್ ಸೆನ್ಸ್!!!


ದೇಶದ ಯಾವ ನಾಯಕನಿಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳ ಕಾಮನ್ ಸೆನ್ಸ್ ಇದೆಯೋ ಅಂತಹ ನಾಯಕನನ್ನು ಆಯ್ಕೆ ಮಾಡುವುದೂ ಪ್ರಜ್ಞಾವಂತ, ಜವಾಬ್ದಾರಿಯುತ ಮತದಾರನ ಸಾಮಾನ್ಯಜ್ಞಾನ ಅಥವಾ ಕಾಮನ್‌ಸೆನ್ಸ್.


ಕರ್ನಾಟಕದ ಎರಡನೇ ಹಂತದ ಚುನಾವಣೆ ಆರಂಭವಾಗಿದೆ. ಮತ ಹಾಕದವರು ಕೂಡಲೇ ಮತಗಟ್ಟೆಗೆ ತೆರಳಿ ಮತದಾನ ಮಾಡಿ.  


ಮತದಾನ ನೆಡೆಯುವ 'ವ್ಯಾಪ್ತಿ ಪ್ರದೇಶದವರು' ತಪ್ಪದೇ ಮತದಾನ ಮಾಡೋಣ. ಆಮಿಷ, ಹಣ, ಅಸಂಬದ್ಧ ಪೊಳ್ಳು ಆಶ್ವಾಸನೆಗಳಿಗೆ ಮರುಳಾಗದೆ, ಕಾಮನ್‌ಸೆನ್ಸ್‌ನೊಂದಿಗೆ ಮತದಾನ ಮಾಡಿ ಬರೋಣ.


'ಶಕ್ತಿ'ಗಳನ್ನು ನಾಶ ಮಾಡುವವರಿಗೆ, ಕಾಮನ್‌ಸೆನ್ಸ್ ಇಲ್ಲದವರಿಗೆ ನಮ್ಮ ಮತ ಹಾಕುವುದು ಬೇಡ.  ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳ ಜೊತೆ ಕಾಮನ್ ಸೆನ್ಸ್ ಇರುವ ನಾಯಕನಿಗೆ ಮತ ಹಾಕಿ, ನಮ್ಮೊಳಗಿರುವ 'ಶಕ್ತಿ'ಯನ್ನು ವೃದ್ದಿಸೋಣ.  


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top