ಬದುಕಿನ ಗುರಿಯ ಬಗೆಗೆ ಚಿಂತನೆ ನಡೆಸುವುದೇ ಶಿಕ್ಷಣದ ಉದ್ದೇಶ: ಆದರ್ಶ ಗೋಖಲೆ

Upayuktha
0

ಅಂಬಿಕಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಪ್ಪಳಿಗೆಯಲ್ಲಿ ಸಮರ್ಪಣಮ್ ಕಾರ್ಯಕ್ರಮ



ಪುತ್ತೂರು: ಜ್ಞಾನದೆಡೆಗೆ ನಮ್ಮನ್ನು ನಾವು ಸಮರ್ಪಿಸಿಕೊಂಡಾಗ ಆ ಜ್ಞಾನದಿಂದ ಪಡೆಯುವ ಸುಖವೇ ಆನಂದ. ನಮ್ಮ ಬದುಕಿನ ಗುರಿ ಏನು ಎಂಬುದರ ಬಗ್ಗೆ ಚಿಂತನೆ ನಡೆಸುವುದೇ ಶಿಕ್ಷಣದ ಉದ್ದೇಶ. ಹಾಗಾಗಿ ಕೇವಲ ಡಿಗ್ರಿ ಪಡೆಯುವುದಕ್ಕಾಗಿ ಮತ್ತು ಪ್ರಶಸ್ತಿ ಪತ್ರಕ್ಕಾಗಿ ಶಿಕ್ಷಣ ಇರುವುದಲ್ಲ ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು. 


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯಗಳ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಗೂ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಸಮರ್ಪಣಮ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೋಮವಾರ ಮಾತನಾಡಿದರು. 


ಒಬ್ಬ ಸಾಮಾನ್ಯ ವಿದ್ಯಾರ್ಥಿಯೂ ರಾಷ್ಟ್ರಕ್ಕಾಗಿ ಸಮರ್ಪಣೆಯಾಗಲು ಸಾಧ್ಯ, ವಿದ್ಯಾರ್ಥಿಗಳು ವೈದ್ಯ, ಇಂಜಿನಿಯರ್ ಏನೇ ಆದರೂ ತನ್ನ ಸೇವೆಯನ್ನು ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡುವಂತಾಗಬೇಕು. ಶ್ರೇಷ್ಠ ಇಂಜಿನಿಯರ್ ಆಗಿ ತಮ್ಮನ್ನು ತಾವು ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡ ಭಾರತರತ್ನ ವಿಶ್ವೇಶ್ವರಯ್ಯನವರಂತಹ ಮಾದರಿಗಳು ಕಣ್ಣ ಮುಂದಿವೆ. ಆ ಆದರ್ಶದ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಿದೆ ಎಂದು ಅಭಿಪ್ರಾಯಪಟ್ಟರು. 


ವಿದ್ಯಾರ್ಥಿಗಳು ಮತ್ತೊಬ್ಬರ ಜೀವ ತೆಗೆಯುವ ಬಾಂಬ್ ಆಗಬಾರದು. ಬದಲಾಗಿ ಜ್ಞಾನ, ವಿಜ್ಞಾನ, ಸಂಸ್ಕೃತಿಯಿಂದ ದೇಶ ರಕ್ಷಣೆಯ ಸಜೀವ ಬಾಂಬ್ ಆಗಿ ಮೂಡಿಬರಬೇಕು. ತಮ್ಮನ್ನು ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. ಆಧ್ಯಾತ್ಮ, ಸಂಸ್ಕೃತಿ, ಕರ್ತವ್ಯದ ಮುಖೇನ ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನದಂದೇ ಸಮರ್ಪಣಮ್ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಾವರ್ಕರ್ ಅವರ ಜೀವನವೇ ಸಮರ್ಪಣಾ ಭಾವದ ಸಂದೇಶ. ಆ ಸಂದೇಶವನ್ನು ವಿದ್ಯಾರ್ಥಿಗಳೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ವಿದ್ಯಾಲಯದಿಂದ ದೇಶ ರಕ್ಷಣೆಯ ಪಡೆ ಹೊರಬರಬೇಕು ಎಂದು ಹಾರೈಸಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಶೆಟ್ಟಿ, ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಂಸ್ಥೆಗಳಲ್ಲಿ ದ್ವಿತೀಯ ಪಿ.ಯು.ಸಿ ಪೂರೈಸಿದ ಹಾಗೂ ಹತ್ತನೆಯ ತರಗತಿ ಪೂರೈಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಉಪನ್ಯಾಸಕ ಕೇಶವ ಕಿಶೋರ್ ಅವರು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ರಿಪೀಟರ್ಸ್ ತರಗತಿಯ ಮಹತ್ವ ತಿಳಿಸಿದರು.


ವಿದ್ಯಾರ್ಥಿನಿಯರಾದ ಆತ್ಮಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆಯ ಅಂಬಿಕಾ ವಸತಿಯುತ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top