ಉಡುಪಿ: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯವು ಜೂನ್ 1ರಂದು ಉಡುಪಿಯಲ್ಲಿ 'ಸಾಹಿತ್ಯ ಸಹವಾಸ' ಎಂಬ ವಿಶಿಷ್ಟ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. ರಾಜ್ಯದ ಸಾಂಸ್ಕೃತಿಕ ಪರಂಪರೆ, ಕನ್ನಡದ ಪ್ರಮುಖ ಸಾಹಿತಿಗಳು, ಮತ್ತು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಂಭ್ರಮಿಸಲು ಇದನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿಯ ಕಾರ್ಯಕ್ರಮವನ್ನು ಕನ್ನಡದ ಹೆಸರಾಂತ ಸಾಹಿತಿಗಳಾದ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ ಮತ್ತು ನವ್ಯ ಸಾಹಿತ್ಯ ಚಳುವಳಿ ಕುರಿತು ಅನಂತಮೂರ್ತಿಯವರು ನೀಡಿರುವ ಮೂರು ಉಪನ್ಯಾಸಗಳ ಸುತ್ತ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ಅನಂತಮೂರ್ತಿಯವರ ವಿದ್ವತ್ಪೂರ್ಣ ಉಪನ್ಯಾಸಗಳನ್ನು ವಿಶ್ವದೆಲ್ಲೆಡೆ ಇರುವ ಆಸಕ್ತರಿಗೆ ದೊರೆಯುವಂತೆ ಮಾಡಲು, ಇಂಗ್ಲಿಷ್ ಉಪ ಶೀರ್ಷಿಕೆಗಳೊಂದಿಗೆ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಯೂಟ್ಯೂಬ್ ವಾಹಿನಿಯ ಮೂಲಕ ಬಿಡುಗಡೆ ಮಾಡಲಾಗುತ್ತಿದೆ ಎಂದು ಪ್ರಕಟಣೆ ಹೇಳಿದೆ.
ಈ ಉಪನ್ಯಾಸ ಸರಣಿಯು ಇಪ್ಪತ್ತನೇ ಶತಮಾನದ ಕನ್ನಡದ ಪ್ರಮುಖ ಬರಹಗಾರರಾದ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಎ.ಕೆ. ರಾಮಾನುಜನ್ ಮತ್ತು ಗಿರೀಶ್ ಕಾರ್ನಾಡ್ ಅವರ ಕೊಡುಗೆಗಳು ಹಾಗೂ ದಲಿತ ಮುಂತಾದ ಪ್ರಮುಖ ಸಾಹಿತ್ಯಕ ಚಳುವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ.
ಕನ್ನಡದ ಪ್ರಮುಖ ಸಾಹಿತಿ ಮತ್ತು ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಕಾರಂತ ಮತ್ತು ಅಡಿಗರ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಈ ವಿಡಿಯೊ ಸರಣಿಯನ್ನು ಬಿಡುಗಡೆ ಮಾಡಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರತ್ ಅನಂತ ಮೂರ್ತಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಕಾರಂತ ಮತ್ತು ಅಡಿಗರ ಕೊಡುಗೆಯ ಬಗ್ಗೆ ವಿದ್ವತ್ ಗೋಷ್ಠಿ ಮತ್ತು ಭಾಷಣ, ಯಕ್ಷಗಾನ ಪ್ರದರ್ಶನ, ಅಡಿಗರ ಗೀತೆಗಳ ಗಾಯನ, ಪ್ರಮುಖ ಸಾಹಿತಿಗಳ ಚಿತ್ರಾವಳಿ ಪ್ರದರ್ಶನ ಸೇರಿದಂತೆ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ